ಈ ಪುಸ್ತಕಕ್ಕಾಗಿ ಕೆಲಸ ಮಾಡುವಾಗ ಎದುರಾದದ್ದು ಇಂತಹ ಪುಸ್ತಕ ಏಕೆ? ಎಂಬ ಪ್ರಶ್ನೆ. ಈ ಪ್ರಶ್ನೆಯ ಮುಖಾಂತರವೇ ನನ್ನ ಕೆಲಸಕ್ಕೆ ಒಂದು ತಾತ್ಪಿಕ ಚೌಕಟ್ಟು ಒದಗಿ ಬಂದದ್ದು. ಈ ಹೊತ್ತು ಆರ್ಥಿಕ ಉದಾರೀಕರಣ ನಮ್ಮ ಸಾಮಾಜಿಕ ಬದುಕಿನಲ್ಲಿ ಹಾಸು ಹೊಕ್ಕಾಗುತ್ತಿರುವಾಗ, ಸಮಾಜದ ಜನಸಮುದಾಯಗಳು ಮುಂದೆ ಯಾವ ರೀತಿಯ ಬದುಕನ್ನು ರೂಢಿಸಿಕೊಳ್ಳುತ್ತವೆಯೆನ್ನುವುದನ್ನು ಸುಲಭವಾಗಿ ಊಹಿಸಲಾಗದು. ಈ ಬದಲಾವಣೆಗಳು ನಮ್ಮಲ್ಲಿ ಜಾಗತಿಕ ಹಳ್ಳಿಗಳನ್ನು ಸೃಷ್ಟಿಸಿಬಿಡುವ ಮೊದಲು, ಈಗಿನ ಸ್ಥಿತಿಯನ್ನು ಸಮಾಜಶಾಸ್ತ್ರೀಯ – ಮಾನವಶಾಸ್ತ್ರೀಯ ದೃಷ್ಟಿಕೋನಗಳಿಂದ ದಾಖಲಿಸಬೇಕೆಂಬ ಅಗತ್ಯತೆಯ ಈ ಪುಸ್ತಕವನ್ನು ಬರೆಯುವಂತೆ ಮಾಡಿತು.

ಸಾಹಿತ್ಯ ಮತ್ತು ಇತಿಹಾಸಗಳು ವೈಯಕ್ತಿಕ ನಿರೂಪಣೆಗಳ ಮೂಲಕ ಅರ್ಥಪೂರ್ಣ ಭಾಷಿಕ ಅನುಸಂಧಾನದಲ್ಲಿ ತೊಡಗಿ ವಿಶೇಷ ಪ್ರಯೋಗಗಳನ್ನು ಮಾಡುತ್ತಿರುವಾಗ, ಸಮಾಜಶಾಸ್ತ್ರ – ಮಾನವಶಾಸ್ತ್ರಗಳಿಗೆ ಕನ್ನಡದ ಮಟ್ಟಿಗೆ ಇದು ಸಾಧ್ಯವಾಗಿಲ್ಲ. ಸಮಾಜವನ್ನು ಸಾಹಿತ್ಯ ಮತ್ತು ಇತಿಹಾಸಗಳು ನೋಡುತ್ತಿರುವ ದೃಷ್ಟಿಕೋನಗಳಿಗೆ ಪೂರಕ ಅಥವಾ ಸಂವಾದಿಯಾಗುವ ಚಿಂತನೆಗಳು ಸಮಾಜಶಾಸ್ತ್ರದಲ್ಲಿಯೂ ಸೃಷ್ಟಿಯಾಗಬೇಕಾದ ಅವಶ್ಯಕತೆಯಿದೆ. ಅದೊಂದು ಪ್ರಕ್ರಿಯೆ ಮತ್ತು ಪ್ರತಿಕ್ರಿಯೆ. ಹಾಗಾಗಿ ಇಡಿಯಾಗಿ ಕರ್ನಾಟಕದ ಜನಸಮುದಾಯಗಳ ಸಣ್ಣದೊಂದು ಕಲ್ಪನೆಯನ್ನು ನಮ್ಮ ಚಿಂತನೆಯು ಒಳಗೊಳ್ಳಬೇಕಾದ ಅವಶ್ಯಕತೆಯಿದೆ. ಈ ಪ್ರಯತ್ನ ಸುಮಾರು ೩೦ ವರ್ಷಗಳಷ್ಟು ಹಿಂದೆಯೇ ನಡೆಯಬೇಕಾಗಿತ್ತು. ಹಾಗೇನಾದರೂ ಆಗಿದ್ದರೆ, ಇಂದು ಈ ಅಧ್ಯಯನಗಳು ಇನ್ನೂ ಹೆಚ್ಚು ಪ್ರಯೋಗಶೀಲವಾಗಿರಲು ಸಾಧ್ಯವಿರುತ್ತಿತ್ತು. ಈ ಬಗೆಯ ಎಲ್ಲ ಯೋಚನೆಗಳ ಪ್ರತಿಫಲವಾಗಿ ಮತ್ತು ಹೆಚ್ಚು ವ್ಯವಸ್ಥಿತ ಹಾಗೂ ಪ್ರಗತಿಪರ ಆದ ಅಧ್ಯಯನಗಳನ್ನು ಎದುರುನೋಡುವ ಸಲುವಾಗಿ ಈ ಪುಸ್ತಕ ರೂಪುಗೊಂಡಿದೆ.

