ಮುಸ್ಲಿಮ್‌ರು ಕರ್ನಾಟಕಕ್ಕೆ ಮೂರು ಹಂತಗಳಲ್ಲಿ ಬಂದಿದ್ದಾರೆ. ಎಂದು ಇತಿಹಾಸಕಾರರು ಗುರುತಿಸಿದ್ದಾರೆ. ಮೊದಲನೇಯ ಹಂತ ಅರಬ್ಬರು ಬಹಳ ಹಿಂದಿನಿಂದಲೂ ಕರ್ನಾಟಕದ ಕರಾವಳಿ ಪ್ರದೇಶಕ್ಕೆ ವ್ಯಾಪರಕ್ಕಾಗಿ ಬಂದು ಹೋಗುತ್ತಿದ್ದರು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುವ ಮಾಪಿಳ್ಳೆಗಳು, ಬ್ಯಾರಿಗಳು ಹಾಗೂ ನವಾಯತರು ಭಾರತಕ್ಕೆ ಅರೇಬಿಯದಿಂದ ವ್ಯಾಪಾರಕ್ಕಾಗಿ ಬಂದ ಸಂತತಿಯವರು. ಇವರ ಜೊತೆ ಬಂದ ಮುಸ್ಲಿಮ್ ಧರ್ಮವು ಕರ್ನಾಟಕದ ಕರಾವಳಿಯುದ್ದಕ್ಕೂ ಹರಡಿತು. ನಂತರ ದಿನಗಳಲ್ಲಿ ಮುಸ್ಲಿಮ್‌ರು ನಿಧಾನವಾಗಿ ಕರ್ನಾಟಕದ ಒಳನಾಡುಗಳಿಗೆ ಪಸರಿಸಿದ್ದರು.

ಎರಡನೆಯ ಹಂತದಲ್ಲಿ ಮುಸ್ಲಿಮ್ ಧರ್ಮವು ಕರ್ನಾಟಕದಲ್ಲಿ ಹರಡಿದ್ದು ಉತ್ತರದಿಂದ ಬಂದ ಧರ್ಮ ಪ್ರಚಾರಕರಿಂದ, ಮೂರನೇ ಹಂತ ಕರ್ನಾಟಕವನ್ನು ಆಳಿದ ಬಹುಮನಿ ಮತ್ತು ಆದಿಲ್‌ಶಾಹಿ ಸಂತತಿಗಳ ಆಳ್ವಿಕೆಯ ಕಾಲದಲ್ಲಿ. ಇವರ ಆಡಳಿತಕಾಲದಲ್ಲಿ ಕರ್ನಾಟಕಕ್ಕೆ ಹಲವಾರು ಸೂಫಿಸಂತರು ಕರ್ನಾಟಕಕ್ಕೆ ಬರುತ್ತಾರೆ. ಅವರಲ್ಲಿ ಅತ್ಯಂತ ಮುಖ್ಯವಾದ ಬಂದೆನವಾಜ್ ಎಂಬ ಸೂಫಿಯು ದೆಹಲಿಯಿಂದ ಕರ್ನಾಟಕಕ್ಕೆ ಬರುತ್ತಾನೆ. ಸೂಫಿಗಳ ಮುಖ್ಯ ಉದ್ದೇಶ ಸಮಾನತೆಯನ್ನು ಸಾರುವುದೇ ಹೊರತು ಮತಾಂತರವಲ್ಲ. ಆದರೆ ಸೂಫಿಗಳಿಂದ ಪ್ರಭಾವಿತರಾಗಿ ಕರ್ನಾಟಕದಲ್ಲಿ ಹಲವಾರು ತಳಜಾತಿಯ ಜನರು ಮುಸ್ಲಿಮ್‌ಧರ್ಮವನ್ನು ಸ್ವೀಕರಿಸುತ್ತಾರೆ. ಮುಸ್ಲೀಮ್‌ರಲ್ಲಿ ಶಿಯಾ, ಸುನ್ನಿ, ಮಹಮದೀಯ  ಇತ್ಯಾದಿ ಪಂಗಡಗಳಿವೆ. ಇವು ಕರ್ನಾಟಕದ ಎಲ್ಲ ಪ್ರದೇಶಗಳಲ್ಲಿ ಕಂಡು ಬರುತ್ತವೆ. ಈ ಪಂಗಡಗಳು ಇಸ್ಲಾಂ ಧಾರ್ಮಿಕ ತತ್ವಗಳ ಹಿನ್ನೆಲೆಯಲ್ಲಿ ಹುಟ್ಟಿಕೊಂಡವು. ಆದರೆ ಹಿಂದು ಸಾಮಾಜಿಕ ರಚನೆಯಲ್ಲಿ ವೃತ್ತಿ ಮತ್ತು ಕಸುಬು ಆಧಾರಿತ ಸಮುದಾಯಗಳು ಇರುವಂತೆ ಮುಸ್ಲಿಮ್‌ರಲ್ಲಿಯು ಕಂಡುಬರುತ್ತದೆ.

ಈ ರೀತಿಯ ಸಮುದಾಯಗಳು ಬಹಮನಿ ಮತ್ತು ಆದಿಲ್‌ಶಾಹಿಗಳು ಅತ್ಯಂತ ಪ್ರಬಲವಾಗಿ ಆಡಳಿತ ನಡೆಸಿದ ಕರ್ನಾಟಕದ ಉತ್ತರ ಒಳನಾಡುಗಳಲ್ಲಿ ಕಂಡುಬರುತ್ತದೆ. ಈ ಸಮುದಾಯಗಳು ಹೇಗೆ ಹುಟ್ಟಿಕೊಂಡವು ಎಂಬುದು ಚರ್ಚಾಸ್ಪದ ವಿಷಯ. ಆದರೆ ನಮ್ಮ ಗ್ರಹಿಕೆಯ ಹಿನ್ನೆಲೆಯಲ್ಲಿ ಬಹಮನಿ ಆದಿಲ್‌ಶಾಹಿ ಆಳ್ವಿಕೆಯ ಕಾಲದಲ್ಲಿ ಅನೇಕ ಚಾರಿತ್ರಿಕ ಕಾರಣಗಳು ಹಾಗೂ ಒತ್ತಡಗಳಿಂದ ಸಾಮಾಜಿಕ ಸಮಾನತೆಗಾಗಿ ಕೆಲವು ತಳಜಾತಿಯ ಜನರು ಮತಾಂತರವಾಗಿರಬಹುದು. ಇತ್ತೀಚಿನ ಕರ್ನಾಟಕದ ರಾಜಕೀಯ ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮವಾಗಿ ಗಮನಿಸಿ ವಿಶ್ಲೇಷಿಸಿದರೆ, ಮುಸ್ಲಿಮ್‌ರು ಕರ್ನಾಟಕದ ರಾಜಕೀಯದಲ್ಲಿ ತಮ್ಮದೇ ಆದ ಪ್ರಾಬಲ್ಯವನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗೆ ಮುಸ್ಲಿಮ್ ಧರ್ಮವನ್ನು ಪಾಲಿಸುವ ಜನರು ಕರ್ನಾಟಕದಲ್ಲಿ ಹಲವಾರು ರೂಪಾಂತರಗಳಲ್ಲಿ ಕಂಡುಬರುತ್ತಾರೆ.

 

ಮುಸ್ಲಿಮ್ : ಕಸಾಯಿ

ಸಾಯಿ ಮುಸ್ಲಿಮ್, ಸಾಮಾನ್ಯವಾಗಿ ಗೋ-ಕಸಾಯಿಗಳು ಎಂದೇ ಕರೆಯುತ್ತಾರೆ. ದನ-ಕಟುಕರು, ಕಟುಕ ಅಥವಾ ಕಟುಕರ್ ಹಾಗೂ ಖುರೇಷಿ ಇವರ ಇತರೆ ಹೆಸರುಗಳು. ಇವರು ಸಾಂಪ್ರದಾಯಿಕ ಕಟುಕ ವೃತ್ತಿಯವರು ಇವರನ್ನು ರಾಜ್ಯಾದ್ಯಂತ ಕಾಣಬಹುದು. ಇವರು ಹಳ್ಳಿಗಿಂತ ಪಟ್ಟಣಗಳಲ್ಲಿ ಹೆಚ್ಚಾಗಿದ್ದಾರೆ. ಉರ್ದು ಇವರ ಮಾತೃಭಾಷೆಯಾದರೂ, ಕನ್ನಡದಲ್ಲಿ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಈ ಸಮುದಾಯದ ಜನರು ತಾವು ಶೇಖರೆಂದು ಪ್ರತಿಪಾದಿಸುತ್ತಾರೆ. ರಕ್ತ ಸಂಬಂಧ ಹಾಗೂ ದೂರ ಸಂಬಂಧಗಳೆರಡರಲ್ಲೂ ಮದುವೆಗಳೂ ಸಾಧ್ಯವಿದೆ. ಬಹುಪತ್ನಿತ್ವಕ್ಕೆ ಅವಕಾಶವಿದ್ದರೂ ಅಂತಹ ಉದಾಹರಣೆಗಳು ಕಡಿಮೆ. ವಿವಾಹ ವಿಚ್ಛೇದನ, ಮರುವಿವಾಹ ಹಾಗೂ ಆಸ್ತಿ ಹಂಚಿಕೆಯ ವಿಚಾರಗಳಲ್ಲೂ ಇಸ್ಲಾಂ ಕಟ್ಟಳೆಗಳನ್ನೇ ಪಾಲಿಸುತ್ತಾರೆ. ಹೆರಿಗೆಗೆ ಮುನ್ನ ‘ಗೋದ್ ಭರನಾ’ ಎಂಬ ಸಾಂಪ್ರದಾಯಿಕ ಕಾರ್ಯಗಳನ್ನು ಹಾಗೂ ಹೆರಿಗೆಯ ನಂತರ ನಾಮಕರಣ, ‘ಸುನ್ನತಿ’ ಕಾರ್ಯಗಳನ್ನು ಮಾಡುತ್ತಾರೆ. ಮದುವೆಯ ಆಚರಣೆಗಳಲ್ಲಿ ನಿಶ್ಚಿತಾರ್ಥ, ಕಬೂಲ್‌ಕಿಯಾ, ಲಚ್ಚಾಕಟ್ಟುವುದು ಹಾಗೂ ಜಲ್ಪಗಳು ಸೇರಿವೆ. ಶವವನ್ನು ಹೂಳಿ, ತಿಥಿ ಕಾರ್ಯವನ್ನು ಇಪ್ಪತ್ತನೇ ಹಾಗೂ ನಲವತ್ತನೇ ದಿನ ಮಾಡುತ್ತಾರೆ.

ಸಾಂಪ್ರದಾಯಿಕವಾಗಿ ಮುಸ್ಲಿಮ್ ಕಸಾಯಿಗಳು ದನದ ಮಾಂಸ ಮಾರುವವರು. ದನ ಹಾಗೂ ಎಮ್ಮೆಗಳನ್ನು ಕಡಿಯಲಿಕ್ಕೆಂದು, ಅದನ್ನು ಡೋರ ಕೋಮಿನವರಿಗೆ (ಎಮ್ಮೆಗೆ ಸಂಬಂಧಪಟ್ಟಾಗಲಂತೂ ನಿರ್ದಿಷ್ಟವಾಗಿ ಮಾರುತ್ತಾರೆ. ಇವರಲ್ಲಿ ತುಂಬಾ ಕಡಿಮೆ ಜನರು ಸರ್ಕಾರಿ ಹಾಗೂ ಖಾಸಗಿ  ನೌಕರಿಯಲ್ಲಿದ್ದಾರೆ. ಕಸಾಯಿಯವರು ತಮ್ಮ ಕೋಮಿನ ಸಂಘಟನೆಯನ್ನು ಹೊಂದಿದ್ದಾರೆ. ಅದಕ್ಕೆ ‘ಜಮಾತ್’ ಎಂದು ಕರೆಯುತ್ತಾರೆ. ಅದರಲ್ಲಿ ಆಯ್ದ ಐದು ಜನರಿರುತ್ತಾರೆ. ಎಲ್ಲಾ ರೀತಿಯ ಜಗಳಗಳನ್ನು “ಜಮಾತ್‌”ಗೆ ಕಳಿಸಲಾಗುತ್ತದೆ. ಧಾರ್ಮಿಕ ವ್ಯಕ್ತಿಯನ್ನು ‘ಖಾಜಿ’ ಎಂದು ಕರೆಯುತ್ತಾರೆ. ಖಾಜಿಯು ಎಲ್ಲ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಡುತ್ತಾನೆ. ಆಧುನಿಕ ಶಿಕ್ಷಣ, ಆಧುನಿಕ ವೈದ್ಯಕೀಯ ಹಾಗೂ ಸಂಪರ್ಕ ಸಾಧನಗಳನ್ನು ಈ ಕೋಮಿನವರು ಬಳಸಿಕೊಳ್ಳುತ್ತಿದ್ದಾರೆ.

