ಮೊಂಡರ, ಹೆಸರುಗಳು  ಕರ್ನಾಟಕದ ಜಿಲ್ಲಾವಾರು ಗೆಜೆಟಿಯರ್‌ನಲ್ಲಿ ವಿವಿಧ ರೀತಿಯಲ್ಲಿ ನಮೂದಿತವಾಗಿದೆ. ಉದಾ:ಮೈಸೂರ್ ಗೆಜೆಟಿಯರ್ ಸಂಪುಟ ಒಂದರಲ್ಲಿ ಮೊಂಡರು ಬೇಡರ ಒಂದು ಒಳಪಂಗಡ ಎಂದು ಗುರುತಿಸಿದ್ದಾರೆ. ತುಮಕೂರು, ಬಳ್ಳಾರಿ ಮತ್ತು ಕೋಲಾರದ ಗೆಜೆಟಿಯರ್‌ಗಳಲ್ಲಿ ಮೊಂಡಬೇಡ ಎಂದು ನಮೂದಿಸಲಾಗಿದೆ. ಹೀಗೆ ವಿವಿಧ ರೀತಿಗಳಲ್ಲಿ ಈ ಸಮುದಾಯದ ಹೆಸರನ್ನು ಗುರುತಿಸಲಾಗಿದೆ. ಆದರೆ ಮೊಂಡಿ, ಲಂಡ, ಕಲ್ಲಡಿಸಿದ್ದ ಹಾಗೂ ಕಲ್ಲಡಿ ಮಂಗಮ ಹೆಸರುಗಳು ಮೋಡಿ ಹಾಕಿ ಭಿಕ್ಷೆ ಬೇಡಿ ಜೀವಿಸುವ ಜನರ ಕುಲಸೂಚಕ ಪದಗಳಾಗಿವೆ. ಮೊದಲೆರಡು ಪದಗಳು ಸಾಮಾಜಿಕ ಅನಿಷ್ಟತೆಯನ್ನುಂಟುಮಾಡುವ ಈ ಜನರ ಸ್ಥಿತಿಯನ್ನು ಸೂಚಿಸಿದರೆ ಮುಂದಿನೆರಡು ಪದಗಳು ಈ ಜನರು ತಮ್ಮನ್ನು ತಾವೇ ಹೊಡೆದುಕೊಳ್ಳುವ ಹೀನಸ್ಥಿತಿಯನ್ನು ಸೂಚಿಸುತ್ತದೆ. ಈ ಜನರು ತಮಿಳು ಭಾಷೆಯನ್ನಾಡುತ್ತಾರೆ. ತೆಲುಗಿನ ಬಂಡ ಜನರನ್ನು ಹೋಲುತ್ತಾರೆ. ತೆಲುಗಿನ ಬಂಡರೆಂದರೆ ಸಾಮಾಜಿಕ ಅನಿಷ್ಟತೆಯನ್ನುಂಟುಮಾಡುವ ಜನರು ಎಂದರ್ಥ. ಭಿಕ್ಷೆ ಮಾಡುವ ಈ ಮೋಡಿ ಜನ ಭಿಕ್ಷೆ ಹಾಕದಿದ್ದರೆ ತಮ್ಮೊಂದಿಗೆ ಇರುವು ಕಲ್ಲಿನಿಂದ ತಲೆಚೆಚ್ಚಿಕೊಂಡು ಭಿಕ್ಷೆ ನೀಡುವಂತೆ ಒತ್ತಾಯಿಸುತ್ತಾರೆ (ಚಂದ್ರಪ್ಪ.ಎನ್ ೧೯೯೩).

