ಭೈರಾಗಿಗಳನ್ನು ಐಯ್ಯರ್ ಅವರು ಧಾರ್ಮಿಕ ಭಿಕ್ಷುಕರು, ಔಷಧೀಯ ಸಸ್ಯಗಳ ಜ್ಞಾನವುಳ್ಳವರು, ವೈದ್ಯರು ಎಂದು ವರ್ಣಿಸಿದ್ದಾರೆ. ಅಷ್ಟೇ ಅಲ್ಲದೆ ಇವರಲ್ಲಿ ಕೆಲವೊಂದು ಗುಂಪುಗಳನ್ನು ಗುರುತಿಸಿದ್ದಾರೆ. ಅವೆಂದರೆ ರಾಮಾನುಜರು (ಶ್ರೀ ವೈಷ್ಣವರು) ನಿಮನಂದಿ,  ನಿಮತ/ನಿಮಡಿತ್ಯಾ, ವಿಷ್ಣುಸ್ವಾಮಿ/ವಲ್ಲಭಾಚಾರ್ಯರು, ಮಧ್ವಾಚಾರ್ಯರು ಮುಂತಾದವುಗಳು. ಇವರು ಮನೆಯಲ್ಲಿ ತೆಲುಗು ಮಾತನಾಡುತ್ತಾರೆ. ಭೈರಾಗಿಗಳು ಹೆಚ್ಚಾಗಿ ಕೋಲಾರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿದ್ದಾರೆ. ಇವರಿಗೆ ಕನ್ನಡದಲ್ಲಿ ಮಾತನಾಡಲು ಹಾಗೂ ಕನ್ನಡ ಲಿಪಿಯನ್ನು ಬಳಸಲೂ ಬರುತ್ತದೆ. ಈ ಬುಡಕಟ್ಟು ಸಮುದಾಯದ ಕೆಲವು ಪರಂಪರಾಗತ ಉಪಜಾತಿಗಳನ್ನು ಹೊಂದಿದೆ. ಅವೆಂದರೆ, ಬೈಲಪಟ್ಟಿ, ಕರಾಂಚಿ, ಅಂದೂಲರ, ಭಾರಧಾನಮೋತಿ, ಪಡಿಗಲ್ಲು, ಉಪ್ತಲ್ಲು ಹಾಗೂ ಪೆಗೊಲ್ಲರ. ಇವುಗಳಲ್ಲಿ ಹೊರಬಾಂಧವ್ಯದ ಮದುವೆಗಳೂ ನಡೆಯುತ್ತವೆ. ತಂದೆಯ ಸಹೋದರಿಯ ಮಗಳ ಜೊತೆ ಅಥವಾ ತಾಯಿಯ ಸಹೋದರನ ಮಗಳ ಜೊತೆ ಮದುವೆ ಸಾಮಾನ್ಯ. ವಿಧುರ, ವಿಧವೆಗೆ ಹಾಗೂ ವಿಚ್ಛೇದಿತರಿಗೆ ಮದುವೆಯಾಗಲು ಅವಕಾಶವಿದೆ. ಆಸ್ತಿಯನ್ನು ಎಲ್ಲಾ ಮಕ್ಕಳಿಗೂ ಸಮವಾಗಿ ಹಂಚಲಾಗುತ್ತದೆ. ಮನೆಯ ಹಿರಿಯಮಗ ತಂದೆಯ ನಂತರ ಮನೆಯ ಮುಖ್ಯಸ್ಥನಾಗುತ್ತಾನೆ. ಹೆಂಗಸರು ವ್ಯವಸಾಯದ ಕೆಲಸಗಳಲ್ಲಿ ಭಾಗವಹಿಸಿ, ಸಾಮಾಜಿಕ, ಧಾರ್ಮಿಕ ಆಚರಣೆಗಳ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸುತ್ತಾರೆ. ಮಗು ಹುಟ್ಟಿದ ಮೂರನೇ ದಿನ ನಾಮಕರಣ ಮಾಡಿ, ಸೂತಕವನ್ನು ಇಪ್ಪತ್ತು ದಿನಗಳವರೆಗೆ ಆಚರಿಸುತ್ತಾರೆ. ಮದುವೆಯ ಆಚರಣೆಗಳಲ್ಲಿ ವೀಳ್ಯಶಾಸ್ತ್ರ, ಧಾರೆ ಮುಖ್ಯವಾದವು. ಶವವನ್ನು ಸುಟ್ಟು, ಸೂತಕವನ್ನು ಹದಿನೈದು ದಿನಗಳವರೆಗೆ ಆಚರಿಸುತ್ತಾರೆ. ಇವರ ಸಾಂಪ್ರದಾಯಿಕ ಕಸಬು ಕಣಿ ಹೇಳುವುದು ಹಾಗೂ ಭವಿಷ್ಯ ನುಡಿಯುವುದು. ಈಗಿನ ಇವರ ಕೆಲವು ವೃತ್ತಿಗಳೆಂದರೆ ವ್ಯವಸಾಯದಲ್ಲಿ ಕೂಲಿಯಾಳುಗಳಾಗಿ, ದಿನಗೂಲಿ ನೌಕರರಾಗಿ, ಇಲ್ಲವೆ ಸಣ್ಣ ಪುಟ್ಟ ವ್ಯಾಪಾರ ಮಾಡಿಕೊಂಡಿರುವುದು. ಇವರಿಗೆ ಸಾಂಪ್ರದಾಯಕವಾದ ಜಾತಿಯ “ನ್ಯಾಯ ಪಂಚಾಯಿತಿ”ಯಿದೆ, ಇವರ ಸಮುದಾಯದ ನಾಯಕನನ್ನು ಯಜಮಾನರೆಂದು ಕರೆಯುತ್ತಾರೆ. ರಾಮ, ಲಕ್ಷ್ಮಿ, ಮಾರಿಯಮ್ಮ, ಆಂಜನೇಯ, ಇತ್ಯಾದಿ ದೇವರುಗಳನ್ನು ಪೂಜಿಸುತ್ತಾರೆ. ಯುಗಾದಿ, ಶಿವರಾತ್ರಿ, ಸಂಕ್ರಾಂತಿ, ದೀಪಾವಳಿ, ಇವು ಇವರು ಆಚರಿಸುವ ಕೆಲವು ಮುಖ್ಯ ಹಬ್ಬಗಳು. ಆಧುನಿಕ ವಿದ್ಯಾಭ್ಯಾಸದ ಕಡೆಗೆ ಬೈರಾಗಿಗಳ ಗಮನ ಹೆಚ್ಚಾಗಿಲ್ಲ. ಆಧುನಿಕ ಸಂಸ್ಥೆಗಳ ಸೌಲಭ್ಯ ಪಡೆದುಕೊಳ್ಳುವಲ್ಲಿ ಇವರು ವಿಫಲರಾಗಿದ್ದಾರೆ. ಇವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಪರಿಸ್ಥಿತಿಗಳು ಸುಧಾರಣೆಯಾಗಬೇಕಾದ ಅಗತ್ಯವಿದೆ.