ಭೈರರು ಕರ್ನಾಟಕದ ಹೆಸರಾಂತ ಅರಸನಾದ ಭೈರ ಅರಸನ ವಂಶಸ್ಥರು ಎಂದು ಹೇಳಲಾಗುತ್ತದೆ. ಆದಕಾರಣ ಇವರಿಗೆ ಭೈರರು ಎಂಬುದಾಗಿ ಕರೆಯಲಾಯಿತು ಎಂದು ಪೂರ್ವಿಕರ ಅಭಿಪ್ರಾಯ. ಇದೇ ರೀತಿ ಇನ್ನೊಂದು ಕಡೆ ಪೂರ್ವದಲ್ಲಿ ಶಿವನು ಕಾಲಭೈರವನ ಅವತಾರ ತಾಳಿ ಜನತೆಯಲ್ಲಿ ದೈವ ಭಕ್ತಿಯನ್ನು, ದೇವರ ಭಯವನ್ನೂ, ಧರ್ಮವನ್ನು ಸ್ಥಾಪಿಸಿದನು. ಶಿವನ ಕಾಲ ಭೈರವ ಅವತಾರದ ದೈವಿಕ ಶಕ್ತಿಗೆ ಬೆರಗಾಗಿ ಹಾಗೂ ಕಾಲ ಭೈರವನ ದೈವಿಕ ಶಕ್ತಿಯನ್ನು ನಂಬಿ, ಪೂಜೆ ಪುರಸ್ಕಾರ ಕೊಟ್ಟು, ಆರಾಧನೆ ಮಾಡಿಕೊಂಡು ಬಂದ ಕಾರಣ, ಕಾಲ ಭೈರವನ ಆರಾಧಕರಾದ ಇವರನ್ನು ‘ಭೈರವರು’ ಎಂಬುದಾಗಿ ಕರೆಯತೊಡಗಿದರು ಎಂದು ಕೆಲವು ತಜ್ಞರು ತಿಳಿಸುತ್ತಾರೆ.

ಭೈರವರು ಕರ್ನಾಟಕದ ಬಯಲು, ಸಹ್ಯಾದ್ರಿ ಪರ್ವತ ಶ್ರೇಣಿಗಳನ್ನು ದಾಟಿ, ದಕ್ಷಿಣ ಕನ್ನಡ ಜಿಲ್ಲೆಯ ಕಡಲತಡಿಗೆ ಬಂದು ವಾಸಿಸುತ್ತಿದ್ದಾರೆ. ಇವರು ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಯ ಪರ್ವತ ಪ್ರದೇಶಗಳಲ್ಲಿಯೂ ಕಂಡುಬರುತ್ತಾರೆ. ಕನ್ನಡವನ್ನು ಇವರು ಮನೆಯಲ್ಲಿ ಹಾಗೂ ತಮ್ಮ ಹತ್ತಿರದ ಗುಂಪುಗಳಲ್ಲಿ ಮಾತನಾಡುತ್ತಾರೆ. ಇವರಲ್ಲಿ ನಾಲ್ಕು ಉಪಜಾತಿಗಳಿವೆ. ಈ ಉಪಜಾತಿಗಳು ಮದುವೆಯ ಸಂಬಂಧಗಳನ್ನು ಬೆಳೆಸುತ್ತವೆ.  ಇವರ ಮದುವೆಯ ಕಾರ್ಯಗಳು ಸರಳ. ಸಮಾಜದ ಯಜಮಾನನಾದ ಬುದ್ಧಿವಂತ, ಧಾರೆಯೆರೆದು ಕೊಡುವು ಪದ್ಧತಿ ಇವರಲ್ಲಿ ಇದೆ. ಅಲ್ಲದೆ ಮದುವೆಯ ಸಮಯದಲ್ಲಿ ಪುರೋಹಿತನಾದ ಸಮಾಜದ ಹಿರಿಯನು ಜನಿವಾರ ಹಾಕಿ ಮಂತ್ರ ಜಪ ಮಾಡಬೇಕು. ಸ್ತ್ರೀಯರು ವ್ಯವಸಾಯ, ಉರುವಲು ತರುವುದು ಜೊತೆಗೆ ಸಾಮಾಜಿಕ ಹಾಗೂ ಧಾರ್ಮಿಕ ಸಮಾರಂಭಗಳಲ್ಲೂ ಭಾಗವಹಿಸುತ್ತಾರೆ. ಕಾಡುಗಳು ಇವರಿಗೆ ಮುಖ್ಯ ನೈಸರ್ಗಿಕ ಜೀವನೋಪಾಯದ ಮೂಲ, ಬೇಟೆಯಾಡುವುದು ಇವರ ಉಪಕಸುಬು. ಜೇನು, ಹಂದಿಸಾಕಾಣಿಕೆ ಹಾಗೂ ಬಿದಿರಿನ ಕೆಲಸಗಳನ್ನೂ ಇವರು ಮಾಡುತ್ತಾರೆ. ಈಗ ಇವರಲ್ಲಿ ತೋಟಗಳಲ್ಲಿ ಕೂಲಿಗಳಾಗಿ ಕೆಲಸ ಮಾಡುವವರ ಸಂಖ್ಯೆ ಹೆಚ್ಚಿದೆ. ಇವರ ಪ್ರಾದೇಶಿಕ ದೇವರುಗಳೆಂದರೆ ವೆಂಕಟರಮಣ, ಭೈರವ, ಮಾರಿ, ಚಂದಮ್ಮ, ಮಹಾಮಾಯಿ. ಇವರ ಮನೆಯಲ್ಲಿ, ಪಂಜುರ್ಲಿ, ಗೂಳಿಗ, ಕಲ್ಲೂರ್ತಿಗಳನ್ನು ಪೂಜಿಸುತ್ತಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುಂಬ ಹಿಂದುಳಿದ ಸಮುದಾಯವೆಂದು ಇಂದಿಗೂ ಗುರುತಿಸಲಾಗುತ್ತಿದೆ.

ನೋಡಿ:

ದೇವನೂರು ಪಾಂಡುರಂಗ, ೧೯೯೩. ಭೈರವ ಸಂಸ್ಕೃತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.