ಸ್ವತಂತ್ರ ಭಾರತ ಹಾಗೂ ಜನಸಮುದಾಯಗಳ ದಾಖಲಾತಿ

೨೦ನೇ ಶತಮಾನದ ಮೇಲುಪದರಿನಲ್ಲಿ ಎರಡು ಪ್ರಮುಖ ಬೆಳವಣಿಗೆಯನ್ನು ಗುರುತಿಸಬಹುದು. ಮೊದಲನೆಯದು, ರಾಜಕೀಯ ಸ್ವಾತಂತ್ರ್ಯ ಮತ್ತು ಪ್ರಜಾಸತ್ತೆ; ಎರಡನೆಯದು,  ಶತಮಾನದ ಕೊನೆಯ ದಶಕದಿಂದ ಪ್ರಾರಂಭವಾಗಿರುವ ಆರ್ಥಿಕ ಉದಾರೀಕರಣ, ಸ್ವಾತಂತ್ರ್ಯಪೂರ್ವಕಾಲದಲ್ಲಿ ಇಂಗ್ಲೀಷ್ ಶಿಕ್ಷಣ ಮತ್ತು ಆಧುನಿಕ ಪ್ರಜ್ಞೆ ಓದಿದವರಲ್ಲಿ ಬೆಳೆಯುತ್ತಿದ್ದ ಕಾಲದಲ್ಲಿ, ನಮ್ಮ ಜನಸಮುದಾಯಗಳ ಬದುಕಿನಲ್ಲಿ ಭಾರಿ ಬದಲಾವಣೆಗಳೇನೂ ಆಗರಲಿಲ್ಲ. ಆಗಿನ ಬಹುಮುಖ್ಯ ಫಲ ಎಂದರೆ ಉದಾರ ಮಾನವೀಯತೆ (ಲಿಬರಲ್ ಹ್ಯೂಮನಿಜಮ್) ಅಷ್ಟೇ. ಆ ಕಾಲದಲ್ಲಿ ಭಾರತೀಯ ಹಾಗೂ ಹಳೆಯ ಮೈಸೂರು ಪ್ರಾಂತ್ಯದ ಸಮುದಾಯಗಳ ದಾಖಲಾತಿ ಅಧ್ಯಯನವನ್ನು ಧರ್ಸ್ಟನ್, ಐಯ್ಯರ್, ನಂಜುಂಡಯ್ಯ, ಅಬ್ಬೆದುಬ್ಬೆ ಮುಂತಾದವರು ಮಾಡಿದ್ದಾರೆ. ಆದರೆ ನಮ್ಮಲ್ಲಿ ಸಾಮಾಜಿಕ ಚಲನೆ ಕಾಣಿಸಿಕೊಂಡದ್ದು ಸ್ವಾತಂತ್ರ್ಯದ ನಂತರವೇ. ಪ್ರಜಾಸತ್ತೆ ಸಂವಿಧಾನ ಎಲ್ಲ ಜನಸಮುದಾಯಗಳಿಗೆ ನೀಡಿದ ಮಹತ್ವ ಹಾಗೂ ಸಮಾನತೆ ಈ ಬದಲಾವಣೆಗಳಿಗೆ ಒಂದು ಮುಖ್ಯ ಕಾರಣ. ಸುಮಾರು ಐವತ್ತು ವರ್ಷಗಳ ಸಂವಿಧಾನಬದ್ಧ ಬದುಕಿನ ನಂತರ ಈಗ ಜಾಗತೀಕರಣ ಪ್ರಕ್ರಿಯೆಯಲ್ಲಿ ಎಲ್ಲರೂ ತೊಡಗಿಕೊಂಡಿದ್ದೇವೆ. ಇದು  ಮತ್ತೆ ನಮ್ಮ ಸಮಾಜಗಳನ್ನು ಹೊಸ ದಾರಿಯಲ್ಲಿ ಚಲಿಸಲು ಬಿಟ್ಟಿದೆ. ಈ ಹೊಸ ಚಲನೆ, ಮತ್ತೆ ತರಬಹುದಾದ ಬದಲಾವಣೆಗಳ ಮುನ್ನ ಇವತ್ತಿನ ಸ್ಥಿತಿಯ ದಾಖಲಾತಿ ಮಾಡುವ ಅನಿವಾರ್ಯತೆಯಿದೆ.

