ಬೆಲ್ಲಾರ ಎನ್ನುವ ಪದ ಮೂಲತಃ ‘ಬಿಲ್ಲುಹರಿ’ ಎನ್ನುವ ಪದದಿಂದ ಬಂದಿದೆ. ಹಾಗೆಂದರೆ – ಗಿಡದಿಂದ ಬಿಳಿಲು ಕೀಳುವುದು. ಥರ್ಸ್ಟನ ಇವರ ಬಗ್ಗೆ ಹೀಗೆ ಬರೆಯುತ್ತಾರೆ (೧೯೦೯) “ಬೆಲ್ಲಾರ ಅಥವಾ ಬೆಲ್ಲೇರರು ಬುಟ್ಟಿ ಹೆಣೆಯುವವರಲ್ಲಿ ಮೇಲಿನ ಜಾತಿಗೆ ಸೇರಿದವರು. ಇವರು ಚಾಪೆ ಹೆಣೆಯುವವರ ಹಾಗೂ ಪರವ ಕೊಡೆ ತಯಾರಿಸುವವರು ಹಾಗೂ ಭೂತನೃತ್ಯ ಮಾಡುವವರಿಗಿಂತಲೂ ಮೇಲಿನ ಜಾತಿಗೆ ಸೇರಿದವರು” ಎಂದು ಹೇಳುತ್ತಾರೆ. ಕನ್ನಡದ ಒಂದು ಉಪಭಾಷೆಯಾದ ತುಳುವನ್ನು ಮನೆಯಲ್ಲಿ ಹಾಗೂ ಕನ್ನಡವನ್ನು ಇತರರೊಂದಿಗೆ ಮಾತನಾಡುತ್ತಾರೆ. ಇವರನ್ನು ಮಾತೃಕುಲಧಾರಿತ ಪಂಗಡಗಳಾಗಿ ವಿಂಗಡಿಸಬಹುದು. ಅವೆಂದರೆ ಸೆಟ್ಟಿ, ತೋಲರ್, ಹೊಳೆ, ಕೆಂಜಿ ಹಾಗೂ ಹಣಗಾರ. ಇವುಗಳ ನಡುವೆ ಮದುವೆಯ ಸಂಬಂಧಗಳು ನಡೆಯುತ್ತವೆ. ಮದುವೆಯು ತಂದೆಯ ಸಹೋದರಿಯ ಮಗಳ ಜೊತೆ ಅಥವಾ ತಾಯಿಯ ಸಹೋದರನ ಮಗಳ ಜೊತೆ ನಡೆಯುತ್ತವೆ. ಹೆಂಗಸರು ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಥರ್ಸ್ಟನ್ ಇವರಲ್ಲಿ ಅಳಿಯ ಸಂತಾನ ಪದ್ಧತಿಯ ವಾರಸುದಾರಿಕೆಯನ್ನು ಪಾಲಿಸುತ್ತಾರೆಂದು ಹೇಳುತ್ತಾರೆ. ಈಗ ಇವರು ಗಂಡು ಸಂತಾನ ಪ್ರಾಧಾನ್ಯತೆಯ ಕಡೆಗೆ ವಾಲಿದ್ದಾರೆ:

ಇವರಲ್ಲಿ ಕೆಲವರು ಸರ್ಕಾರದಿಂದ ಉಳುವ ಭೂಮಿಯನ್ನು ಪಡೆದು ವ್ಯವಸಾಯ ಮಾಡುತ್ತಿದ್ದಾರೆ. ಇವರಲ್ಲಿ ಬಹುಜನರು ಭೂಮಿ ಇಲ್ಲದವರು ಮತ್ತು ವ್ಯವಸಾಯದ ಕೂಲಿಗಳು. ಸಾಂಪ್ರದಾಯಿಕವಾಗಿ ಈಗಲೂ ಇವರಲ್ಲಿ ಅನೇಕರು ಬುಟ್ಟಿ ಹೆಣೆಯುವ ವೃತ್ತಿಯಲ್ಲಿ ತೊಡಗಿರುತ್ತಾರೆ. ಇವರು ಭೂತಗಳಾದ ಪಂಜುರ್ಲಿ, ಕಲ್ಲುರ್ತಿ, ಅಲಿಗುಲಿಗಳನ್ನು ಆರಾಧಿಸುತ್ತಾರೆ. ದೇವಸ್ಥಾನದ ಆಚರಣೆಗಳಲ್ಲಿ ಹಾಗೂ ಭೂತಗಳ ಕೋಲಗಳಲ್ಲಿ ಭಕ್ತಾದಿಗಾಳಗಿ ಭಾಗವಹಿಸುತ್ತಾರೆ. ವಿದ್ಯಾಭ್ಯಾಸದ ವಿಷಯದಲ್ಲಿ ಬಾಲಕರನ್ನು ಮಾತ್ರ ಸ್ವಲ್ಪಮಟ್ಟಿಗೆ ಪ್ರೋತ್ಸಾಹಿಸಿದ್ದಾರೆ. ಇವರು ಸಾಂಪ್ರದಾಯಿಕ ಹಾಗೂ ಆಧುನಿಕ ಔಷಧಗಳೆರಡನ್ನೂ ಬಳಸುತ್ತಾರೆ. ಇವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಅತ್ಯಂತ ಹಿಂದುಳಿದಿದ್ದಾರೆ.