ಥರ್ಸ್ಟನ್ ಇವರನ್ನು ಮುಂಡ ಪೋತೋ ಮಕ್ರ ಮಂಡೋಲಿ ಎಂದು ಗುರುತಿಸುತ್ತಾರೆ. ಮುಂಡ ಪೋತೋ ಎಂದರೆ ತಲೆಯನ್ನು ಸುಟ್ಟುಕೊಳ್ಳುವುದು ಎಂದರ್ಥ ಎಂದು ಗುರುತಿಸಿದ್ದಾರೆ. ಇವರನ್ನು ಪುರಿ ಜಗನ್ನಾಥ ದೇವಾಲಯದ ಬೀದಿಗಳಲ್ಲಿ ಓಡಾಡುವ ಭಿಕ್ಷುಕರು ಎನ್ನುತ್ತಾರೆ. ಅಲೆಮಾರಿಗಳಾದ ಮಾಂಡಿ-ಮೊಂಡ-ಮುಂಡರು ಭಿಕ್ಷಾ ವೃತ್ತಿಯನ್ನವಲಂಬಿಸಿ ಡೊಂಬರಂತೆ, ಮೋಡಿಕಾರರಂತೆ ಭಾರತದ ಮೂಲೆ ಮೂಲೆಗಳಲ್ಲಿ ಅಲೆಯುತ್ತಿದ್ದಾರೆಂದು ಹೇಳಬಹುದು. ಕನ್ನಡ ಭಾಷೆಯಲ್ಲಿ ಇವರನ್ನು ಮೊಂಡ, ಮೊಂಡು, ಮುಕ್ರಿ, ಮೃಕುಂಡ, ಮುಂಡಲ, ಬಂಡೆ ಎಂದು, ಮೊಂಡಿ, ಮೊಂಡಿಗ, ಮೊಂಡಿವಾರು, ಮೆಂಡಿ ಪೊಟ್ಟ, ಬಂಡ ಇವು ತೆಲುಗು ಭಾಷೆಯಲ್ಲಿ ಇವರನ್ನು ಗುರುತಿಸುವ ಪದಗಳು.

ಮೊಂಡ ಎಂದರೆ ಹಟಮಾರಿ ಎಂದರ್ಥ. ಮೊಂಡು ಬಿದ್ದು ಭಿಕ್ಷೆ ಬೇಡುವ ವೃತ್ತಿಯನ್ನವಲಂಬಿಸಿದ್ದರಿಂದಲೇ ಈ ಅಲೆಮಾರಿ ಸಮುದಾಯದ ಜನರಿಗೆ ಈ ಹೆಸರು ಬಂದಿರಬಹುದು. ಇವರು ಕರ್ನಾಟಕದಲ್ಲಿ ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮುಂತಾದ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಮುಂಡ ಪದಕ್ಕೆ ಸಂಸ್ಕೃತದಲ್ಲಿ ಅನಾಗರಿಕ ಎಂಬ ಜನವಾಚಿಕ ಅರ್ಥ. ಅಲ್ಲದೆ ಮುಖಂಡ ನಾಯಕ, ಒಡೆಯ, ಮುಂದಾಳು ಎಂಬ ಅರ್ಥಗಳೂ ಇವೆ. ಅಥರ್ವಣ ವೇದದ ಒಂದು ಉಪನಿಷತ್ತಿಗೆ ಮುಂಡಕೋಪನಿಷತ್ ಎಂಬ ಹೆಸರಿದೆ. ರಾಮಕೃಷ್ಣಾಶ್ರಮದಿಂದ ಪ್ರಕಟವಾಗಿರುವ ಈ ಉಪನಿಷತ್ತಿಗೆ ಆದಿದೇವಾನಂದರು ಪ್ರಸ್ತಾವನೆ ಬರೆಯುತ್ತಾ ಮುಂಡ ಎಂಬ ಪದದಿಂದ ಇದಕ್ಕೆ ಮುಂಡಕೋಪನಿಷತ್ತು ಎಂದು ಹೆಸರು ಬಂದಿರಬಹುದು ಎಂದಿದ್ದಾರೆ.