ಈ ಅಧ್ಯಯನದಲ್ಲಿ ಪ್ರಮುಖವಾಗಿ ಸ್ವಾತಂತ್ಯ್ರೋತ್ರ ಭಾರತ ಕಂಡ ಎಲ್ಲ ಸಾಮಾಜಿಕ, ಆರ್ಥಿಕ, ರಾಜಕೀಯ ಬದಲಾವಣೆಗಳು ಸುಮಾರು ೧೯೯೦ರ ಹೊತ್ತಿಗೆ ಕರ್ನಾಟಕ ಜನಸಮುದಾಯಗಳನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸಿದವು ಎನ್ನುವುದನ್ನು ದಾಖಲು ಮಾಡಲು ಯತ್ನಿಸಿದ್ದೇನೆ. ಈ ಬಗೆಯ ಪ್ರಯತ್ನಗಳನ್ನು ಇತರೆ ಶಿಸ್ತುಗಳೂ ಸಂಸ್ಥೆಗಳೂ ಕೂಡ ಮಾಡಲು ಯತ್ನಸಿವೆ. ಕನ್ನಡ ಪುಸ್ತಕ ಪ್ರಾಧಿಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಇತ್ಯಾದಿ ಸಂಸ್ಥೆಗಳು ಈ ಕೆಲಸಗಳನ್ನು ಮಾಡುತ್ತಲಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರತಂದ ಉಪಸಂಸ್ಕೃತಿ ಮಾಲೆಯಲ್ಲಿ ಕೆಲವನ್ನು ಹೊರತುಪಡಿಸಿ ಹೆಚ್ಚಿನ ಪುಸ್ತಕಗಳು ಸಮುದಾಯಗಳ ವಾಸ್ತವಿಕತೆಯನ್ನು ಗುರುತಿಸುವಲ್ಲಿ ವಿಫಲವಾಗಿವೆ. ಇದಲ್ಲದೆ ಉಪಸಂಸ್ಕೃತಿ ಮಾಲೆಯಲ್ಲಿ ಸಮುದಾಯಗಳನ್ನು ಅಧ್ಯಯನ ಮಾಡುವಾಗ ಏಕರೂಪತೆ ಇರದೆ ಇರುವುದು. ಆದರೆ ಇವುಗಳಲ್ಲಿ ಬಹಳಷ್ಟು ಅಧ್ಯಯನಗಳು ಸಾಹಿತ್ಯಿಕವಾದವು. ಅವುಗಳ ಒಂದು ಮುಖ್ಯ ಮಿತಿಯೆಂದರೆ, ಅವು ಸ್ಥಳೀಯ ಜನಪದ ಸಂಸ್ಕೃತಿಗಳನ್ನು ರಮ್ಯೀಕರಿಸುತ್ತಲಿವೆ.  ವೈಯಕ್ತಿಕ ನಿರೂಪಣೆಗಳಿಗಿರುವಂಥ ವಿಮರ್ಶಾತ್ಮಕ ಕಣ್ಣುಗಳು ಇಂಥ ಬರಹಗಳಲ್ಲಿ ಇರುವುದಿಲ್ಲ. ಹಾಗಾಗಿ ಸ್ವಾತಂತ್ಯ್ರೋತ್ತರ ಭಾರತದಲ್ಲಿನ ಜನಸಮುದಾಯಗಳ ದಾಖಲಾತಿಗಳು ಅಧ್ಯಯನನಿಷ್ಠೆಯನ್ನು ಕಾಯ್ದುಕೊಂಡರೂ, ವಿಚಾರನಿಷ್ಠೆಯಲ್ಲಿ ಸ್ವಲ್ಪ ಎಡವಿವೆ. ಇಂಥ ಬಹಳಷ್ಟು ಅಧ್ಯಯನಗಳಿಗೆ ಇತಿಹಾಸ ಮತ್ತು ಸಾಹಿತ್ಯಿಕ ದೃಷ್ಟಿಕೋನವಿದೆಯೇ ಹೊರತು, ಸಮಾಜಶಾಸ್ತ್ರೀಯ ದೃಷ್ಟಿಕೋನವಿಲ್ಲ. ಹಾಗಾಗಿ ಸಮಾಜಶಾಸ್ತ್ರೀಯ ದೃಷ್ಟಿಕೋನದ ಚಿಂತನೆಗಳು ಅವುಗಳಿಗೆ ಸಹಾಯಕವಾಗಿ, ಅವುಗಳ ಪ್ರತಿಕ್ರಿಯೆಯು ಸಮಾಜಕ್ಕೆ ದಕ್ಕಲಿ ಎಂಬ ಆಶಯ ಕೂಡ ಈ ಅಧ್ಯಯನದ ಆಳದಲ್ಲಿದೆ.

