ಮುಗೇರ ಎಂಬ ಜಾತಿ ಸೂಚಕ ಪದ ಇತ್ತೀಚೆಗೆ ಹೆಚ್ಚು ಬಳಕೆಯಲ್ಲಿ ಬಂದಿದೆಯಾದರೂ ಇದಕ್ಕೆ ಪರ್ಯಾಯ ‘ಮೇರ’ ಎಂಬುದೇ ಸಾರ್ವತ್ರಿಕ ಬಳಕೆಯ ಪದವಾಗಿದೆ. ಮುಗೇರರನ್ನು ಪುತ್ತೂರು, ಬೆಳ್ತಂಗಡಿ ಮತ್ತು ಸುಳ್ಯ ಪ್ರದೇಶಗಳಲ್ಲಿ ‘ಮೇರರು’ ಎಂದು ಕರೆದರೆ, ತುಳುನಾಡಿನ ಇತರ ಪ್ರದೇಶಗಳಲ್ಲಿ ಮುಗೇರ, ಮುಗ್ಗೇರ, ಮೋಗೇರ, ಇತ್ಯಾದಿಯಾಗಿ ಕರೆಯುತ್ತಾರೆ. ಮೊಲಕ್ಕೆ ತುಳುವಿನಲ್ಲಿ ಮೇರ್, ಮೆಯ್ಯೆರ್, ಮುಗೇರ್, ಎಂಬುದು ಸಂವಾದಿ ಪದವಾಗಿದೆ. ಓಟಕ್ಕೆ ಪ್ರಸಿದ್ಧಿಯಾದ ಮೊಲವನ್ನು ಅಟ್ಟಿಸಿ ಬೇಟೆಯಾಡುವುದರಲ್ಲಿ ಪ್ರಸಿದ್ಧರಾದುದರಿಂದ ‘ಮುಗೇರರು’, ‘ಮೇರರು’, ಎಂದು ಹೆಸರು ಬಂದಿದೆ. ಮುಗೇರರನ್ನು ಜಾತಿಸೂಚಕವಾಗಿ ‘ಮೇರರು’ಎಂದು ಕರೆಯುತ್ತಿದ್ದರು. ಇವರ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಗುರುತಿಸಿದಾಗ ‘ಮೇರ’ ಎಂಬ ಪದದ ಬಳಕೆ ಕಂಡುಬರುವುದಿಲ್ಲ. ತುಳುನಾಡಿನಲ್ಲಿ ದಲಿತರಲ್ಲಿಯೇ ಅತೀ ಹೆಚ್ಚಿನ ಜನಸಂಖ್ಯೆಯನ್ನು ಮುಗೇರರು ಹೊಂದಿದ್ದಾರೆ. ಯಾವುದೇ ಒಂದು ನಿರ್ದಿಷ್ಟ ಸ್ಥಳಗಳಲ್ಲಿ ಇವರು ವಾಸಿಸದೆ ತುಳುನಾಡಿನ ಪ್ರತಿಯೊಂದು ಗ್ರಾಮಗಳಲ್ಲಿಯೂ ಮುಗೇರರು ಕಂಡುಬರುತ್ತಾರೆ. ಇವರು ತುಳು ಮತ್ತು ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ.