 

ಮುಸ್ಲಿಮ್ : ಖಾಕರ

ಖಾಕರ್ ಮುಸ್ಲಿಮ್ ಕೋಮುಗಳಲ್ಲಿ ಒಂದು. ಇವರಲ್ಲಿ ಎರಡು ಉಪಗುಂಪುಗಳಿವೆ, ಕಂಕಡ್‌ಜಿ ಹಾಗೂ ಉಮರ್‌ಜಿ ಎಂದು. ಇವರು ಸಹೋದರನಾಗಿ ಬೇರೆ ಬೇರೆ ಕಡೆ ವಾಸಿಸುತ್ತಿದ್ದರು. ಕಾಲಾಂತರದಲ್ಲಿ ಇವೇ ಎರಡು ಗುಂಪುಗಳಾದವು. ಆದರೆ ಇವರನ್ನು ಪ್ರಾಂತ್ಯದ ಆಧಾರದ ಮೇಲೆ ಬೇರೆ ಮಾಡಲಾಗಿದೆ. ಹದಿನೆಂಟನೇ ಶತಮಾನದ ಮಧ್ಯಭಾಗದಲ್ಲಿ ಇವರು ಅಫ್‌ಘಾನಿಸ್ತಾನದಿಂದ ವಲಸೆ ಬಂದವರು ಹಾಗೂ ಹೈದರಾಲಿ ಹಾಗೂ ಟಿಪ್ಪುವಿನ ಸೈನ್ಯದಲ್ಲಿ ಸೇವೆ ಸಲ್ಲಿಸಿದರು ಎಂದು ಹೇಳಿಕೊಳ್ಳುತ್ತಾರೆ. ಈ ಕೋಮಿನ ಹೆಸರು ಮೂಲತಃ ಇವರ ಮೂಲ ಪುರುಷನಾದ ‘ಕಂಕಡ್‌ಜಿ’ಯಿಂದ ಬಂದದ್ದು. ಇವರು ಉರ್ದು ಹಾಗೂ ಕನ್ನಡದಲ್ಲಿ ಮಾತನಾಡಬಲ್ಲರು.

ಇವರಲ್ಲಿ ರಕ್ತ ಸಂಬಂಧಿಗಳು ಹಾಗೂ ಸೋದರ ಸಂಬಂಧಿಗಳ ಜೊತೆ ಮದುವೆಗೆ ಅವಕಾಶವಿದೆ. ಆಸ್ತಿಯಲ್ಲಿ ಮನೆಯ ಹೆಣ್ಣುಮಕ್ಕಳಿಗೆ ಮೂರನೇ ಒಂದು ಭಾಗ ಸಿಗುತ್ತದೆ. ಉಳಿದ ಆಸ್ತಿಯನ್ನು ಗಂಡು ಮಕ್ಕಳಲ್ಲಿ ಸಮನಾಗಿ ಹಂಚಲಾಗುತ್ತದೆ. ತಂದೆ ನಂತರ ಕುಟುಂಬದ ಹಿರಿಯ ಮಗ ಉತ್ತರಾಧಿಕಾರಿಯಾಗುತ್ತಾನೆ. ಹೆರಿಗೆಗೆ ಮುನ್ನ ‘ಗೋಧ್ ಭರನಾ’ ಎನ್ನುವ ಕಾರ್ಯ ಮಾಡುತ್ತಾರೆ. ಇವರ ಮದುವೆಯ ಆಚರಣೆಗಳಲ್ಲಿ ‘ಮಂಗನಿ’, ‘ಮೆಹರ’, ‘ನಿಕಾಹ’, ‘ವಾಲಿಮ’ ಮುಖ್ಯವಾದವು. ಶವವನ್ನು ಹೂಳುತ್ತಾರೆ ಹಾಗೂ ಪ್ರಾರ್ಥನೆ ಮಾಡುತ್ತಾರೆ. ಜಿಯಾರತ್ ಹಾಗೂ ಚಾಲಿಕಹಾಮ್ ಆಚರಣೆಗಳನ್ನು ಹದಿನಾಲ್ಕನೇ ದಿನ ಮಾಡುತ್ತಾರೆ. ಇವರು ಆಧುನಿಕ ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಯೋಜನೆಗಳ ಇತ್ಯಾದಿ ಆಧುನಿಕ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಇವರ ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ.

 

ಮುಸ್ಲಿಮ್ : ಛಪ್ಪರ ಬಂದ

ಪ್ಪರ ಬಂದ ಹೆಸರು “ಛಾಪಾ” ಎಂದರೆ “ಮುದ್ರೆ” ಎನ್ನುವ ಪದದಿಂದ ಬಂದಿದೆ. ಇವರು ಖೋಟಾನೋಟಗಳನ್ನು ತಯಾರಿಸುವವರಾಗಿದ್ದರು ಥರ್ಸ್ಟನ್ (೧೯೦೯) ಅವರು ‘ಛಪ್ಪರ’ ಎಂದರೆ ‘ಛಾವಣಿ’ ‘ಬಂದ’ ಎಂದರೆ ಹೊದೆಸುವವ. ಈ ಸಮುದಾಯದವರ ಸಾಂಪ್ರದಾಯಿಕ ವೃತ್ತಿ ಛಾವಣಿಗೆ ಹುಲ್ಲು ಹೊದೆಸುವುದು. ಮೌಖಿಕ ಪರಂಪರೆ ಪ್ರಕಾರ ಬಿಹಾರದಿಂದ ವಲಸೆ ಬಂದವರು ಎಂದು ಹೇಳಲಾಗುತ್ತದೆ. ಬೆಳಗಾವಿ, ಬಿಜಾಪುರ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಮರಾಠಿಯ ಒಂದು ಉಪಭಾಷೆಯನ್ನು ಮಾತನಾಡುತ್ತಾರೆ. ಉರ್ದು ಹಾಗೂ ಕನ್ನಡವನ್ನು ಇತರರೊಂದಿಗೆ ಮಾತನಾಡಲು ಬಳಸುತ್ತಾರೆ. ತಮ್ಮ ಖಾಸಗಿ ಗುಟ್ಟುಗಳಿಗೆ ಒಂದು ಥರದ ಒರಟು ಭಾಷೆಯನ್ನು ಬಳಸುತ್ತಾರೆ.

ಛಪ್ಪರ ಬಂದರಲ್ಲಿ ನಾಲ್ಕು ಉಪ ಪಂಗಡಗಳಿವೆ, ಅವೆಂದರೆ ಬಡೇಭಾಯಿ, ನನ್ಹೆಭಾಯಿ, ಚೆಗಾಂದೆ ಹಾಗೂ ಬರಗಾಂದೆ. ಬಡೇಭಾಯಿ ಉಪಗುಪಂಉ, ನನ್ಹೆಭಾಯಿ ಉಪಗುಂಪಿಗಿಂತಲೂ ಸಾಮಾಜಿಕ ಸ್ಥಾನಮಾನಗಳಲ್ಲಿ ಉನ್ನತವಾದುದೆಂದು ಭಾವಿಸಲಾಗಿದೆ. ರಕ್ತಸಂಬಂಧಿ ಮದುವೆಗಳು ನಡೆಯಲು ಅವಕಾಶ ಇದೆ. ಹಿರಿಯ ಮಗನಿಗೆ ತಂದೆಯ ನಂತರ ಮನೆಯ ವಾರಸುದಾರಿಕೆ ಲಭಿಸುತ್ತದೆ. ಹೆರಿಗೆಗೆ ಮುನ್ನ ‘ಸತ್ಪಸ’ ಅಥವಾ ‘ಗೋಧ್‌ಭರನ’ ಕಾರ್ಯವನ್ನು ಮಗು ಹುಟ್ಟಿದ ದಿನವೆ ಮಾಡುತ್ತಾರೆ. ಜನನ ಸೂತಕವು ನಲವತ್ತು ದಿನಗಳವರೆಗೆ ಇದ್ದು, ನಂತರ ಶುದ್ಧೀಕರಣ ಕಾರ್ಯವನ್ನು ಮಾಡುತ್ತಾರೆ. ಋತುಮತಿಯಾದ ‘ಫೂಲ ಚಡನಾ’ ಕಾರ್ಯ ಮಾಡಿಸುತ್ತಾರೆ. ಮದುವೆಯ ಕಾರ್ಯಗಳಲ್ಲಿ ಮಾಂಗನಿ (ನಿಶ್ಚಿತಾರ್ಥ), ಗೋಧ್‌ಭರನಾ, ಅರಿಶಿಣ ಹಚ್ಚುವುದು, ನಿಕಾಹ್ಮ, ಕಬೂಲ್‌ಕಿಯಾ, ಜಿಲ್ವ, ಲಚ್ಚಾ ಹಾಗೂ ಮೆಹರ ಮುಖ್ಯವಾದವು.

ಇತ್ತೀಚಿನ ದಿನಗಳಲ್ಲಿ ಇವರು ವ್ಯವಸಾಯ ಹಾಗೂ ಕಾರ್ಖಾನೆಗಳಲ್ಲಿ ಕೂಲಿಗಳಾಗಿ ದುಡಿಯುತ್ತಿದ್ದಾರೆ. ಜೊತೆಗೆ ಹೆಣ್ಣು ಮಾರುವುದು, ಚಿಲ್ಲರೆ ವ್ಯಾಪಾರ, ಬಡಗಿಗಳು, ಚಾಲಕರು, ಕಲ್ಲು ಒಡೆಯುವ, ಇತ್ಯಾದಿ ವೃತ್ತಿ ಮಾಡುತ್ತಿದ್ದಾರೆ. ಇವರು ಇಸ್ಲಾಂ ಧರ್ಮವನ್ನು ಪಾಲಿಸುತ್ತಾರೆ. ಇವರು ಲಿಂಗಾಯತ, ಮತ್ತು ಇತರೆ ಮುಸ್ಲಿಂ ಸಮುದಾಯಗಳ ಜೊತೆ  ಸಾಮಾಜಿಕ ಸಂಪರ್ಕವನ್ನು ಹೊಂದಿದ್ದಾರೆ. ಆಧುನಿಕ ಸಾಮಾಜಿಕ ವ್ಯವಸ್ಥೆಗಳ, ಅಭಿವೃದ್ಧಿ ಕಾರ್ಯಕ್ರಮಗಳ ಎಲ್ಲ ಸೌಲಭ್ಯಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ರಾಜಕೀಯ ಪರಿಸ್ಥಿತಿ ಸುಧಾರಿಸಬೇಕಾಗಿದೆ.

 

ಮುಸ್ಲಿಮ್ : ಜಾತಿಗಾರ

ಜಾತಿಗಾರ, ಒಂದು ಅಲೆಮಾರಿ ಸಮುದಾಯ. ಬಿಜಾಪುರ, ಬಾಗಲಕೋಟೆ, ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರು ಸುನ್ನಿ ಮುಸ್ಲಿಂ ಗುಂಪಿಗೆ ಸೇರುತ್ತಾರೆ. ಮನೆಯಲ್ಲಿ ಉರ್ದು ಬಳಸುತ್ತಾರೆ. ಸಾರ್ವಜನಿಕ ಬದುಕಿನಲ್ಲಿ ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿ ಬಳಸುತ್ತಾರೆ. ಇವರದು ಒಂದೇ ಗೋತ್ರದ ಕೋಮು ಆದ್ದರಿಂದ ಇವರು ರಕ್ತ ಸಂಬಂಧಿಗಳಲ್ಲಿ ಹಾಗೂ ನೇರ ಸಂಬಂಧಿಗಳ ಮದುವೆ ರೂಢಿಯಲ್ಲಿದೆ. ಸೋದರ ಸಂಬಂಧಿ ವಿವಾಹ ಇವರಲ್ಲಿ ಕಂಡುಬರುತ್ತದೆ. ಮದುವೆಯಲ್ಲಿ ಮೆಹರ್ ಹಣವನ್ನು ಸೂಚಿಸುತ್ತಾರೆ. ಇವರ ಮದುವೆಯ ಮುಖ್ಯ ಆಚರಣೆಗಳೆಂದರೆ ‘ನಿಕಾಹ್’ ಹಾಗೂ ‘ಜಲ್ವ’.