ಸ್ವಾತಂತ್ರ್ಯಾನಂತರದಲ್ಲಿ ಹಲವು ರೀತಿಯಲ್ಲಿ ಜನಸಮುದಾಯಗಳ ದಾಖಲಾತಿಗಳು ಆಗಿವೆ. ಇದರಲ್ಲಿ ಸರ್ಕಾರದ ದಾಖಲಾತಿಗಳು ಪ್ರಮುಖವೆನಿಸುತ್ತವೆ. ಅವುಗಳೆಂದರೆ ರಾಜ್ಯವಾರು ಹಾಗೂ ಜಿಲ್ಲಾವಾರು ಗೆಜೆಟಿಯರ್‌ಗಳು, ಹಿಂದುಳಿದ ವರ್ಗಗಳ ಆಯೋಗದ ವರದಿಗಳು, ಸಮಾಜಕಲ್ಯಾಣ ಇಲಾಖೆಯ ವರದಿಗಳು ಹಾಗೂ ದಾಖಲಾತಿಗಳು ಮುಖ್ಯವಾಗಿವೆ. ಈ ಎಲ್ಲ ದಾಖಲಾತಿಗಳು ಮುಖ್ಯವಾಗಿವೆ. ಈ ಎಲ್ಲ ದಾಖಲಾತಿಗಳ ಮೂಲಭೂತ ಉದ್ದೇಶ ಸಂವಿಧಾನದ ಸೌಲಭ್ಯಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವುದಾಗಿತ್ತು. ಜಾರಿಗೊಳಿಸಲು ಪ್ರಯತ್ನಿಸಿದ ಸವಲತ್ತುಗಳು ಹೀಗಿವೆ. ಸಂವಿಧಾನದ ೧೪ನೇ ವಿಧಿಯ ಪ್ರಕಾರ ಯಾವುದೇ ವ್ಯಕ್ತಿಗೆ ಕಾನೂನಿನ ದೃಷ್ಟಿಯಲ್ಲಿ ತಾರತಮ್ಯ ಮಾಡಬಾರದು. ಎಲ್ಲರಿಗೂ ಸಮಾನ ರಕ್ಷಣೆ. ೧೫ನೆಯ ವಿಧಿಯ ಪ್ರಕಾರ ಧರ್ಮ, ಕುಲ, ಜಾತಿ, ಲಿಂಗ ಇತ್ಯಾದಿಗಳ ಆಧಾರದ ಮೇಲೆ ಪಕ್ಷಪಾತ ಮಾಡಬಾರದು. ೧೬ನೇ ವಿಧಿಯ ಪ್ರಕಾರ ಸರ್ಕಾರಿಸೇವೆಗಳಿಗೆ ಸೇರಲು ಎಲ್ಲಾ ಪೌರರಿಗೂ ಸಮಾನ ಅವಕಾಶ. ೧೭ನೇ ವಿಧಿಯ ಪ್ರಕಾರ ಅಸ್ಪೃಶ್ಯತೆಯನ್ನು ಅಳಿಸಿ, ಅದರ ಆಚರಣೆಯನ್ನು ತಡೆಯಬೇಕು. ಜೀತಪದ್ಧತಿ ನಿಷೇಧಿದಿ, ವ್ಯಕ್ತಿ ಸ್ವಾತಂತ್ರ್ಯದ ಹಕ್ಕು ನೀಡುವುದು, ಹೀಗೆ ಹಲವಾರು ಸಂವಿಧಾನದ ಸವಲತ್ತುಗಳು ಭಾರತೀಯ ಸಾಂಪ್ರದಾಯಿಕ ಸಾಮಾಜಿಕ ರಚನೆಯಲ್ಲಿ ಸ್ವಲ್ಪಮಟ್ಟಿಗೆ ಸಾಮಾಜಿಕ ಚಲನೆಯನ್ನು ಹುಟ್ಟು ಹಾಕಿದವು. ಈ ಚಲನೆಯಿಂದ, ಸಂವಿಧಾನ ಸೌಲಭ್ಯಗಳ ಬೆಂಬಲದಿಂದ ಕೆಳಜಾತಿ ಹಾಗೂ ಬುಡಕಟ್ಟು ಸಮುದಾಯದಲ್ಲಿ ಸಂಪೂರ್ಣವಾದ ಬದಲಾವಣೆ ಉಂಟಾಯಿತು ಎಂದು ನಿಖರವಾಗಿ ಹೇಳುವಂತಿಲ್ಲ. ಆದರೆ ಸಂವಿಧಾನದ ಕೆಲವು ಸೌಲಭ್ಯಗಳಿಂದ ಜಾತಿ ಹಾಗೂ ಬುಡಕಟ್ಟು ಜನಸಮುದಾಯಗಳಲ್ಲಿ ಸಾಮಾಜಿಕ ಚಲನೆ ಉಂಟಾಗಿರುವುದಂತೂ ಸ್ಪಷ್ಟ. ಇಲ್ಲಿ ಹಿಂದುಳಿದ ವರ್ಗಗಳ ಸಂಘಟನೆಗಳು ಹಾಗೂ ಚಳುವಳಿಗಳು, ೧೯೬೦-೭೦ ದಶಕದಲ್ಲಿ ಪ್ರಾರಂಭಗೊಂಡ ದಲಿತ ಸಂಘಟನೆಗಳು ಹಾಗೂ ಚಳುವಳಿಗಳು, ಬುಡಕಟ್ಟು  ಜನ ಸಮುದಾಯ ಹೋರಾಟಗಳು, ಆಧುನಿಕ ಶೈಕ್ಷಣಿಕ ಸಂಘ ಸಂಸ್ಥೆಗಳಿಗೆ ಅತ್ಯಂತ ಕೆಳಜಾತಿಯ ಬುಡಕಟ್ಟು ಜನರ ಪ್ರವೇಶಗಳು ಪ್ರಮುಖವಾಗುತ್ತವೆ. ಇದಲ್ಲದೆ, ದಲಿತ ಹಾಗೂ ಹಿಂದುಳಿದ ವರ್ಗಗಳು ರಾಜಕೀಯವಾಗಿ ಸಂಘಟನೆಗೊಂಡು, ಆಧುನಿಕ ರಾಜಕೀಯ ಸಂಸ್ಥೆಗಳಲ್ಲಿ, ಪ್ರಬಲ ಒತ್ತಡದ ಗುಂಪಾಗಿ ಕೆಸಲ ಮಾಡುತ್ತಿರುವುದ ನಮ್ಮ ಕಣ್ಣಿಗೆ ರಾಚುವಂತೆ ಕಂಡುಬಂದರೂ, ಇಂದೂ ಸಹ ಸಾಂಪ್ರದಾಯಿಕ ಜಾತಿವ್ಯವಸ್ಥೆಯ ಆಚರಣೆಗಳು ಕಂಡುಬರುತ್ತವೆ.

ಈಗಾಗಲೇ ನಮಗೆ ತಿಳಿದಿರುವಂತೆ ಸಾಂಪ್ರದಾಯಿಕ ಜಾತಿ ವ್ಯವಸ್ಥೆಯ ರಚನೆಯಲ್ಲಿ, ನಗರ ಪ್ರದೇಶದಲ್ಲಿನ ಜಾತಿ ವ್ಯವಸ್ಥೆಗಿಂತಲೂ, ಗ್ರಾಮೀಣ ಪ್ರದೇಶಗಳಲ್ಲಿ ಇರುವ ಜಾತಿ ವ್ಯವಸ್ಥೆಯಲ್ಲಿನ ಭೇದವನ್ನು ಸ್ಫುಟವಾಗಿ ಗುರುತಿಸಬಹುದು. ನಗರ  ಪ್ರದೇಶದಲ್ಲಿ ಜನರು ತುಂಬಾ ನಾಜೂಕಿನಿಂದ ತಮ್ಮ ಜಾತಿಯಿಂದ ಗುರುತಿಸಿಕೊಂಡು, ಆಧುನಿಕ ಸಂಘ ಸಂಸ್ಥೆಗಳಲ್ಲಿ ವ್ಯವಸ್ಥಿತವಾದ ಸಂಘಟನೆಗಳಲ್ಲಿ ಮಾಡಿಕೊಂಡಿರುತ್ತಾರೆ. ನಗರ ಪ್ರದೇಶದಲ್ಲಿ ಜಾತಿ ಸಂಘರ್ಷಗಳ ಪ್ರಖರತೆಯು ಹೆಚ್ಚಾಗಿ ಕಂಡುಬರದೆ, ಆಧುನಿಕ ವ್ಯವಸ್ಥೆಗೆ ಹೊಂದಿಕೊಂಡಿವೆ. ಇಲ್ಲಿ ವ್ಯವಸ್ಥಿತವಾದ ರಾಜಕೀಯಗಳನ್ನು ಜಾತಿಯ ಸಂಘಟನೆಗಳು ಮಾಡುತ್ತಿರುವುದನ್ನು ಗುರುತಿಸಬಹುದು. ಉದಾಹರಣೆಗೆ ಸಮುದಾಯದ ಹೆಸರಿನ ಶೈಕ್ಷಣಿಕ ಸಂಸ್ಥೆಗಳು, ಸಮುದಾಯ ಸಂಘಗಳು  ಇತ್ಯಾದಿ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸಮಕಾಲೀನ ಸಂದರ್ಭದಲ್ಲಿ ಜಾತಿವ್ಯವಸ್ಥೆಯು ತನ್ನದೆ ಆದ ಪ್ರಬಲತೆಯನ್ನು ಹೊಂದಿದೆ. ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಸಹ ಅಸ್ಪೃಶ್ಯತೆ ಆಚರಣೆಯಲ್ಲಿ ಇರುವುದು, ಹೆಚ್ಚಿರುವ ಜಾತಿಸಂಘಗಳು, ಗ್ರಾಮದ ಧಾರ್ಮಿಕ ಆಚರಣೆಗಳಲ್ಲಿ ಪ್ರಬಲ ಜಾತಿಗೆ ಹೆಚ್ಚಿನ ಪ್ರಾಮುಖ್ಯತೆ, ಸ್ವಲ್ಪಮಟ್ಟಿನ ಜಾಜಮಾನಿ ವ್ಯವಸ್ಥೆ (ಆಯ ಪದ್ಧತಿ) ಇವೆ. ಮೊದಲಾದ ರೀತಿಗಳಲ್ಲಿ ಸಮುದಾಯಗಳು ತಮ್ಮ ಸಾಂಪ್ರದಾಯಿಕ ಪಾರಂಪರಿಕ ವೃತ್ತಿಗಳನ್ನು ಸಾಂಸ್ಕೃತಿಕ ರೀತಿಯಲ್ಲಿ ಇನ್ನೂ ಅಸ್ತಿತ್ವದಲ್ಲಿ ಇಟ್ಟುಕೊಂಡಿವೆ. ಇನ್ನು ಕೆಲವು ಸಾಂಪ್ರದಾಯಿಕ ಪಾರಂಪರಿಕ, ಧಾರ್ಮಿಕ, ಆಚಾರ ವಿಚಾರಗಳಲ್ಲಿ ಸಮುದಾಯಗಳು ಯಾವುದೇ ರೀತಿಯ ಒಪ್ಪಂದ ಮಾಡಿಕೊಂಡಿರುವಂತೆ ಕಂಡುಬರುವುದಿಲ್ಲ. ಆಧುನಿಕತೆಯು ನಮ್ಮ ಗ್ರಾಮಗಳನ್ನು ಪರಿಣಾಮಕಾರಿಯಾಗಿ ಹೊಕ್ಕಿದ್ದರೂ, ತನ್ನ ಸಾಂಪ್ರದಾಯಿಕ ವ್ಯವಸ್ಥೆಯನ್ನು ನಮ್ಮ ಸಮಾಜ ಕಾಯ್ದುಕೊಂಡಿರುವುದು, ಅಧ್ಯಯನಕ್ಕೆ ಮುಖ್ಯವಾಗುತ್ತದೆ.

