ಗ್ಗರನ್ನು ಶೀವರೆಡ್ಡಿಗಳು ಎಂದು ಕರೆಯುತ್ತಾರೆ. ಈ ಸಮುದಾಯದವರು ಚಿಕ್ಕಮಗಳೂರು, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಇವರು ಶಿವಮೊಗ್ಗ ಜಿಲ್ಲೆಯ ಬಗ್ಗಳ್ಳಿ ಎಂಬ ಗ್ರಾಮದಿಂದ ವಲಸೆ ಬಂದದ್ದರಿಂದ ಇವರಿಗೆ ಬಗ್ಗರು ಎಂದು ಹೆಸರು ಬಂದಿದೆ. ಮೂಲತಃ ಇವರು ಹರಿಜನ ಸಮಾಜದವರೆಂದು ನಂಜುಂಡಯ್ಯ ಮತ್ತು ಐಯ್ಯರ್ (೧೯೩೦) ತಿಳಿಸಿದ್ದಾರೆ. ಇವರಲ್ಲಿ ಅನೇಕ ಬೆಡಗುಗಳಿವೆ ಸಾಮಾನ್ಯವಾಗಿ ಅವನ್ನು ಬಳ್ಳಿ ಎಂದು ಕರೆಯುತ್ತಾರೆ – ಲವಾರ, ಬಾಳೆ, ಶೆಟ್ಟಿ, ಗೌಡಸಿಗೆ, ಗಂಗರ, ಕಾನದಾನ, ಹಡಲಿಗೆ, ದಂಡಿಗೆ, ಕಂಡ್ಲ, ಸ್ವಾದೇರ, ಇತ್ಯಾದಿ. ಸಮುದಾಯದ ಒಳಗೆ ಒಳಬಾಂಧವ್ಯ ವಿವಾಹ, ಬಳ್ಳಿಗಳಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿಯನ್ನು ಅನುಸರಿಸುತ್ತಾರೆ. ಸೋದರ ಸಂಬಂಧಿ ವಿವಾಹಗಳಿಗೆ ಇವರಲ್ಲಿ ಅವಕಾಶವಿದೆ. ವಧುದಕ್ಷಿಣೆಯಾಗಿ ಒಂದು ಸಾವಿರ ರೂಪಾಯಿ ಹಾಗೂ ನಾಲ್ಕು ಚೀಲ ಭತ್ತವನ್ನು ಕೊಡುವರು. ವಿಚ್ಛೇದನಕ್ಕೆ ಹಾಗೂ ವಿಧವೆ, ವಿಧುರರ ಮದುವೆಗೆ ಅವಕಾಶವಿದೆ. ಹೆಂಗಸರು ವ್ಯವಸಾಯದಲ್ಲಿ ಕೂಲಿಗಳಾಗಿ ದುಡಿಯುವುದರ ಮೂಲಕ ಕುಟುಂಬದ ಆದಾಯಕ್ಕೆ ಸಹಕಾರ ನೀಡುತ್ತಾರೆ. ಜೊತೆಗೆ ಪ್ರಾಣಿಸಾಕಾಣಿಕೆ, ಸಾಮಾಜಿಕ ಹಾಗೂ ಧಾರ್ಮಿಕ ಆಚರಣೆಗಳ ವಿಷಯಗಳಲ್ಲೂ ಮಹತ್ವದ ಪಾತ್ರ ವಹಿಸುತ್ತಾರೆ.

ಇವರ ಸಾಂಪ್ರದಾಯಿಕ ಹಾಗೂ ಇತ್ತೀಚಿನ ವೃತ್ತಿಯೆಂದರೆ ಕೃಷಿ ಕಾರ್ಮಿಕರಾಗಿ ದುಡಿಯುವುದು. ಈ ಸಮುದಾಯವು ‘ಪ್ರಧಾನ’ ಎಂಬ ಹನ್ನೆರಡು ಜನ ಮುಖಂಡರ ಪಂಚಾಯತಿ ಹೊಂದಿದೆ. ಇವರನ್ನು ಗೌಡ ಅಥವಾ ಯಜಮಾನ ಎಂದೂ ಕರೆಯುತ್ತಾರೆ, ಇವರು ಸಮುದಾಯದ ಜಗಳಗಳನ್ನು ಹಾಗೂ ಇತರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ಗರುಡಲಿಂಗ, ರಾಮದೇವರು, ಮಂಜುನಾಥ, ಭೈರದೇವರು, ಸಿದ್ಧಲಿಂಗೇಶ್ವರ ಹಾಗೂ ಮಾಸ್ತಮ್ಮ, ಗುತ್ಯಮ್ಮ, ಲಕ್ಕಮ್ಮ, ಯಲ್ಲಮ್ಮ, ರೇಣುಕಾಂಬೆ ಮುಂತಾದ ದೇವತೆಗಳನ್ನು ಪೂಜಿಸುತ್ತಾರೆ. ಮದುವೆ ಮತ್ತು ಇತರೆ ಧಾರ್ಮಿಕ ಸಮಾರಂಭಗಳನ್ನು ನೆರವೇರಿಸಿಕೊಡಲಿ ಲಿಂಗಾಯತ ಜಂಗಮ ಅಥವಾ ಬ್ರಾಹ್ಮಣ ಪೂಜಾರಿಗಳನ್ನು ಆಹ್ವಾನಿಸುತ್ತಾರೆ. ದೀಪಾವಳಿ, ಯುಗಾದಿ, ಭೂಮಿ ಹುಣ್ಣಿಮೆ, ಗೌರಿಹಬ್ಬ, ಮಹಾನವಮಿ ಮತ್ತಿತರ ಹಬ್ಬಗಳನ್ನು ಆಚರಿಸುತ್ತಾರೆ. ಇವರಲ್ಲಿ ಶ್ರೀಮಂತ ಜಾನಪದ ಪರಂಪರೆ ಇದೆ. ಇವರ ಶೈಕ್ಷಣಿಕ, ಆರ್ಥಿಕ, ಪರಿಸ್ಥಿತಿ ಅಗತ್ಯವಾಗಿ ಸುಧಾರಣೆಯಾಗಬೇಕಾಗಿದೆ.

ನೋಡಿ:

ನೆಲ್ಲಿಸರ ಬಸವರಾಜ., ೧೯೮೨. ಬಗ್ಗರು,  ಐ.ಬಿ.ಹೆಚ್.ಪ್ರಕಾಶನ, ಬೆಂಗಳೂರು