ವಾಲ್ಮೀಕಿ ಬ್ಯಾಡರು, ಬೇಡ, ನಾಯಕ, ತಳವಾಋ, ಬೆರಡ, ಬೊದರ, ನಾಯಕ ಮಕ್ಕಳು, ನಾಯಕವಾಡಿ, ರಾಮೋಪಿ, ಬೆಂಡಾರ, ವಾಲ್ಮೀಕಿ ಮಕ್ಕಳು, ನ್ಯಾಕ ಮತ್ತು ಬೋಯರೆಂದು ಅನೇಕ ಹೆಸರುಗಳಿಂದ ಇವರನ್ನು ಕರೆಯುತ್ತಾರೆ.

ಮ್ಯಾಸಬೇಡರ ಒಂದು ಕುಟುಂಬ

ಮ್ಯಾಸಬೇಡರ ಒಂದು ಕುಟುಂಬ

ಇವರು ತಾವು ವಾಲ್ಮೀಕಿ ಋಷಿಗಳ ವಂಶದವರೆಂದು ಹೇಳಿಕೊಳ್ಳುತ್ತಾರೆ. ಕರ್ನಾಟಕದ ಉತ್ತರಭಾಗದ ಎಲ್ಲಾ ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ಕಂಡುಬರುತ್ತಾರೆ.  ಇವರು ಕನ್ನಡ ಭಾಷೆಯನ್ನು ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಬೇಡರಲ್ಲಿ ಎರಡು ಪಂಗಡಗಳನ್ನು ಕಾಣುತ್ತೇವೆ. ಅವೆಂದರೆ ಊರುಬೇಡ ಮತ್ತು ಮ್ಯಾಸಬೇಡ ಅಥವಾ ಊರನಾಯಕ ಮತ್ತು ಮ್ಯಾಸನಾಯಕ. ಹೆಸರುಗಳೇ ಹೇಳುವಂತೆ ಊರಿನಲ್ಲಿ ವಾಸಮಾಡುವವರನ್ನು ಊರುಬೇಡರೆಂದೂ, ಊರಹೊರಗೆ ಪ್ರತ್ಯೇಕವಾಗಿ ಅಥವಾ ಕಾಡುಗಳಲ್ಲಿ ವಾಸಮಾಡುವವನ್ನು ಮ್ಯಾಸಬೇಡ ಅಥವಾ ಅಡವಿಬೇಡ ಎಂದು ಕರೆಯಲಾಗಿದೆ.

ಕೆಲವು ಐತಿಹ್ಯಗಳ ಪ್ರಕಾರ ಇವರು ಪಶುಪಾಲನೆ ಮಾಡುತ್ತಿದ್ದು, ಶ್ರೀಶೈಲದ ಕಡೆಯಿಂದ ಪಶುಗಳನ್ನು ಮೇಯಿಸಿಕೊಳ್ಳುತ್ತಾ ಕರ್ನಾಟಕದ ಕಡೆಗೆ ಬಂದರೆಂದೂ ತಿಳಿಯುತ್ತದೆ. ಹಿಂದೆ ಒಬ್ಬ ಮುಂದೆ ಒಬ್ಬ ಪಶುಗಳನ್ನು ಮೇಯಿಸುತ್ತಿದ್ದರು. ಹಿಂದಿನವರು ಆಕಳ ಕರುವಿನ ಕಾಲು ಮುರಿದು ತಿನ್ನಲು ಶುರುಮಾಡಿದನಂತೆ. ಅದಕ್ಕೆ ಮುಂದಿನವರು ‘ನೀನು ಗೋಮಾಂಸ ತಿಂದೆ ನೀನು ಬ್ಯಾಡ” ಅಂತ ಅವನನ್ನು ಬಿಟ್ಟು ಮುಂದೆ ಬಂದನಂತೆ ಮುಂದೆ ಬಂದವನು “ಊರುಬೇಡ” ಆದ, ಹಿಂದೆ ಉಳಿದವನು ‘ಮ್ಯಾಸಬೇಡ’ ಆದನಂತೆ. ಹಾಗಾಗಿ ಮೇಯಿಸುವವರು>ಮೇಸುವವರು>ಮ್ಯಾರು ಆಗಿದೆಯಂತೆ. ಊರನಾಯಕರಲ್ಲೂ ಮ್ಯಾಸ ನಾಯಕರಲ್ಲೂ ‘ಕೊಡಕೊಳ್ಳುವ’ ಹಾಗೂ ಯಾವುದೇ ರೀತಿಯ ಸಾಂಪ್ರದಾಯಿಕ ಸಂಬಂಧವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇವರಲ್ಲಿ ಕೊಡುಕೊಳ್ಳುವುದು ನಡೆಯುತ್ತಿದೆ. ಆದರೂ ಇವರ ಸಾಂಪ್ರದಾಯಿಕ ಆಚರಣೆಗಳಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗಳು ಇವೆ.

