ಬಂಟರಿಗೆ ಶೆಟ್ಟಿ, ಮಾಳ್ವ, ಆಳ್ವ, ಭಂಡಾರಿ, ಬಲ್ಲಾಳ, ಇತ್ಯಾದಿ ಹೆಸರುಗಳಿವೆ. ಇವರು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ಇವರಿಗೆ ತಾಯಿ ಮೂಲದ ಬಳ್ಳಿಗಳಿವೆ-  ಬಂಗೇರಣ್ಣಯ್ಯ, ಬರಮರಣ್ಣಯ್ಯ, ಹೊಳೆಬಣ್ಣಯ್ಯ, ಕರಬುರಣ್ಣಯ್ಯ, ಹಂಗಾರ, ಕುಂದಲ ಬಣ್ಣಯ್ಯ, ಸಲಬಣ್ಣಯ್ಯ, ಜಾಲಿಬಳ್ಳಿ, ಇತ್ಯಾದಿ. ಥರ್ಸ್ಟನ್ (೧೯೦೯) ಇವರಲ್ಲಿ ಹಲವಾರು ಉಪಗುಂಪುಗಳನ್ನೂ ಹೆಸರಿಸುತ್ತಾರೆ. ಅವೆಂದರೆ – ಮಸಡಿಕ, ನಾಡವ ಅಥವಾ ನಾದ, ಪರಿವಾರ, ಇತ್ಯಾದಿ. ಇವರು ಸಮುದಾಯ ಮಟ್ಟದಲ್ಲಿ ಒಳಬಾಂಧವ್ಯ ವಿವಾಹಗಳನ್ನು, ಬಳ್ಳಿಗಳ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹಗಳನ್ನು ಅನುಸರಿಸುತ್ತಾರೆ. ಸೋದರ ಸಂಬಂಧಿ ವಿವಾಹಗಳಿಗೆ ಇವರಲ್ಲಿ ಅವಕಾಶವಿದೆ. ವರದಕ್ಷಿಣೆಯನ್ನು ಹಣ ಹಾಗೂ ಇತರೆ ರೂಪಗಳಲ್ಲಿ ಕೊಡುತ್ತಾರೆ. ಇವರು ಅಳಿಯ ಸಂತಾನ ಪದ್ಧತಿಯನ್ನು ಅನುಸರಿಸುತ್ತಾರೆ. ಮನೆಯ ಆಸ್ತಿಯನ್ನು ಮನೆಯ ಹೆಣ್ಣು ಮಕ್ಕಳಲ್ಲಿ ಸಮವಾಗಿ ಹಂಚುತ್ತಾರೆ. ಹಿರಿಯ ಮಗಳ ಮಗನಿಗೆ ಮನೆಯ ವಾರಸುದಾರಿಕೆ ಹೋಗುತ್ತದೆ. ಇತ್ತೀಚಿನ ದಿನಗಳಲ್ಲಿ ಗಂಡು ಮಕ್ಕಳಿಗೂ ಪಾಲು ದೊರೆತಿರುವುದರ ಉದಾಹರಣೆಗಳಿವೆ. ಹೆರಿಗೆಗೆ ಮುನ್ನ ‘ಬಯಕೆ’, ಕಾರ್ಯವನ್ನು ಮಾಡುತ್ತಾರೆ. ನಾಮಕರಣವನ್ನು ಮಗು ಜನಿಸಿದ ಹನ್ನೊಂದನೇ ದಿನದಂದು ಮಾಡುತ್ತಾರೆ. ಮದುವೆಯ ಆಚರಣೆಗಳಲ್ಲಿ ಧಾರೆ, ತಾಳಿಕಟ್ಟುವುದು, ಇತ್ಯಾದಿ. ಮದುವೆಯ ವೆಚ್ಚವನ್ನು ವಧುವರನ ಕಡೆಯ ಇಬ್ಬರು ಸಮವಾಗಿ ಬರಿಸುತ್ತಾರೆ. ಶವವನ್ನು ಸುಟ್ಟು, ಸೂತಕವನ್ನು ಹತ್ತು ದಿನಗಳವರೆಗೆ ಆಚರಿಸಿ, ‘ಬಜ್ಜ’ ಎಂಬ ಧಾರ್ಮಿಕ ಕಾರ್ಯವನ್ನು ಹನ್ನೊಂದನೇ ದಿನ ನಡೆಸುತ್ತಾರೆ. ಹೆಂಗಸರು ಮನೆಯ ಆದಾಯಕ್ಕೆ ಸಹಾಯ ಮಾಡುತ್ತಾರೆ. ಇವರಿಗೆ ಭೂಮಿಯಿದ್ದು ಉಳುಮೆ ಮಾಡುತ್ತಾರೆ.

ಇವರಲ್ಲಿ ಕೆಲವರು ವ್ಯಾಪಾರಿಗಳು, ಖಾಸಗಿ-ಸರ್ಕಾರಿ ಸಂಸ್ಥೆಗಲ ನೌಕರಿಯಲ್ಲಿ ಇದ್ದಾರೆ. ಇವರು ಈಶ್ವರ, ಗೋಪಾಲಕೃಷ್ಣ ಹಾಗೂ ಭೂತಗಳನ್ನು ಆರಾಧಿಸುತ್ತಾರೆ. ಇವರು ತಮ್ಮ ಅಚ್ಚುಮೆಚ್ಚಿನ ಆಟಗಳಾದ ಕಂಬಳವನ್ನು ಹಾಗೂ ಕೋಳಿ ಕಾಳಗಗಳನ್ನು ನಡೆಸುತ್ತಾರೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪಡೆಯಲು ಪ್ರೋತ್ಸಾಹವಿದೆ. ಆಧುನಿಕ ಸಾಮಾಜಿಕ ಸೌಲಭ್ಯಗಳು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದ್ದಾರೆ.