ಬುಡಬುಡಿಕಿ ಕಣಿ ಹೇಳುವ ಒಂದು ಸಮುದಾಯ. ಇವರು ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶದಲ್ಲಿ ಸಿಗುತ್ತಾರೆ. ಬುಡಬುಡಿಕಿ ಎನ್ನುವ ಪದ ಭಿಕ್ಷೆ ಬೇಡುವಾಗ ಬಳಸುವ ಬುಡುಬುಡು ಎಂದು ಶಬ್ದ ಮಾಡುವ ಸಾಧನದಿಂದ ಬಂದಿರಬಹುದು. ಆಂಧ್ರಪ್ರದೇಶದಲ್ಲಿ ಇವರನ್ನು ‘ಬುಡು ಬುಡಿಕ್ಕಿ’ ಎಂದು ಉಚ್ಚರಿಸುತ್ತಾರೆ. ಥರ್ಸ್ಟನ್ (೧೯೦೯) ಇವರನ್ನು ಅಲೆಮಾರಿಗಳು, ಭಿಕ್ಷೆ ಬೇಡುವವರು ಹಾಗೂ ಕಣಿ ಹೇಳುವವರೆಂದು ಹೇಳುತ್ತಾರೆ. ಮರಾಠರ ಸಾಮ್ರಾಜ್ಯದಲ್ಲಿ ಬೇಹುಗಾರರಾಗಿದ್ದರೆಂದು ಇವರ ಮೌಖಿಕ ಪರಂಪರೆ ತಿಳಿಸುತ್ತದೆ. ಇವರು ತಮ್ಮ ಮೂಲವನ್ನು ಮಹಾರಾಷ್ಟ್ರದಿಂದ ಶತಮಾನಗಳ ಹಿಂದೆಯೇ ವಲಸೆ ಬಂದಿರುವುದನ್ನು ಗುರುತಿಸಿಕೊಳ್ಳುತ್ತಾರೆ. ಮಹಾರಾಷ್ಟ್ರ ಮೂಲದ ಬುಡಬುಡಿಕೆ ಅಲೆಮಾರಿ ಜನಾಂಗ ಇಂದು ಬಹುತೇಕ ಕರ್ನಾಟಕದ ತುಂಬೆಲ್ಲಾ ಹರಡಿಕೊಂಡಿದ್ದಾರೆ. ಹಿಂದುಳಿದ ಅಲೆಮಾರಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಬುಡಬುಡಿಕಿಯವರು, ಜೀವನಕ್ರಮ, ಆಚಾರ-ವಿಚಾರದಲ್ಲಿ ವಿಶಿಷ್ಟ ಸಂಪ್ರದಾಯಗಳನ್ನು ಹೊಂದಿದ್ದಾರೆ. ಮರಾಠಿ ಮಿಶ್ರಿತವಾದ ಆಡುಭಾಷೆ ಇವರದು. ಇವರ ಭಾಷೆಗೆ ಲಿಪಿ ಇಲ್ಲ. ಇತರರೊಂದಿಗೆ ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಸಣ್ಣ ಡಮರುವಿನ ಆಕಾರದಲ್ಲಿರುವ ‘ಬುಡಬುಡಿಕೆ’ಯನ್ನು ಚರ್ಮದಿಂದ ತಯಾರಿಸಿ ವೈವಿಧ್ಯಮಯವಾಗಿ ನುಡಿಸುತ್ತಾ, ಕೇಳುಗರ ಗಮನ ಸೆಳೆಯುವ ಈ ಕಲೆ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಬುಡಬುಡಿಕೆ ಸಮುದಾಯದ ಉಗಮವನ್ನು ನಿಖರವಾಗಿ ಹೇಳುವುದುಕಷ್ಟ. ಇವರಲ್ಲಿ ಕಂಡುಬರುವ ಮುಖ್ಯ ಉಪಪಂಗಡಗಳೆಂದರೆ ಬಟ್ಟಂಗಿ, ಗೊಂದಲಿಗ, ಇತ್ಯಾದಿ.