ಇವರ ಸಾಂಪ್ರದಾಯಿಕ ವೃತ್ತಿಯೆಂದರೆ ಎತ್ತಿನ ಕೋಡುಗಳನ್ನು ಕೆತ್ತುವುದು, ಕುದುರೆ ಹಾಗೂ ಎತ್ತಿಗೆ ಲಾಳ ಹೊಡೆಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ವೃತ್ತಿಗಳು ಹೆಚ್ಚು ಲಾಭದಾಯಕವಾಗಿಲ್ಲ. ಆದ್ದರಿಂದ ಕೆಲವರು ಕೃಷಿ ಕೂಲಿಗಳಾಗಿ ಕೆಲಸ ಮಾಡುತ್ತಾರೆ. ಭೂಮಿಯಿಲ್ಲದವರು ಬಟ್ಟೆ ಹೊಲಿಯುವುದು ಹಾಗೂ ಚಿಲ್ಲರೆ ವ್ಯಾಪಾರದ ಅಂಗಡಿಗಳನ್ನು ನಡೆಸುತ್ತಾರೆ. ಇವರಿಗೆ ಧಾರ್ಮಿಕ ಕ್ರಿಯಾಚರಣೆ ನಡೆಸಲು ‘ಕಾಜೀ’ ಹಾಗೂ ‘ಮುಲ್ಲಾ’ ಇದ್ದಾರೆ. ಧಾರ್ಮಿಕ ಆಚರಣೆಗಳಲ್ಲಿ ಇವರ ಸಹಾಯ ಬೇಕು. ಮೊಹರಂ, ಬ್ರಕೀದ್, ರಂಜಾನ್ ಹಾಗೂ ಈದ್ ಮಿಲಾದ್-ಹಬ್ಬಗಳನ್ನು ಆಚರಿಸುತ್ತಾರೆ. ಇವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ.

 

ಮುಸ್ಲಿಮ್ : ಧೋಬಿ

ಮುಸ್ಲಿಮ್ ಧೋಬಿ ಮುಸ್ಲಿಮ್ ಉಪಪಂಗಡಗಳಲ್ಲಿ ಒಂದು. ಇವರು ಕರ್ನಾಟಕದಲ್ಲಿ ಧಾರವಾಡ, ಬಿಜಾಪುರ ಮುಂತಾದ ಜಿಲ್ಲೆಗಳಲ್ಲಿ ಹಂಚಿಹೋಗಿದ್ದಾರೆ. ಇವರು ಕುಟುಂಬದೊಳಗೆ ಉರ್ದು ಮತ್ತು ಇತರರೊಂದಿಗೆ ಕನ್ನಡದಲ್ಲಿ ಮಾತನಾಡುತ್ತಾರೆ. ಉರ್ದು ಮತ್ತು ಕನ್ನಡ ಲಿಪಿಗಳನ್ನು ಉಪಯೋಗಿಸುವರು. ಮುಸ್ಲಿಮ್ ಧೋಬಿಗಳಲ್ಲಿ ಒಳಬಾಂಧವ್ಯ ಮದುವೆಗಳು ಮತ್ತು ಸೋದರ ಸಂಬಂಧಿಗಳಲ್ಲಿ ಮದುವೆಗಳಿಗೆ ಅನುಮತಿ ಇದೆ. ಬಹುಪತ್ನಿತ್ವಕ್ಕೆ ಅನುಮತಿಯಿದ್ದರೂ ಏಕಪತ್ನಿತ್ವ/ಏಕಪತಿತ್ವವು ಸಾಮಾನ್ಯವಾಗಿ ಕಂಡುಬರುತ್ತವೆ. ತಪ್ಪು ವ್ಯವಸ್ಥೆಯಿದ್ದಲ್ಲಿ/ಹೊಂದಾಣಿಕೆಯಿಲ್ಲದಿದ್ದಲ್ಲಿ ವಿಚ್ಛೇದನೆಗೆ ಅನುಮತಿಯಿದೆ. ವಿಧವೆ, ವಿಧುರ ಹಾಗೂ ವಿಚ್ಛೇದಿತರಿಗೆ ಮದುವೆಯ ಅನುಮತಿಯಿದೆ. ಅವಿಭಕ್ತ ಕುಟುಂಬಗಳು ಮುಸ್ಲಿಮ್ ಧೋಬಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ತಂದೆ ನಂತರ ಹಿರಿಯ ಮಗನು ಕುಟುಂಬದ ಉತ್ತರಾಧಿಕಾರಿಯಾಗುವನು. ಗೃಹಕೃತ್ಯ, ಆರ್ಥಿಕ ಚಟುವಟಿಕೆಯ ಜೊತೆಗೆ ಮಹಿಳೆಯರು ಸಾಮಾಜಿಕ ಚಟುವಟಿಕೆಯಲ್ಲಿ ಭಾಗವಹಿಸುವರು. ಇಸ್ಲಾಂ ತತ್ವದ ಪ್ರಕಾರ ಶವವನ್ನು ಹೂಳಲಾಗುತ್ತದೆ. ಆಧುನಿಕ ಸಾಮಾಜಿಕ ಸಂಸ್ಥೆಗಳನ್ನು ಹೆಚ್ಚಾಗಿ ಬಳಸಿಕೊಳ್ಳುವಲ್ಲಿ ಇವರು ಹಿಂದುಳಿದಿದ್ದಾರೆ.

 

ಮುಸ್ಲಿಮ್ : ನವಾಯತ

ವಾಯುತರು ಎಂಬ ಪದವನ್ನು ಬಿಡಿಸಿದಾಗ ‘ನವ’ ‘ಆಯಿತ’ ಎಂದಾಗುತ್ತದೆ. ಇದನ್ನೇ ‘ನವಆಬಾದಿ’, ಎಂದೂ ಸಹ ಉರ್ದುವಿನಲ್ಲಿ ವಿಂಗಡಿಸಲಾಗುತ್ತದೆ. ಇವೆರಡು ಪದಗಳ ಅರ್ಥವು ‘ಹೊಸಜನರು’ ಎಂದಾಗುತ್ತದೆ. ಇವರು ಕ್ರಿ.ಶ. ಏಳನೆಯ ಶತಮಾನದಲ್ಲಿ ಭಾರತಕ್ಕೆ ಬಂದದ್ದಾಗಿ ತಿಳಿಯುತ್ತದೆ. ಅರಬ್ಬಿ ಪ್ರದೇಶದಿಂದ ಬಂದ ನವಾಯಿತರು ಭಟ್ಕಳ ಪ್ರದೇಶವನ್ನು ವಾಸಿಸಲು ಆಯ್ಕೆ ಮಾಡಿಕೊಂಡು, ಕಾಲಕಳೆದಂತೆ ವ್ಯಾಪಾರ ಚೆನ್ನಾಗಿ ನಡೆಯುವ ಸ್ಥಳಗಳ ಕಡೆಗೆ ಚದುರಿದರು. ಹೆಚ್ಚಿನ ನವಾಯಿತ ಕುಟುಂಬಗಳು ಭಟ್ಕಳ, ಶಿರೂರು, ಮಂಕಿ, ಮುರರ್ಡೇಶ್ವರ, ಬಸ್ತಿಕೇರಿ ಮುಂತಾದೆಡೆಗಳಲ್ಲಿ ನೆಲೆಸಿರುವುದು ಕಂಡುಬರುತ್ತದೆ. ಇವರು ಬೆಂಗಳೂರು, ಮೈಸೂರು, ತುಮಕೂರು, ಹುಬ್ಬಳ್ಳಿ ಮುಂತಾದ ಪಟ್ಟಣ ಪ್ರದೇಶಗಳಲ್ಲಿ ವ್ಯಾಪಾರ ಹಾಗೂ ಉದ್ದಿಮೆಗಳಲ್ಲಿ ತೊಡಗಿರುತ್ತಾರೆ. ಮುಂಬಯಿ, ಮಂಗಳೂರು ಮುಂತಾದ ಕರಾವಳಿ ತೀರದ ನಗರಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ನವಾಯಿತರು ತಮ್ಮದೆ ಆದ ಭಾಷೆಯನ್ನು ರೂಪಿಸಿಕೊಂಡಿದ್ದಾರೆ. ಇವರಾಡುವ ಭಾಷೆಗೆ ‘ನವಾಯಿತ ಭಾಷೆ’ ಎಂದು ಕರೆಯುತ್ತಾರೆ. ಅದರಲ್ಲಿ ಉರ್ದು, ಅರಬ್ಬಿ,ಮರಾಠಿ, ಹಿಂದಿ ಹಾಗೂ ಕೊಂಕಣಿ ಭಾಷೆಗಳು ಮಿಶ್ರಣಗೊಂಡಿರುತ್ತವೆ. ಈ ಭಾಷೆಗೆ ಲಿಪಿಯಿಲ್ಲದ ಕಾರಣ ಉರ್ದು ಲಿಪಿಯನ್ನು ಬರವಣಿಗೆಗಾಗಿ ಬಳಸಲಾಗುತ್ತದೆ. ಉರ್ದು ಲಿಪಿಯಲ್ಲಿನ ನವಾಯಿತ ಭಾಷೆಯ ‘ಅಲ್ ನವಾಯಿತ್’ ಎಂಬ ವಾರಪತ್ರಿಕೆಯೂ ಪ್ರಕಟವಾಗುತ್ತಿದೆ. ಇವರು ಪ್ರಾಂತೀಯ ಭಾಷೆಯಾದ ಕೊಂಕಣಿಯನ್ನು ಮಾತನಾಡುವರಾದರೂ, ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ.

ಇವರು ಸಿದ್ದೀಕ್, ದಾಮ್ಡ, ಸೈಯದ್ – ಕಾಕು, ಬ್ರಹ್ಮಾವರ, ಕಾಜಿಯ, ಆಕ್ರಮಿ, ಜುತಾಪು, ಇತ್ಯಾದಿ ಉಪನಾಮಗಳನ್ನು ಹೊಂದಿದ್ದಾರೆ. ಸೋದರ ಸಂಬಂಧಿ ವಿವಾಹಗಳಿಗೆ ಅವಕಾಶವಿದೆ. ಇವರಲ್ಲಿ ಬಹುಪತ್ನಿತ್ವಕ್ಕೆ ಅವಕಾಶವಿದ್ದರೂ, ಏಕಪತ್ನಿತ್ವ ವಿವಾಹದ ಸಾಮಾನ್ಯ ರೀತಿಯಾಗಿದೆ. ಇತ್ತೀಚಿಗೆ ನವಾಯಿತರ ಸಾಂಪ್ರದಾಯಕ ವಿವಾಹ ಪದ್ಧತಿಯಲ್ಲಿ ಬಹಳ ವ್ಯತ್ಯಾಸಗಳು ಕಂಡುಬರುತ್ತದೆ. ವಧುವರರ ಕಡೆಯವರು ತಾವು ಆ ಸಂಬಧಕ್ಕೆ ಒಪ್ಪಿಗೆ ಕೊಟ್ಟ ಸಂಕೇತವಾಗಿ ‘ತೋಡ್‌-ಘೋಡ್’ ಎಂಬ ಬಾಯಿ ಸಿಹಿಮಾಡುವ ಸರಳ ಸಮಾರಂಭ ಮಾಡುತ್ತಾರೆ. ನವಾಯಿತರಲ್ಲಿ ಬಹಳ ಹಿಂದೆ ಎಂಟು ದಿನಗಳ ಮದುವೆ ನಡೆಯುತ್ತಿತ್ತು. ಈಗ ಬಹಳ ಸರಳವಾಗಿ ಎರಡು ಅಥವಾ ಮೂರು ದಿನಗಳು ಮಾತ್ರ ನಡೆಯುತ್ತದೆ. ಇವರಲ್ಲಿ ವಿಚ್ಛೇದನಕ್ಕೆ ಅವಕಾಶವಿದೆ. ಪಿತ್ರಾರ್ಜಿತ ಆಸ್ತಿಯನ್ನು ಮೂರು ಸಮಭಾಗಗಳಾಗಿ ವಿಂಗಡಿಸಿ ಗಂಡು ಮಕ್ಕಳಿಗೆ ಎರಡು ಭಾಗಗಳನ್ನು ಮತ್ತು ವಿವಾಹಿತ ಹೆಣ್ಣು ಮಕ್ಕಳಿಗೆ ಒಂದು ಭಾಗ ಕೊಡಲಾಗುತ್ತದೆ.

