ಯಲು ಪತ್ತಾರರು ಒರಿಸ್ಸಾದ ಜಗನ್ನಾಥ ಪುರಿಯಿಂದ ವಲಸೆ ಬಂದು ಕರ್ನಾಟಕದಲ್ಲಿ ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಪತ್ತಾರರನ್ನು ಪರದೇಶಿ ಜೊಹಾರಿ ಸೋನಾರ, ಬೈಟ ಕುಂಸುಲ ಹಾಗೂ ಬಯಲು ಅಗಸಲಿ ಎಂದೂ ಕರೆಯಲಾಗುತ್ತದೆ. ಇವರು ಬಿಜಾಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ಇವರು ಇಂಡೋ-ಆರ್ಯನ್ ಗುಂಪಿಗೆ ಸೇರಿದ ಒರಿಯಾ ಉಪಭಾಷೆಯೊಂದನ್ನು ಮನೆಯಲ್ಲಿ ಬಳಸುತ್ತಾರೆ. ಬಯಲು ಪತ್ತಾರರು ಹಳ್ಳಿಗಾಡಿನ ಶಿಲ್ಪಗಾರರು. ಬೆಳ್ಳಿಯ ಆಭರಣಗಳನ್ನು ತಯಾರಿಸುವುದು ಹಾಗೂ ರಿಪೇರಿ ಮಾಡುವುದು ಇವರ ಪರಂಪರಾಗತ ಉದ್ಯೋಗವಾಗಿದೆ. ಇವರಲ್ಲಿ ಹಲವಾರು ಬೆಡಗುಗಳಿವೆ – ಕಬಸ್ತುಲ, ಗೌಡ, ಬಂಜೂರ್ಡ, ಸರ್ಪೊವರ, ಪರಧಾನವಾಡ, ಇತ್ಯಾದಿ. ಇವರಲ್ಲಿ ಒಳಬಾಂಧವ್ಯ ವಿವಾಹ ಪದ್ಧತಿ ತಮ್ಮ ಸಮುದಾಯದ ಮಟ್ಟದಲ್ಲಿ ನಡೆಯುತ್ತಿದೆ. ಆದರೆ ಬೆಡಗುಗಳ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿ ಇವರಲ್ಲಿ ಕಂಡುಬರುತ್ತದೆ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವಿಧವೆ  ಹಾಗೂ ವಿಧುರರ ವಿವಾಹಕ್ಕೆ ಅವಕಾಶವಿದೆ. ಹಿರಿಯ ಗಂಡು ಮಗನೆ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಹೆಂಗಸರು ಮನೆಗೆಲಸಗಳಲ್ಲದೆ, ಸಾಮಾಜಿಕ ಕಾರ್ಯಕ್ರಮಗಳಲ್ಲಿ, ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಇವರು ತಾವೇ ತಯಾರಿಸಿದ ಬೆಳ್ಳಿಯ ಆಭರಣಗಳನ್ನು ಮಾರುವುದರ ಮೂಲಕ ಕುಟುಂಬದ ಆದಾಯಕ್ಕೆ ನೆರವಾಗುತ್ತಾರೆ.

ಬಯಲು ಪತ್ತಾರರಲ್ಲಿ ಜಾತಿ ಪಂಚಾಯತಿ ಇದೆ. ಅದರ ಮುಖ್ಯಸ್ಥನಿಗೆ ‘ಪದಲಗುರು’ ಎಂದು ಕರೆಯಲಾಗುತ್ತದೆ. ಎಲ್ಲ ವಿಷಯದಲ್ಲೂ ಪದಲಗುರು ಅಂತಿಮ ತೀರ್ಮಾನ ಕೈಗೊಳ್ಳುತ್ತಾನೆ. ಮುಖ್ಯಸ್ಥರನ್ನು ಅವಿರೋಧವಾಗಿ ಆಯ್ಕೆಮಾಡಲಾಗುತ್ತದೆ. ಇವರ ದೇವರುಗಳೆಂದರೆ ಅಡವಿ  ದುರುಗಮ್ಮ, ಶೆಟ್ಯಾಗಮ್ಮ ಹಾಗೂ ಮುರುಗಭಾಯಿ. ಯುಗಾದಿ, ದಸರಾ, ದೀಪಾವಳಿ, ನಾಗರಪಂಚಮಿ ಹಬ್ಬಗಳನ್ನು ಆಚರಿಸುತ್ತಾರೆ. ಇವರು ಲೋಹಗಳನ್ನು ಕೆತ್ತುವುದು, ಕೊರೆಯುವುದು ಹಾಗೂ ಆಭರಣಗಳನ್ನು ತಯಾರಿಸುವುದರಲ್ಲಿ ನಿಪುಣರು. ಇವರು ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿಯ ಸುಧಾರಣೆಯಾಗಬೇಕಾದ ಅಗತ್ಯ ಇದೆ. ಇಂದಿಗೂ ಇವರಲ್ಲಿ ಬಹಳಷ್ಟು ಜನ ಅಲೆಮಾರಿ ಜೀವನ ನಡೆಸುತ್ತಿದ್ದಾರೆ.