ಇವರ‍ಲ್ಲಿ ಶೇವಂತಿಗೆ, ಬೆಲ್ಲ, ಆಡು, ಎಮ್ಮೆ, ಮಲ್ಲಿಗೆ, ಇತ್ಯಾದಿ ಬಳ್ಳಿಗಳು ಇವೆ. ಇವರು ತಳವಾರ, ನಾಯಕವಾಡ, ಗುಂಡಾನಿ ಬಡ್ಡಿ, ಕಟ್ಟಿಮನಿ, ಚಬ್ಬಿ, ಇತ್ಯಾದಿ ಮನೆತನದ ಹೆಸರುಗಳನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಸ್ಥಳನಾಮವನ್ನು ಕೂಡ ಒಂದು ಕುಟುಂಬ ವಲಸೆ ಹೋದಾಗ ಮನೆತನದ ಹೆಸರಾಗಿ ತಮ್ಮ ಮೂಲ ಸ್ಥಳ ಸೂಚಕವಾಗಿ ಬಳಸಿಕೊಳ್ಳುತ್ತಾರೆ. ಒಳಬಾಂಧವ್ಯ ವಿವಾಹವೂ ಸಮುದಾಯದ ಮಟ್ಟದಲ್ಲೂ ಹೊರಬಾಂಧವ್ಯ ವಿವಾಹ ಬಳ್ಳಿಗಳ ಮಟ್ಟದಲ್ಲೂ ರೂಢಿಯಲ್ಲಿದೆ. ಸೋದರತ್ತೆ, ಸೋದರ ಮಾವ ಮತ್ತು ಅಕ್ಕನ ಮಗಳೊಂದಿಗೆ ವಿವಾಹಕ್ಕೆ ಅನುಮತಿ ಇದೆ. ಆದರೆ ಮ್ಯಾಸ ಬೇಡರಲ್ಲಿ ಒಂದು ಕುಲಸ್ಥರೆಲ್ಲ ಅಣ್ಣ ತಮ್ಮಂದಿರು ಎಂಬ ಭಾವನೆಯಿರುವುದರಿಂದ ಬೇರೆ ಬೇರೆ ಕುಲಗಳಲ್ಲಿ ಹೆಣ್ಣು ತರುತ್ತಾರೆ. ಹೆಣ್ಣನ್ನು ಮದುವೆ ಮಾಡಿಕೊಂಡು ಬರುವುದು ಎಂದರೆ ಲಕ್ಷ್ಮಿಯನ್ನು ಮನೆಗೆ ಕರೆತಂದಂತೆ ಎಂಬ ಭಾವನೆಯಿದೆ. ಆದ್ದರಿಂದ ಲಕ್ಷ್ಮಿಯನ್ನು ಹಾಗೇ ತರಬಾರದೆಂದೂ, ದುಡ್ಡು ಕೊಟ್ಟು ತರಬೇಕೆಂದೂ ‘ತೆರ’ ಕೊಡುವ ಪದ್ಧತಿ ಇವರಲ್ಲಿ ಈಗಲೂ ಇದೆ. ಬ್ರಾಹ್ಮಣರು ಅಥವಾ ವೀರಶೈವ ಜಂಗಮರು ಧಾರ್ಮಿಕ ಕ್ರಿಯಾವಿಧಿ ಜರುಗಿಸುತ್ತಾರೆ. ಪಾರಂಪರಿಕವಾಗಿ ನಲವತ್ತು ರೂಪಾಯಿಗಳನ್ನು ವಧು ಮೌಲ್ಯವಾಗಿ ಕೊಡುವ ಸಾಂಪ್ರದಾಯಿಕ ಪದ್ಧತಿ ಇವರಲ್ಲಿ ಈ ದಿನಗಳಲ್ಲಿಯೂ ಕಂಡುಬರುತ್ತದೆ. ಜೊತೆಗೆ ವರದಕ್ಷಿಣೆಯನ್ನು ಸಹ ನಗದು ಹಾಗೂ ಪದಾರ್ಥಗಳ ರೂಪದಲ್ಲಿ ಇತ್ತೀಚೆಗೆ ಕೊಡಲಾಗುತ್ತದೆ. ಸಮುದಾಯದ ನಾಯಕರು ವಿಚ್ಛೇದವನ್ನು ನಿರ್ಧರಿಸಿ ಪರಿಹಾರವನ್ನು ನಿಂದನೆಗೊಳಗಾದವರಿಗೆ ನಿಗದಿಗೊಳಿಸಿ, ಮಕ್ಕಳ ಸ್ಥಾನವನ್ನು ಆ ಸಂದರ್ಭದಲ್ಲಿ ನಿರ್ಧರಿಸುತ್ತಾರೆ. ಇವರಲ್ಲಿ ವಿಧವೆ, ವಿದುರ, ವಿಚ್ಛೇದಿತರು ವಿವಾಹವಾಗಬಹುದು. ಹಿರಿಯ ಮಗನು ತಂದೆಯ ನಂತರ ಕುಟುಂಬದ ಉತ್ತರಾಧಿಕಾರಿಯಾಗುತ್ತಾನೆ.