ನವಾಯಿತರು ಮೊದಲು ಒಳ್ಳೆಯ ಈಜುಗಾರರಾಗಿದ್ದು ಹಡಗು ನಡೆಸುವುದರಲ್ಲಿ ಚತುರರಾಗಿದ್ದರೆಂದು ತಿಳಿದುಬರುತ್ತದೆ. ಈ ಕಾರಣದಿಂದ ವ್ಯಾಪಾರವನ್ನು ಮುಖ್ಯ ಉದ್ಯೋಗವನ್ನಾಗಿ ಆಯ್ಕೆ ಮಾಡಿಕೊಂಡು ಜೀವನ ಸಾಗಿಸಲು ಪ್ರಾರಂಭಿಸಿದರು. ಇಂದಿಗೂ ಅದೇ ಕಸುಬು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯಲು ಹೋಗಿರುವ ನವಾಯಿತರ ಸಂಖ್ಯೆ ಶೇಕಡ ನಲವತ್ತರಷ್ಟಾಗಿದೆ. ಪ್ರತಿ ಮನೆಯಲ್ಲೂ ಒಬ್ಬರು ಅಥವಾ ಇಬ್ಬರು ಪುರುಷರು ಮಸ್ಕತ್, ಸೌದಿ, ದುಬಾಯಿ ಮುಂತಾದ ಕೊಲ್ಲಿ ರಾಷ್ಟ್ರಗಳಲ್ಲಿ ಉದ್ಯೋಗ ನಡೆಸುತ್ತಿರುವುದು ತಿಳಿದುಬರುತ್ತದೆ. ಸರ್ಕಾರಿ ನೌಕರಿಗೆ ಹೋಗುವ ನವಾಯಿತ ಪುರುಷರ ಸಂಖ್ಯೆ ಅತ್ಯಂತ ಕಡಿಮೆ ಎಂದು ಹೇಳಬಹುದು. ಒಟ್ಟಿನಲ್ಲಿ ನವಾಯಿತರು ಆಧುನಿಕ ಸಾಮಾಜಿಕ ವ್ಯವಸ್ಥೆ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರೂ ಸಹ, ಹೆಚ್ಚಿನ ಮಟ್ಟಿಗೆ ಸಂಪ್ರದಾಯವಾದಿಗಳ ರೀತಿ ಕಂಡುಬರುತ್ತಾರೆ.

 

ಮುಸ್ಲಿಮ್ : ಪಿಂಜಾರ (ನದಾಫ)

ಪಿಂಜಾರರು ಎಂದು ಕರೆಸಿಕೊಳ್ಳುವ ಈ ಸಮುದಾಯದ ಮೂಲ ಮತ್ತು ಅರ್ಥದ ಬಗ್ಗೆ ಗೊಂದಲವಿದೆ. ಹತ್ತಿ ಹಿಂಜುವ ಕಸುಬಿನಲ್ಲಿ ತೊಡಗಿಕೊಂಡ ಈ ಸಮುದಾಯದ ಜನರನ್ನು ‘ಪಿಂಜಾರರು’ ಎಂದು ಗುರುತಿಸಿಕೊಂಡಿದ್ದು ಸರಿ. ಆದರೆ ಮುಸ್ಲಿಂ ದೊರೆಗಳ ಆಡಳಿತದಲ್ಲಿ ನಡೆದ ಮತಾಂತರಕ್ಕಿಂತ ಮೊದಲೇ ‘ಪಿಂಜಾರ’ ಎಂಬ ಹೆಸರಿನ ಸಮುದಾಯವೊಂದಿತ್ತೆ ಎನ್ನುವುದರ ಬಗ್ಗೆ ಪಿಂಜಾರರಲ್ಲಿ ಸ್ಪಷ್ಟ ಐತಿಹಾಸಿಕ ಮಾಹಿತಿಗಳು ಸಿಗುವುದಿಲ್ಲ. ಕರ್ನಾಟಕದ ಪಿಂಜಾರರ ಮಟ್ಟಿಗೆ ಹೇಳುವುದಾದರೆ ಇವರ‍ಲ್ಲಿ ಕೆಲವರು ಆಂಧ್ರದಿಂದ ಬಂದವರು ಮತ್ತೆ ಕೆಲವರು  ಟಿಪ್ಪುವಿನ ಆಡಳಿತದ ಸಂದರ್ಭದಲ್ಲಿ ಮತಾಂತರ ಅದವರು ಎಂದು ಕೆಲವರು ಅಭಿಪ್ರಾಯ. ಅಂದರೆ ಎರಡರಿಂದ ಮೂರು ಶತಮಾನಗಳಷ್ಟು ಹಿಂದಕ್ಕೆ ಮಾತ್ರ ಪಿಂಜಾರ ಪ್ರಾಚೀನತೆಯನ್ನು ಸ್ಪಷ್ಟವಾಗಿ ಗುರುತಿಸಬಹುದಾಗಿದೆ.

ಇವರು ಕರ್ನಾಟಕದಲ್ಲಿ ಧಾರವಾಡ, ಬಿಜಾಪುರ, ಬಾಗಲಕೋಟೆ, ಗುಲ್ಬರ್ಗಾ, ಶಿವಮೊಗ್ಗ, ಬೆಂಗಳೂರು, ಮೈಸೂರು, ಗದಗ ಮುಂತಾದ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಉರ್ದು ಇವರ ಮಾತೃಭಾಷೆ, ಕನ್ನಡ ಹಾಗೂ ತೆಲುಗನ್ನು ಮಾತನಾಡುವ ಇವರು ಬಳಸುವ ಲಿಪಿ ಕನ್ನಡ. ಅತ್ಯಂತ ಮುಖ್ಯ ಸಂಗತಿ  ಎಂದರೆ ಸ್ವತಃ ಪಿಂಜಾರರು ತಾವು ಆಂಧ್ರದಿಂದ ಬಂದವರು ಎಂದು ನಂಬುವುದು. ಥರ್ಸ್ಟನ್ ಗುರುತಿಸಿರುವ ‘ದೂದೆಕುಲ’ ಸಮುದಾಯವೇ ಇಲ್ಲಿ ಪಿಂಜಾರ ಎಂದಾಗಿದೆಯಷ್ಟೇ. ಥರ್ಸ್ಟನ್ ದೂದೆ ಕುಲದವರ ಬಗ್ಗೆ ಅತ್ಯಂತ ಅಧಿಕೃತ ಮಾಹಿತಿಗಳನ್ನು ಕೊಡುತ್ತಾರಾದರೂ ಅವರ ಮತಾಂತರದ ಬಗ್ಗೆ ಚರ್ಚಿಸುವುದಿಲ್ಲ. ಇವರಲ್ಲಿ ಸೋದರ ಸಂಬಂಧಿ ವಿವಾಹಗಳಿಗೆ ಅನುಮತಿ ಇದೆ. ವಿಧವೆ, ವಿಧುರ, ವಿಚ್ಛೇದಿತರ ವಿವಾಹಕ್ಕೆ ಅವಕಾಶವಿದೆ. ತಂದೆಯ ನಂತರ ಹಿರಿಯ ಮಗನು ಮನೆಯ ಯಜಮಾನನಾಗುತ್ತಾನೆ.

ಇವರ ಪಾರಂಪರಿಕ ವೃತ್ತಿ ಹತ್ತಿಯನ್ನು ಹಿಂಜುವುದು ಹತ್ತಿ ವಸ್ತುಗಳ ಮೇಲೆ ವರ್ಣ ಬಿಡಿಸಲು ಹುಲ್ಲು ಹೆಣಿಗೆ ನಾರಿನ ತಂತಿ  ಆಸನ, ಮೇಲುಹೊದಿಕೆ ಹಾಗೂ ದಿಂಬುಗಳನ್ನು ಮಾಡುತ್ತಿದ್ದರು. ಕೆಲವರು ವ್ಯವಸಾಯದ ಶ್ರಮಿಕರಾಗಿ, ಸಣ್ಣ ಪುಟ್ಟ ವ್ಯಾಪಾರ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆ ಉದ್ಯೋಗವನ್ನು ಮಾಡುತ್ತಿದ್ದಾರೆ. ಇವರ ಸಾಂಪ್ರದಾಯಿಕ ಪಂಚಾಯತಿಯು ಸಮುದಾಯದ ಎಲ್ಲಾ ಚಟುವಟಿಕೆ ಹಾಗೂ ಅಭಿವೃದ್ಧಿಗಳನ್ನು ನೋಡಿಕೊಳ್ಳುತ್ತದೆ. ಶಿಕ್ಷಣವು ಸೇರಿದಂತೆ ಹೊಸ ಆಧುನಿಕ ಸಾಮಾಜಿಕ ವ್ಯವಸ್ಥೆ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಪಿಂಜಾರರ ಸಾಮಾಜಿಕ, ಆರ್ಥಿಕ, ಸ್ಥಿತಿಗತಿಗಳು ಸುಧಾರಣೆಯಾಗಬೇಕಾಗಿದೆ.

ನೋಡಿ:

ದಾದಾಪೀರ್ ಬಿ.ಸಿ., ೧೯೯೩. ಪಿಂಜಾರರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು

 

ಮುಸ್ಲಿಮ್ : ಪೆಂಡಾರ

ಪೆಂಡಾರರು ಉತ್ತರ ಭಾರತದಿಂದ ಕರ್ನಾಟಕಕ್ಕೆ ವಲಸೆ ಬಂದ ಸಮುದಾಯವಾಗಿದೆ. ಇವರು ಮರಾಠರ ಸೈನ್ಯವನ್ನು ಹಿಂಬಾಲಿಸಿ ಬಂದ ಕಡಲ್ಗಳ್ಳರ  ಗುಂಪಿಗೆ ಸೇರಿದವರೆಂದು ಇವರ ಮೌಖಿಕ ಪರಂಪರೆಯಿಂದ ತಿಳಿಯುತ್ತದೆ. ಇವರು  ಜಾಟರು ಹಾಗೂ ಮರಾಠರ ಮೂಲಗಳಿಂದ ಬಂದಿರಬಹುದು. ಇವರು ಕರ್ನಾಟಕದಲ್ಲಿ ಬೆಳಗಾವಿ, ಬಳ್ಳಾರಿ, ಬೀದರ, ಬಿಜಾಪುರ, ಬಾಗಲಕೋಟೆ, ಗುಲ್ಬರ್ಗಾ,ಧಾರವಾಡ ಹಾಗೂ ಮುಂತಾದ ಜಿಲ್ಲೆಗಳಲ್ಲಿ ಹಂಚಿಹೋಗಿದ್ದಾರೆ. ಉರ್ದು ಇವರ ಮಾತೃಭಾಷೆಯಾದರೂ ಕನ್ನಡದಲ್ಲಿ ಮಾತನಾಡಿ, ಕನ್ನಡ ಬಳಸುತ್ತಾರೆ.

ಮೊದಲು ತಮ್ಮ ಹೆಸರಿನ ಜೊತೆ ‘ಪೆಂಡಾರ್’ ಎಂಬ ಉಪನಾಮವನ್ನು ಸೇರಿಸಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಉಪನಾಮವು ಸ್ಥಳ ಹಾಗೂ ಉದ್ಯೋಗಗಳಿಂದ ಕೂಡಿದೆ. ಸಂಬಂಧಿ ವಿವಾಹಗಳಿಗೆ ಇವರಲ್ಲಿ ಅವಕಾಶವಿದೆ. ವಿಧವೆ, ವಿಧುರ, ವಿಚ್ಛೇದಿತರ, ವಿವಾಹಕ್ಕೆ ಅವಕಾಶವಿದೆ. ಗಂಡು ಮಕ್ಕಳು ಪಡೆಯುವ ಆಸ್ತಿಯ ಅರ್ಧಪಾಲನ್ನು ಹೆಣ್ಣು ಮಕ್ಕಳು ಪಡೆಯುತ್ತಾರೆ. ಆದರೆ ತಂದೆ ಸತ್ತ ನಂತರ ಹಿರಿಯ ಮಗನು ಮನೆಯ ಉತ್ತರಾಧಿಕಾರಿಯಾಗುತ್ತಾನೆ. ಬಾಲಕರಿಗೆ ಐದರಿಂದ ಏಳು ವರ್ಷಗಳೊಳಗೆ ಸುನತಿ ಕಾರ್ಯವು ಮುಸ್ಲಿಂ ‘ಖಲಿಫ್’ ನಿಂದ ನಡೆಯುತ್ತದೆ.

