ಭೋವಿ, ಸಮುದಾಯದವರನ್ನು ವಡ್ಡ, ತುಡುಗವಡ್ಡರ್, ವೊಡ್ಡರ್, ಗಿರಿನಿವಡ್ಡ, ಒಡ್ಡ ಹಾಗೂ ಒಡ್ಡೆ ಇತರೆ ಹೆಸರಿನಿಂದಲೂ ಇವರನ್ನು ಗುರುತಿಸುತ್ತಾರೆ. ಭೋವಿ ಎನ್ನುವ ಪದ ‘ಬಾವಿ’ ಎನ್ನುವ ಪದದ ವಿಕಲ್ಪ ರೂಪ ಎನ್ನಲಾಗಿದೆ. ಬಾವಿ ತೋಡುವವರು ಎನ್ನುವುದರಿಂದ ಈ ಪದ ಬಂದಿರಬಹುದು. ನಂಜುಂಡಯ್ಯ ಮತ್ತು ಐಯ್ಯರ್‌ರವರು (೧೯೩೧) ಇವರ ದೈವೀ ಮೂಲದ ಬಗ್ಗೆ ಒಂದು ಪುರಾಣವನ್ನು ಹೇಳುತ್ತಾರೆ -“ಪಾರ್ವತಿ, ಪರಮೇಶ್ವರರು ಬಿಸಿಲುಗಾಲದಲ್ಲಿ ಭೂಲೋಕ ಸಂಚಾರದಲ್ಲಿದ್ದಾಗ ಇವರಿಗೆ ಬಾಯಾರಿಕೆಯಾಗುತ್ತದೆ. ಶಿವನು ತಕ್ಷನ ಒಂದು ಗಂಡು ಹಾಗೂ ಒಂದು ಹೆಣ್ಣನ್ನು ಹುಟ್ಟಿಸಿದ. ಅವರು ಒಂದು ಬಾವಿ ತೋಡಿ ಅವರಿಗೆ ನೀರು ಕೊಟ್ಟು ಬಾಯಾರಿಕೆ ತಣಿಸಿದರು. ಹಾಗೆ ಬಾಯಾರಿಕೆ  ನೀಗಿಸಿದ ಜೋಡಿಯಿಂದ ಬೆಳೆದ ಸಂತಾನವೆ ಭೋವಿ ಸಮುದಾಯ”.  ಇವರು ತಮ್ಮ ಮೂಲವನ್ನು ಓದ್ರಾ ದೇಶವೆಂದು ಹೇಳುತ್ತಾರೆ, ಅಂದರೆ ಈಗಿನ ಒರಿಸ್ಸಾ ರಾಜ್ಯ ಆಗಿರಬಹುದು. ಇವರು ಅಲ್ಲಿಂದ ದಕ್ಷಿಣ ಭಾರತದ ಬೇರೆ ಬೇರೆ ರಾಜ್ಯಗಳಿಗೆ ವಲಸೆ ಬಂದರೆಂದು ತಿಳಿಯಲಾಗಿದೆ. ಇವರು ಶೂದ್ರ ವರ್ಣಕ್ಕೆ ಸೇರಿದವರೆಂದು ಹೇಳಿಕೊಳ್ಳುತ್ತಾರೆ. ತೆಲುಗು ಮತ್ತು ಕನ್ನಡವನ್ನು ಮಾತನಾಡುತ್ತಾರೆ. ಇವರನ್ನು ಮೂರು ಮುಖ್ಯ ಗುಂಪುಗಳಾಗಿ ವಿಭಾಗಿಸಬಹುದು. ಅವೆಂದರೆ ಕಲ್ಲು ಭೋವಿ (ಕಲ್ಲು ಒಡೆಯುವವರು) ಮಣ್ಣು ಭೋವಿ (ಮಣ್ಣಿನ ಕೆಲಸ ಮಾಡುವವರು) ಹಾಗೂ ಉಪ್ಪಾರ ಭೋವಿ (ಗಾರೆ ಕೆಲಸಗಾರರು). ಮುಂದೆ ಇವುಗಳನ್ನು ಹಲವಾರು ಹೊರ ಬಾಂಧವ್ಯದ ಬಳ್ಳಿಗಳಾಗಿ ವಿಭಾಗಿಸಬಹುದು ಬಟ್ಟಾಲ, ಬಂಡಿ, ಪಿಟಲ, ಯನುಮಲ, ಉಪ್ಪಾಲ, ಮಲೇಲ, ಹೀಗೆ ಹೂವು ಪ್ರಾಣಿ ಹಾಗೂ ವಸ್ತುಗಳ ಮೇಲೆ ಇವರ ಬಳ್ಳಿಗಳನ್ನು ಹೆಸರಿಸಲಾಗಿದೆ. ಮದುವೆಯು ತಾಯಿಯ ಸಹೋದರನ ಮಗಳು, ತಂದೆಯ ಸಹೋದರಿಯ ಮಗಳು ಅಥವಾ ಹಿರಯಕ್ಕನ ಮಗಳ ಜೊತೆ ಸಾಧ್ಯವಿದೆ. ವಧುದಕ್ಷಿಣೆಯಾಗಿ ಹನ್ನೆರಡು ರೂಪಾಯಿಗಳನ್ನು ಹಣದ ರೂಪದಲ್ಲಿ ಕೊಡುತ್ತಾರೆ. ಇವರಲ್ಲಿ ವಿವಾಹ ವಿಚ್ಛೇದನಕ್ಕೆ ಅವಕಾಶವಿದೆ. ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ಆಚರಣೆಗಳಲ್ಲಿ ಹೆಂಗಸರು ಸಕ್ರಿಯವಾಗಿ ಭಾಗವಹಿಸಿ, ಮನೆಯ ಆದಾಯಕ್ಕೂ ಸಹಾಯ ಮಾಡುತ್ತಾರೆ. ಭೂಮಿ ಅಗೆಯುವುದು, ಕಲ್ಲು ಒಡೆಯುವುದು ಹಾಗೂ ಕೂಲಿ ಕೆಲಸ ಮಾಡುವುದು ಇವರ ಸಾಂಪ್ರದಾಯಿಕ ವೃತ್ತಿಗಳಾದರೆ, ವ್ಯವಸಾಯವು ಇವರ ಇತ್ತೀಚಿನ ಕಸುಬು. ಮುನೇಶ್ವರ ಇವರನ್ನು ರಕ್ಷಿಸುವ ದೈವ  ಹಾಗೂ ಇವರು ಆಂಜನೇಯನ ಭಕ್ತರು. ಇವರು ಮಾರಿಯಮ್ಮ ಹಾಗೂ ಇತರೆ ದೇವತೆಗಳನ್ನು ಪೂಜಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಭೋವಿ ಸಮಾಜದ ಕೆಲವರು ಮಠ ಸ್ಥಾಪಿಸಿಕೊಂಡಿದ್ದಾರೆ. ಇವರು ಶೈಕ್ಷಣಿಕವಾಗಿ, ಆರ್ಥಿಕವಾಗಿ, ಹಿಂದುಳಿದಿದ್ದಾರೆ.

ನೋಡಿ:

Bhat, Chandrashekar A., 1969. ‘Ehnographic Study of the Waddar of Mysore with Special Reference of Their Nomadism’, Bulletin of the Anthropological Survey of India  18(4).

Bhat, Chandrashekar A., 1968. ‘Marriage among the Waddars’, Bulletin of the Department of Anthropology Mukherjee, D.P. and M. Shanta Devi., 1982. ‘Fertility, Age at Marriage and Mortality Among The Boya Population of Southern Andhra Pradesh’, Bulletin of Department of Anthropology,  Vol 31