ಸಾಂಪ್ರದಾಯಿಕವಾಗಿ ಇವರು ಸೈನಿಕ ಹಾಗೂ ಗ್ರಾಮಸೇವಕರಾಗಿ ದುಡಿಯುತ್ತಿದ್ದರು. ಇತ್ತೀಚೆಗೆ ಹೊಲದಲ್ಲಿ ಶ್ರಮಗೂಲಿ ದುಡಿಯುವುದು ಹೆಚ್ಚಿನ ಕುಟುಂಬಗಳಿಗೆ ಆದಾಯದ ಮೂಲವಾಗಿದೆ. ಇವಲರಲ್ಲಿ ಕೆಲವರು ಜಮೀನನ್ನು ಹೊಂದಿ ವ್ಯವಸಾಯದಲ್ಲಿ ನಿರತರಾಗಿದ್ದಾರೆ. ಜೊತೆಗೆ ಕೆಲವೇ ಜನ ಸರ್ಕಾರಿ ಮತ್ತು ಖಾಸಗಿ ಸೇವೆಗಳಲ್ಲಿ ಉದ್ಯೋಗಗಳಲ್ಲಿದ್ದಾರೆ. ಪಾರಂಪರಿಕವಾಗಿ ಬೇಡರು ಬೇಟೆಯಾಡುತ್ತಿದ್ದರು. ಬಿಲ್ಲು ಮತ್ತು ಭರ್ಜಿಗಳನ್ನು ಬಳಸುವುದರಲ್ಲಿ ಪ್ರವೀಣರಾಗಿದ್ದರು. ಈಗ ಕಾಡುಗಳು ನಾಶವಾಗಿರುವುದರಿಂದ ತಮ್ಮ ವೃತ್ತಿಯನ್ನು ಬದಲಾಯಿಸಿಕೊಂಡಿದ್ದಾರೆ. ಆದರೂ ಯುಗಾದಿ ಹಬ್ಬದ ಸಂದರ್ಭದಲ್ಲಿ ಈಗಲೂ ಸಾಂಪ್ರದಾಯಿಕವಾಗಿ ಬೇಟೆಯಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಇವರು ಹೊಲದಲ್ಲಿ ಕೂಲಿ ಮಾಡಲು ಪ್ರಾರಂಭಿಸಿದ್ದಾರೆ. ಸರಕಾರದಿಂದ ದರಖಾಸ್ತು ಭೂಮಿ ತೆಗೆದುಕೊಂಡಿರುವವರು ಹಾಗೂ ಕೆಲವರು ಸ್ವಂತ ವ್ಯವಸಾಯ ಮಾಡುವುದನ್ನು ಉದ್ಯೋಗವನ್ನಾಗಿಸಿಕೊಂಡಿದ್ದಾರೆ. ಇವರಲ್ಲಿ ಗೊಂಚಿಗಾರನು ಸಾಂಪ್ರದಾಯಿಕವಾಗಿ ಸಮುದಾಯದ ಸಮಿತಿಯ ನಾಯಕತ್ವ ವಹಿಸಿರುತ್ತಾನೆ. ಇವರ ದೈವಗಳು-ಬೋರೆದೇವರು, ಗೋದ್ವಿಪಾಲನಯ್ಯ, ದೊಡ್ಡಮಾರಮ್ಮ, ದುರ್ಗಮ್ಮ ಮಾರಮ್ಮ ಇತ್ಯಾದಿ. ಇವರಲ್ಲಿ ಶೈಕ್ಷಣಿಕ ಮಟ್ಟ ಕಡಿಮೆ. ಆಧುನಿಕ ಮತ್ತು ಪ್ರಾಚೀನ ವೈದ್ಯಕೀಯ, ಮದ್ದನ್ನು ಬಳಸುತ್ತಾರೆ. ಸರ್ಕಾರಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪಡೆದುಕೊಳ್ಳಲು ಪ್ರಯತ್ನಿಸಿದ್ದಾರೆ. ಇವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ರಾಜಕೀಯ ಪರಿಸ್ಥಿತಿಗಳು ಸುಧಾರಣೆಯಾಗಬೇಕಾಗಿದೆ.

ನೋಡಿ:

Annapurna, 1989. The Myasa Beda of Chitradurga District, Ph.D. Thesis, University of Mysore, Mysore.

Bird, N. David., 1992. ‘Beyond the Hunting and Gartering Mode of Subsistence: Culture Sensitive Observations on The Nayaka and Other Modern Hunter-Gatherers’; Man  27:1 pp 1-44

Bird, David N., 1996. ‘Puja or Sharing with the Gods : On Ritualised Procession Among Nayaka  of South India’, The Eastern Anthropologist  49(-4) 25-276

Swaminathan, K.D., 1957. The Nayakas of Ikkeri, P.Varadachary & Co., Madras.