ಪೆಂಡಾರರು ಹಿಂದೆ ಅಶ್ವಾರೋಹಿ ಸೈನಿಕರಾಗಿದ್ದರು. ಆದರೆ ಈಗ ಹೆಚ್ಚಿನ ಸಂಖ್ಯೆಯ ಪೆಂಡಾರರ ಬಡಗಿ, ಬಣ್ಣ ಬಳೆಯುವ, ಮನೆ ಕಟ್ಟುವ ವೃತ್ತಿಗಳಲ್ಲಿ ತೊಡಗಿದ್ದಾರೆ. ಮೆಕ್ಯಾನಿಕ್ ಶಾಪ್‌ಗಳಲ್ಲಿ ಹಲವಾರು ಮಕ್ಕಳು ಸಹಾಯಕರಾಗಿ ದುಡಿಯುತ್ತಿದ್ದಾರೆ. ಸ್ತ್ರೀಯರು ಶ್ರಮಗೂಲಿಗಳಾಗಿ, ದುಡಿಯುತ್ತಿದ್ದರೆ. ಸಮುದಾಯದ ಒಳಗಿನ ವಿವಾದಗಳನ್ನು ಬಗೆಹರಿಸಲು ಜಾತಿ ಪಂಚಾಯತಿಯನ್ನು ಹೊಂದಿದ್ದಾರೆ. ಅದನ್ನು ‘ಜಮಾತ್’ ಎಂದು ಕರೆಯುತ್ತಾರೆ. ಪೆಂಡಾರರು ಇಸ್ಲಾಂ ಧರ್ಮ ಅನುಯಾಯಿಗಳು. ‘ಖಾಜಿ’ಯು ಇವರ ಧಾರ್ಮಿಕ ವಿಶೇಷಜ್ಞನಾಗಿ, ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಡುತ್ತಾನೆ. ಇವರ ಶೈಕ್ಷಣಿ, ಆರ್ಥಿಕ, ಸಾಮಾಜಿಕ, ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ.

 

ಮುಸ್ಲಿಮ್ : ಫಕೀರ

ಕೀರರನ್ನು, ಕರ್ನಾಟಕದಲ್ಲಿ ದರ್ವೇಶ, ಬಾಬಾ, ಸಾಯಿ ಮತ್ತು ಪೀರರೆಂದೂ ಕರೆಯುತ್ತಾರೆ. ಫಕೀರರಲ್ಲಿ ನಾಲ್ಕು ಪಂಗಡಗಳಿವೆ. ಅವುಗಳು ರಫಾಯಿ, ಬಿನ್ವಾ, ಜಲಾಲಿ ಮತ್ತು ಮಾಲಂಗ. ರಫಾಯಿ ಪಂಗಡಕ್ಕೆ ಸೇರಿದ ಫಕೀರರು ಮಾತ್ರ ಭಿಕ್ಷೆ ಪಡೆಯುವುದಕ್ಕೋಸ್ಕರ ತಾವೇ ಕ್ರೂರ ಕ್ರಮಗಳಿಂದ ಸ್ವಂತ ಗಾಯ ಮಾಡಿಕೊಳ್ಳುತ್ತಾರೆ. ಬಾಬಾ ಫಕೀರರನ್ನು ಮಾಮುಗಳೆಂದು ಕರೆಯುತ್ತಾರೆ. ಸಾಧಾರಣವಾಗಿ ಫಕೀರರಲ್ಲಿ ಎರಡು ವಿಧಗಳಿವೆ, ದೀಕ್ಷೆಯ ಮೂಲಕ ಒಳಗಾದವರಿಗೆ ‘ತಾರಿಕ್ ಬಂದ್’ ಫಕೀರ್ (ಮುರ್ಷಿದ್) ಎಂದು ಕರೆಯುತ್ತಾರೆ. ಇನ್ನೊಂದು ದಾನಕ್ಕೋಸ್ಕರ ಫಕೀರರ ಸಮುದಾಯಕ್ಕೆ ಸೇರಿದವರು. ಫಕೀರರಲ್ಲಿ ಸಾಮಾನ್ಯವಾದ ಶಿರೋನಾಮೆಯೆಂದರೆ ಶಾಹ, ಬಾಬಾ ಶಬ್ದವು ಹೆಸರುಗಳ ಹಿಂದೆ ಅಥವಾ ಮುಂದೆ ಇರುತ್ತದೆ. ಇವರು ಮುಖ್ಯವಾಗಿ ಹುಬ್ಬಳ್ಳಿ, ಸವಣೂರ, ಹಿರೇಬಾಗೇವಾಡಿ, ಬಾಬಾ ಬುಡನ್‌ಗಿರಿ, ಬೆಳಗಾವಿ ಮುಂತಾದ ಸ್ಥಳಗಳಲ್ಲಿ ವಾಸಿಸುವರು. ಉರ್ದು ಹಾಗೂ ಕನ್ನಡದಲ್ಲಿ ಮಾತನಾಡುವರು.

ಸಾಂಕೇತಿಕ ಫಕೀರರು ಲುಂಗಿ, ಕುರ್ತ, ಹಸಿರು ಪಗಡಿ, ಅದರ ಜೊತೆ ಒಂದು ಖಲಾಫ್ ಎಂದು ಕರೆಯುವ ಹಸಿರು ಬಣ್ಣದ ರುಮಾಲನ್ನು ಹೆಗಲಿನ ಮೇಲೆ ಹಾಕಿಕೊಳ್ಳುವರು. ಕಾಂತ ಎಂದು ಕರೆಯುವ ಒಂದು ಕೆಂಪುಬಣ್ಣದ ಮಣಿಗಳ ಹಾರ ಮತ್ತು ತಸ್ವೀಹ್ ಎಂದು ಕರೆಯುವ ಇನ್ನೊಂದು ಬಿಳಿಯ ಬಣ್ಣದ ಮಣಿಗಳ ಹಾರ ಹಾಕಿಕೊಳ್ಳುತ್ತಾರೆ. ದೀಕ್ಷೆಯ ಸಮಯದಲ್ಲಿ ಇವನಿಗೆ ಮುರ್ಷಿದನಿಂದ ಸೋಕಿ ಬುರುಡೆಯ ಚಿಪ್ಪು ಮತ್ತು ಜೋಲಿಯನ್ನು ಕೊಡಲಾಗುತ್ತದೆ. ಜನನಶಾಸ್ತ್ರ ವಿಧಿಗಳ ಆಚರಣೆಗಳೆಂದರೆ ನಲವತ್ತು ದಿನಗಳ ಸೂತಕ ಚೊಚ್ಚಲ ನಾಮಕರಣ, ಎರಡನೇ/ದ್ವಿತೀಯ ನಾಮಕರಣ ಚಿಲ್ಲಾ, ತೊಟ್ಟಿಲು ಕಾರ್ಯ, ಜವಳ/ಚೌಲ ತೆಗೆಯುವುದು ಮತ್ತು ಮುಂಡಿ/ಸುಂತಿ. ವಿವಾಹ ಶಾಸ್ತ್ರವಿಧಿಗಳ ನಿರ್ವಹಣೆಗಳೆಂದರೆ ಬನಿರು, ನಿಖಾಃ, ಮೆಹರು. ಬಹುಸಂಖ್ಯೆಯ ಫಕೀರರು ದಾನದ ಮೇಲೆ ಜೀವಿಸುವರು. ಕೇವಲ ಕೆಲವೇ ಮುರ್ಷಿದ ಮುಖಂಡರು ಕೃಷಿ ಭೂಮಿಯನ್ನು ಹೊಂದಿರುವವರು. ಇವರು ಆರ್ಥಿಕವಾಗಿ ಶೈಕ್ಷಣಿಕವಾಗಿ ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿದ್ದಾರೆ.

 

ಮುಸ್ಲಿಮ್ : ಬಾಗವಾನ

ಬಾಗವಾನರು ಕರ್ನಾಟಕದಲ್ಲಿ ಬೆಳಗಾವಿ, ಬಳ್ಳಾರಿ, ಬೀದರ, ಬಿಜಾಪುರ, ಬಾಗಲಕೋಟೆ, ಧಾರವಾಡ, ಗುಲ್ಬರ್ಗಾ, ರಾಯಚೂರು, ಶಿವಮೊಗ್ಗ ಮುಂತಾದ ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ. ಉರ್ದು ಇವರ ಮಾತೃಭಾಷೆ. ಇ ವರು ಬಳಸುವ ಲಿಪಿ-ಪರ್ಸೊ ಅರೇಬಿಕ್. ಇವರು ಕನ್ನಡದಲ್ಲಿ ಚೆನ್ನಾಗಿ ವ್ಯವಹರಿಸುವುದಲ್ಲದೆ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಈ ಸಮುದಾಯದಲ್ಲಿ ಒಳಬಾಂಧವ್ಯ ವಿವಾಹ ಪದ್ಧತಿ ಕಂಡುಬರುತ್ತದೆ. ಹೆಣ್ಣುಮಕ್ಕಳಿಗೆ ಹಿರಿಯರಿಂದ ಬರುವ ಆಸ್ತಿಯಲ್ಲಿ ಅರ್ಧದಷ್ಟು ಪಡೆಯಲು ಹಕ್ಕಿರುತ್ತದೆ. ಆದರೂ ಹಿರಿಯ ಮಗನೇ ತಂದೆಯ ನಂತರ ಉತ್ತರಾಧಿಕಾರಿ. ಗರ್ಭಿಣಿಯರಿಗೆ ಏಳನೇ ತಿಂಗಳಿನಲ್ಲಿ ‘ಪಾಡಿ-ಚೋಲಿ’ ಅಥವಾ ‘ಗೋಧ್-ಭರನಾ’ ಕಾರ್ಯಮಾಡುತ್ತಾರೆ. ನಾಮಕರಣವನ್ನು ಮಗು ಹುಟ್ಟಿದ ದಿನವೆ ಮಾಡಿ, ಎರಡನೆಯ ನಾಮಕರಣವನ್ನು ನಲವತ್ತನೇ ದಿನದಂದು ಮಾಡುತ್ತಾರೆ. ಜನನ ಸೂತಕವನ್ನು ನಲವತ್ತು ದಿನಗಳವರೆಗೆ ಮಾಡುತ್ತಾರೆ. ‘ಹಾಕಿಕ’ ಕಾರ್ಯವು ಗಂಡು ಮತ್ತು ಹೆಣ್ಣು ಮಕ್ಕಳಿಗೂ ಆಚರಿಸುತ್ತಾರೆ. ‘ಸುನತಿ’ ಎಂಬ ಧಾರ್ಮಿಕ ಕಾರ್ಯವು ಗಂಡು ಮಕ್ಕಳಿಗಾಗಿ ಇರುತ್ತದೆ. ‘ಜಿಯಾರತ್’ ಎನ್ನುವ ‘ಮರಣಾನಂತರದ’ ಆಚರಣೆಯನ್ನು ಮೂರನೇ ದಿನಕ್ಕೆ ಹಾಗೂ ನಲವತ್ತನೇ ದಿನಕ್ಕೆ ನಡೆಸುತ್ತಾರೆ.

ಸಾಂಪ್ರದಾಯಿಕವಾಗಿ ಬಾಗವಾನರು ತೋಟಕಾಯುವವರು. ಇವರಲ್ಲಿ ಬಹಳಷ್ಟು ಜನ ಈಗ ಹಣ್ಣು, ತರಕಾರಿ ಮಾರುವವರಾಗಿ, ಸ್ವಯಂ-ಉದ್ಯೋಗದಲ್ಲಿದ್ದಾರೆ. ಈ ಸಮುದಾಯದಲ್ಲಿ ಸಾಂಪ್ರದಾಯಿಕವಾದ ಜಾತಿ ಪಂಚಾಯತಿ ಇದೆ. ಇದನ್ನು ‘ಬಾಗವಾನ ಜಮಾತ್’ ಎಂದು ಕರೆಯಲಾಗುತ್ತದೆ. ಅದು ಸಮುದಾಯದ ಜಗಳಗಳನ್ನು ಹಾಗೂ ಸಮುದಾಯದ ಅಭಿವೃದ್ಧಿಗೆ ತೆಗೆದುಕೊಳ್ಳುವ ನಿರ್ಧಾರಗಳನ್ನು ನಿರ್ಣಯಿಸುತ್ತದೆ. ಇವರು ಮುಸ್ಲಿಮ್ ಸಂತರುಗಳಿಗೆ ಗೌರವ ಕೊಡುತ್ತಾರೆ. ‘ಖಾಜಿ’ ಧಾರ್ಮಿಕ ಸಮಾರಂಭಗಳನ್ನು ಹಾಗೂ ಇತರೆ ಧಾರ್ಮಿಕ ಕಾರ್ಯ ನಡೆಸಿಕೊಡುತ್ತಾರೆ. ರಂಜಾನ್, ಬಕ್ರೀದ್ ಹಾಗೂ ಮೊಹರಂ ಇವರು ಆಚರಿಸುವ ಕೆಲವು ಮುಖ್ಯ ಹಬ್ಬಗಳು. ಇವರು ಇತರ ಮುಸ್ಲಿಮ್ ಪಂಗಡಗಳಿಗಿಂತ ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ.

 

ಮುಸ್ಲಿಮ್ : ಬೇಹಸ್ತಿಃ

ಬೇಹಸ್ತಿಃ ಎನ್ನುವ ಪದವು ಬಂದಿರುವುದು ಪರ್ಶಿಯಾದ ‘ಬೇಹಸ್ತಿಃ’ ಎನ್ನುವ ಪದದಿಂದ. ಅದರ ಅರ್ಥ ‘ಸ್ವರ್ಗ’ ಎಂದು. ನೀರಡಿಕೆಯಿಂದ ಆಯಾಸಗೊಂಡ ಸೈನಕರಿಗೆ ನೀರು ಕೊಡುತ್ತಿದ್ದರಿಂದ ಇವರನನು ಹಾಗೆ ಕರೆಯಲಾಗುತಿತ್ತು. ಪೂರ್ವಜರನ್ನು ಇವರು ಹಜರತ್ ಅಬ್ಬಾಸ ಅಲಾಂದಾರರಿಂದ ಗುರುತಿಸುತ್ತಾರೆ. ಚರ್ಮದ ಚೀಲದಲ್ಲಿ, ಇಮಾಮ್ ಹುಸೇನರು ಡೆಮಾಸ್ಕಸ್‌ಗೆ ಬರುವಾಗ ಹಿಂಬಾಲಕರಿಗೆ, ನೀರನ್ನು ತಂದು ಕೊಟ್ಟವರಲ್ಲಿ ಮೊದಲಿಗರು. ಆದರೆ ಇವರು ನೀರು ಕುಡಿಯದಂತೆ ನಿರ್ಬಂಧ ಹೇರಲಾಗಿತ್ತು. ಇವರು ಸಾಂಪ್ರದಾಯಿಕವಾಗಿ ನೀರು ಹೊರುವವರು. ಇವರ ಈಗಿನ ವೃತ್ತಿಗಳೆಂದರೆ ಕೂಲಿ ಮಾಡುವುದು ಹಾಗೂ ಸರ್ಕಾರಿ ಸೇವೆಗಳಲ್ಲಿರುವುದು ಇತ್ಯಾದಿ. ರಿಸ್ಲೆ (೧೮೯೧) ಮತ್ತು ರೊಸ (೧೯೧೯ : ೧೦೬) ಕೂಡ ಇವರನ್ನು ನೀರು ಹೊರುವವರೆಂದೇ ಗುರುತಿಸುತ್ತಾರೆ. ಜೊತೆಗೆ ಇವರನ್ನು ‘ಸಕ್ಕ’ ಎಂಬ ಹೆಸರಿನಿಂದಲೂ ಕರೆಯುತ್ತಿದ್ದರೆಂದು ಹೇಳುತ್ತಾರೆ. ಇವರು ಕರ್ನಾಟಕ, ಹಿಮಾಚಲ ಪ್ರದೇಶ, ಗುಜರಾತ್, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಕಾಣಸಿಗುತ್ತಾರೆ. ಬೇಹಸ್ತಿಃಯರು ಕರ್ನಾಟಕದಲ್ಲಿ ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಗುಲ್ಬರ್ಗಾ, ರಾಯಚೂರು ಹಾಗೂ ಬೀದರ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರು ಉರ್ದು ಮಾತನಾಡುತ್ತಾರೆ. ಪ್ರಾಂತೀಯ ಭಾಷೆಯಾದ ಕನ್ನಡವನ್ನು ಮಾತನಾಡಿ, ಕನ್ನಡ ಹಾಗು ಪರ್ಸೋ – ಅರೇಬಿಕ್ ಲಿಪಿಗಳನ್ನು ಬಳಸುತ್ತಾರೆ. ಇವರಲ್ಲಿ ಬಹುಮಂದಿಯ ಮನೆತನದ ಹೆಸರು ‘ಬೇಹಸ್ತಿಃ’ ಅಥವಾ ‘ಶೇಕ್’ ಎಂದಿರುತ್ತದೆ. ಕೆಲವೊಮ್ಮೆ ಸ್ಥಳನಾಮಗಳೂ ಮನೆತನದ ಹೆಸರು ಆಗಿರುತ್ತವೆ. ಆದರೆ ಕುಟುಂಬ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋದಂತೆ ಬದಲಾಗುತ್ತಿರುತ್ತದೆ. ಸಮುದಾಯದ ಹಂತದಲ್ಲಿ ಒಳಬಾಂಧವ್ಯ ವಿವಾಹಗಳು ಜರುಗುವುದು ಪದ್ಧತಿ. ರಕ್ತಸಂಬಧಿಗಳ ನಡುವೆ ಮದುವೆ ಸಾಧ್ಯವಿದೆ. ನಂತರ ಕೊಡುವುದಾಗಿ ‘ಮೆಹರ್’ ಅನ್ನು ಒಪ್ಪಿಕೊಳ್ಳಲಾಗುತ್ತದೆ. ವಿಚ್ಛೇದಿತರಿಗೂ ವಿವಾಹ ಸಾಧ್ಯವಿದೆ. ಆಸ್ತಿಯನ್ನು ಎಲ್ಲ ಮಕ್ಕಳಲ್ಲಿಯೂ ಸಮಾನವಾಗಿ ಹಂಚಲಾಗುತ್ತದೆ. ಆದರೆ ಗಂಡುಮಕ್ಕಳಿಗೆ ಕೊಡುವ ಅರ್ಧದಷ್ಟು ಮಾತ್ರ ಹೆಣ್ಣು ಮಕ್ಕಳಿಗೆ ಸಿಗುತ್ತದೆ. ಹಿರಿಯ ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಹೆಂಗಸರು ಕೂಲಿ ಮಾಡಿ ಅಥವಾ ಚಿಲ್ಲರೆ ವ್ಯಾಪಾರಮಾಡಿ ಮನೆಯ ಆದಾಯಕ್ಕೆ ಸಹಾಯಮಾಡುತ್ತಾರೆ. ಹೆರಿಗೆಗೆ ಮುನ್ನಿನ  ಕಾರ್ಯಗಳನ್ನು ಗರ್ಭಿಣಿಯಾದ ಏಳನೇ ತಿಂಗಳಿನಲ್ಲಿ ‘ಸತ್ವಸ’ ಅಥವಾ ‘ಗೋದ್ ಭರನ’ ಎಂಬ ಆಚರಣೆ ಮಾಡುತ್ತಾರೆ. ಹೆಣ್ಣುಮಕ್ಕಳು ದೊಡ್ಡವರಾದಾಗ ‘ಫೊಲ್ ಪಡನಾ’ ಆಚರಿಸುತ್ತಾರೆ. ಮದುವೆಯ ಕಾರ್ಯಗಳಲ್ಲಿ ‘ಗೋದ ಭರನ’, ಮಾಂಗನಿ, ಮೆಹರ್ ಒಪ್ಪಿಕೊಳುವುದು ನಿಕಾಹ್ ಹಾಗೂ ವಲೀಮ ಸೇರಿವೆ. ಶವವನ್ನು ಹೂಳುತ್ತಾರೆ ಹಾಗೂ ಜಿಯಾರತ್ ಎನ್ನುವ ಮರಣ ಕಾರ್ಯವನ್ನು ಮೂರನೇ ದಿನ, ಚೆಹ್ಲುಮ್ ನಲವತ್ತನೆ ದಿನ ಮಾಡುತ್ತಾರೆ.

ಸಾಂಪ್ರದಾಯಿಕವಾಗಿ ಇವರು ನೀರು ಹೊರುವವರಾದರೂ, ಈಗ ಇವರಲ್ಲಿ ಹಲವಾರು ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ನೌಕರಿಗಳಲ್ಲಿದ್ದಾರೆ. ಕೆಲವರು ಜಟಕಾ ಬಂಡಿ, ಎತ್ತಿನಗಾಡಿ ಹೊಡೆಯುವುದು, ಬಡಗಿ, ಚಿಲ್ಲರೆ ವ್ಯಾಪಾರ,ದಿನಗೂಲಿ ಇತ್ಯದಿಗಳಲ್ಲಿ ತೊಡಗಿದ್ದಾರೆ. ಈ ಕೋಮಿನವರಿಗೆ ‘ಜಮಾತ’ ಎನ್ನುವ ಸಮುದಾಯ ಸಂಘಟನೆ ಇದೆ. ಇಸ್ಲಾಂ ಧರ್ಮದ ಸಂತರ ದರ್ಗಾಗಳಾದ ಕ್ವಾಜಾ ಬಂದೆನವಾಜ್, ಬಾಬಾಬುಡನ್‌ಗಿರಿ, ಕ್ವಾಜಾ ಫಾರಿಬಾನವಾಜ್ ಮುಂತಾದವು ಇವರ ಪವಿತ್ರ ಧಾರ್ಮಿಕ ಸ್ಥಳಗಳಾಗಿವೆ. ಇವರ ಧಾರ್ಮಿಕ ಕಾರ್ಯಗಳನ್ನು ಖಾಜಿ ನಡೆಸಿಕೊಡುತ್ತಾನೆ. ವಿದ್ಯಾಭ್ಯಾಸದ ಬಗ್ಗೆ ಇವರಿಗೆ ಒಲವು ಸ್ವಲ್ಪ ಕಡಿಮೆ. ಇವರ ಶೈಕ್ಷಣಿಕ, ಆರ್ಥಿಕ, ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ.

 

ಮುಸ್ಲಿಮ್ : ಬ್ಯಾರಿ

ಬ್ಯಾರಿ ಪದಕ್ಕೆ ‘ಬೇಪಾರಿ’ ಅಥವಾ ‘ವ್ಯಾಪಾರಿ’ ಅಂದರೆ ವ್ಯಾಪಾರ ಅಥವಾ ವ್ಯವಹಾರವೆಂದರ್ಥ ಕೂಡುವುದರ ಸಂಕ್ಷಿಪ್ತ ರೂಪವಾಗಿದೆ. ಇವರು ಮಲಯಾಳ, ಕನ್ನಡ,ತುಳು ಮತ್ತು ಕೊಡವ ಭಾಷೆಗಳ ಸಮ್ಮಿಶ್ರಣವಾದ ಬ್ಯಾರಿ ಪ್ರಾಂತೀಯ ಭಾಷೆಯನ್ನು ಮಾತನಾಡುತ್ತಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬಂದರೂ, ಇತರೆ ಜಿಲ್ಲೆಗಳಲ್ಲೂ ಕಾಣಸಿಗುತ್ತಾರೆ. ಕನ್ನಡ ಹಾಗೂ ತುಳು ಭಾಷೆಗಳೆರಡನ್ನು ಮಾತನಾಡುವ ಇವರು ಪ್ರತ್ಯೇಕ ಬ್ಯಾರಿ ಭಾಷೆಯ ಜೊತೆಗೆ ಕನ್ನಡ ಲಿಪಿಯನ್ನು ಬಳಸುತ್ತಾರೆ. ಬ್ಯಾರಿಗಳು ಸುನ್ನಿ ಉಪಪಂಗಡವಾದ ಶಫಿಗೆ ಸೇರಿದವರಾಗಿದ್ದಾರೆ. ಇವರು ಶಫಿ ಮತ್ತು ಹನ್ಘಿಗಳಿಗಿಂತ ಭಿನ್ನವಾಗಿದ್ದಾರೆ. ಬಹುಪತ್ನಿತ್ವ ವಿವಾಹ ಪದ್ಧತಿ ಅಸ್ತಿತ್ವದಲ್ಲಿದೆ. ಸಾಮಾನ್ಯವಾಗಿ ಹನ್ಪಿಗಳು ಶಫಿ ಪಂಗಡಕ್ಕೆ ಹೆಣ್ಣು  ಮಕ್ಕಳನ್ನು ವಿವಾಹ   ಮಾಡಿ ಕೊಡುವುದಿಲ್ಲ. ಸೋದರ ಸಂಬಂಧಿಗಳೊಡನೆ ವಿವಾಹಕ್ಕೆ ಸಮ್ಮತಿಯಿದ್ದರೂ, ಸಾಮಾನ್ಯವಾಗಿ ಅಂತಹ ವಿವಾಹಗಳು ನಡೆಯುವುದಿಲ್ಲ. ಆಸ್ತಿಯ ಉತ್ತರಾಧಿಕಾರದಲ್ಲಿ ಗಂಡು ಮಕ್ಕಳಿಗೆ ದೊರೆಯುವ ಅರ್ಧಪಾಲನ್ನು ಹೆಣ್ಣು ಮಕ್ಕಳು ಪಡೆಯುತ್ತಾರೆ. ಇವರ ಪರಂಪರಾಗತ ವೃತ್ತಿ ವ್ಯಾಪಾರ. ಆದರೆ ವ್ಯವಸಾಯ, ಮೀನು ಹಿಡಿಯುವುದು, ಬೀಡಿಕಟ್ಟುವುದು ಇಂದಿನ ಉದ್ಯೋಗಗಳಾಗಿವೆ. ಇವರಲ್ಲಿ ಕೆಲವರು ಖಾಸಗಿ ಹಾಗೂ ಸರ್ಕಾರಿ ಸಂಸ್ಥೆಗಳಲ್ಲಿ ನೌಕರರಾಗಿ ದುಡಿಯುತ್ತಿದ್ದಾರೆ. ಈ ಸಮುದಾಯದಲ್ಲಿ ಪ್ರಾಂತೀಯ ಮಟ್ಟದ ರಾಜಕೀಯ ನಾಯಕರು ಕಂಡುಬರುತ್ತಾರೆ. ಆಧುನಿಕ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿಹೊಂದಿದ್ದಾರೆ. ಬೇರೆ ಮುಸ್ಲಮ್ ಸಮುದಾಯಕ್ಕೆ ಹೋಲಿಸಿದರು ಇವರು ಆಧುನಿಕ ಸಾಮಾಜಿಕ ಸೌಲಭ್ಯಗಳ ಉಪಯೋಗಗಳನ್ನು ಪಡೆದುಕೊಂಡಿದ್ದಾರೆ.

