ಯಲು ಕಮ್ಮಾರರನ್ನು ಘಸಾದಿ ಎಂದು ಕರೆಯುತ್ತಾರೆ. ಇವರ ಇತರೆ ಹೆಸರುಗಳೆಂದರೆ ಗಡಿ ಅಥವಾ ಗಡೌಲಿಯ ಲೋಹಾರ್. ಇವರು ತಮ್ಮ ಮೂಲ ಸ್ಥಳ ರಾಜಸ್ಥಾನದ ಚಿತ್ತೂರಘಡ ಎಂದು ಹೇಳಿಕೊಳ್ಳುತ್ತಾರೆ. ಇವರು ಈಗ ಬಿಜಾಪುರ, ಧಾರವಾಡ, ಗುಲ್ಬರ್ಗಾ, ಬಾಗಲಕೋಟೆ ಮುಂತಾದ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಮಾರವಾಡಿ ಭಾಷೆಯ ಒಂದು ಉಪಭಾಷೆಯನ್ನು ಇವರು ಮನೆಯಲ್ಲಿ ಮಾತನಾಡುತ್ತಾರೆ. ಇವರು ಕನ್ನಡ ಭಾಷೆಯಲ್ಲಿ ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಪಿತೃಪ್ರಧಾನ ಒಳಬಾಂಧವ್ಯದ ಬೆಡಗುಗಳಿವೆ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವರಲ್ಲಿ ಬಾಲ್ಯವಿವಾಹಗಳು ಸಾಮಾನ್ಯವಾಗಿ ಕಂಡುಬರುತ್ತದೆ. ವಿವಾಹ ವಿಚ್ಛೇದನೆಗೆ, ವಿಧವೆ ಹಾಗೂ ವಿಧುರರ ವಿವಾಹಕ್ಕೆ ಅವಕಾಶವಿದೆ. ಆಸ್ತಿಯನ್ನು ಗಂಡುಮಕ್ಕಳಲ್ಲಿ ಸಮನಾಗಿ ಹಂಚಲಾಗುತ್ತದೆ. ಸ್ತ್ರೀಯರು ಮನೆಯ, ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಮನೆಯ ಆದಾಯಕ್ಕೆ ಕಬ್ಬಿಣದ ಕೆಲಸಗಳಲ್ಲಿ ಗಂಡಸರಿಗೆ ಸಹಾಯ ಮಾಡುವ ಮೂಲಕ, ಬೈಲುಕಮ್ಮಾರ ಹೆಂಗಸರು ಗಂಡಸರಂತೆ ಎಲ್ಲದರಲ್ಲೂ ಸಮಾನವಾಗಿ ಭಾಗವಹಿಸುತ್ತಾರೆ. ಮಗುವಿನ ಜನನದ ನಂತರ ನಾಮಕರಣ, ಮುಂಡನವನ್ನು ಮಕ್ಕಳಿಗೆ ಮಾಡಲಾಗುತ್ತದೆ. ಮದುವೆಯ ಎಲ್ಲ ಆಚರಣೆಗಳು ವಧುವಿನ ಗೃಹದಲ್ಲೆ ನಡೆಯುತ್ತದೆ.

ಸಾಂಪ್ರದಾಯಿಕವಾಗಿ ಇವರು ಕಬ್ಬಿಣದ ಕೆಲವು ವಸ್ತುಗಳನ್ನು ತಯಾರಿಸುವುದರಲ್ಲಿ, ರಿಪೇರಿ ಮಾಡುವುದರಲ್ಲಿ ನಿಪುಣರು. ಆದರೆ ಈಗ ಆಧುನಿಕ ಕೈಗಾರಿಕೆಗಳು ಬಂದಿರುವುದರಿಂದ, ಇವರ ಸಾಂಪ್ರದಾಯಿಕ ಕಸುಬಿಗೆ ಸಾಕಷ್ಟು ಹಾನಿಯಾಗಿದೆ. ಇತ್ತೀಚೆಗೆ ಸ್ವಯಂ ಉದ್ಯೋಗಗಳನ್ನು ಹೆಚ್ಚಾಗಿ ಇವರು ಮಾಡುತ್ತಾರೆ. ಇವರಲ್ಲಿ “ಚಿತ್ತೋರ ರಜಪೂತ ಗಡಿಲೋಹಾರ ಸಭಾ” ಎಂಬ ಸಮುದಾಯದ ಪಂಚಾಯತಿಯಿದೆ. ಅಂಬಾಭವಾನಿ ಇವರ ಮುಖ್ಯ ದೇವತೆ. ಇವರಿಗೆ ಜೀವನದ ಎಲ್ಲ ಹಂತಗಳಲ್ಲಿಯೂ ನಡೆಯುವ ಧಾರ್ಮಿಕ ಕ್ರಿಯೆಗಳಿಗೆ ಬ್ರಾಹ್ಮಣರೆ ಅರ್ಚಕರು. ಇವರು ಅಲೆಮಾರಿ ಜೀವನವನ್ನು ನಡೆಸುತ್ತಿದ್ದಾರೆ. ಇವರ ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಸುಧಾರಣೆಯಾಗಬೇಕಾದ ಅಗತ್ಯವಿದೆ.