ಬೌದ್ಧ ಧರ್ಮದಲ್ಲಿ ಪ್ರಮುಖವಾಗಿ ಹೀನಯಾನ, ಮಹಾಯಾನ, ಸಹಜಯಾನ ಇತ್ಯಾದಿ ಪಂಗಡಗಳಿವೆ. ಬೌದ್ಧ ಧರ್ಮದ ಸಂಸ್ಥಾಪಕನಾದ ಗೌತಮ ಬುದ್ಧನ ಜೀವಿತ ಅವಧಿಯಲ್ಲಿ ಈ ಧರ್ಮವು ಕರ್ನಾಟಕಕ್ಕೆ ಬರಲಿಲ್ಲ ಎಂದು ಕೆಲವು ಇತಿಹಾಸಕಾರರು ಗುರುತಿಸುತ್ತಾರೆ. ಕರ್ನಾಟಕದಲ್ಲಿ ದೊರೆತಿರುವ ಅಶೋಕನ ಶಾಸನಗಳನ್ನೇ ಆಧರಿಸಿ ಬನವಾಸಿ ಪ್ರದೇಶಗಳಲ್ಲಿ ಕ್ರಿ.ಶ.೩ನೇ ಶತಮಾನದಲ್ಲಿ ಬೌದ್ಧಧರ್ಮವಿತ್ತು ಎಂದು ಕೆಲವು ಶಾಸನತಜ್ಞರು ಗುರುತಿಸಿದ್ದಾರೆ.

ಶಾತವಾಹನರು ಹಾಗೂ ಬಾದಾಮಿ ಚಾಲುಕ್ಯರ ಕಾಲದಲ್ಲಿ ಕರ್ನಾಟಕದಲ್ಲಿ ಮಹಾಯಾನ ಪಂತವಿತ್ತು ಎಂದು ಚೀನಯಾತ್ರಿಕ ಹೂ-ಎನ್-ತ್ಸಾಂಗ್‌ನು ದಾಖಲಿಸಿದ್ದಾನೆ. ಭಾರತದಲ್ಲಿ ಬೌದ್ಧ ಧರ್ಮವು ಉನ್ನತ ಮಟ್ಟವನ್ನು ತಲುಪಿದ ಸಮಯದಲ್ಲಿ ತನ್ನದೇ ಆದ ಸ್ಥಾನವನ್ನು ಕರ್ನಾಟಕದಲ್ಲಿಯೂ ಪಡೆದಿತ್ತು ಎಂಬುದು ಸ್ಪಷ್ಟ. ನಮಗೆ ದಕ್ಷಿಣ ಕನ್ನಡ, ಶಿವಮೊಗ್ಗ, ಬಳ್ಳಾರಿ ಮುಂತಾದ ಜಿಲ್ಲೆಗಳಲ್ಲಿ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಶಿಲ್ಪಗಳು, ದೇವಸ್ಥಾನದ ಕುರುಹುಗಳು ದೊರಕುತ್ತವೆ. ಬೌದ್ಧಧರ್ಮವು ವೈದಿಕ ಧರ್ಮದ ದಾಳಿಯ ನಂತರ ತನ್ನ ಜನ್ಮಭೂಮಿಯನ್ನು ಬಿಟ್ಟು, ಹೊರನಾಡುಗಳಾದ ಪೂರ್ವ ಹಾಗೂ ಆಗ್ನೇಯ ಏಷಿಯದ ದೇಶಗಳಾದ ಚೀನ, ಟಿಬೆಟ್, ನೇಪಾಳಗಳಲ್ಲಿ ಪ್ರಮುಖ ಧರ್ಮಗಳ ಜೊತೆಗೆ ಅಗ್ರ ಪಂಕ್ತಿಯಲ್ಲಿದೆ ಎಂಬುದು ವಾಸ್ತವ.

ಆದರೆ ಇತ್ತೀಚಿನ ದಿನಗಳಲ್ಲಿ ಬೌದ್ಧ ಧರ್ಮವು ಭಾರತದಲ್ಲಿ ಹಲವಾರು ರೂಪಾಂತರಗಳನ್ನು ಪಡೆದುಕೊ‌ಳ್ಳುತ್ತಿದೆ. ಅನೇಕ ತಳಜಾತಿಯ ಜನರುಯ ಮುಖ್ಯವಾಗಿ ದಲಿತರು ಮಹಾಬೋಧಿ ಸಂಘಟನೆಯ ಮೂಲಕ ಹಿಂದೂ ಧರ್ಮವನ್ನು ಬಿಟ್ಟು ಬೌದ್ಧ ಧರ್ಮವನ್ನು ಸ್ವೀಕರಿಸುತ್ತಿದ್ದಾರೆ. ಈ ರೀತಿಯ ಪ್ರಕ್ರಿಯೆಗಳಿಂದ ಕರ್ನಾಟಕ ಹೊರತಾಗಿಲ್ಲ. ಮಹಾಬೋಧಿ ಸಂಘಟನೆಯು ಕರ್ನಾಟಕದಲ್ಲಿ ಬುದ್ಧನ ತತ್ವಗಳನ್ನು ಪ್ರಚಾರ ಮಾಡುವ ಮೂಲಕ ಹಲವಾರು ತಳಜಾತಿಯ ಜನರು ಬೌದ್ಧ ಧರ್ಮವನ್ನು ಸ್ವೀಕರಿಸುವಂತೆ ಮಾಡಿದೆ.