ಮುಗೇರರಲ್ಲಿ ಕೊರ್ಮೆರ್, ಬಂಗೇರ, ಸಾಲಿಯಾನ, ಕುಂಡದಣ್ಣ, ಮಂಜದಣ್ಣ, ಎರದಣ್ಣ, ಬೀಮದಣ್ಣ, ಕುರ್ಮೇದಣ್ಣ, ಮಟ್ಟೆದಣ್ಣ, ಪೂವದನ್ನ, ಅರ್ಪುದನ್ನ, ಉಪ್ಪೆನ್ನ, ಮಾರದಣ್ಣ, ಮಂಜದಣ್ಣ, ಭದ್ರದನ್ನ, ಕನಪ್ಪನ್ನ, ಪುಲ್ಲೇಟ್ಟನ್ನ, ಮರ್ದೆರ್ ಮುಂತಾದ ಬಳ್ಳಿಗಳು ಕಂಡುಬರುತ್ತವೆ. ಮುಗೇರರಲ್ಲಿ ಸಮಾನ ಬಳ್ಳಿಗಳಲ್ಲಿ ಮದುವೆ ನಡೆಯುವುದಿಲ್ಲ. ಕೂರ್ಮರ್ ಬಳ್ಳಿಯೇ ಅತೀ ಶ್ರೇಷ್ಠವೆಂದು, ಈ ಬಳ್ಳಿಯ ಹೆಣ್ಣುಗಳನ್ನೇ ಮದುವೆಯಾಗಲು ಹೆಚ್ಚಾಗಿ ಎಲ್ಲರೂ ಇಷ್ಟಪಡುತ್ತಾರೆ. ಬಳ್ಳಿಗಳು ತಂದೆಯಿಂದ ಮಕ್ಕಳಿಗೆ ಬರದೆ, ತಾಯಿಯ ಬಳ್ಳಿಯಿಂದ ಮಕ್ಕಳನ್ನು ಗುರುತಿಸುತ್ತಾರೆ. ಇವರ ಕುಟುಂಬದಲ್ಲಿ ಯಾವುದೇ ಧಾರ್ಮಿಕ ಸಾಂಪ್ರದಾಯಿಕ ಕಾರ್ಯಕ್ರಮಗಳಲ್ಲಿ ಸೋದರ ಮಾವನಿಗೆ ಪ್ರಮುಖ ಸ್ಥಾನ ಇದೆ. ಈ ಅಂಶದಿಂದ ಮುಗೇರರಲ್ಲಿ ಮಾತೃಪ್ರಧಾನ ಕುಟುಂಬ ಪದ್ಧತಿಯಿತ್ತು ಎಂದು ಕಂಡುಬರುತ್ತದೆ. ಆದರೆ ಈಗ ಪುರುಷ ಸಂತತಿಗೆ ಮಾನ್ಯತೆ ಬರತೊಡಗಿದೆ. ಕುಟುಂಬದಲ್ಲಿ ಗಂಡು ಹೆಣ್ಣಿಗೆ ಸಮಾನ ಅವಕಾಶ ಹಾಗೂ ಸ್ಥಾನಮಾನಗಳಿವೆ. ಇದಕ್ಕೆ ಮುಖ್ಯ ಕಾರಣ ಹೆಣ್ಣು, ಗಂಡಿನಷ್ಟೇ ದುಡಿಮೆಯಲ್ಲಿ ಪಾಲ್ಗೊಳ್ಳುವುದು. ಯಾವುದೇ ಸ್ಥಿರವಾದ ಆರ್ಥಿಕ ಆಧಾರಗಳಿಲ್ಲದಿರುವುದರಿಂದ ಇಬ್ಬರ ದುಡಿಮೆಯನ್ನು ಇವರು ಅವಲಂಬಿಸಿರಬೇಕಾಗುತ್ತದೆ.

ಮೂಲದಲ್ಲಿ ಬೇಟೆಯಾಡುವುದು ಮತ್ತು ಮೀನು ಹಿಡಿಯುವುದು ಇವರ ಕಸುಬಾಗಿತ್ತು. ಇದಕ್ಕೆ ಈಗಲೂ ಈ ಸಮುದಾಯದಲ್ಲಿ ಹಲವಾರು ಆಧಾರಗಳು ಸಿಗುತ್ತವೆ. ಇತ್ತೀಚೆಗೆ ಕೃಷಿಯಲ್ಲಿ, ಅಡಿಕೆ ತೋಟದ ಕೆಲಸ, ಕಲ್ಲು ಒಡೆಯುವುದು, ಇತ್ಯಾದಿ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈ ವೃತ್ತಿಯ ಜೊತೆಗೆ ಇವರಿಗೆ ಬಂದಿರುವ ಇನ್ನೊಂದು ವೃತ್ತಿ ಕಳ್ಳು ಇಳಿಸುವುದು. ಭೂ ಒಡೆತನವನ್ನು ಪಡೆದಿರುವ ಮುಗೇರರು ಬಹಳ ಕಡಿಮೆ. ಇತ್ತೀಚೆಗೆ ಕೃಷಿ ಯೋಗ್ಯವಲ್ಲದ ಭೂಮಿಯನ್ನು ತಮ್ಮದಾಗಿಸಿಕೊಂಡು ಅಲ್ಪಸ್ವಲ್ಪ ಕೃಷಿಯಲ್ಲಿ ತೊಡಗಿದ್ದಾರೆ. ದೈಹಿಕ ಶ್ರಮವನ್ನು ಅವಲಂಬಿಸಿ ಬದುಕುತ್ತಿದ್ದಾರೆ. ಇತ್ತೀಚೆಗೆ ಸ್ವಲ್ಪ ವಿದ್ಯಾಭ್ಯಾಸವನ್ನು ಪಡೆದು ಸರಕಾರಿ ನೌಕರಿಯನ್ನು ಪಡೆದುಕೊಂಡಿದ್ದಾರೆ. ಆಧುನಿಕ ಸಾಮಾಜಿಕ ಸಂಸ್ಥೆಗಳ ಜೊತೆ ಇವರ ಸಂಬಂಧ ಸ್ವಲ್ಪಮಟ್ಟಿಗೆ ಕಡಿಮೆ ಎಂದು ಹೇಳಬಹುದು. ಇವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಜೀವನ ಸುಧಾರಣೆಯಾಗುವ ಅವಶ್ಯಕತೆ ಇದೆ.

ನೋಡಿ:

ಅಭಯ ಕುಮಾರ್, ಕೌಕ್ರಾಡಿ, ೧೯೯೭. ಮುಗೇರ, ಜನಾಂಗ ಜಾನಪದ ಅಧ್ಯಯನ,  ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು