ಬಾಂದಿ ಸಮುದಾಯದವರು ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ವಾಸಿಸುತ್ತಾರೆ. ‘ಬಾಂಡೇಕರ್’ ಎನ್ನುವ ಮನೆತನದ ಹೆಸರನ್ನು ಇವರು ಬಳಸುತ್ತಾರೆ. ಇವರು ಇಂಡೋ-ಆರ್ಯನ್ ಭಾಷೆಯಾದ ಕೊಂಕಣಿಯನ್ನು ಮಾತನಾಡುತ್ತಾರೆ. ಜೊತೆಗೆ ಕನ್ನಡ ಹಾಗೂ ಹಿಂದಿಯನ್ನು ಮಾತನಾಡಿ, ದೇವನಾಗರಿ ಹಾಗೂ ಕನ್ನಡ ಲಿಪಿಗಳನ್ನು ಬಳಸುತ್ತಾರೆ. ತಂದೆಯ ಸಹೋದರಿಯ ಮಗಳು ಹಾಗೂ ತಾಯಿಯ ಸಹೋದರನ ಮಗಳ ಜೊತೆಗೆ ಮದುವೆ ಸಾಧ್ಯವಿದೆ. ಹಿರಿಯ ಮಗನಿಗೆ ತಂದೆಯ ನಂತರ ಮನೆಯ ವಾರಸುದಾರಿಕೆ ಸಿಗುತ್ತದೆ. ಮನೆಯ ಆರ್ಥಿಕ ಚಟುವಟಿಕೆಗಳಲ್ಲಿ ಹೆಂಗಸರು ಭಾಗವಹಿಸಿ, ಮನೆ ಆದಾಯಕ್ಕೆ ಸಹಕರಿಸುತ್ತಾರೆ. ಮಗು ಜನಿಸುವ ಮೊದಲು “ಬಯಕೆ ಊಟ” ಎನ್ನುವ ಆಚರಣೆಯನ್ನು ಆಚರಿಸುತ್ತಾರೆ. ಜನನದ ಸೂತಕ ಮೂರು ದಿನ ಇರುತ್ತದೆ. ಮೂರನೆಯ ಅಥವಾ ಹನ್ನೆರಡನೆಯ ದಿನದಂದು ನಾಮಕರಣ ಮಾಡುತ್ತಾರೆ. ಹೆಣ್ಣು ಮಕ್ಕಳಿಗೆ ಮೂಗು ಚುಚ್ಚಿಸುವುದು, ಗಂಡು ಹಾಗೂ ಹೆಣ್ಣು ಮಕ್ಕಳಿಗೆ ಮುಂಡನ ಮಾಡಿಸುವುದು ವಾಡಿಕೆ. ಈ ಸಮುದಾಯದಲ್ಲಿ ಜನರಿಗೆ ಸ್ವಂತ ಕೃಷಿ ಭೂಮಿಯಿರುವುದಿಲ್ಲ, ದಿನಗೂಲಿಯ ಮೇಲೆಯೇ ಅವಲಂಬಿತರಾಗಿದ್ದಾರೆ. ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಗಳಿಗೆ ಸೇರಿಕೊಂಡಿದ್ದಾರೆ. ಇವರು ದೀಪಾವಳಿ, ಯುಗಾದಿ ಹಬ್ಬಗಳನ್ನು ಆಚರಿಸುತ್ತಾರೆ. ನೆಲ ಹಾಗು ಗೋಡೆಗಳ ಮೇಲೆ ಬಣ್ಣದ ಚಿತ್ತಾರ ಬಿಡಿಸುವುದರಲ್ಲಿ ಹಾಗೂ ಬಟ್ಟೆಗಳ ಮೇಲೆ ಹೆಣಿಗೆ ಹಾಕುವುದರಲ್ಲಿ ಇವರು ನಿಪುಣರು. ವಿದ್ಯಾಭ್ಯಾಸವನ್ನು ಹುಡುಗ ಹುಡುಗಿಯರಿಬ್ಬರಿಗೂ ಪ್ರೋತ್ಸಾಹಿಸುತ್ತಾರೆ. ಈ ಸಮುದಾಯವು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿ ಇದೆ.