ಮುಕರಿ ಎಂಬ ಸಮುದಾಯದ ಜನರು ಉತ್ತರ ಕನ್ನಡ ಜಿಲ್ಲೆಯ ಕುಮಟ, ಹೊನ್ನಾವರ, ಶಿರಸಿ ತಾಲ್ಲೂಕುಗಳಲ್ಲಿ ಕೇಂದ್ರೀಕೃತವಾಗಿ ವಾಸಿಸುತ್ತಿರುವುದನ್ನು ಕಾಣಬಹುದು. ಮೇಲ್ನೋಟಕ್ಕೆ ಇವರು ಆದಿವಾಸಿಗಳಂತೆ  ಕಂಡು ಬಂದರೂ, ನಾಗರಿಕ ಸಮಾಜವು ಇವರನ್ನು ಅಸ್ಪೃಶ್ಯರು ಎಂದು ಪರಿಗಣಿಸುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಇಂಥ ಭಾವನೆಗೆ ಹೆಚ್ಚು ಮಹತ್ವವಿಲ್ಲ. ‘ಮುಕರಿ’ಗಳು ‘ಗಂಜಿಗೌಡರು’ ಎಂದು ಪರಿಚಿತರಾಗಿದ್ದಾರೆ. ಆರ್ಥಿಕವಾಗಿ ಬಹಳ ಹಿಂದುಳಿದಿರುವ ಇವರಿಗೆ ಮೂರು ಹೊತ್ತು ಗಂಜಿ ಊಟಮಾಡುವುದೂ ಕಷ್ಟವಾಗುತ್ತಿತ್ತು. ಗಂಜಿಯೇ ಇವರ ಮುಖ್ಯ ಆಹಾರವಾದುದರಿಂದ ಇವರನ್ನು ‘ಗಂಜಿಗೌಡರು’  ಎಂದು ಕರೆದಿರಬಹುದು. ಇವರಿಗೆ ‘ಹಳೆಯಗೌಡರು’ ಎಂಬ ಹೆಸರು ಇತ್ತು ಎಂದು ಕೆಲವರು ಹೇಳುತ್ತಾರೆ. ಮುಕರಿಗಳು ಹಾಲಕ್ಕಿಗೌಡರ ಗುಂಪಿಗೆ ಸೇರಿದವರೆಂದು ಕೆಲವರ ಅಭಿಪ್ರಾಯ.

‘ಮುಕರಿ’ ಎಂಬ ಹೆಸರು ಬಂದ ಬಗ್ಗೆ ಸರಿಯಾಗಿ ತಿಳಿದುಬಂದಿಲ್ಲ. ರೂಢಿಯಲ್ಲಿರುವ ಒಂದು ಐತಿಹ್ಯವನ್ನು ನಾವು ಗಮನಿಸಬಹುದು. ಮೂಲದಲ್ಲಿ ಇವರು ಹಾಲಕ್ಕಿ ಗೌಡರ ಗುಂಪಿನವರೆಂದು ಹೇಳಲಾಗಿದೆಯಷ್ಟೆ. ಹಾಲಕ್ಕಿಗಳು ಸಂಪ್ರದಾಯಪ್ರಿಯರು ಇವರ ಸಂಪ್ರದಾಯದ ಪ್ರಕಾರ ಕಳ್ಳು ಕುಡಿಯುವುದು, ಸಾರಾಯಿ ಸೇವನೆ ನಿಷಿದ್ಧ ಆದರೆ ಕೆಲವರು ಸಮಾಜದ ಕಟ್ಟಳೆಗಳನ್ನು ಮುರಿದು ಕಳ್ಳು ಕುಡಿಯಲು ಪ್ರಾರಂಭಿಸಿದರಂತೆ. ಹಾಲಕ್ಕಿ ಪಂಚಾಯತಿಯಲ್ಲಿ ಹಿರಿಯರು ಈ ಪ್ರಶ್ನೆಯನ್ನು ಚರ್ಚಿಸಲು ‘ಕೂಟ’ವನ್ನು ಕರೆದರಂತೆ. ಕಳ್ಳು ಕುಡಿಯುವವರು ಕೂಟಕ್ಕೆ ಬಂದರು. ಇವರನ್ನು ಪಂಚಾಯತಿಯ ಪ್ರಮುಖರು ಮತ್ತು ಕೂಟದ ಸದಸ್ಯರು ವಿಚಾರಿಸಿದರು ಯಾವ ಪ್ರಶ್ನೆಗೂ ಉತ್ತರ ಹೇಳಲು ಸಮರ್ಥರಾಗಲಿಲ್ಲವಂತೆ ಚಪ್ಪರ ಕೂಟದಲ್ಲಿ ಭಯದಿಂದ ಮೂಕರಾಗಿ ನಿಂತದರಿಂದ ‘ಮೂಕರು’ ಎಂಬ ಹೆಸರು ಇವರಿಗೆ ಬಂದಿತು. ಅದೇ ಕ್ರಮೇಣ ‘ಮುಕರಿ’ ಎಂದಾಯಿತು ಎಂದು ಹೇಳುತ್ತಾರೆ.

ಮುಕರಿಗಳಲ್ಲಿ ‘ಬಳ್ಳಿ’ ಪದ್ಧತಿ ರೂಢಿಯಲ್ಲಿದೆ. ಮುಖ್ಯವಾಗಿ ಇವರಲ್ಲಿ ಅನೇಕ ‘ಬಳ್ಳಿ’ಗಳು ಕಂಡುಬರುತ್ತವೆ. ಅವುಗಳಲ್ಲಿ ಕೆಲವು ಪ್ರಾಣಿಗಳಿಗೆ ಮತ್ತು ಇನ್ನು ಕೆಲವು ವನಸ್ಪತಿಗಳಿಗೆ ಸಂಬಂಧಿಸಿವೆ. ಅಂದರೆ,ಇವರ ಮೂಲದಲ್ಲಿ ಆಯಾ ಪ್ರಾಣಿಗಳಿಗೆ ಮತ್ತು ಇನ್ನು ಕೆಲವು ವನಸ್ಪತಿಗಳಿಗೆ ಸಂಬಂಧಿಸಿವೆ. ಅಂದರೆ, ಇವರ ಮೂಲದಲ್ಲಿ ಆಯಾ ಪ್ರಾಣಿಗಳಿಗೆ ಅಥವಾ ವನಸ್ಪತಿಗಳಿಗೆ ಸಂಬಂಧಿಸಿವೆ. ಅಂದರೆ, ಇವರ ಮೂಲದಲ್ಲಿ ಆಯಾ ಪ್ರಾಣಿಗಳಿಗೆ ಅಥವಾ ವನಸ್ಪತಿಗಳಿಗೆ ತಾವು ಸೇರಿದವರೆಂದು ನಂಬುತ್ತಾರೆ. ಇವರಲ್ಲಿ ರೂಢಿಯಲ್ಲಿರುವ ಬಳ್ಳಿಗಳು-‘ಕನ್ನೆಬಳ್ಳಿ’, ‘ತೋಳನಬಳ್ಳಿ’, ‘ಶೆಂಡಿಬಳ್ಳಿ’, ‘ಕೌಡ್ಚಿಬಳ್ಳಿ’, ‘ಆನೆಬಳ್ಳಿ’, ‘ಶಿರಿನಬಳ್ಳಿ’, ‘ದ್ಯಾವನಬಳ್ಳಿ’, ‘ಹಂದಿಬಳ್ಳಿ’, ‘ಹೆಬ್ಬಳಬಳ್ಳಿ’ ಇತ್ಯಾದಿ ಇವರಲ್ಲಿ ಒಂದೇ ಬಳ್ಳಿಯ ವಿವಾಹ ನಿಷಿದ್ಧ. ಉತ್ತರ ಕನ್ನಡದಲ್ಲಿ ಕೆಲವು ಬುಡಕಟ್ಟು ಸಮುದಾಯಗಳಲ್ಲಿ ಬಳ್ಳಿ ಪದ್ಧತಿ ಇದ್ದರೂ ಕೌಡ್ಚಿಬಳ್ಳಿ, ಹೆಬ್ಬಳಬಳ್ಳಿಗಳು ಮುಕರಿಗಳಲ್ಲಿ ಮಾತ್ರ ಕಂಡುಬರುತ್ತದೆ.

ಇವರಲ್ಲಿ ವಧುದಕ್ಷಿಣೆಗೆ ‘ತೆರ’ ಎಂದು ಹೇಳುತ್ತಾರೆ. ವಧುದಕ್ಷಿಣೆಯ ಮೊತ್ತ ಇನ್ನೂರು ರೂಪಾಯಿಗಳಿಂದ ಐದು ನೂರು ರೂಪಾಯಿಗಳವರೆಗೂ ಇರುತ್ತದೆ. ಇವರಲ್ಲಿ ನಾಲ್ಕು ಅಥವಾ ಐದು ದಿನಗಳ ಮದುವೆ ಇಂದು ಕೂಡ ರೂಢಿಯಲ್ಲಿದೆ. ಮುಕರಿಗಳಲ್ಲಿ ವಿಧವಾ ವಿವಾಹಕ್ಕೆ ಮನ್ನಣೆಯಿದೆ. ಹೀಗೆ ಮದುವೆಯಾಗುವ ಗಂಡು-ಹೆಣ್ಣು ಮದುವೆಗೆ ಮುಂಚೆಯೇ ಕೂಟದ ಅಧಿಕಾರಿಗಳ ಅನುಮತಿ ಪಡೆಯಬೇಕು. ಗಂಡನಿಂದ ದೂರಾದವಳು, ಗಂಡನು ಜೀವಿಸುವವರೆಗೆ ಬೇರೆ ಮದುವೆಯಾಗುವಂತಿಲ್ಲ. ಆದರೆ ಗಂಡನು ಮದುವೆಯಾಗಬಹುದು. ಗಂಡನಿಂದ ತ್ಯಜಿಸಲ್ಪಟ್ಟವಳಿಗೆ ಸಹಪಂಕ್ತಿ ಭೋಜನ ನಿಷಿದ್ಧ. ಇವರು ವೀರಭದ್ರ, ಜಟಗ, ಮಾಸ್ತಅಮ್ಮ, ವೆಂಕಟರಮಣ, ಹನುಮಂತ, ತುಳಸಿ, ನಾಗನಕಲ್ಲನ್ನು ಪೂಜಿಸುತ್ತಾರೆ. ಇವರಲ್ಲಿ ಜಮೀನನ್ನು ಹೊಂದಿರುವವರು ಬಹಳ ಕಡಿಮೆ. ಪರಂಪರಾಗತವಾದ ಕೂಲಿ ಕೆಲಸವೇ ಇವರ ಮುಖ್ಯವಾದ ಉದ್ಯೋಗ. ದಿನಗೂಲಿಯ ಮೇಲೆ ಜೀವಿಸುವ ಇವರಲ್ಲಿ ಸ್ತ್ರೀಯರೂ, ಮಕ್ಕಳೂ ಕೂಲಿಕೆಲಸಕ್ಕೆ ಹೋಗುತ್ತಾರೆ. ಇತ್ತೀಚೆಗೆ ಕೆಲವರು ಸಣ್ಣಪುಟ್ಟ ವ್ಯಾಪಾರಗಳಲ್ಲಿ ತೊಡಗಿದವರು ಇದ್ದಾರೆ. ಕೆಲವರು ಸರ್ಕಾರಿ ಹಾಗೂ  ಖಾಸಗಿ ಸಂಸ್ಥೆಗಳಲ್ಲಿ ಸಣ್ಣಪುಟ್ಟ ನೌಕರಿಗೆ ಸೇರಿದವರು ಇದ್ದಾರೆ. ಇವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಜೀವನ ಸುಧಾರಣೆಯಾಗುವ ಅಗತ್ಯ ಮತ್ತು ಅವಶ್ಯಕತೆ ಇದೆ.

ನೋಡಿ:

ಭಟ್, ಎಲ್.ಜಿ. ೧೯೮೫, ಉತ್ತರ ಕನ್ನಡ ಮುಕರಿಗಳು,  ಐ.ಬಿ.ಎಚ್. ಪಬ್ಲಿಕೇಷನ್ಸ್, ಬೆಂಗಳೂರು

ಶೆಟ್ಟಿ, ಶ್ರೀಪಾದ, ೧೯೯೮, ಮುಕರಿಯರು,  (ಸಂ.) ಎಚ್.ಜೆ.ಲಕ್ಕಪ್ಪಗೌಡ, ಕರ್ನಾಟಕದ ಬುಡಕಟ್ಟುಗಳು, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ.