ಮಾಸ್ಟಿಗರನ್ನು ಆಂಧ್ರಪ್ರದೇಶದಲ್ಲಿ ಮಾಸ್ಟೀನ್, ಮಾಲಮಾಸ್ಟಿ, ಮಾಸ್ಟಿ ಎಂದು ಗುರುತಿಸುತ್ತಾರೆ. ಕರ್ನಾಟಕದ ದಕ್ಷಿಣ ಭಾಗದಲ್ಲಿ ಮಾಸ್ಟೀಕ, ಮಾಲಮಾಸ್ಟೀಕ, ಮಾದಿಗ ಮಾಸ್ಟೀಕ ಎಂದು, ಗುಲ್ಬರ್ಗಾ ಬೀದರ, ರಾಯಚೂರು ಮತ್ತು ಬಳ್ಳಾರಿ ಪ್ರದೇಶಗಳಲ್ಲಿ ಮಾಲ ಮಾಸ್ಟೀ ಎಂದೂ ಕರೆಯುತ್ತಾರೆ.

ಮಾಸ್ಟೀಕರು ತಮ್ಮ ಸಮುದಾಯದ ಮೂಲದಬಗ್ಗೆ ಹೇಳುವ ದಂತ ಕಥೆಪ್ರಕಾರ – ಹನುಮಂತರಾವ್ ಎಂಬ ಮಾದಿಗ ಕುಲದಾತ ಕಂಚಿಯ ಕಾಮಾಕ್ಷಿ ತೇರನ್ನೆತ್ತಿ ಎಳೆದು ರಾಜನ ಅಂಬಾರಿ ಆನೆಯ ಮೇಲೆ ಮೆರವಣಿಗೆಯ ಗೌರವ ಪಡೆದು, ರಾಜರಿಂದ ಆನೆಯ ಮೇಲೆ ಮಹಾಠೀಕ್ ಎಂದು ಹೊಗಳಿಸಿಕೊಂಡನಂತೆ. ಈ ಮಹಾಠೀಕ್ ಎಂಬ ಬಿರುದು, ಹೊಗಳಿಕೆಯೇ ಕ್ರಮೇಣ ಬಳಕೆಯಲ್ಲಿ ಮಾಸ್ಟೀಕ್ ಎಂದಾಗಿದೆ. ಹೊಲೆಯ ಮಾಸ್ಟೀಕರಲ್ಲೂ ಇಂತಹುದೇ ಐತಿಹ್ಯವಿದೆ. ಹೊಲೆಯ ಕುಲದ ಚೆನ್ನಯದಾಸ ಎಂಬಾತ ಹೊಲೆಯ ಕುಲದ ಹೆಣ್ಣುಗಳ ಮಾನಹರಣ ಮಾಡುತ್ತಿದ್ದ ಮಾದಿಗ ಕುಲದ ಆದಿಜಾಂಬವಂತನನ್ನು ಕುಸ್ತಿಯಲ್ಲಿ ಸೋಲಿಸಿ ಸಾಯಿಸುತ್ತಾನೆ. ಆಗ ರಾಜರು ಚೆನ್ನಯ ದಾಸನನ್ನು ಅಂಬಾರಿ ಆನೆಯ ಮೇಲೆ ಮೆರವಣಿಗೆ ತೆಗೆಸಿ ಆನೆ ಮೇಲೆ ಮಾನು (ಹೊಲೆಯ) ಮಹಾಠೀಕ್ ಎಂದು ಹೊಗಳಿದರಂತೆ. ಈ ಎರಡೂ ಒಳಪಂಗಡಗಳ ವಿಷಯದಲ್ಲಿಯೂ ಮಹಾಠೀಕ್ ಎಂಬ ಸಾಮಾನ್ಯ ಹೊಗಳಿಕೆಯ ಪದವೇ ಅವರ ಸಮುದಾಯದ ಹೆಸರಿನ ಮೂಲವಾಗಿರುವುದು ಕೂಡ ಕುತೂಹಲಕರವಾಗಿದೆ. “ಹೊಲೆಯ ಮಾಸ್ಟೀಕರ ಪುರಾಣ ಕಥೆಯೊಂದರಲ್ಲಿ ಕೂಡ ಆದಿಜಾಂಬವಂತನು ಹೊಲೆಯ ಮಾಸ್ಟೀಕರನ್ನು ನಿನ್ನಕ್ಕನ್‌ಮಾಲ್ ಠೀಕ್ ಎಂದು ಬೈಯ್ಯುವ ಪ್ರಸಂಗ ಕೂಡಾ ಮಾಸ್ಟೀಕರ ಸಮುದಾಯದ ಹೆಸರಿನ ಪದ…..ಪ್ರೀತಿಯನ್ನೇ ಹೆಚ್ಚು ಸಮರ್ಥಿಸುತ್ತಿರುವಂತಿದೆ” (ಲಕ್ಷ್ಮೀಪತಿ ಕೋಲಾರ ೧೯೯೩).

ಮಾಸ್ಟೀಕರು ಕರ್ನಾಟಕದಲ್ಲಿ ಬೀದರ, ಗುಲ್ಬರ್ಗಾ, ರಾಯಚೂರು, ಬಳ್ಳಾರಿ, ಚಿತ್ರದುರ್ಗ ಹಾಗೂ ಮುಂತಾದ ಜಿಲ್ಲೆಗಳಲ್ಲಿ ಚೆದುರಿದಂತೆ ಕಂಡುಬರುತ್ತಾರೆ. ತಮಿಳು, ತೆಲುಗು ಮತ್ತು ಕನ್ನಡ ಭಾಷೆ ಗಳ ಜೊತೆಗೆ ತಮ್ಮದೇ ಭಾಷೆಯೊಂದನ್ನು ಇಂದಿಗೂ ಉಳಿಸಿಕೊಂಡಿದ್ದಾರೆ. ಇವರು ಆಂಧ್ರದ ರಾಯಲಸೀಮೆ ಮತ್ತು ತಮಿಳುನಾಡಿನ ಕಂಚಿ ಪ್ರದೇಶಗಳನ್ನೊಳಗೊಂಡ ಚೆಂಗಲ್ ಪೇಟೆಯ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಹೆಚ್ಚಾಗಿ  ಕಂಡುಬರುತ್ತಾರೆ. ಅಲೆಮಾರಿಗಳಾಗಿಯೇ ಇದ್ದ ಮಾಸ್ಟೀಕರು ಇತ್ತೀಚಿನ ದಶಕಗಳಲ್ಲಷ್ಟೇ ನೆಲೆಗೊಳ್ಳುತ್ತಿದ್ದಾರೆ. ಹೀಗಾಗಿ ಮಾಸ್ಟೀಕರ ಭೌಗೋಳಿಕ ಗಡಿಗಳನ್ನು ಕರಾರುವಾಕ್ಕಾಗಿ ನಿರ್ಧರಿಸಿ ಹೇಳಲಾಗುವುದೇ ಇಲ್ಲ ಎಂದು ಲಕ್ಷ್ಮೀಪತಿಯವರು ಅಭಿಪ್ರಾಯಪಡುತ್ತಾರೆ. ಇವರು ಕಂಚಿಯಿಂದ ಕೋಲ್ಲಾಪುರದವರೆಗೂ ತಮ್ಮ ಸಾಂಸ್ಕೃತಿಕ ನಕ್ಷೆಯನ್ನೇ ವಿಸ್ತರಿಸಿಕೊಂಡಿರುವಂತೆ ಕಂಚಿಯ ಮಾಸ್ಟೀಕರು ಕೂಡ ಕೊಲ್ಲಾಪುರದವರೆಗೂ ತಮ್ಮ ಅಲೆಮಾರಿ ಮಾರ್ಗಗಳನ್ನು ಶೋಧಿಸಿಕೊಂಡಿರಬಹುದು.

ಮಾಸ್ಟೀಕರಿಗೆ ಮೂಲ ಹಾಗೂ ಪ್ರಧಾನ ಎನ್ನುವಂತಹ ಕಸಬೊಂದಿಲ್ಲ. ಅನೇಕ ಸಮುದಾಯಗಳಲ್ಲಿ ಸಂದರ್ಭದಲ್ಲಿ ಆ ಸಮುದಾಯಗಳ ಹೆಸರೇ ವೃತ್ತಿ ಸೂಚಕವಾಗಿರುವಂತೆ ಮಾಸ್ಟೀಕ ಸಮುದಾಯದಲ್ಲಿ ಇಂತಹುದೇ ವೃತ್ತಿ ಎಂದು ನಿಖರವಾಗಿ ಹೇಳಲು ಬರುವುದಿಲ್ಲ. ಆದರೂ ಮಾಸ್ಟೀಕರಲ್ಲಿ ಮೂರು ಪ್ರಧಾನ ಕಸುಬುಗಳನ್ನು ಅನೇಕ ಉಪಕಸುಬುಗಳನ್ನು ನಾವು ಗುರುತಿಸಬಹುದು. ಪೂರ್ವಕಾಲದ ಮಾಸ್ಟೀಕರ ಪ್ರಧಾನ ವೃತ್ತಿ  ಪೈಲ್ವಾನರಾಗಿ, ಮಾವುತರಾಗಿ, ಸರ್ಕಸ್ಸಿನ ಕಲಾವಿದರಾಗಿದ್ದರು. ಈಗ ಕೇವಲ ನೆನಪಾಗಿ ಮಾತ್ರ ಉಳಿದಿರುವಂತದ್ದು. ಮಾಸ್ಟೀಕರ ಬದುಕಿನಲ್ಲಿ ಜನನ, ಮದುವೆ, ಮತ್ತು ಸಾವುಗಳಂತ ಧಾರ್ಮಿಕ ಆಚರಣೆಗಳಲ್ಲಿ ಸಮುದಾಯದ ಗುರುಗಳು ನಡೆಸುತ್ತಾರೆ. ಎಲ್ಲಾ ಆಚರಣೆಗಳಿಗೂ ಗುರುಗಳು ಇರಬೇಕು. ಕೋಲಾರ ಜಿಲ್ಲೆಯ ಕಾಗತಿ, ಹೊದಲಿ ಮತ್ತು ಗುಮ್ಮರೆಡ್ಡಿಪುರಗಳಲ್ಲಿ ಮಾದಿಗ ಮಾಸ್ಟೀಕರ ಮಠಗಳು ಹಿಂದೆ ಇದ್ದವಂತೆ. ಮಾಸ್ಟೀಕರಲ್ಲಿ ಶೈಕ್ಷಣಿಕ ಮಟ್ಟ ಅತ್ಯಂತ ಕನಿಷ್ಟದಾಗಿದೆ. ಆರ್ಥಿಕವಾಗಿ ಸ್ವಾವಲಂಬಿಗಳಾದಾಗ, ದೈಹಿಕ ದುಡಿಮೆಯಿಂದಲೇ ಬದುಕುವಂತಾದಾಗ ತಮಗೂ ಸಾಮಾಜಿಕ ಸ್ಥಾನ ಮತ್ತು ಗೌರವಗಳು ಸಿಗಬಲ್ಲವು ಎಂಬ ಸ್ವಾಭಿಮಾನದ ಅರಿವು ಇವರಲ್ಲಿದೆ. ಒಟ್ಟಾರೆ ಮಾಸ್ಟೀಕರು ಇನ್ನು ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಶೋಚನೀಯ ಸ್ಥಿತಿಯಲ್ಲಿಯೇ ಇದ್ದಾರೆ.

ನೋಡಿ:

ಲಕ್ಷ್ಮೀಪತಿ ಕೋಲಾರ., ೧೯೯೩. ಮಾಸ್ಟೀಕರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ; ಬೆಂಗಳೂರು.