ಈ ಸಮುದಾಯದಲ್ಲಿ ಅನೇಕ ದಂತ ಕಥೆಗಳನ್ನು ಹೊಂದಿದೆ. ಒಂದು ದಂತ ಕಥೆ ಪ್ರಕಾರ, ಶಿವನು ದಕ್ಷ ಬ್ರಹ್ಮನ ದಂಡನ್ನು ಸಂಪೂರ್ಣವಾಗಿ ನಾಶ ಮಾಡಿದಾಗ ಪಾರ್ವತಿದೇವಿಯು “ಸ್ವಾಮಿ, ನನ್ನ ವಂಶ ಸರ್ವನಾಶವಾಗದಂತೆ ಮಾತೊಂದು ನಡೆಸಿಕೊಂಡಬೇಕೆಂದು” ಎಂದು ಬೇಡಿದಳಂತೆ. ಆಗ ಶಿವನು ದಕ್ಷಬ್ರಹ್ಮನ ರಕ್ತದಿಂದ ಒಬ್ಬನನ್ನು ಸೃಷ್ಟಿಸಿದನೆಂದೂ ಅವನು ಮೇಲೇಳುವಾಗ ಬಡಬಡಿಸುತ್ತಾ ಎದ್ದು ಕುಳಿತನೆಂದೂ, ಆಗ ಅವನಿಗೆ ಶಿವನು ತನ್ನ ಕೈಯಲ್ಲಿದ್ದ ಡಮರನ್ನು ನೀಡಿ “ಸೂರ್ಯ ಚಂದ್ರರಿರುವ ತನಕ ಜೀವಿಸು” ಎಂದು ಆಶೀರ್ವದಿಸಿ ಕಳುಹಿಸಿಕೊಟ್ಟ ನೆಂದೂ, ಅವನೇ ಬುಡುಬುಡಿಕೆಯವನೆಂದು ಹೇಳುವರು. ಊರ ಹೊರವಲಯದ ಜಾಗದಲ್ಲಿ ಜೋಪಡಿ ಹಾಕಿಕೊಂಡು ಮಳೆ-ಗಾಳಿ ಬಿಸಿಲೆನ್ನದೇ ಅದರಲ್ಲಿ ನಿತ್ಯ ಜೀವನ ಸಾಗಿಸುವ ಬುಡುಬುಡಿಕೆ ಸಮುದಾಯ ಬಹು ವೈವಿಧ್ಯಮಯ ಸಂಪ್ರದಾಯವನ್ನೂ ಹೊಂದಿದೆ.

ತಲೆಗೆ ಬಣ್ಣದ ಪೇಟ, ಉದ್ದನೆಯ ನಿಲುವಂಗಿ, ಕೋಟು, ಕಚ್ಚೆಪಂಚೆ, ಸೊಂಟಕ್ಕೆ ವಸ್ತ್ರ, ಬಗಲಿಗೆ ಇಳಿಬಿದ್ದಿರುವ ಎರಡು ಮೂರು ಜೋಳಿಗೆ, ಹೆಬ್ಬೆಟ್ಟಿನಲ್ಲಿ ಗಗ್ಗರ, ಕೈಗೆ ಕಡಗ, ಉದ್ದನೆಯ ನಾಮ ಇವು ಬುಡಬುಡಿಕೆ ಜನರ ವೇಷ ಭೂಷಣಗಳು. ಸೂರ್ಯೋದಯದ ಮುನ್ನ ಎದ್ದು, ದೇವರನ್ನು ಪೂಜಿಸಿ, ವೇಷಧರಿಸಿ ಹಳ್ಳಿ ಹಳ್ಳಿಗೆ ಹೋಗಿ ಶಕುನ ನುಡಿಯುತ್ತಾರೆ. ಇದನ್ನು ‘ಹಾಲಕ್ಕಿ ಶಾಸ್ತ್ರ’ ಎಂದು ಹೇಳುತ್ತಾರೆ. ಈ ಶಾಸ್ತ್ರ ಸತ್ಯವಾಗುತ್ತದೆ ಎಂಬ ನಂಬಿಕೆ ಈ ಬುಡಬುಡಿಕೆಯವರದು. ಪ್ರತಿ ಮನೆಯ ಬಾಗಿಲಿಗೆ ಹೋಗಿ ತಮ್ಮ ವಾದ್ಯವನ್ನು ನುಡಿಸುತ್ತಾ ‘ಜಯವಾಗಲಿ’ ಎನ್ನುತ್ತಾ, ಶುಭವನ್ನು ಬಹುಜಾಣ್ಮೆಯಿಂದ ಹೇಳುವ ಇವರು ಶುಭ ಇದ್ದಾಗ ಅದಕ್ಕೆ ಶಾಂತಿ ಪರಿಹಾರವನ್ನು ಸೂಚಿಸಬಲ್ಲರು.

ಸಾಂಪ್ರದಾಯಿಕ ವೇಷದಲ್ಲಿ ಬುಡಬುಡಕಿ

ಸಾಂಪ್ರದಾಯಿಕ ವೇಷದಲ್ಲಿ ಬುಡಬುಡಕಿ

24_68_JSKR-KUH

ಭವಿಷ್ಯ ಹೇಳುವುದು ಇವರ ಸಾಂಪ್ರದಾಯಿಕ ವೃತ್ತಿ. ಶಕುನ ನುಡಿಯುವ ಹಾಲಕ್ಕಿಯ ಭಾಷೆ ಬುಡುಬಡಿಕಿಯವರಿಗೆ ಮಾತ್ರ ಅರ್ಥವಾಗುತ್ತದೆ ಎಂಬುದು ಇತರ ಜನರ ನಂಬಿಕೆಯಾಗಿದೆ. ಈ ಸಮುದಾಯದಲ್ಲಿ ತಮ್ಮ ಕುಲಗಳನ್ನೇ ಮನೆತನದ ಹೆಸರುಗಳಾಗಿ ಇಟ್ಟುಕೊಳ್ಳುತ್ತಾರೆ. ಉದಾಹರಣೆಗೆ ವಾಷ್ಟರ, ದೋಸಿ, ಗಾಯಕ್ವಾಡ, ಪಾಟಂಜ್, ಬಾವೆ, ಜಾಧವ, ಲಿಂಬಲ ಕರ ಹಾಗೂ ಭಾಗವತ. ತಮ್ಮ ಸಮುದಾಯದಲ್ಲಿ ಒಳಬಾಂಧವ್ಯ ಹಾಗೂ ಕುಲದ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹವು ರೂಢಿಯಲ್ಲಿದೆ. ಮದುವೆಯು ತಂದೆಯ ಸಹೋದರಿಯ ಮಗಳು, ತಾಯಿಯ ಸಹೋದರನ ಮಗಳು ಅಥವಾ ಹಿರಿಯಕ್ಕನ ಮಗಳ ಜೊತೆ ಸಾಧ್ಯವಿದೆ. ಏಕಪತ್ನಿತ್ವ/ಏಕಪತಿತ್ವ ಮದುವೆಯ ಪದ್ಧತಿ. ತಾಳಿ, ವಧುದಕ್ಷಿಣೆಯಾಗಿ ನೂರಮೂವತ್ತು ರೂಪಾಯಿಗಳನ್ನು ಸಾಂಪ್ರದಾಯಿಕವಾಗಿ ಕೊಡಬೇಕು. ಬುಡಬುಡುಕಿಯವರು ಗಂಡು ಸಂತಾನಕ್ಕೆ ಪ್ರಾಧಾನ್ಯತೆ ನೀಡುತ್ತಾರೆ. ಹಿರಿಯ ಮಗ ತಂದೆ ನಂತರ ಮನೆಯ ವಾರಸುದಾರನಾಗುತ್ತಾನೆ. ಮಗು ಹುಟ್ಟಿದಾಗ ಸೂತಕವು ಹನ್ನೆರಡು ದಿನ ಇರುತ್ತದೆ. ಮದುವೆಯ ಸಮಾರಂಭಗಳಲ್ಲಿ ವೀಳ್ಯಶಾಸ್ತ್ರ, ಮನೆಯ ದೇವರುಗಳ ಆರಾಧನೆ, ತಾಳಿ ಕಟ್ಟುವುದು, ಕಾಲುಂಗುರ ತೊಡಿಸುವುದು ಇತ್ಯಾದಿಗಳು  ಮುಖ್ಯ.

ಸಾಂಪ್ರದಾಯಿಕ ವೃತ್ತಿಯನ್ನು ಬಿಟ್ಟು ಇವರು ಪಾತ್ರೆ ಮಾರುವ ವೃತ್ತಿಗೆ ಬದಲಾಗಿದ್ದಾರೆ. ಇವರ ಇತ್ತೀಚಿನ ವೃತ್ತಿ ಎಂದರೆ ಜೋತಿಷ್ಯ ಹೇಳುವುದು. ಹೆಂಗಸರು ಕೌದಿಗಳನ್ನು ಹೊಲೆಯುತ್ತಾರೆ ಮತ್ತು ವ್ಯವಸಾಯದ ಕೂಲಿಗಳಾಗಿಯೂ ದುಡಿಯುತ್ತಾರೆ. ಊರಿಂದೂರಿಗೆ ಅಲೆಯುವ ಈ ಸಮುದಾಯದ ಬದುಕು ನಿಜಕ್ಕೂ ಶೋಚನೀಯ. ಅಂಬಾ ಭವಾನಿ, ಯಲ್ಲಮ್ಮ, ಮಹಾಲಕ್ಷ್ಮಿ, ಇವರು ಪೂಜಿಸುವ ದೇವರುಗಳು. ಆಧುನಿಕ ವಿದ್ಯಾಭ್ಯಾಸ, ಹಾಗೂ ಇತರ ಅಭಿವೃದ್ಧಿ ಯೋಜನೆಗಳ ಬಗ್ಗೆ ಇವರಿಗೆ ಒಲವಿದೆ. ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ.