ಬಾಕುಡ ಸಮುದಾಯವನ್ನು ಐಪಟ್ಟು ಕುಲದವರು ಎಂದು ದಕ್ಷಿಣ ಕನ್ನಡದಲ್ಲಿ ಕರೆಯುತ್ತಾರೆ. ಅಂದರೆ ಇವರಲ್ಲಿ ಐವತ್ತಕ್ಕೂ ಹೆಚ್ಚಿನ ಬಳ್ಳಿಗಳು ಪೂರ್ವದಲ್ಲಿ ಇದ್ದುದರಿಂದಾಗಿ ಈ ಹೆಸರು ಬರಲು ಕಾರಣ ಎಂದು ಕೆಲವರ ಅಭಿಪ್ರಾಯ. ಇವರನ್ನು ಪ್ರಕೃತ ಅಥವಾ ಬತ್ತಡರೆಂದು ಸಹ ಕರೆಯುವರು. ಮೈಸೂರು ಹಾಗೂ ಕೊಡಗು ಜಿಲ್ಲೆಯ ಕೆಲವು ಭಾಗಗಳಲ್ಲಿ ಇವರ ಪಂಗಡಗಳು ಅತ್ಯಂತ ವಿರಳವಾಗಿ ಕಂಡುಬರುತ್ತವೆ. ಇವರು ಕೇರಳ ಪ್ರಾಂತ್ಯದ ಕಾಸರಗೋಡು, ಮಂಜೇಶ್ವರ, ಮಂಗಲ್ಪಾಡಿ, ಕುಂಬಳೆ, ಮೊಗ್ರಾಲ್ ಮತ್ತು ಪುತ್ತೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಭಾಗಗಳಲ್ಲಿ ಅಧಿಕ ಸಂಖ್ಯೆಯಲ್ಲಿರುವರು. ಇವರನ್ನು ಕುಂದಾಪುರದ ಕೆಲವು ಪ್ರದೇಶಗಳಲ್ಲಿ ಬತ್ತಡರು ಎಂದು ಕರೆಯುವರು. ಬತ್ತಡರ ಆಚಾರ, ವಿಚಾರ ಹಾಗೂ ಜೀವನ ಕ್ರಮಗಳು ಬಾಕುಡ ಸಮುದಾಯದಂತೆ ಇವೆ. ಗುಡ್ಡದ ತಪ್ಪಲು ಹಾಗೂ ಬಯಲುಗಳಲ್ಲಿ ಗುಡಿಸಲು ಕಟ್ಟಿ ಕೃಷಿ ಕಾರ್ಮಿಕರಾಗಿ ದುಡಿಯುವುದೇ ಇವರ ಮೂಲ ಸಾಂಪ್ರದಾಯಿಕ ಕಸುಬು.

ಬಾಕುಡರನ್ನು ಬಯಲು ಬಕುಡರು ಎಂದು ಕರೆಯುತ್ತಾರೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇವರು ಹೆಚ್ಚಾಗಿ ಕಾಣಸಿಗುತ್ತಾರೆ. ಬಯಲು ಎಂದರೆ ತೆರೆದ ಭೂಮಿ, ಬಕುಡ ಎಂದರೆ ಉಳುವ ಭೂಮಿಯಲ್ಲಿ ಕೆಲಸ ಮಾಡುವವರು ಎಂದು. ಅವರ ಮನೆಯಲ್ಲಿ ತುಳು ಭಾಷೆಯನ್ನು ಮಾತನಾಡಿ, ಇತರರ ಜೊತೆ ಕನ್ನಡದಲ್ಲಿ ವ್ಯವಹರಿಸಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಅಲ್ಲದೆ ಹಿಂದೆ ಹಳ್ಳಿಗಳಲ್ಲಿ ಬಲ್ಲಾಳರು, ಬಂಟರ ಮನೆಗಳಲ್ಲಿ ಜೀತದಾಳುಗಳಾಗಿದ್ದರು ಎಂದು ತಿಳಿದು ಬರುತ್ತದೆ. ಇತ್ತೀಚೆಗೆ ಇವರು ಮಡಿಕೇರಿ, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯ ಕಾಫಿ, ಏಲಕ್ಕಿ, ತೋಟಗಳಲ್ಲಿ ಕೂಲಿಗಳಾಗಿ ಅಧಿಕ ಸಂಖ್ಯೆಯಲ್ಲಿ ದುಡಿಯುತ್ತಿದ್ದಾರೆ. ಮೊದಲು ಇವರನ್ನು ‘ಬೈಲ ಬಾಕುಡರು’ ಎಂಬುದಾಗಿ ಕರೆಯುತ್ತಿದ್ದರು. ಇವರ ಮೂಲ ಸ್ಥಳ ಪೇರುರೂ ಎಂದು ಈಗಲೂ ಬಾಕುಡ ಪಂಗಡದವರಲ್ಲಿ ಕೆಲವರ ಅಭಿಪ್ರಾಯ. ಆದರೆ ಇದನ್ನು ಥರ್ಸ್ಟನ್‌ರವರಾಗಲಿ ದಕ್ಷಿಣ ಕನ್ನಡ ಜಿಲ್ಲೆಯ ಮ್ಯಾನ್ಯುವಲ್ ಬರೆದ ಸ್ಪರಕ್ ಅವರಗಳ ಇದನ್ನು ಪುಷ್ಟೀಕರಿಸುವುದಿಲ್ಲ.

ಗುಳಿಗ, ಜಮಡಿ, ಕಲ್ಲುರ್ತಿ ಇತ್ಯಾದಿ ಭೂತಗಳನ್ನು ಆರಾಧಿಸುತ್ತಾರೆ. ಇವರ ಜಾತಿಯವರು ಆರಾಧಿಸುವ ನಿರ್ದಿಷ್ಟ ಭೂತವೆಂದರೆ ಕೊಮರಾಯ. ಇವರ ಹೆಂಗಸರು ವ್ಯವಸಾಯ ಹಾಗೂ ಪ್ರಾಣಿ ಸಾಕಾಣಿಕೆಯಲ್ಲಷ್ಟೇ ಅಲ್ಲದೆ, ಸಾಮಾಜಿಕ,  ಆರ್ಥಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಮುಖ್ಯವಾಗಿ ಇವರು ಉಳುಮೆ ಭೂಮಿ ಇಲ್ಲದೆ, ವ್ಯವಸಾಯ ಕೂಲಿಗಳಾಗಿದ್ದಾರೆ. ಸರ್ಕಾರಿ ನೌಕರಿಗಳಲ್ಲಿ ಸೇವೆ, ಮಂಗಳೂರಿನ ಬಂದರಿನಲ್ಲಿ ಕೂಲಿಗಳಾಗಿ ದುಡಿಯುವುದು ಹಾಗೂ ಬಿಡಿ ಕಟ್ಟುವುದು ಇವರ ಇತ್ತೀಚಿನ ವೃತ್ತಿಗಳು. ಕೆಲವರು ಈಚೆಗೆ ಮಂಗಳೂರು ನಗರಕ್ಕೆ ವಲಸೆ ಹೋಗಿ ಸಣ್ಣ ಪುಟ್ಟ ವ್ಯಾಪಾರಗಳನ್ನು ಮಾಡುತ್ತಿದ್ದಾರೆ. ಇವರು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಪಂಗಡವಾಗಿದ್ದಾರೆ.