ಬೆಸ್ತರು ಕರ್ನಾಟಕದ ಎಲ್ಲಾ ಪ್ರದೇಶಗಳಲ್ಲಿ ಕಂಡುಬರುತ್ತಾರೆ. ಬೆಸ್ತರಲ್ಲಿ ಮೂರು ರೀತಿಯ ಉಪಜಾತಿಗಳಿವೆ, ಅವೆಂದರೆ ಬುಂಡೆ ಬೆಸ್ತ, ಮಾರಿ ಬೆಸ್ತ, ತೊರೆಯ ಬೆಸ್ತ. ೧೯೩೦ರಲ್ಲಿ ನಂಜುಂಡಯ್ಯ ಮತ್ತು ಐಯ್ಯರ್ ರವರು, ಸಣ್ಣಕಲ್ಲು, ಚುನ್ನಮ್, ತೋರ, ತೆಲುಗು, ಸರಾಯಿ, ಅರಿಶಿಣ, ಇತ್ಯಾದಿ ಕುಲಗಳನ್ನು ಇವರಲ್ಲಿ ಗುರುತಿಸಿದ್ದಾರೆ. ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಇವರು ಬಳಸುತ್ತಾರೆ. ಪ್ರತಿ ಉಪಜಾತಿಗಳಿಗೆ ಕುಲಗಳ ಜೊತೆಗೆ ಹಲವಾರು ಹೊರಬಾಂಧವ್ಯದ ಬಳ್ಳಿಗಳಿವೆ. ಇವರಲ್ಲಿ ಸಾಮಾಜಿಕ, ಪ್ರಾದೇಶಿಕ ಹಾಗೂ ವೃತ್ತಿಗಳನ್ನು ಆಧರಿಸಿ ಮೇಲುಕೀಳುಗಳೆಂಬ ವರ್ಗೀಕರಣಗಳು ಇರುತ್ತವೆ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇವರಲ್ಲಿ ವಧುದಕ್ಷಿಣೆ (ತೆರ) ಹಿಂದೆ ಆಚರಣೆಯಲ್ಲಿತ್ತು. ಆದರೆ ಈಗ ವರದಕ್ಷಿಣೆ ಪದ್ಧತಿ ಪ್ರಚಲಿತದಲ್ಲಿದೆ. ಅದನ್ನು ಹಣ ಅಥವಾ ಇತರೆ ರೂಪಗಳಲ್ಲಿ ಕೊಡಲಾಗುತ್ತದೆ. ವಿಧುರ ಮದುವೆ ಸಾಧ್ಯವಿದೆ. ಆದರೆ ವಿಧವೆಯರು ಮರುಮದುವೆ ಆಗುವಂತಿಲ್ಲ. ಹಿಂದೆ ಇವರಲ್ಲಿ ವಿಧವಾ ವಿವಾಹಕ್ಕೆ ಅವಕಾಶ ಇತ್ತು. ಆದರೆ ಈಗ ಇದನ್ನು ನಿಷೇಧಿಸಲಾಗಿದೆ. ಪೂರ್ವಿಕರ ಆಸ್ತಿಯನ್ನು ಗಂಡು ಮಕ್ಕಳು ಸಮಾನವಾಗಿ ಹಂಚಿಕೊಳ್ಳುತ್ತಾರೆ. ಹಿರಿಯ ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಹೆಂಗಸರು ವ್ಯವಸಾಯ ಪಶುಸಂಗೋಪನೆ, ಇತ್ಯಾದಿ ಕೆಲಸಗಳಲ್ಲಿ ತೊಡಗಿ ಕುಟುಂಬದ ಆದಾಯಕ್ಕೆ ಸಹಾಯ ಮಾಡುತ್ತಾರೆ. ಹೆರಿಗೆಯ ಮುನ್ನ ಹಾಗೂ ಬಸುರಿಯಾದ ನಂತರದ ಕೆಲವು ನಿರ್ಬಂಧಗಳನ್ನು ಹಾಗೂ ಹೆರಿಗೆಯ ನಂತರದ ಸೂತಕವನ್ನು ಆಚರಿಸುತ್ತಾರೆ. ಮದುವೆಯ ಮುಖ್ಯ ಆಚರಣೆಗಳಲ್ಲಿ ನಿಶ್ಚಿತಾರ್ಥ, ವರನ ಕಡೆಯವರನ್ನು ಸ್ವಾಗತಿಸುವುದು, ಧಾರೆ ಎರೆಯುವುದು, ಅಕ್ಷತೆ ಹಾಕುವುದು, ತಾಳಿಕಟ್ಟುವುದು ಮುಖ್ಯವಾದವು. ಸತ್ತವರನ್ನು ಹೂಳಿ, ಸೂತಕವನ್ನು ಹತ್ತು ದಿನಗಳವರೆಗೆ ಆಚರಿಸಿ, ಪ್ರತಿವರ್ಷ ಹಿರಿಯರ ಪೂಜೆಯನ್ನು ಮಾಡುತ್ತಾರೆ.

ಸಾಂಪ್ರದಾಯಿಕವಾಗಿ ಇವರ ವೃತ್ತಿ ಕೆರೆ, ನದಿ ನೀರಿನಲ್ಲಿ ಮೀನು ಹಿಡಿಯುವುದು. ಅದರ ಜೊತೆ ವ್ಯವಸಾಯದ ಕೂಳಿಗಳಾಗಿ ದುಡಿದು ಜೀವನ ನಡೆಸುತ್ತಾರೆ. ಕೆಲವರು ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ನೌಕರಿಗೂ ಸೇರಿದ್ದಾರೆ. ಊರಿನ ಹಾಗೂ ಪ್ರಾಂತ್ಯದ ದೇವತೆಗಳನ್ನು ಪೂಜಿಸುತ್ತಾರೆ. ಇವರ ಧಾರ್ಮಿಕ ಕಾರ್ಯಗಳನ್ನು ನಡೆಸಲು ಬ್ರಾಹ್ಮಣ ಪೂಜಾರಿಗಳು ಇರುತ್ತಾರೆ. ಸೇವೆಗಳ ಅದಲು ಬದಲುಮಾಡಿಕೊಳ್ಳುವಿಕೆ ಹಾಗೂ ಒಡೆಯ-ಆಳಿನ ತರದ ಸಂಬಂಧಗಳು ಈಗಲೂ ಇವೆ. ಇವರು ಅಭಿವೃದ್ಧಿ ಕಾರ್ಯಕ್ರಮಗಳ ಉಪಯೋಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದಾರೆ.