ನಿಯರನ್ನು ವೈಶ್ಯರೆಂದು ಕರೆಯುತ್ತಾರೆ. ಇವರಲ್ಲಿ ಕೆಲವು ಉಪಪಂಗಡಗಳಿವೆ. ಅವುಗಳೆಂದರೆ ಬೀಸ, ಖದೀವಿ, ಬರಾಹ್, ಸಯಿನಿ. ಇವರು ಕರ್ನಾಟಕದ ಎಲ್ಲ ಪ್ರಮುಖನಗರ ಹಾಗೂ ಪಟ್ಟಣಗಳಲ್ಲಿ ವಾಸಿಸುತ್ತಿದ್ದಾರೆ. ಇವರ ಮೌಖಿಕ ಪರಂಪರೆ ಉತ್ತರ ಪ್ರದೇಶ ಹಾಗೂ ಹರಿಯಾಣದಿಂದ ವಲಸೆ ಬಂದು ಇಲ್ಲಿ ನೆಲೆಸಿದರೆಂದು ತಿಳಿಸುತ್ತಿದೆ. ಇವರು ಅಘೋರ ರಾಜ್ಯದ ಅಗ್ರಸಾನಿಗಳ ಸಂತತಿಯವರೆಂದು ಹೇಳಿಕೊಳ್ಳುತ್ತಾರೆ. ತಮ್ಮ ಮನೆಯೊಳಗೆ ಹಿಂದಿಯನ್ನೂ ಹಾಗೂ ಇತರರೊಂದಿಗೆ ಕನ್ನಡ, ತಮಿಳು, ತೆಲುಗು ಭಾಷೆಗಳನ್ನು ಆಡುತ್ತಾರೆ. ಇವರಲ್ಲಿ ಹಲವಾರು ಬೆಡಗುಗಳಿವೆ. ಇವರು ತಮ್ಮ ಬೆಡಗದ ಹೆಸರುಗಳನ್ನೇ ತಮ್ಮ ಮನೆತನದ ಹೆಸರುಗಳಾಗಿ ಬಳಸುತ್ತಾರೆ.

ಇತ್ತೀಚೆಗೆ ಇವರು ತಮ್ಮ ಸಮುದಾಯದ ಇತರೆ ಉಪಗುಂಪುಗಳ ನಡುವೆ ಮದುವೆಗಳನ್ನು ನಡೆಸಿದ್ದಾರೆ. ಬೆಡಗುಗಳ ಮಟ್ಟದಲ್ಲಿ ಹೊರಬಾಂಧವ್ಯ ಸಮುದಾಯ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ ಅನುಸರಿಸುತ್ತಾರೆ. ಏಕಪತ್ನಿತ್ವ/ಏಕಪತಿತ್ವ ವಿವಾಹ ಇವರಲ್ಲಿದೆ. ವರದಕ್ಷಿಣೆಯನ್ನು ಹಣ ಅಥವಾ ಇತರೆ ರೂಪದಲ್ಲಿ ಕೊಡಬಹುದಾಗಿದೆ. ವಿಧುರರ ವಿವಾಹಕ್ಕೆ ಅವಕಾಶವಿದ್ದರೂ, ವಿಧವೆಯರ ವಿವಾಹ ಸಾಧ್ಯವಿಲ್ಲ. ಇವರಲ್ಲಿ ಹೆಚ್ಚಾಗಿ ಅವಿಭಕ್ತ ಕುಟುಂಬಗಳು ಇವೆ. ಹಿರಿಯ ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಕೆಲವು ಉದ್ಯೋಗಸ್ಥ ಮಹಿಳೆಯರು ಮನೆಯ ಆದಾಯಕ್ಕೆ ಸಹಕರಿಸುತ್ತಿದ್ದಾರೆ. ಜನನ ಸೂತಕವು ಹನ್ನೊಂದು ದಿನಗಳವರೆಗೆ ಇದ್ದು, ಹನ್ನೊಂದನೇ ದಿನ ನಾಮಕರಣವು ನಡೆಯುತ್ತದೆ. ಮುಂಡನ ಕಾರ್ಯವನ್ನು ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಮೊದಲ ವರ್ಷದಲ್ಲೇ ಮಾಡಿಸುತ್ತಾರೆ. ಕಿವಿಚುಚ್ಚಿಸುವ ಕಾರ್ಯವನ್ನು ಐದನೇ ತಿಂಗಳಿಗೆ ಮಾಡಿಸುತ್ತಾರೆ. ಮದುವೆಯ ಮುಖ್ಯ ಆಚರಣೆಗಳಾದ ಚೇರತರನಾ, ಸಗಾಯಿ, ಗೋಧ ಭರನಾ, ನಾಹ್‌ಪೂಜನ ಇತ್ಯಾದಿ ಬ್ರಾಹ್ಮಣರ ಪೌರೋಹಿತ್ಯದಲ್ಲಿ ನಡೆಯುತ್ತವೆ. ಸಾವಿನ ಸೂತಕವು ಹದಿಮೂರು ದಿನಗಳವರೆಗೆ ಇರುತ್ತದೆ. ಹಿರಿಯರ ಪೂಜೆಯನ್ನು ಪ್ರತಿವರ್ಷ ಆಚರಿಸುತ್ತಾರೆ.

ಸಾಂಪ್ರದಾಯಿಕವಾಗಿ ಇವರು ವ್ಯಾಪಾರಿಗಳು. ಇವರಲ್ಲಿ ಕೆಲವರು ಸರಕಾರಿ ನೌಕರಿಗಳಲ್ಲಿದ್ದಾರೆ. ಇವರು ರಾಮ, ಶಿವ, ವಿಷ್ಣು, ಲಕ್ಷ್ಮಿ, ಪಾರ್ವತಿ, ದುರ್ಗ ಇತರೆ ದೈವಗಳನ್ನು ಪೂಜಿಸುತ್ತಾರೆ. ದೀಪಾವಳಿ, ಹೋಳಿ, ರಾಖಿ, ಗೋಕುಲಾಷ್ಟಮಿ ಇತರ ಹಬ್ಬವನ್ನು ಇವರು ಆಚರಿಸುತ್ತಾರೆ. ವಿದ್ಯಾಭ್ಯಾಸದ ಬಗ್ಗೆ ಹುಡುಗರನ್ನು ಪ್ರೋತ್ಸಾಹಿಸಿದರೂ, ಹುಡುಗಿಯರಿಗೆ ಹೆಚ್ಚಿನ ಪ್ರೋತ್ಸಾಹವನ್ನು ತೋರಿಸಿಲ್ಲ. ಆಧುನಿಕ ಸಾಮಾಜಿಕ ಸಂಸ್ಥೆಗಳ ಉಪಯೋಗಗಳನ್ನು  ವ್ಯವಸ್ಥಿತವಾಗಿ ಬಳಸಿಕೊಳ್ಳುತ್ತಿದ್ದಾರೆ.