ಬಾಲಸಂತು ಗುಲ್ಬರ್ಗಾ, ಬೀದರ, ಬಿಜಾಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಕಂಡುಬರುವ ಒಂದು ಸ್ಥಳೀಯ ಸಮುದಾಯ. ಸಾಂಪ್ರದಾಯಿಕವಾಗಿ ಬಾಲ ಸಂತೋಷರು ಜಾನಪದ ನಾಟಕ, ಅಣಕು ಪ್ರದರ್ಶನಗಳನ್ನು ತಮ್ಮ ಕಾಯಕವಾಗಿಸಿಕೊಂಡ ಒಂದು ಸಮುದಾಯ. ಬಾಲ ಸಂತೋಷ ಅಥವಾ ಬಾಲ ಸಂತು ಎನ್ನುವ ಪದಗಳ ಅರ್ಥ “ಮಕ್ಕಳ ಸಂತೋಷ” ಎಂದಾಗುತ್ತದೆ. ಇವರು ಮಕ್ಕಳಿಗೆ ಮನರಂಜನೆ ನೀಡುವ ಒಂದು ಗುಂಪು. ಕರ್ನಾಟಕದಲ್ಲಿ ಇವರನ್ನು ಬಾಲ ಸಂತರು, ಸಿರಿಯ ಜಂಗಮ, ಕಟಿಪಾಪಿ, ಬಾಲಸಂತು, ಕು‌ರ್ರು‍ಮಾಮಲು ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಮನೆಯಲ್ಲಿ ತೆಲುಗು ಮಾತನಾಡುವ ಇವರು ಹೊರಗೆ ಎಲ್ಲರೊಡನೆ ಕನ್ನಡದಲ್ಲಿ ಮಾತನಾಡಿ ಕನ್ನಡದ ಲಿಪಿಯನ್ನು ಬಳಸುತ್ತಾರೆ.

ಇವರಲ್ಲಿ ಎರಡು ಉಪ ಪಂಗಡಗಳಿವೆ. ಕಾಡಿನ ಜಂಗಮ ಹಾಗೂ ಊರು ಜಂಗಮ. ಇವರನ್ನು ಹೀಗೆ ಸಾಮಾಜಿಕ ಹಾಗೂ ಭೌಗೋಳಿಕ ವಲಯಗಳ ಆಧಾರದ ಮೇಲೆ ವಿಂಗಡಿಸಬಹುದು. ಇವರಲ್ಲಿ ಹಲವಾರತು ಮನೆತನದ ನಾಮಗಳಿರುವ ಗುಂಪುಗಳಿವೆ – ಸಿರಿಗಿರಿ, ಕದಮಾನೆಚಲ್ಲು, ಸಿರಿವತೊಲು, ಮರಿಯಾಲ, ಪ್ರಾಸ್ಟಮೊಲ್ಲು, ದಕ್ಕ ಮುಗ್ಗೊಲು ಇತ್ಯಾದಿ. ಇವುಗಳನ್ನು ಮನೆತನದ ಮೂಲಕ ಅಥವಾ ಮನೆಯ ಪ್ರಾಚೀನತೆಯ ಮೂಲಕ ನಿರ್ಧರಿಸಲಾಗುತ್ತದೆ. ತಮ್ಮ ಸಂಬಂಧಿಕರಲ್ಲಿಯೇ ವಿವಾಹವಾಗುವುದನ್ನು ಬಯಸುತ್ತಾರೆ. ವಿವಾಹ ವಿಚ್ಛೇದನವನ್ನು ಜಾತಿ ಪಂಚಾಯಿತಿ ನಿರ್ಧರಿಸುತ್ತದೆ. ವಿಧವೆ, ವಿಧುರ ಹಾಗೂ ವಿಚ್ಛೇದಿತ ವಿವಾಹ ನಡೆಯುತ್ತದೆ. ಹಿರಿಯ ಮಗನು ತಂದೆಯ ನಂತರ ಮನೆಯ ಉತ್ತರಾಧಿಕಾರಿಯಾಗುತ್ತಾನೆ. ಹುಟ್ಟಿನ ಸೂತಕವನ್ನು ಒಂಭತ್ತು ದಿನಗಳವರೆಗೆ ಆಚರಿಸುತ್ತಾರೆ. ಮದುವೆಯ ಮುಖ್ಯ ಆಚರಣೆಗಳೆಂದರೆ ತಾಳಿಕಟ್ಟುವುದು, ಅಕ್ಷತೆಯನ್ನು ಹಾಕುವುದು, ಇತ್ಯಾದಿ. ಶವವನ್ನು ಹೂಳಿ, ಸೂತಕವನ್ನು ಹನ್ನೊಂದು ದಿನಗಳವರೆಗೆ ಆಚರಿಸುತ್ತಾರೆ. ಇವರ ಈಗಿನ ಕಸುಬುಗಳೆಂದರೆ ವ್ಯವಸಾಯದಲ್ಲಿ ಕೂಲಿಗಳಾಗಿ ದುಡಿಯುವುದು ಹಾಗೂ ಚಾಪೆ ಹೆಣೆಯುವುದು. ಇವರ ‘ಕುಲ ಪಂಚಾಯತಿ’ ಜಗಳಗಳನ್ನು ಬಗೆಹರಿಸುತ್ತದೆ. ಇವರು ಗಂಟೆ ಹಾಗೂ ಶಂಖು ಬಳಸಿ ಪುರಾಣ ಕಥೆಗಳನ್ನು ಹೇಳುತ್ತಾರೆ. ಅವುಗಳೆಂದರೆ – ನಳದಮಯಂತಿ, ಹರಿಶ್ಚಂದ್ರ, ಪ್ರಹ್ಲಾದ ಹಾಗೂ ಸೂರ್ಯ ಚಂದ್ರರ ಕಥೆ. ಆಧುನಿಕ ಸಾಮಾಜಿಕ ಸಂಸ್ಥೆಗಳ ಸಂಪರ್ಕ ಇವರಿಗೆ ಕಡಿಮೆ. ಇವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಗಳು ಸುಧಾರಣೆಯಾಗಬೇಕಾಗಿದೆ.