ಈ ಓದಿನ ರೀತಿ, ಪ್ರೀತಿ ಮತ್ತು ಮಿತಿಗಳು

ಕರ್ನಾಟಕದ ಸಮುದಾಯಗಳನ್ನು ಹೀಗೆ ದಾಖಲು ಮಾಡುವಾಗ ಕೆಲವೊಂದು ನಿರ್ದಿಷ್ಟ ರೀತಿಗಳನ್ನು ಅನುಸರಿಸಿದ್ದೇನೆ. ಇಲ್ಲಿ ದಾಖಲು ಮಾಡಿರುವ ೨೪೦ ಸಮುದಾಯಗಳನ್ನು ವಿಂಗಡಿಸುವ ಪ್ರಶ್ನೆ ಎದುರಾದಾಗ ಹಿಂದೆ ಭಾರತೀಯ ಇತಿಹಾಸ ತಜ್ಞರು ಮಾಡಿರುವ ತಪ್ಪುಗಳನ್ನು ಗಮನದಲ್ಲಿಟ್ಟುಕೊಂಡು ಕೋಮುವಾರು ಅಥವಾ ಜಾತಿವಾರು ಅಥವಾ ಪ್ರಾಂತ್ಯವಾರು ವಿಂಗಡಣೆಗಳಿಗೆ ಹೋಗದೆ, ಎಲ್ಲ ಸಮುದಾಯಗಳನ್ನು ಅಕಾರಾದಿಯಲ್ಲೇ ವಿಂಗಡಿಸಿದ್ದೇನೆ. ನಮ್ಮ ಸಮಾಜದ ಸಂಕೀರ್ಣತೆಗಳನ್ನು ಇಂಥ ವಿಂಗಡಣೆಗಳು ಹೇಳದೆ ಸರಳೀಕರಿಸಿಬಿಡುವ ಭಯವಿರುವುದರಿಂದ, ಹಾಗೂ ಜಾತ್ಯಾತೀತ (ಸೆಕ್ಯೂಲರ್) ವಿಂಗಡಣೆಗಳ ಮಾದರಿಗಳು ನನ್ನ ಮುಂದಿರದಿದ್ದುದರಿಂದ ಹೀಗೆ ಕೊಟ್ಟಿದ್ದೇನೆ. ಇದೊಂದು ಪ್ರಾಥಮಿಕ ಜ್ಞಾನ ಪೂರೈಕೆಯ ಪಠ್ಯವಾಗಿರುವುದರಿಂದ ಯಾವುದೇ ಸಮುದಾಯದ ಬಗ್ಗೆ ಇಡಿಯಾಗಿ ಓದಲಾಗದೆ, ಕರ್ನಾಟಕದ ಎಲ್ಲಾ ಸಮುದಾಯಗಳ ಬಗ್ಗೆ – ಅವರ ಪುಟ್ಟ ಇತಿಹಾಸ, ಅವರ ಕೆಲವು ಮುಖ್ಯ ಆಚರಣೆಗಳು, ಸಾಮಾಜಿಕ ಸ್ಥಾನಮಾನಗಳು, ಸ್ತ್ರೀಯರ ಸ್ಥಿತಿಗತಿಗಳು, ಸಾಂಸ್ಕೃತಿಕ ವಿಶಿಷ್ಟತೆಗಳು, ರಾಜಕೀಯ ಪ್ರಾಬಲ್ಯ ಮತ್ತು ಆಧುನಿಕ ಸೌಲಭ್ಯಗಳ ಬಳಕೆ ಕುರಿತಾಗಿ – ಮಾಹಿತಿಗಳು ಇಲ್ಲಿವೆ. ಇಂಥ ಕೆಲಸವು ನನ್ನ ವೈಯಕ್ತಿಕ ಚಿಂತನೆಯ ತುರ್ತುಕೂಡ ಆಗಿದ್ದು, ಪುಸ್ತಕವನ್ನು ಬರೆಯುವಾಗ ಭಾವನಾತ್ಮಕವಾಗಿರಲು ಸಹಾಯಕವಾಗಿತ್ತು. ಇಂದೊಂದು ಶೈಕ್ಷಣಿಕ (ಎಕಾಡೆಮಿಕ್) ಶಿಸ್ತಿನ ಪುಸ್ತಕವಾಗಿರುತ್ತದೆ.

ಇಷ್ಟೆಲ್ಲಾ ಹೇಳಿಯೂ, ಈ ಪುಸ್ತಕಕ್ಕೆ ಹಾಗೂ ಇಂಥ ಓದಿಗೆ ಮಿತಿಗಳಿಲ್ಲ ಎಂದು ಹೇಳುವುದು ತಪ್ಪು. ಈ ಓದಿನ ಮೊದಲ ಮಿತಿಯೆಂದರೆ, ಇದು ಥರ್ಸ್ಟನ್ ಹಾಗೂ ಕೆ.ಎಸ್.ಸಿಂಗ್‌ರವರ ಮಾದರಿಗೆ ಹತ್ತಿರವಾಗಿರುವುದು. ಅವರ ಮಾದರಿಯಿಂದ ಸಾಕಷ್ಟು ಭಿನ್ನತೆಗಳಿದ್ದೂ ಅದಕ್ಕೆ ಹತ್ತಿರವಾಗಿ ಇದೊಂದು ಹಳೆ ಮಾದರಿಯವೆನ್ನಿಸಿಬಿಡುವುದು ಕರ್ನಾಟಕವನ್ನು ‘ಒಂದು’ ಎಂದು ಭಾವಿಸುವ ಓದು ಎನ್ನಿಸಿಬಿಡಬಹುದು. ಆದರೆ ಇಲ್ಲಿರುವ ಎಲ್ಲ ಸಮುದಾಯಗಳಿಗೆ ಸ್ವತಂತ್ರ ಅಸ್ತಿತ್ವ ನೀಡಲು ಪ್ರಯತ್ನಿಸಿದ್ದೇನೆ. ಈ ಪ್ರಯತ್ನ ಎಷ್ಟರ ಮಟ್ಟಿಗೆ ಸಾರ್ಥಕವಾಗಿ ಮೂಡಿಬಂದಿದೆಯೆನ್ನುವುದು ಓದುಗರಾದ ನೀವು ಹೇಳಬೇಕಾಗಿದೆ. ಎರಡನೆಯದಾಗಿ, ಇದೊಂದು ಸಮಾಜಶಾಸ್ತ್ರೀಯ ಹಾಗೂ ಮಾನವಶಾಸ್ತ್ರೀಯ ನೆಲೆಗಟ್ಟಿನಿಂದ ಬಂದಿರುವ ಕೃತಿಯಾಗಿರುವುದರಿಂದ  ಅನ್ಯಶಿಸ್ತೀಯ ಕ್ರಮಗಳಿಂದ ಓದುವವರಿಗೆ ಇಂದೊಂದು ಮಿತಿ ಎನ್ನಿಸಬಹುದು. ಜೊತೆಗೆ ಕರ್ನಾಟಕದಲ್ಲಿರುವ ಎಲ್ಲಾ ಸಮುದಾಯಗಳನ್ನು ಗುರುತಿಸಲಾಗದೇ ಇರುವುದು ನಮ್ಮ ಅಧ್ಯಯನದ ಮತ್ತೊಂದು ಮಿತಿಯೆನ್ನಿಸಬಹುದು. ಆದರೆ ನನ್ನ ಉದ್ದೇಶ, ಬೇರೆ ಶಿಸ್ತುಗಳು ಸಮಾಜದ ಅಧ್ಯಯನ ಮತ್ತು ಪ್ರಗತಿ ಕುರಿತು ಮಾಡುತ್ತಿರುವ ಚಿಂತನೆಗಳಿಗೆ ಒಂದು ಸಮಾಜಶಾಸ್ತ್ರೀಯ ನೆಲೆಗಟ್ಟನ್ನು ಒದಗಿಸುವುದಾಗಿದೆಯೇ ಹೊರತು, ಕರ್ನಾಟಕದ ಸಮುದಾಯಗಳ ಬಗೆಗಿನ ಒಟ್ಟು ದೃಷ್ಟಿಕೋನವನ್ನಲ್ಲ – ಎನ್ನುವುದನ್ನು ನಾನು ಒಪ್ಪಿಕೊಂಡು ಹೇಳಬೇಕಿದೆ.

ವಿವರವಾದ ಅಧ್ಯಯನ, ಮಾಹಿತಿಗಳು ಇಲ್ಲದಿರುವುದು, ಪುಸ್ತಕವನ್ನು ಪ್ರಾಥಮಿಕ ಓದಿಗೆ ತಕ್ಕಂತೆ ಸೃಷ್ಟಿಸಿರುವುದರಿಂದಲೇ ಉಂಟಾದ ಮಿತಿ. ಇದೊಂದು ಎಲ್ಲ ಶಿಸ್ತುಗಳ ಒಟ್ಟು ಚಿಂತನೆಯಲ್ಲಿನ ಒಂದು ಕೊಂಡಿ ಮಾತ್ರ. ಹಾಗೆಂದುಕೊಂಡಾಗ ಮಾತ್ರ ಈ ಪುಸ್ತಕದ ಉದ್ದೇಶ ಹಾಗೂ ಸಾರ್ಥಕತೆ ಸ್ಪಷ್ಟವಾಗುತ್ತದೆ. ಸಮಾಜಶಾಸ್ತ್ರೀಯ ಹಾಗೂ ಇತರೆ ಶಿಸ್ತುಗಳಲ್ಲಿ ಇರುವ ಹಾಗೂ ಬರುವ ಚಿಂತನೆಗಳ ಪೂರಕ ಹಾಗೂ ಸಂವಾದಿ ಕಥನಗಳ ಮೂಲಕವೇ ಇದರ ಅಸ್ತಿತ್ವ ಸ್ಪಷ್ಟವಾಗುತ್ತದೆಂದು ನನ್ನ ಭಾವನೆ. ಇಷ್ಟು ಹೇಳುವುದರ ಮೂಲಕ ಪ್ರೀತಿಯಿಂದ ಈ ಪುಸ್ತಕವನ್ನು ಓದಲು ನಿಮ್ಮನ್ನು ಆಹ್ವಾನಿಸುತ್ತಿದ್ದೇನೆ.

