ಬುಂಡೆ ಬೆಸ್ತ ಮೀನು ಹಿಡಿಯುವವರ ಒಂದು ಅಲೆಮಾರಿ ಸಮುದಾಯ. ಸಾಮಾನ್ಯವಾಗಿ ಇವರು ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಕಂಡುಬರುತ್ತಾರೆ. ಇವರು ಮನೆಯಲ್ಲಿ ಮತ್ತು ಸಂಬಂಧಿಕರಲ್ಲಿ ಮರಾಠಿ ಮಾತನಾಡಿ ಉಳಿದವರೊಂದಿಗೆ ಕನ್ನಡದಲ್ಲಿ ಮಾತನಾಡುತ್ತಾರೆ. ಮದುವೆಯು ತಂದೆಯ ಸಹೋದರಿಯ ಮಗಳು, ತಾಯಿಯ ಸಹೋದರನ ಮಗಳು ಅಥವಾ ಹಿರಿಯಕ್ಕನ ಮಗಳ ಜೊತೆ ಸಾಧ್ಯವಿದೆ. ವಧುದಕ್ಷಿಣೆ ಯಾಗಿ ಎಂಭತ್ತು ರೂಪಾಯಿಗಳನ್ನು ಹಣದ ರೂಪದಲ್ಲಿ ಕೊಡುತ್ತಾರೆ. ವಿಧವೆ, ವಿಧುರರು, ವಿಚ್ಛೇದಿತರ ವಿವಾಹ ಸಾಧ್ಯವಿದೆ. ಇವರಲ್ಲಿ ಅವಿಭಕ್ತ ಕುಟುಂಬಗಳು ಕಂಡುಬಂದರೂ ಇತ್ತೀಚೆಗೆ ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿದೆ. ಹಿರಿಯ ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಹೆಂಗಸರ ಪಾತ್ರವು ಮನೆಗೆಲಸಕ್ಕೆ ಮಾತ್ರವೇ ಸೀಮಿತವಾಗಿರದೆ, ಸಾಮಾಜಿಕ ಹಾಗೂ ಧಾರ್ಮಿಕ ಆಚರಣೆಗಳಲ್ಲೂ ಭಾಗವಹಿಸುತ್ತಾರೆ. ಜನನ ಸೂತಕವು ಐದು ದಿನಗಳವರೆಗೆ ಇದ್ದು, ನಂತರ ನಾಮಕರಣವಿರುತ್ತದೆ. ಜವಳವನ್ನು ಹೆಣ್ಣು ಮತ್ತು ಗಂಡು ಮಕ್ಕಳಿಬ್ಬರಿಗೂ ತೆಗೆಸುತ್ತಾರೆ. ಕಮಲ, ಎಲೆಶಾಸ್ತ್ರ, ಗಂಗಾ ಹಾಗೂ ಧಾರೆ ಇವು ವಧುವಿನ ಮನೆಯಲ್ಲಿ ನಡೆಯುವ ಕೆಲವು ಮುಖ್ಯ ಮದುವೆಯ ಶಾಸ್ತ್ರಗಳು. ಇವರ ಸಮುದಾಯದ ಒಬ್ಬ ಹಿರಿಯ ಮನುಷ್ಯನು ಪುರೋಹಿತರಾಗಿ ಧಾರ್ಮಿಕ ಶಾಸ್ತ್ರಗಳನ್ನು ನಡೆಸಿಕೊಡುತ್ತಾನೆ. ಶವವನ್ನು ಹೂಳುತ್ತಾರೆ ಇಲ್ಲವೇ ಸುಡುತ್ತಾರೆ. ಅಸಹಜ ಸಾವಾದರೆ ಹೆಣವನ್ನು ಸುಟ್ಟು ಸೂತಕವನ್ನು ಹನ್ನೊಂದು ದಿನಗಳವರೆಗೆ ಆಚರಿಸುತ್ತಾರೆ. ಸಾವಿನ ಕ್ರಿಯಾವಿಧಿಗಳನ್ನು ಮೂರನೇ ದಿನ ಆಚರಿಸಲಾಗುತ್ತದೆ.

ಬುಂಡೆ ಬೆಸ್ತರು ಸಾಂಪ್ರದಾಯಿಕವಾಗಿ ಮೀನುಗಾರರು ಮೀನು ಹಿಡಿಯುವುದು ಇವರ ಕೆಲಸ. ಈ ಸಮುದಾಯಕ್ಕೆ ತಮ್ಮದೇ ಆದ ಸಾಂಪ್ರದಾಯಿಕ ಪಂಚಾಯಿತಿಯಿದೆ. ಅದನ್ನು ನಾಲ್ಕು ಜನ ಹಿರಿಯ ಯಜಮಾನರು ನಡೆಸಿಕೊಂಡು ಹೋಗುತ್ತಾರೆ. ಯಜಮಾನರು ಜಾತಿಯ ಜನರ ಜಗಳಗಳನ್ನು ಬಗೆಹರಿಸುವ ಸಮುದಾಯದ ನಾಯಕರು. ಯಲ್ಲಮ್ಮ, ಸುಬ್ಬನಮ್ಮ, ಕೊಲ್ಲಾಪುರದಮ್ಮ, ಈಶ್ವರ ಹಾಗೂ ಭೈರಸಾಹಿಬ್ ಇವರು ಪೂಜಿಸುವ ದೇವರುಗಳು. ಗೌರಿ, ಯುಗಾದಿ ಹಾಗೂ ಆಯುಧ ಪೂಜೆಗಳು ಇವರು ಆಚರಿಸುವ ಹಬ್ಬಗಳಲ್ಲಿ ಕೆಲವು. ಇವರಿಗೆ ಅವರದೇ ಆದ ದೇವಸ್ಥಾನ ಹಾಗೂ ಸ್ಮಶಾನಗಳಿವೆ. ಇವರ ಕೆಲವು ಹುಡುಗರು ಮಾತ್ರ ಪ್ರಾಥಮಿಕ ಹಂತದವರೆಗೆ ಶಿಕ್ಷಣ ಕಲಿತಿದ್ದಾರೆ. ಆಧುನಿಕ ವೈದ್ಯಕೀಯ ಹಾಗೂ ಕುಟುಂಬ ಕಲ್ಯಾಣ ಯೋಜನೆಯ ಬಗ್ಗೆ ಇವರಿಗೆ ಒಲವಿದ್ದು, ಸಾಮಾಜಿಕ ಸಂಸ್ಥೆಗಳ ಉಪಯೋಗವನ್ನು ಉಪಯೋಗಿಸಿಕೊಳ್ಳುವಲ್ಲಿ ಹಿಂದುಳಿದಿದ್ದಾರೆ.