ಬಿಲ್ಲವ ಎನ್ನುವ ಪದ ‘ಬಿಲ್ಲಿನವರು’ ಎನ್ನುವ ಪದದಿಂದ ಬಂದಿದೆ ಎಂದು ಕೆಲವರು ಅಭಿಪ್ರಾಯ. ಬಿಲ್ಲವರನ್ನು ಪಸಾರಿ ಹಾಗೂ ಬೈಡಿ ಪೂಜಾರಿಗಳೆಂದೂ ಕರೆಯುತ್ತಾರೆ. ಈ ಸಮುದಾಯದ ಜನರು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ವಾಸಿಸುತ್ತಾರಾದರೂ ಸ್ವಲ್ಪ ಮಟ್ಟಿಗೆ ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಕೊಡಗು ಜಿಲ್ಲೆಗಳಲ್ಲೂ ಕಾಣಸಿಗುತ್ತಾರೆ. ತುಳು ಇವರ ಮಾತೃ ಭಾಷೆ. ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ತಾಯಿ ಮೂಲದಲ್ಲಿ ಬಳ್ಳಿಗಳನ್ನು ಗುರುತಿಸಬಹುದು – ಬಂಗೇರಣ್ಣಯ, ಬೆಲ್ಲಧಣ್ಣಯ, ಭೂತಿಯಣ್ಣಯ, ಗುಜ್ಜರಣ್ಣಯ, ಕೈರಣ್ಣಯ, ಕೊಚಟಬೆಟ್ಟರಣ್ಣಯ, ಕಜ್ಜೇರಣ್ಣಯ, ಸಾಲಿಯಣ್ಣಯ, ಇತ್ಯಾದಿ. ಇವರಲ್ಲಿ ಬಹುಮಂದಿ ಪೂಜಾರಿ ಎನ್ನುವ ಮನೆತನದ ಹೆಸರನ್ನು ಬಳಸುತ್ತಾರೆ. ತಮ್ಮ ಬಳ್ಳಿಗಳ ಹೊರಗೆ, ಜಾತಿಗೆ ಒಳಗೆ ವಿವಾಹಗಳು ಜರುಗುತ್ತವೆ. ತಾಯಿಯ ಸಹೋದರನ ಮಗಳು ಅಥವಾ ತಂದೆಯ ಸಹೋದರಿಯ ಮಗಳ ಜೊತೆ ಸಾಧ್ಯವಿದೆ. ಏಕಪತ್ನಿತ್ವ/ಏಕಪತಿತ್ವ ಸಾಮಾನ್ಯವಾಗಿ ಮದುವೆಯ ನೀತಿ. ವಿಧುರ, ವಿಧವೆಯರ, ವಿವಾಹಗಳಿಗೆ ಅವಕಾಶವಿದೆ. ಮೊದಲಿನ ‘ಅಳಿಯ ಸಂತಾನ’ ರೀತಿಯ ವಾರಸುದಾರಿಕೆಯು ಈಗ ‘ಪುರುಷ ಪ್ರಧಾನ’ ರೀತಿಗೆ ಬದಲಾಗುತ್ತಿದೆ. ಮನೆಯ ವಾರಸುದಾರಿಕೆಯು ಹಿರಿಮಗಳ ಮಗನಿಗೆ ಹೋಗುತ್ತಿದೆ. ಹೆಂಗಸರು ವ್ಯವಸಾಯ, ಪಶುಸಂಗೋಪನೆ, ಇತರೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ, ಧಾರ್ಮಿಕ ಆಚರಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಇವರು ಮನೆಯ ಆದಾಯಕ್ಕೆ ಸಹಾಯಮಾಡಿ, ಕೆಲವು ಕೌಟುಂಬಿಕ ನಿರ್ಧಾರ ತೆಗೆದುಕೊಳ್ಳುವಾಗ ಪ್ರಮುಖ ಪಾತ್ರ ವಹಿಸುತ್ತಾರೆ. ಹೆರಿಗೆಗೆ ಮುನ್ನಿನ ಆಚರಣೆಯಾದ ‘ಬಯಕೆ’ ಕಾರ್ಯ ಮಾಡುತ್ತಾರೆ. ಮಗು ಹುಟ್ಟಿದ ಹದಿನಾರನೇ ದಿನದಂದು ನಾಮಕರಣ ಕಾರ್ಯವನ್ನು ಮಾಡುತ್ತಾರೆ. ಶವವನ್ನು ಸುಡುತ್ತಾರೆ ಹಾಗೂ ಸಾವಿನ ಸೂತಕವು ಹತ್ತು ದಿನಗಳವರೆಗೆ ಇರುತ್ತದೆ. ಹಿರಿಯರ ಪೂಜೆಯನ್ನು ಪ್ರತಿ ವರ್ಷವೂ ಮಾಡುತ್ತಾರೆ.

ಸಾಂಪ್ರದಾಯಿಕವಾಗಿ ಇವರು ಕಳ್ಳು ಇಳಿಸುವ (ಶೇಂದಿ) ಒಂದು ಪಂಗಡಕ್ಕೆ ಸೇರಿದವರು. ಜೊತೆಗೆ ಭೂತಸ್ಥಾನಗಳಲ್ಲಿ ಪೂಜಾರಿಗಳಾಗಿಯೂ ಕೆಲಸ ಮಾಡುತ್ತಾರೆ. ಇವರಲ್ಲಿ ಬಹುಪಾಲು ಜನರು ಈಗ ಭೂಮಿಯನ್ನು ಹೊಂದಿದ್ದು ವ್ಯವಸಾಯದಲ್ಲಿ ನಿರತರಾಗಿದ್ದಾರಲ್ಲದೆ. ಖಾಸಗಿ-ಸರ್ಕಾರಿ ಸಂಸ್ಥೆಗಳಲ್ಲಿ ಸೇವೆ, ಬೀಡಿ ಕಟ್ಟುವುದು, ವ್ಯವಸಾಯದ ಕೂಲಿ ಇತರೆ ಕೆಲಸಗಳಲ್ಲಿ ಇವರಿದ್ದಾರೆ. ಇವರು ಹಲವಾರು ಭೂತಗಳನ್ನು ಆರಾಧಿಸುತ್ತಾರೆ. ಅವೆಂದರೆ ಬೈದೆರಕ್ಲು (ಕೋಟಿ ಹಾಗೂ ಚನ್ನಯ್ಯ), ಬ್ರಾಹ್ಮೇರು, ಒಕ್ಕ ಬಲ್ಲಾಲ ಇತರೆ. ಸಂಕ್ರಾಂತಿ, ಕದಿರು ಹಬ್ಬ, ನಾಗರಪಂಚಮಿ ಹಾಗೂ ದೀಪಾವಳಿ ಇವರು ಆಚರಿಸುವ ಕೆಲವು ಮುಖ್ಯ ಹಬ್ಬಗಳು. ಬಿಲ್ಲವ ಪೂಜಾರಿಯು ತನ್ನ ಪೂಜಾ ನೃತ್ಯವನ್ನು ಹಳ್ಳಿಯ ಭೂತದ ಕೋಲ ಹಬ್ಬದಲ್ಲಿ ಮಾಡುತ್ತಾನೆ. ಬಿಲ್ಲರು ತಮ್ಮ ಸಾಂಪ್ರದಾಯಿಕ ಹಳ್ಳಿಯ ಹಬ್ಬಗಳಲ್ಲಿ ತುಂಬ ಮುಖ್ಯವಾದ ಪಾತ್ರ ವಹಿಸುತ್ತಾರೆ. ಆಧುನಿಕ ವಿದ್ಯಾಭ್ಯಾಸ, ಪದ್ಧತಿ ಹಾಗೂ ಇತರೆ ಅಭಿವೃದ್ಧಿ ಯೋಜನೆಯ ಬಗ್ಗೆ ಇವರಿಗೆ ಒಲವಿದೆ. ಕೆಲವರು ಸಣ್ಣ ಕೈಗಾರಿಕೆಗಳಲ್ಲಿ ಸ್ವಯಂಉದ್ಯೋಗ ಕಲ್ಪಿಸಿಕೊಂಡಿದ್ದಾರೆ.