ಕೃತಜ್ಞತೆಗಳು

ಕರ್ನಾಟಕದ ಜನಸಮುದಾಯಗಳ ಬಗ್ಗೆ ಕನ್ನಡದಲ್ಲಿ ಸಮಗ್ರವಾದ ಮಾಹಿತಿ ಇಲ್ಲದಿರುವುದನ್ನು ಗಮನಿಸಿದ ಮಾನ್ಯ ಕುಲಪತಿ ಡಾ.ಎಂ.ಎಂ.ಕಲಬುರ್ಗಿ ಅವರು ನಮ್ಮ ವಿಭಾಗಕ್ಕೆ ಈ ಯೋಜನೆಯನ್ನು ಮಾಡುವಂತೆ ನಿರ್ದೇಶಿಸಿದರು. ವಿಭಾಗದಲ್ಲಿ ಏಕ ಅಧ್ಯಾಪಕನಾಗಿ ಕರ್ನಾಟಕದ ಜನಸಮುದಾಯಗಳ ಬಗ್ಗೆ ಸಮಗ್ರವಾಗಿ ಕೆಲಸಮಾಡುವುದು ಕಷ್ಟವಾದದ್ದು ಎಂಬ ಅರಿವು ನನಗೆ ಯೋಜನೆಯ ಪ್ರಾರಂಭದಲ್ಲಿ ತಿಳಿದಿರಲಿಲ್ಲ. ವಿಭಾಗಕ್ಕೆ ಭೇಟಿ ನೀಡಿದ ಸಂದರ್ಭಗಳಲ್ಲಿ ಹುರುಪು ಹುಮ್ಮಸ್ಸುಗಳನ್ನು ಪ್ರತಿಹಂತದಲ್ಲೂ ತುಂಬಿ, ಶ್ರಮ, ಸಮಯ, ಹಣ ಈ ಮೂರನ್ನು ಸರಿಯಾಗಿ ಬಳಸಿದರೆ ಮಾತ್ರ ಈ ಯೋಜನೆಯನ್ನು ಪೂರೈಸಬಹುದು ಎಂದು ತಿಳಿಸಿ, ಈ ಯೋಜನೆಯ ಪುಸ್ತಕ ರೂಪಕ್ಕೆ ಬರುವಲ್ಲಿ ಕಾರಣವಾದವರು ಮಾನ್ಯ ಕುಲಪತಿಗಳು. ಅವರಿಗೆ ವಿಯನಪೂರ್ವಕವಾಗಿ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಈ ಪುಸ್ತಕವನ್ನು ಸಿದ್ಧಪಡಿಸುಲ್ಲಿ ಹೆಚ್ಚಿನ ಜವಾಬ್ದಾರಿಗಳನ್ನು ತೆಗೆದುಕೊಂಡು ಯೋಜನೆಯ ಪ್ರತಿ ಹಂತದಲ್ಲಿ ಸಲಹೆ ಸೂಚನೆ ನೀಡಿ ಸಹಕರಿಸಿದ ಪ್ರೀತಿಯ ಮೇಸ್ಟ್ರು, ಹಾಗೂ ಸಲಹಾ ಸಮಿತಿ ತಜ್ಞರಾದ ಡಾ.ಜೋಗನ್ ಶಂಕರ್, ಮಹೇಶ ತಿಪ್ಪ ಶೆಟ್ಟಿ ಹಾಗೂ ಸುರೇಶ ಎಚ್.ಪಾಟೀಲ ಅವರುಗಳಿಗೆ ಕೃತಜ್ಞತೆಗಳು.

ಕರ್ನಾಟಕದ ಕೆಲವು ಬುಡಕಟ್ಟುಗಳ ಬಗ್ಗೆ ಮಾಹಿತಿ ನೀಡಿದ ನಮ್ಮ ವಿಶ್ವವಿದ್ಯಾಲಯದ ಬುಡಕಟ್ಟು ವಿಭಾಗದ ಮುಖ್ಯಸ್ಥರಾದ ಡಾ.ಹಿ.ಬೋರಲಿಂಗಯ್ಯ ಅವರಿಗೆ ಕೃತಜ್ಞತೆಗಳು. ಮಾಹಿತಿ ನೀಡಿದ ಸ್ನೇಹಿತರಾದ ಡಾ.ಹಿ.ಬೋರಲಿಂಗಯ್ಯ ಅವರಿಗೆ ಕೃತಜ್ಞತೆಗಳು. ಮಾಹಿತಿ ನೀಡಿದ ಸ್ನೇಹಿತರಾದ ಡಾ.ಮೈತ್ರಿ, ಪ್ರಭಾಕರ್ ಅವರುಗಳಿಗೆ ಹಾಗೂ ಬುಡಕಟ್ಟು ಜನರ ಭಾವಚಿತ್ರಗಳನ್ನು ಉಪಯೋಗಿಸಿಕೊಳ್ಳಲು ಅನುಮತಿ ನೀಡಿದ ಬುಡಕಟ್ಟು ವಿಭಾಗದ ಎಲ್ಲಾ ಸ್ನೇಹಿತರಿಗೆ ವಂದನೆಗಳು.

ಈ ಯೋಜನೆಗೆ ಸಲಹೆ ಸೂಚನೆ ನೀಡಿದ ಮೈಸೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗ ಪ್ರಾಧ್ಯಾಪಕರಾದ ಡಾ. ಆರ್.ಇಂದಿರಾ ಅವರಿಗೆ ಹಾಗೂ ಹೆಚ್‌.ವಿ.ನಾಗೇಶ್ ಅವರಿಗೆ ವಂದನೆಗಳು.

ಯೋಜನೆಯಲ್ಲಿ ಔಪಚಾರಿಕವಾಗಿ  ಒಬ್ಬನೆ ಕೆಲಸ ಮಾಡಿದ್ದರೂ ಮಾಹಿತಿ ಸಂಗ್ರಹಣೆಯಿಂದ ಕೊನೆಯ ಹಂತದವರೆಗೆ ನನ್ನ ಜೊತೆ ಕೆಲಸ ಮಾಡಿದ ತಮ್ಮ ಕಿರಣ್ ಕುಮಾರ್, ಸ್ನೇಹಿತೆ ಸುಜಾತ, ಸಂಧ್ಯಾ ರವಿ ಪ್ರಸಾದ್ ಹಾಗೂ ಪತ್ನಿ ಸತ್ಯ ಅವರಿಗೆ ವಂದನೆಗಳು.

ಕನ್ನಡ ವಿಶ್ವವಿದ್ಯಾಲಯದ ಎಲ್ಲಾ ಸಹೋದ್ಯೋಗಿ ಮಿತ್ರರಿಗೆ ಹಾಗೆಯೇ ಯೋಜನೆಯ ಪ್ರತಿ ಹಂತದಲ್ಲಿ ಆಡಳಿತಾತ್ಮಕ ಸಹಕಾರ ನೀಡಿದ ಮಾನ್ಯ ಕುಲಸಚಿವರಾದ ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಎ.ವಿ. ನಾವಡ ಅವರಿಗೆ ವಂದನೆಗಳು.

ಹೆಚ್.ಡಿ. ಪ್ರಶಾಂತ್
ವಿದ್ಯಾರಣ್ಯ