ನ್ಸರು ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಊರುಗಳಲ್ಲಿ ಕಂಡುಬರುವ ಸಮುದಾಯವಾಗಿದೆ. ಬಂಟ ಮೊದಲಾದ ವರ್ಗದವರು ಇವರನ್ನು ಮಾನ್ಯರ್ ಎಂದು ಕರೆಯುತ್ತಾರೆ. ತುಳುವಿನಲ್ಲಿ ಮಾನ್ಯ ಎಂದರೆ, ಸಮಾಜದಲ್ಲಿ ತುಳಿತಕ್ಕೊಳಪಟ್ಟವರು. ಥರ್ಸ್ಟನ್ ದಕ್ಷಿಣ ಭಾರತದ ಸಮುದಾಯಗಳ ಬಗ್ಗೆ ಬರೆದಿರುವರಾದರೂ ಮಾನ್ಯರ್ ಎಂಬ ಹೆಸರನ್ನು ಎಲ್ಲೂ ಉಲ್ಲೇಖಿಸಿಲ್ಲ. ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ ಬಂಟ ಮತ್ತು ಜೈನ ಮನೆತನಗಳ ಆಡಳಿತ ಕ್ರಮಗಳಂತೆ ಅವರ ಕೆಲಸದ ಆಳುಗಳನ್ನು ಒಟ್ಟಾಗಿ ಮಾನ್ಯರು ಎಂಬುದಾಗಿ ಕರೆದಿರಬಹುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಲೆಯರೆಂದರೆ ಮಾನ್ಯರು. ತುಳುವಿನಲ್ಲಿ ಹೊಲೆಯರಿಗೆ ದಿಕ್ಕಲು ಕುಲು ಎಂದು ಕರೆಯುತ್ತಾರೆ. ಈ ವರ್ಗದಲ್ಲಿ ಮುಖ್ಯವಾಗಿ ಮೇರರು, ಮನ್ಸರು, ಮುಂಡಾಲರು, ಬಾಕುಡರು ಮುಂತಾದವರು ಬರುತ್ತಾರೆ. ಈ ಮಾನ್ಯರೇ ಮುಂದೆ ಮನ್ಸರಾಗಿರಬಹುದು. ಇವರು ದಕ್ಷಿಣ ಕನ್ನಡ ಮೂಲದ ಹೊಲೆಯರು ಎಂದೂ ಸಹ ಗುರುತಿಸಿಕೊಂಡು, ತಮ್ಮನ್ನು ಆದಿ ದ್ರಾವಿಡರೆಂದು ಕರೆದುಕೊಳ್ಳುವರು. ತುಳು ಇವರ ಮಾತೃಭಾಷೆಯಾದರೂ, ಕನ್ನಡವನ್ನು ವ್ಯವಹಾರಿಕ ಭಾಷೆಯನ್ನಾಗಿ ಉಪಯೋಗಿಸುವರು.

ಮನ್ಸರರು ಪರ್ಕೆದನಾಣ್ಣಾಯ, ಪದಕಣ್ಣಾಯ, ಕೊಡ್ವರ್ – ದಣ್ಣಾಯ, ಗುಜರನನಣ್ಣಾಯ, ಬಾಕುಡದಣ್ಣಾಯ, ಬಂಗರ್‌ದಣ್ಣಾಯ ಸಾಲೆದಣ್ಣಾಯ, ಸಾಲಿಯನ್ಕಾಯ, ಕುಂದರನ್ನಾಯ ಬಂಗೇರಾನ್ನಯ, ಕುಂದಾರನ್ನಯ್ಯ, ಕೈರಾನ್ನಯ, ಸೌಂದೇರನ್ನಯ, ಕೂಜ್ಜೇರಾನ್ನಾಯ, ಮತ್ತು ರನ್ನಾಯ ಮುಂತಾದ ಬೆಡಗುಗಳನ್ನು ಹೊಂದಿದ್ದಾರೆ. ಇವರಲ್ಲಿ ಸೋದರತ್ತೆ ಮತ್ತು ಸೋದರ ಮಾವನ ಮಗಳೊಂದಿಗಿನ ವಿವಾಹಕ್ಕೆ ಸಮ್ಮತಿ ಇದೆ. ವಧುದಕ್ಷಿಣೆಯಾಗಿ ಮೂರು ಮುಡಿ ಅಕ್ಕಿಯನ್ನು ನೀಡಲಾಗುತ್ತದೆ. ವಿಚ್ಛೇದನ ಹಾಗೂ ಪುನರ್‌ವಿವಾಹಕ್ಕೆ ಸ್ತ್ರೀ ಮತ್ತು ಪುರುಷ ಇಬ್ಬರಿಗೂ ಅವಕಾಶವಿದೆ.

ಪರಂಪರಾಗತವಾಗಿ ಮೃತ ಶವಗಳನ್ನು ಹೊತ್ತೊಯ್ಯುತ್ತಿದ್ದ ಮನ್ಸರು ಮೊದಲು ತಮ್ಮ ಯಜಮಾನರ ಅಥವಾ ಭೂಹಿಡುವಳಿದಾರರ ಮನೆಗಳಲ್ಲಿ ಜೀತದಾಳುಗಳಾಗಿ ದುಡಿಯುವ ಮೂಲಕ ಮನೆಮಕ್ಕಳು ಎಂದು ಕರೆಯಲ್ಪಡುತ್ತಿದ್ದರು. ಈಗ ಇವರು ಮೃತ ಶವಗಳನ್ನು ಹೊತ್ತೊಯ್ಯುವುದನ್ನು ನಿಲ್ಲಿಸಿದ್ದಾರೆ. ವ್ಯವಸಾಯದ ಕೂಲಿಯೆ ಇವರಿಗೆ ಪ್ರಮುಖ ಆದಾಯದ ಮೂಲವಾಗಿದೆ. ಸಮುದಾಯದ ಒಳ-ಜಗಳಗಳನ್ನು ಬಗೆಹರಿಸುವ ಪ್ರಮುಖನಿಗೆ ‘ಒಂದು ಆಣೆ’ ಮತ್ತು ‘ಎರಡು ಆಣೆ’ ಎನ್ನುವ ಇಬ್ಬರು ಸಹಾಯಕರಿಸುತ್ತಾರೆ. ಈ ಇಬ್ಬರು ಸಹ ಭಿನ್ನವಾದ ವ್ಯವಸ್ಥೆಯ ಪ್ರಮುಖರು.

ಮನ್ಸರರು ‘ಆದಿದ್ರಾವಿಡ ಸಂಘ’ದ ಸದಸ್ಯರಾಗಿದ್ದಾರೆ. ಇವರು ಪಂಜುರ್ಲಿ, ಬೆಮೆರ್, ಸಾರ ಮುಪ್ಪನ್ನೆರ್, ಮಂತ್ರ ಜಾವದಬೈಕಡ್ತಿ, ಕಲ್ಲರ್ಟಿ, ಅಜ್ಜಿ, ತಂಗಡಿ, ರಾವು, ಗುಳಿಗ, ಬ್ರಹ್ಮೇರು, ಇತ್ಯಾದಿ ಭೂತಗಳನ್ನು ಪೂಜಿಸುತ್ತಾರೆ. ಈ ಸಮುದಾಯದ ಹಿರಿಯ ಪ್ರಮುಖ ಧಾರ್ಮಿಕ ವಿಧಿ ವಿಧಾನದ ವಿಶೇಷಜ್ಞನಾಗಿರುತ್ತಾನೆ. ಇವರಲ್ಲಿ ಸ್ತ್ರೀ ಪುರುಷರೆಲ್ಲರೂ ಸಾಂಪ್ರದಾಯಿಕ ಜಾನಪದ ನೃತ್ಯ ಮಾಡಿ ಡೋಲು ಬಾರಿಸುವುದಕ್ಕೆ ಮತ್ತು ಜಾನಪದ ಹಾಡುಗಳನ್ನು ಹಾಡುವುದಕ್ಕೆ ಪ್ರಸಿದ್ಧರಾಗಿದ್ದಾರೆ. ನಾಡ ಹಬ್ಬವಾದ ಭೂತಕೋಲದಲ್ಲಿ ಭಾಗವಹಿಸುತ್ತಾರೆ. ಮನ್ಸರು ಹಾಗೂ ಬಂಡರ ನಡುವೆ ಆಶ್ರಯದಾತ-ಆಶ್ರಿತ ಹಾಗೂ ಜಮೀನುದಾರ-ಜೀತದಾಳು ಸಂಬಂಧಗಳು ಅಸ್ತಿತ್ವದಲ್ಲಿದೆ. ಇವರಲ್ಲಿ ಕೆಲವರು ಮಾತ್ರ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ವೃತ್ತಿಯಲ್ಲಿದ್ದಾರೆ. ಆಧುನಿಕ ಶಿಕ್ಷಣದ ಮಟ್ಟ ಇವರಲ್ಲಿ ಸ್ವಲ್ಪ ಸುಧಾರಿಸಿದೆ. ಆಧುನಿಕತೆಯ ಪ್ರಭಾವದಿಂದ ಇವರ ಸಾಮಾಜಿಕ ಸಂಸ್ಥೆ, ಆಚಾರ ವಿಚಾರದಲ್ಲಿ ಹಲವು ರೀತಿಯ ಬದಲಾವಣೆಗಳು ಕಂಡುಬರುತ್ತಿವೆ. ಆದರೆ ಇವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಪರಿಸ್ಥಿತಿ ಅತ್ಯಂತ ಕೆಳಮಟ್ಟದಲ್ಲಿ ಇದ್ದು ಅಗತ್ಯವಾಗಿ ಸುಧಾರಣೆಯಾಗಬೇಕಾಗಿದೆ.

ನೋಡಿ:

ಕಮಲಾಕ್ಷ ಪಿ., ೧೯೮೪. ದಕ್ಷಿಣ ಕನ್ನಡ ಜಿಲ್ಲೆಯ ಹರಿಜನ, ಗಿರಿಜನರ ಸಾಮಾಜಿಕ ಇತಿಹಾಸ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು.

ನಂದಾವರ, ವಾಮನ., ೧೯೯೮. ‘ಮನ್ಸರು’, ಕರ್ನಾಟಕದ ಬುಡಕಟ್ಟುಗಳು (ಸಂ).ಎಚ್.ಜಿ.ಲಕ್ಕಪ್ಪಗೌಡ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು.