ಮಾದಿಗ ಸಮುದಾಯದವರು ಮೂಲತಃ ಆಂಧ್ರ ಪ್ರದೇಶದವರಾದರೂ, ಕನ್ನಡ ಮಾತನಾಡುವವರೂ ಇದ್ದಾರೆ. ಕರ್ನಾಟಕದಲ್ಲಿ ಎಲ್ಲ ಜಿಲ್ಲೆಗಳಲ್ಲಿ ಇವರು ಕಂಡು ಬರುತ್ತಾರೆ. ಕರ್ನಾಟಕದಲ್ಲಿ ಮಾದಿಗರು ತಾವು ಮಾತಂಗಿಯ ಮಕ್ಕಳು, ಕೆಲವು ಪ್ರದೇಶಗಳಲ್ಲಿ ಆದಿಜಾಂಬರು ಎಂದು ಕರೆಸಿಕೊಳ್ಳುವರು. ಮಹಾಭಾರತದ ಜಾಂಬವ ಎಂಬ ಮಹಾಮುನಿ ಹಾಗೂ ಅಂದಿನ ಕಾಡುಗುಡ್ಡ ಜನರ ಸಂತತಿಯವರು ಎಂಬುದಾಗಿ ಇವರ ನಂಬಿಕೆ. ಭಾರತದ ಜನಗಣತಿ ವರದಿಯಲ್ಲಿ ಮಾದಿಗರನ್ನು ಮಾತಂಗ ಬ್ರಾಹ್ಮಣ ಎಂದು ಹೆಸರಿಸಲಾಗಿದೆ. ಇವರು ಕೆಲವು ಪ್ರದೇಶದಲ್ಲಿ ವಿಷ್ಣುವಿನ ಆರಾಧಕರು, ಕೆಲವು ಪ್ರದೇಶದಲ್ಲಿ ಶಿವನ ಭಕ್ತರು ಹಾಗೂ ಶಕ್ತ್ಯಾ ಎಂಬ ದೈವವನ್ನು ಪೂಜಿಸುತ್ತಾರೆ. ಇವರನ್ನು ಎಡಗೈಯವರು ಎಂದು ಸಾಮಾನ್ಯವಾಗಿ ಕರೆಯಲಾಗುತ್ತದೆ. ಇವರನ್ನು ಆದಿ ಜಾಂಬವರು ಮತ್ತು ಮಾತಂಗಿ ಮಕ್ಕಳು ಎಂದೂ ಕರೆಯುವರು. ಇವರಲ್ಲಿ ದೇಶಭಾಗದವರು ಮತ್ತು ಮಾತಂಗದವರು ಎಂಬ ಎರಡು ಪ್ರಭೇದಗಳಿವೆ. ಇವರ ಮಾತೃಭಾಷೆ ತೆಲುಗಿನ ಜೊತೆಗೆ ಕನ್ನಡದಲ್ಲೂ ಇವರು ವ್ಯವಹರಿಸಬಲ್ಲರು.

ಇವರನ್ನು ಹಲವಾರು ಕುಲಗಳಲ್ಲಿ ವಿಭಾಗಿಸಲಾಗಿದೆ – ಮಾತಂಗಿ, ಮಾರೀಚ, ಜಾಂಬವ, ಕಸೆ, ಮಲ್ಲಿ ಇತ್ಯಾದಿ. ಇವರು ತಮ್ಮ ಹೆಸರಿನ ಜೊತೆ ಅಯ್ಯ, ಅಪ್ಪ, ದೇಸು ಎಂದೆಲ್ಲ ಸೇರಿಸಿಕೊಳ್ಳುತ್ತಾರೆ. ಕುಲದ ಮಟ್ಟದಲ್ಲಿ ಹೊರಬಾಂಧವ್ಯ ಹಾಗೂ ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ ಪದ್ಧತಿಯನ್ನು ಅನುಸರಿಸುತ್ತಾರೆ. ಸೊದರ ಅತ್ತೆಯ ಮಗಳು, ಸೋದರ ಮಾವನ ಮಗಳು ಹಾಗೂ ಅಕ್ಕಂದಿರ ಮಕ್ಕಳನ್ನು ವಿವಾಹವಾಗುತ್ತಾರೆ. ಇವರ ಸಾಂಪ್ರದಾಯಿಕ ವೃತ್ತಿಗಳೆಂದರೆ ಚರ್ಮದ ಕೆಲಸ, ಚರ್ಮ ಹದಮಾಡುವುದು, ಚಪ್ಪಲಿ ಹೊಲೆಯುವುದು ಹಾಗೂ ವ್ಯವಸಾಯದ ಕೂಲಿಗಳಾಗಿ ದುಡಿಯುವುದು. ಇತ್ತೀಚೆಗೆ ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಗಳಲ್ಲಿ ಇದ್ದಾರೆ.

ಉತ್ತರ ಕರ್ನಾಟಕದಲ್ಲಿ ಇವರು ವೀರಶೈವ ಪ್ರಭಾವಕ್ಕೆ ಒಳಗಾಗಿದ್ದಾರೆ. ಕೆಲವರು ಕ್ರೈಸ್ತಧರ್ಮಕ್ಕೂ ಮತಾಂತರವಾಗಿದ್ದಾರೆ. ಇವರಲ್ಲಿ ಸತ್ತರೆ ಸುಡುವ ಅಥವಾ ಹೂಳುವ ಎರಡೂ ಕ್ರಮಗಳನ್ನು ಅನುಸರಿಸುವರು. ಸತ್ತ ಮೂರನೆ ದಿನದಂದು ಉತ್ತರಾದಿಕ್ರಿಯೆ ಆಚರಿಸುವರು. ಇವರು ಐ.ಆರ್.ಡಿ.ಪಿ., ಎನ್.ಆರ್.ಇ.ಪಿ. ರೋಜ್‌ಗಾರ ಇತ್ಯಾದಿ ಸ್ವಯಂ ಉದ್ಯೋಗ ಕಲ್ಪಿಸುವ ಯೋಜನೆಗಳು, ಸಂಪರ್ಕ ಸಾಧನಗಳ ಉಪಯೋಗ ಮತ್ತು ಪಡಿತರ ಹಂಚಿಕೆಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇವರು ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಸಾಮಾಜಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಹಿಂದುಳಿದ ಸಮುದಾಯ.

ನೋಡಿ:

Babu B.V., Y.S.Kusuma and J.M.Naidu., 1995. ‘Opportunity for Natural Selection among Four Andhra Caste Populations’, Journal of Human Ecology.

Reddy, K.Rajasekhar., 1984. A Genetic Study of the Madigas: A Scheduled Caste Population of Andhra Pradesh, Ph.D.Thesis, : S.V.University. Tirupati