ಮಾಲರು, ರಾಯಚೂರು, ಬೀದರ, ಬಳ್ಳಾರಿ ಮತ್ತು ಗುಲಬರ್ಗಾ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ. ಇವರು ತಮ್ಮ ಜಾತಿಯವರೊಂದಿಗೆ ತೆಲುಗಿನಲ್ಲಿ ಉಳಿದವರ ಜೊತೆ, ಕನ್ನಡ ಮತ್ತು ಉರ್ದುವಿನಲ್ಲಿ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಮಾಲರು ಹಲವಾರು ಹೊರಬಾಂಧವ್ಯ ಬಳ್ಳಿಗಳಲ್ಲಿ ವಿಭಾಗಿತಗೊಂಡಿದ್ದಾರೆ – ರೆಡ್ಡಿ, ಬಂದರ, ದೊರಸ, ಸುಂಕದ, ಕುಪ್ಪೆಯ, ಮದಸಲ, ದಾದಸಲ, ಬಂಡಾರಿ, ಕೆಸರಲು, ಓಲೆಯ, ಮಿನುಗ, ಕುಂಕುಮ ವಲ್ಲು, ಬೆಂಡೆ ಗಮ್ಮುಲು ಇತ್ಯಾದಿ. ತಮ್ಮ ಜಾತಿಯ ಒಳಗೆ ಹಾಗೂ ಬಳ್ಳಿಗಳ ಹೊರಗೆ ಮದುವೆಯ ಸಂಬಂಧಗಳು ನಡೆಯುತ್ತವೆ. ಏಕಪತ್ನಿತ್ವ/ಏಕಪತಿತ್ವ ಪದ್ಧತಿಯ ಮದುವೆಗಳು ಮಾತುಕತೆಯಿಂದ ನಡೆಯುತ್ತವೆ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ವಧುದಕ್ಷಿಣೆ ಜೊತೆಗೆ ವರದಕ್ಷಿಣೆಯನ್ನು ಹಣ ಹಾಗೂ ಇನ್ನಿತರೆ ರೂಪಗಳಲ್ಲಿ ಕೊಡುತ್ತಾರೆ. ವಿಧವೆ, ವಿಧುರ ಹಾಗೂ ವಿಚ್ಛೇದಿತರ ವಿವಾಹಕ್ಕೆ ಅವಕಾಶವಿದೆ. ಆಸ್ತಿಯನ್ನು ಎಲ್ಲ ಮಕ್ಕಳೂ ಸಮನಾಗಿ ಹಂಚಿಕೊಳ್ಳುತ್ತಾರೆ. ತಂದೆಯ ನಂತರ ಹಿರಿಯ ಮಗ ಮನೆಯ ವಾರಸುದಾರನಾಗುತ್ತಾನೆ. ಮನೆಯ ಕೆಲಸಗಳ ಜೊತೆಗೆ ಹೆಂಗಸರು ವ್ಯವಸಾಯ ಉರುವಲು ಸಂಗ್ರಹಣೆ ಇತ್ಯಾದಿ. ಮನೆ ಕೆಲಸಗಳನ್ನು ಮಾಡುತ್ತಾರೆ. ಹೆರಿಗೆಗೆ ಮುನ್ನಿನ ಆಚರಣೆಯಾದ ‘ಉಡಿ ತುಂಬಿಸುವ’ ಕಾರ್ಯವನ್ನು ಐದನೆ ಅಥವಾ ಏಳನೇ ತಿಂಗಳಲ್ಲಿ ಮಾಡುತ್ತಾರೆ. ಮೂರು ದಿನಗಳು ಜನನ ಸೂತಕವಿರುತ್ತದೆ. ಆದರೆ ಈ ಋತುಮತಿಯಾದ ಹೆಣ್ಣು ಮಗುವಿಗೆ ‘ನೆರ್ತಲ’ ಎನ್ನುವ ಧಾರ್ಮಿಕ ಕಾರ್ಯವನ್ನು ಮಾಡುತ್ತಾರೆ. ಶವವನ್ನು ಹೂಳುತ್ತಾರೆ ಹಾಗೂ ಸಾವಿನ ಸೂತಕವು ಹತ್ತು ದಿನಗಳವರೆಗೆ ಇರುತ್ತವೆ. ‘ದಿವಸ’ ಎಂಬ ಧಾರ್ಮಿಕ ಕಾರ್ಯವನ್ನು ಒಂಭತ್ತನೆಯ ದಿನ ಮಾಡುತ್ತಾರೆ.

ವ್ಯವಸಾಯ ಕೂಲಿ ಇವರ ಮುಖ್ಯ ವೃತ್ತಿ. ಕೆಲವರಿಗೆ ಉಳುಮೆ ಮಾಡುವ ಭೂಮಿಯಿದೆ. ಸರ್ಕಾರಿ ಸೇವೆ ಹಾಗೂ ಖಾಸಗಿ ನೌಕರಿ, ಬ್ಯಾಂಕು, ಹತ್ತಿ ಮತ್ತು ಎಣ್ಣೆ ಗಿರಣಿಗಳಲ್ಲಿ ಇತ್ತೀಚೆಗೆ ಕೆಲವರು ಕೆಲಸ ಮಾಡುತ್ತಿದ್ದಾರೆ. ಕೆಲವರು ಸ್ವಯಂಉದ್ಯೋಗವನ್ನು ಮಾಡಿಕೊಂಡು ಚಿಲ್ಲರೆ ವ್ಯಾಪಾರ ಹಾಗೂ ತರಕಾರಿ ಮಾರುವವರೂ ಆಗಿದ್ದಾರೆ. ಇವರ ಸಾಂಪ್ರದಾಯಿಕ ಜಾತಿ ಪಂಚಾಯತಿ ಪ್ರಾಮುಖ್ಯತೆಯನ್ನು ಕಳೆದು ಕೊಂಡಿದೆ. ಆದರೆ ಅವಶ್ಯಕವಿದ್ದಾಗ ಹಿರಿಯರು ಮಧ್ಯ ಪ್ರವೇಶಿಸಿ, ಸಮುದಾಯದ ಸಮಸ್ಯೆಗಳನ್ನು ಬಗೆಹರಿಸುತ್ತಾರೆ. ರಂಗಸ್ವಾಮಿ, ವೆಂಕಟರಮಣ, ಸೂಗೂರೇಶ್ವರ, ಎಲ್ಲಮ್ಮ ಇತ್ಯಾದಿ ದೇವರುಗಳನ್ನು ಇವರು ಪೂಜಿಸುತ್ತಾರೆ. ದಾಸರಿಯವರು ಇವರ ಪುರೋಹಿತರು. ಇವರು ಪ್ರಾಂತೀಯ ಹಿಂದೂ ಹಬ್ಬಗಳನ್ನು ಆಚರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಇವರು ಹಲವಾರು ಸಾಂಸ್ಕೃತಿಕ ಆಚರಣೆಗಳ ಜೊತೆ ಅಂಬೇಡ್ಕರ್ ಜಯಂತಿಯನ್ನು ಆಚರಿಸುತ್ತಾರೆ. ಇವರು ಭಾರತೀಯ ಮೂಲದ (ದೇಶಿ) ಮತ್ತು ಆಧುನಿಕ ವೈದ್ಯಕೀಯ ಪದ್ಧತಿಗಳೆರಡನ್ನೂ ಬಳಸುತ್ತಾರೆ. ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಇವರು ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದಿದ್ದಾರೆ.