 

ಮುಸ್ಲಿಮ್ : ಮಾಪಿಳ್ಳೆ

ಮಾಪಿಳ್ಳರು, ಅರಬ್ ದೇಶದ ಪುರುಷರು ಹಾಗೂ ದೇಶೀಯ ಸ್ತ್ರೀಯರಿಗೆ ಹುಟ್ಟಿದ ಮಕ್ಕಳು ಎಂದು ಕೆಲವರು ಹೇಳುತ್ತಾರೆ. ಇವರು ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಜಮ್ಮಾ ಮಾಪಿಳ್ಳರು ಟೀಪುಸುಲ್ತಾನನ ಕಾಲದಲ್ಲಿ ಇಸ್ಲಾಂಗೆ ಮತಾಂತರ ಹೊಂದಿದ ಕೊಡವರಾಗಿದ್ದಾರೆ. ಜಮ್ಮಾ ಮಾಪಿಳ್ಳರಿಗೆ ಯಾರಿಗೂ ಪರಭಾರೆ ಮಾಡಲಾಗದ ಜಮ್ಮಾ ಭೂಮಿ ಇರುವುದರಿಂದ ಇವರನ್ನು ‘ಜಮ್ಮಾ’ ಮಾಪಿಳ್ಳರೆಂದು ಕೊಡಗಿನಲ್ಲಿ ಕರೆಯುತ್ತಾರೆ. ಇವರಿಗೂ ಸಹ ಕೊಡಗಿನ ಇತರ ಸಮುದಾಯಗಳಿಗಿರುವಂತೆ ‘ಐನ್‌ಮನೆ’ ಗಳಿವೆ. ‘ಐನ್‌ಮನೆಗಳೆಂದರೆ ಶತಮಾನಗಳಿಂದ ಇರುವ ಅವಿಭಕ್ತ ಕುಟುಂಬ’. ಇವರಲ್ಲಿ ‘ಕಾರಣ’ನನ್ನು ಪೂಜಿಸುವ ಪದ್ಧತಿ ಇಂದಿಗೂ ಕಂಡುಬರುತ್ತದೆ.

‘ಶಫಿ’ ಉಪಪಂಗಡಕ್ಕೆ ಸೇರಿದ ಕೊಡವ ಮಾಪಿಳ್ಳರು, ಕೇರಳದ ಮುಸ್ಲಿಂ ಮಾಪಿಳ್ಳರೊಂದಿಗೆ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬ್ಯಾರಿಗಳೊಂದಿಗೆ ವಿವಾಹ ಸಂಬಂಧಗಳನ್ನು ಬೆಳೆಸುತ್ತಾರೆ. ಇವರ ಮನೆತನದ ಹೆಸರುಗಳು ಇವರ ಮೂಲ ವಾಸಸ್ಥಳವನ್ನು ಸೂಚಿಸುತ್ತದೆ. ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ಆಸ್ತಿಯಲ್ಲಿ ಪಾಲುಕೊಡುತ್ತಾರೆ. ಇಸ್ಲಾಮಿಕ್ ಉತ್ತರಾಧಿಕಾರ ನಿಯಮವನ್ನು ಇವರು ಪಾಲಿಸುತ್ತಾರೆ. ವಿವಾಹವಾಗಬೇಕಾದ ವಧು ವರರು ಪ್ರಾರ್ಥನೆ ಸಲ್ಲಿಸಲು ಮಸೀದಿಗಳಿಗೆ ಭೇಟಿ ಕೊಡುತ್ತಾರೆ. ಎರಡು ಗುಂಪುಗಳ ಸಮ್ಮತಿಯ ಮೇರೆಗೆ ವಿವಾಹ ವಿಧಿಗಳನ್ನು ಮುಖ್ಯವಾಗಿ ‘ನಿಖಾ’ವನ್ನು ನಡೆಸುತ್ತಾರೆ. ಮೆಹರನ್ನು ನಗದು ಅಥವಾ ಒಡವೆಗಳ ರೂಪದಲ್ಲಿ ಕೊಡಲಾಗುತ್ತದೆ.

ಮಾಪಿಳ್ಳೆಗಳ ಸಾಂಪ್ರದಾಯಿಕ ಹಾಗೂ ಪ್ರಸ್ತುತ ಉದ್ಯೋಗವು ವ್ಯವಸಾಯ. ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಉದ್ಯೋಗಗಳಲ್ಲೂ ಕೆಲವರಿದ್ದಾರೆ. ಹಲವರು ಸಣ್ಣ ಪ್ರಮಾಣದ ವ್ಯಾಪಾರಗಳಲ್ಲಿ ತೊಡಗಿದ್ದಾರೆ. ‘ತಾಜುಲ್ಲಾ ಮುಸ್ಲಿಂ ಜಮಾತ್’ ಎಂಬ ಒಂದು ಸಂಘಟನೆಯ ಇವರ ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳ ನಿಯಂತ್ರಣವನ್ನು ಮಾಡುತ್ತದೆ. ಕೆಲವು ಹಳ್ಳಿಗಳಲ್ಲಿ ಕಾವೇರಿ ಸಂಕ್ರಮಣ ಮತ್ತು ಹುತ್ತರಿಗಳಂತಹ ಕೆಲವು ಹಬ್ಬಗಳ ಆಚರಣೆಯನ್ನು ಇವರು ಮಾಡುತ್ತಾರೆ. ಆಧುನಿಕ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಇಲ್ಲಿದಿದ್ದರು, ಆಧುನಿಕ ಸಾಮಾಜಿಕ ಸಂಸ್ಥೆಗಳ ಬಗ್ಗೆ ಹೆಚ್ಚಿನ ಒಲವನ್ನು ಇವರು ಹೊಂದಿದ್ದಾರೆ. ಇವರ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಗಳು ಸುಧಾರಣೆಯಾಗಬೇಕಾಗಿದೆ.

 

ಮುಸ್ಲಿಮ್ : ಮೆಮನ

ಮೆಮನರು ಕರ್ನಾಟಕದಲ್ಲಿ ವಲಸೆ ಬಂದ ಕೋಮಿನವರಾಗಿದ್ದಾರೆ. ಕಚ್ಛೇ ಮೆಮನ್ ಮತ್ತು ಹಲಾಯ್ ಮೆಮನ್‌ಗಳೆಂಬ ಎರಡು ಉಪಪಂಗಡಗಳನ್ನು ಹೊಂದಿರುವ ಇವರು ಮೈಸೂರು, ಬೆಂಗಳೂರು ಮುಂತಾದ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ನಂಜುಂಡಯ್ಯ ಹಾಗೂ ಐಯ್ಯರ್ (೧೯೩೦) ಹೇಳುವಂತೆ ಇವರು ಮಂತ್ರಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಜ್ಞಾನವಿರುವ ಒಂದು ಮುಸಲ್ಮಾನ ವರ್ತಕ ಸಮುದಾಯವಾಗಿದೆ. ಇವರು ಉರ್ದು ಹಾಗೂ ಕನ್ನಡ ಭಾಷೆಗಳನ್ನು ಮಾತನಾಡುತ್ತಾರೆ. ಸೋದರ ಸಂಬಂಧಿ ವಿವಾಹಗಳು. ಬಹುಪತ್ನಿತ್ವ ಮತ್ತು ಪತ್ನಿಯ ಮರಣಾನಂತರ ಆಕೆಯ ತಂಗಿಯೊಂದಿಗೆ ವಿವಾಹಕ್ಕೆ ಅನುಮತಿ ಇದೆ. ವಿಚ್ಛೇದನ, ವಿವಾಹ ಮತ್ತು ಆಸ್ತಿಯ ಉತ್ತರಾಧಿಕಾರಿಗಳಿಗೆ ಸಂಬಂಧಿಸಿದಂತೆ ಷರೀಯತ್ ಕಾನೂನುಗಳಿಗೆ ಅಂಟಿಕೊಂಡಿದ್ದಾರೆ. ನಾಲ್ಕರಿಂದ ಏಳನೆಯ ವರ್ಷದವರೆಗಿನ ಮಕ್ಕಳಿಗೆ ‘ಸುನತಿ’ ಕಾರ್ಯ ನಡೆಯುತ್ತದೆ. ವಧು ಗೃಹದಲ್ಲಿ ನಡೆಯುವ ಇಸ್ಲಾಂ ಮಾದರಿಯ ವಿವಾಹ ಮುಕ್ಯ ವಿಧಿ ನಿಖಾಹ್ ಆಗಿದೆ. ನಿಖಾಹ್ ಮರುದಿನ ವರನ ಮನೆಯಲ್ಲಿ ‘ವಲೀಮಾ’ ಇರುತ್ತದೆ. ಮೆಮನ್‌ರು ವ್ಯಾಪಾರಿಗಳಾಗಿದ್ದಾರೆ. ‘ಜಮಾತ್’ ಎಂದು ಕರೆಯಲ್ಪಡುವ ಸಂಘಟನೆಯನ್ನು ಹೊಂದಿದ್ದಾರೆ. ಇದು ಈ ಸಮುದಾಯದ ಏಳ್ಗೆಗಾಗಿ ಶ್ರಮಿಸುತ್ತದೆ. ಇವರ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಪರಿಸ್ಥಿತಿಯು ಅಗತ್ಯವಾಗಿ ಸುಧಾರಣೆಯಾಗಬೇಕಾಗಿದೆ.

