ಲಿಜರಿಗೆ ಬಲಿಜ ನಾಯ್ಡು ಎಂದು ಕರ್ನಾಟಕದಲ್ಲಿ ಕರೆಯುತ್ತಾರೆ. ಇವರನ್ನು ಬೆಂಗಳೂರು, ಕೋಲಾರ, ಮೈಸೂರು, ರಾಯಚೂರು, ತುಮಕೂರು, ಗುಲ್ಬರ್ಗಾ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಾಣಬಹುದು. ತೆಲುಗು ಇವರ ಮಾತೃಭಾಷೆ. ದ್ವಿಭಾಷಿಗಳಾದ ಇವರು ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ವೃತ್ತಿ ಹಾಗೂ ಪ್ರಾಂತ್ಯಗಳಿಗನುಸಾರವಾಗಿ ಇವರನ್ನು ನಾಲ್ಕು ಪಂಗಡಗಳಾಗಿ ವಿಭಾಗಿಸಲಾಗಿದೆ – ದಾಸ, ಗಾಜಲು, ದುಂಡಿ ಹಾಗೂ ಗೋಣಿ ಬಲಿಜ. ಇವರಲ್ಲಿ ಅನೇಕ ಬಳ್ಳಿಗಳಿವೆ – ದೇಸ (ಕೋಟೆ), ಪೇಟೆ (ದಾರಿ), ವಲೈಯಲ್ (ಬಳೆ), ರಾಜಮಹೇಂದ್ರಮ್ ತೋಟ, ರಲ್ಲ, ಪಗಡಲ, ಪುಸ, ರಾಯೇಹ, ವ್ಯಾಸ ತುಪಕಲ, ಮಸ್ಕಟ್, ಪಪ್ಪು ಗಂಟೆಲು, ಪುಲಿ, ಆವುಲ, ಗಂಧಮ್ (ಶ್ರೀಗಂಧ), ಮಿರಿಯಾಲ, ಮುತ್ಯಾಲ, ನಾರಿಕೇಳಿ, ನೆಮಿಲಿ, ಪಗಡಲು(ಪಗಡೆ), ರತ್ನಾಲು (ರತ್ನಗಳು), ಉಂಗರಾಲು, ಯನಮಲ, ಇತ್ಯಾದಿ.

ಸಮುದಾಯ ಮಟ್ಟದಲ್ಲಿ ಒಳಬಾಂಧವ್ಯ ಹಾಗೂ ಬಳ್ಳಿಗಳಲ್ಲಿ ಹೊರಬಾಂಧವ್ಯ ವಿವಾಹ ರೂಢಿಯಲ್ಲಿದೆ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ವಧುದಕ್ಷಿಣೆ (ತೆರ)ಯನ್ನು ಹಣದ ರೂಪದಲ್ಲಿ ಕೊಡಲಾಗುತ್ತದೆ. ಹೆರಿಗೆಗೆ ಮುನ್ನ ‘ಸೀಮಂತ’ ಕಾರ್ಯ ಮಾಡುತ್ತಾರೆ. ನಾಮಕರಣ, ಮುಂಡನ, ಮುಂತಾದ ಕ್ರಿಯಾವಿಧಿಗಳನ್ನು ಮಕ್ಕಳಿಗೆ ಮಾಡುತ್ತಾರೆ. ಹೆಣ್ಣು ಮಕ್ಕಳಿಗೆ ‘ಪುಷ್ಪವತಿ’ ಕಾರ್ಯವನ್ನು ಆಚರಿಸುತ್ತಾರೆ. ಮದುವೆಯ ಆಚರಣೆಯು ಐದು ದಿನಗಳವರೆಗೆ ನಡೆಯುತ್ತದೆ. ಧಾರೆ, ಕಂಕಣ, ತಾಳಿಕಟ್ಟುವುದು ಇತ್ಯಾದಿ. ಶವವನ್ನು ಹೂಳುತ್ತಾರೆ,ಸೂತಕವು ಹನ್ನೆರಡು ದಿನಗಳವರೆಗೆ ಇದ್ದು, ಹನ್ನೆರಡನೇ ದಿನ ಸೂತಕವನ್ನು ಮುಗಿಸುತ್ತಾರೆ. ಹಿರಿಯ ಮಗನು ತಂದೆಯ ನಂತರ ಕುಟುಂಬದ ಉತ್ತರಾಧಿ ಕಾರಿಯಾಗುತ್ತಾನೆ. ಹಳ್ಳಿಗಳಲ್ಲಿರುವವರು ಮುಖ್ಯವಾಗಿ ವ್ಯವಸಾಯಗಾರರು ಹಾಗೂ ಕೃಷಿ ಕೂಲಿಗಳು. ನಗರ ಹಾಗೂ ಪಟ್ಟಣಗಳಲ್ಲಿರುವವರು ವ್ಯಾಪಾರದಲ್ಲಿ ತೊಡಗಿದ್ದಾರೆ. ಇವರಲ್ಲಿ ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಗಳಲ್ಲಿದ್ದಾರೆ. ತಿರುಪತಿಯ ವೆಂಕಟೇಶ್ವರ ಹಾಗೂ ನರಸಿಂಹಸ್ವಾಮಿ ಇವರ ಮನೆದೇವರುಗಳು. ಇವರು ಗ್ರಾಮ ದೇವತೆಗಳಾದ ಮುನೇಶ್ವರ, ಮಾರಮ್ಮ, ಪಟಾಲಮ್ಮ, ಮುತ್ಯುಲಮ್ಮ ಮುಂತಾದ ದೇವತೆ ಗಳನ್ನು ಪೂಜಿಸುತ್ತಾರೆ. ಬಲಿಜರಲ್ಲಿ ಕೆಲವರು ರೋಮನ್ ಕ್ಯಾಥೋಲಿಕ್ ಧರ್ಮದ ಅನುಯಾಯಿಗಳಿದ್ದಾರೆ. ಆಧುನಿಕ ಸಾಮಾಜಿಕ ಸೌಲಭ್ಯಗಳನ್ನು ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬಳಸಿಕೊಂಡು ಸಾಮಾಜಿಕ, ಆರ್ಥಿಕ ಬದಲಾವಣೆಯನ್ನು ನಿಧಾನವಾಗಿ ಹೊಂದುತ್ತಿದ್ದಾರೆ.

ನೋಡಿ :

Guna Sundaramma, K. and V.Rami Reddy., 1984. ‘Some Aspects of Population Structure of The Balijas of Tirupathi’  Comparative Physiology and Ecology.