 

ಮುಸ್ಲಿಮ್ : ಮೆಹ್ತರ್

ಮೆಹ್ತರ್‌ರು ಕರ್ನಾಟಕದಲ್ಲಿ ಹಲಾಲ್‌ಖೋರ ಮತ್ತು ಲಾಲ್ ಬೇಗಿಗಳೆಂದು ಪರಿಚಿತರಾಗಿದ್ದಾರೆ. ಇವರ ಮೌಖಿಕ ಪರಂಪರೆಯಲ್ಲಿ ಉತ್ತರ ಭಾರತದಿಂದ ಮಹಾರಾಷ್ಟ್ರದ ಮೂಲಕ ವಲಸೆ ಬಂದವರೆಂದು ತಿಳಿದುಬರುತ್ತದೆ. ಪ್ರಮುಖವಾಗಿ ಧಾರವಾಡ, ಬೆಳಗಾವಿ ಹಾಗೂ ಕೆಲವು ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ವಾಸಿಸುವ ಇವರು ಇತರೆ ಮುಸ್ಲಿಮ್ ಗುಂಪಿನೊಡನೆ ಸೇರಿ ಹೋಗಿರುವುದರಿಂದ ಇವರ ಪ್ರತ್ಯೇಕ ಸಂಖ್ಯೆಯು ದೊರೆಯುವುದಿಲ್ಲ. ಕರ್ನಾಟಕದಲ್ಲಿ ಭಂಗಿ, ಮೆಹ್ತರ್, ಓಲ್ಲಂಗಾ, ರುಖೀ, ಮಾಲ್ಕಣ, ಹಲಾಲ್‌ಖೋರ್, ಲಾಲ್‌ಬೇಗಿ, ಕೋರಾರ್, ಇತ್ಯಾದಿ ಹೆಸರುಗಳಿಂದ ಗುರುತಿಸಲ್ಪಡುತ್ತಾರೆ. ಮನೆಗಳಲ್ಲಿ ಹಿಂದಿ ಹಾಗೂ ಉರ್ದು ಮಾತನಾಡುವ ಇವರು ಕನ್ನಡವನ್ನು ಮಾತನಾಡಬಲ್ಲರು. ಮುಸ್ಲಿಂ ವಿವಾಹ ಪರಂಪರೆಗಳನ್ನು ಇವರು ಹೊಂದಿದ್ದಾರೆ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ  ಹೆಚ್ಚಾಗಿ ಕಂಡುಬರುತ್ತದೆ. ಇವರ ಸಾಂಪ್ರದಾಯಿಕ ಮತ್ತು ಇಂದಿನ ಉದ್ಯೋಗ ಕಸಗುಡಿಸುವುದು ಮತ್ತು ಹೊಲಸನ್ನು ತೆಗೆಯುವುದು, ಇವರು ತಮ್ಮ ಸಾಂಸ್ಕೃತಿಕ, ಸಾಮಾಜಿಕ ಆಚರಣೆಗೆ ಇಸ್ಲಾಂನ್ನು ಅನುಸರಿಸುತ್ತಾರೆ. ಇವರಲ್ಲಿ ಶಿಕ್ಷಣದ ಮಟ್ಟ ಕಡಿಮೆಯಾದರೂ, ಆಧುನಿಕ ಸಾಮಾಜಿಕ ಸಂಸ್ಥೆಗಳ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಉಪಯೋಗಗಳನ್ನು ಸ್ವಲ್ಪಮಟ್ಟಿಗೆ ಪಡೆದುಕೊಳ್ಳುತ್ತಿದ್ದಾರೆ. ಇವರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿಯು ಸುಧಾರಣೆಯಾಬೇಕಾಗಿದೆ.

 

ಮುಸ್ಲಿಮ್ : ಮೆಹ್ಥಾವಿಯ

ಮೆಹ್ಥಾವಿಯರನ್ನು ದಾಯಿಯ ಎಂದು ಕರ್ನಾಟಕದಲ್ಲಿ ಕರೆಯಲಾಗುತ್ತದೆ. ದಾಯರಾ, ದಾಯಾ ಮುಸ್ಲಿಮ್‌ರೆಂಬ ಹೆಸರನ್ನು ಹೊಂದಿರುವ ಇವರು ರೇಷ್ಮೆ ವ್ಯಾಪಾರ ಮಾಡುತ್ತಾ ಉಳಿದ ಮುಸ್ಲಿಂ ಕೋಮುಗಳಿಂದ ಭಿನ್ನವಾದ ಸಮುದಾಯ ನಿರ್ಮಿಸಿಕೊಂಡವರೆಂದು ಥರ್ಸ್ಟನ್ (೧೯೦೯) ಗುರುತಿಸಿದ್ದಾರೆ. ಈಗ ಇವರು ಬೆಂಗಳೂರು, ಮೈಸೂರು ಹಾಗೂ ಮುಂತಾದ ನಗರ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಉರ್ದು ಇವರ ಮಾತೃಭಾಷೆಯಾದರೂ ಕನ್ನಡ ಮಾತನಾಡಿ, ಕನ್ನಡ ಲಿಪಿ ಬಳಸುತ್ತಾರೆ. ಸೋದರ ಸಂಬಂಧಿಗಳ ವಿವಾಹಕ್ಕೆ ಸಮ್ಮತಿ ಇದೆ ಹಾಗೂ ಬಹುಪತ್ನಿತ್ವಕ್ಕೆ ಅವಕಾಶವಿದೆ. ಸ್ತ್ರೀ ಪುರುಷರಿಬ್ಬರಿಗೂ ಆಸ್ತಿಯ ಹಕ್ಕು ಇದೆ. ಸ್ತ್ರೀಯರಿಗೆ ಆಸ್ತಿಯಲ್ಲಿ ಚಿಕ್ಕಪಾಲು ದೊರೆಯುತ್ತದೆ. ಹೆಣ್ಣು-ಗಂಡು ಮಕ್ಕಳಿಬ್ಬರಿಗೂ ‘ಆಕಿಕಾ’ ಹಾಗೂ ನಾಲ್ಕುವರ್ಷ, ನಾಲ್ಕುತಿಂಗಳು ಮತ್ತು ನಾಲ್ಕನೇ ಮೆಕ್ತಾಬ್ ವಿಧಿಗಳು ನಡೆಯುತ್ತವೆ. ಐದರಿಂದ ಏಳು ವರ್ಷಗಳೊಳಗೆ ಗಂಡು ಮಕ್ಕಳಿಗೆ ‘ಸುನತಿ’ ಕಾರ್ಯ ನಡೆಯುತ್ತದೆ. ವಿವಾಹವು ಸಾಮಾನ್ಯವಾಗಿ ವಧುವಿನ ಮನೆಯಲ್ಲಿ ನಡೆಯುತ್ತದೆ. ವಿವಾಹದ ಪ್ರಮುಖ ವಿಧಿಯಾದ ‘ನಿಖಾಹ’ವನ್ನು ಅದೇ ಪಂಗಡದ ‘ಖಾಜಿ’ ವಧುವಿನ ಗೃಹದಲ್ಲಿ ಅಥವಾ ಮಸೀದಿಯಲ್ಲಿ ಶಾಸ್ತ್ರೋಕ್ತವಾಗಿ ನೆರವೇರಿಸುತ್ತಾರೆ. ‘ಜೆಯಾರತ್’ ಮತ್ತು ‘ಜೆಹ್ಲಮ್’ ಅನುಕ್ರಮಾಗಿ ಮರಣದ ಮೂರು ಮತ್ತು ನಲವತ್ತನೇ ದಿನ ನಡೆಸುತ್ತಾರೆ. ಇವರಲ್ಲಿ ಕೆಲವು ಜನರು ಸಾಮಾನ್ಯ ವರ್ತಕರಾಗಿದ್ದಾರೆ. ಇವರು ಕೋಮಿನ ಸಂಘಟನೆಯನ್ನು ‘ದಾಯ್ರಾತುಲ್ ಇಸ್ಲಾಂ’ ಎಂದು ಕರೆಯುತ್ತಾರೆ. ಇದು ಈ ಸಮುದಾಯದ ಶೈಕ್ಷಣಿಕ, ಆರ್ಥಿಕ ಪ್ರಗತಿಗೆ ಶ್ರಮಿಸುತ್ತಿದೆ. ಆಧುನಿಕ ಶಿಕ್ಷಣಕ್ಕೆ ಹೆಚ್ಚಿನ ಆಸಕ್ತಿ ಇಲ್ಲದಿದ್ದರೂ, ಆಧುನಿಕ ಸಾಮಾಜಿಕ ಸಂಸ್ಥೆಗಳ ಪ್ರಯೋಜನವನ್ನು ಪಡೆಯುತ್ತಿದ್ದಾರೆ.

ನೋಡಿ:

ಮೊಹಮ್ಮದ್, ಐ.ಕೆ., ೧೯೮೬. ನವಾಯತರು  ವೈಜಯಂತಿ, ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ, ಮೈಸೂರು

ಸೈಯದ್ ಜೆ.ಎಸ್., ೧೯೮೨. ನವಾಯತರು, ಐ.ಬಿ.ಎಚ್. ಪ್ರಕಾಶನ, ಬೆಂಗಳೂರು

Abdual Latheef, S.A., Reddy and B.K.C. Reddy., 1997.

‘Inbreeding among Sunni Muslims of Anantapur Andhra Pradesh’, Journal of Human Ecology  8(3)22-223.

Basha, S.Yousef, K.N.Reddy and V.Rami Reddy., 1998.

‘Dental Caries and Fluorisus Among Muslims of Kurnool, Andhra Pradesh’, Journal of Human Ecology  9(1) 7-81

Bhaskar, Manu., 1965. ‘Family Law and Customary Practices of Muslims in Southern Kerala’, The Eastern Anthropologist 49(1)-26

Basu, Arabinda., 1983. ‘Dermatoglyphics of the Muslims of Mysore City’, Bulletin of The Department of Anthropology Vol. 32

Campbell, James M.(ed), 1899. Gazetteer of Bombay Presidency, ‘Gujarat Population : Musalmans and Parsis’ Vol. IX, Part 2, Goverment Central Press, Bombay.

Dale, Stephen Frederic. 1981. ‘Mappilas of Malabar’, Islamic Society on The South Asian Frontier : Oxford University Press, Bombay

D’ Souza, Victor S., 1978. ‘Status Groups Among The Moplahs On The South-West coasts of India’ In : Caste and Social Stratification Among Muslims in India, Imtiaz Ahmad (ed), New Delhi.

D’ Souza and Victor., 1959. ‘The Navayats of Karnataka’ : A Study in Cultural Contact, reviewed by Friedich, Paul, 61-534, American Anthropologist

D’ Souza, Victor., 1959. ‘Social Organisation and Marriage Customs of The Moppilas On The Southwest Coast of India’ Anthropomous 54:48-516

Gough, Kathaleen E., 1961. ‘Mappila of North Kerala’ In : Matrilineal Kinship,  Dravid M Sehneider and Kathleen, Gough (ed), California University Press.

Fawcett, Fred., 1912. ‘Adikal and Other Customs of The Muppans’ Folklore, 23, PP.3-34.

Fawcett., F., 1901. ‘War Songs of the Mappilas of Malabr’, Indian Antiquity.

Jain, S.P., 1975. The Social Structure of Hindu – Muslims Community, National Publishing House, Delhi.

Jones, V.R and L.Bevan, 1941. ‘Woman in Islam’, A Manual with Special Reference to Conditions in India, Lucknow Publications House, Lucknow

Khan Mumtaz Ali., 1984. Muslims in The Process of Rural Development in India, A Study of Karnataka, :Uppal Publishing House, New Delhi.

Koya, S.M.Mohd., 1983. Mappilas of Malabar : Sandhya Publications, Calicut

Koya, Mohammad S.M., 1983. Mappilas of Malabar : Studies in Social and Cultural History :  Sandhya Publishers, Calicut

Leon Sinder., 1965. ‘Caste Instability in Moghul India’ Reviewed by Furer-Haimendorf, Christoph Von, Americal Anthropologist  67 : 1035

Malhotra K.C., K.Ahamadi, R.B. Kazi and N.Bhosale., 1975. ‘Consanguineous Marrages Among Five Muslims Isolates of Maharashtra’ proceedings. of 2nd conf. of Ind. Soc. of Human Genet, Calcutta.

Mathur, P.R.G., 1977. The Mappila Fisherfolk of Kerala : A Study in Inter – Relationship Between Habitat, Technology, Economy, Society and Culture : Kerala Histrorical Society, Trivandrum

Mathur, P.R.G., 1983. ‘Relgon and Society Among the Mappila Fisherfolk of Kerala’, Man in India  63 26-96

Mauroof, Mohamed., 1972. ‘Aspects of Religion, Economy and Society Among The Muslims of Ceylon’, Contribution to Indian Sociology  6:6-83

Miller, R.E., 1976. Mappila Muslims of Kerala : A Study in Islamic Trends Madras, Orient Longman.

Misra, satihs, C., 1965. ‘Muslims Communities in Gujarat : Preliminary Studies in Their History and Social Organisation’, reviewed by Egal, Zekiye, American Anthropologist  67:1304

Moses, S.T.1923. ‘The Muhammadans of Calicat’,  Man in India 3,  :PP. 7-87.

Pais, Alexnder A., 1991-1920. ‘The Navayats and Account of Their History and Their Customs’, Quarterly Journal of Mythic Society,  Vol.10 pp.41-58

Rami Reddy, V., P.B. Vijayalakshmi & B.K. Chandrashekar Reedy., 1982. ‘Some Dental Features among the Muslims of South – Eastern Andhra Pradesh’, Man in India, Vol.62