ಮೊಂಡರಲ್ಲಿ ಅವರದೇ ಆದ ಕುಲಕಸುಬು ಯಾವುದು ಎಂಬುದರ ಬಗ್ಗೆ ಥರ್ಸ್ಟನ್, ನಂಜುಂಡಯ್ಯ, ಚಂದ್ರಶೇಖರ ಕಂಬಾರ ಹಾಗೂ ಇತರ ವಿದ್ವಾಂಸರು ಭಿಕ್ಷಾಟನೆಯೆಂದು ಗುರುತಿಸುತ್ತಾರೆ. ಆದರೆ ಇತ್ತೀಚೆಗೆ ಕೆಲವು ಸ್ಥಳಗಳಲ್ಲಿ ನೆಲೆ ನಿಂತಮೇಲೆ ಇವರು ಕೃಷಿ, ವ್ಯಾಪಾರ, ಕೂಲಿ, ಇತ್ಯಾದಿ ವೃತ್ತಿಗಳನ್ನು ಅವಲಂಬಿಸಿದ್ದಾರೆ. ಇವರಲ್ಲಿ ಕೆಲವರು ತಮ್ಮ ಕುಲದೇವತೆ ಎಲ್ಲಮ್ಮ ಎಂದು ಹೇಳುತ್ತಾರೆ. ಇವರು ತಿರುಪತಿ ತಿಮ್ಮಪ್ಪ, ಮಂಜುನಾಥ ದೇವರುಗಳನ್ನು ಪ್ರಧಾನವಾಗಿ ಪೂಜಿಸುತ್ತಾರೆ. ಮೊಂಡರಲ್ಲಿ ಬಾಲ್ಯ ವಿವಾಹ ಪದ್ಧತಿಗಳು ನಡೆಯುತ್ತಿದ್ದವೆಂದು ಕೆಲವು ವಿದ್ವಾಂಸರುಗಳು ಗುರುತಿಸಿದ್ದಾರೆ. ಆದರೆ ಇವರಲ್ಲಿ ಇತ್ತೀಚೆಗೆ ವಯಸ್ಕ ವಿವಾಹಗಳು ಹೆಚ್ಚಾಗಿ ನಡೆಯುತ್ತಿವೆ. ಮೊಂಡರಲ್ಲಿ ಕಟ್ಟಬಡಿ (ಕೂಡಿಕೆ) ಎಂಬ ಹೆಸರಿನ ವಿವಾಹ ಪದ್ಧತಿ ಇದೆ. ಈ ಪದ್ಧತಿಯಲ್ಲಿ ವಿಧವಾ ವಿವಾಹಗಳು ಅಂತರ ಜಾತಿಯ ಕೂಡಿಕೆಗಳು, ವಿಚ್ಛೇದಿತರು ತಮಗಿಷ್ಟ ಬಂದವರ‍ನ್ನು ಸಂಗಾತಿಗಳನ್ನಾಗಿ ಆರಿಸಿಕೊಳ್ಳುವ ವ್ಯವಸ್ಥೆ ಇದೆ. ಇವರಲ್ಲಿ ಸಾವಿನ ನಂತರ ಮೂರನೇ ದಿನ ಮತ್ತು ಹನ್ನೊಂದನೆಯ ದಿನಗಳಲ್ಲಿ ಎರಡು ಶಾಸ್ತ್ರಗಳನ್ನು ಆಚರಿಸುತ್ತಾರೆ. ಹನ್ನೊಂದನೆಯ ದಿನದ ಧಾರ್ಮಿಕ ಆಚರಣೆಗೆ ಕುಲಪುರೋಹಿತ/ಕೆಲವು ಕಡೆ ಲಿಂಗಾಯತ/ಬ್ರಾಹ್ಮಣರು ಬಂದು ಪುಣ್ಯೋಜನ ಮಾಡುತ್ತಾರೆ.

ಮೊಂಡರು ತಮ್ಮ ಅಲೆಮಾರಿ ಜೀವನ ಬಿಟ್ಟ ನಂತರ ಕೃಷಿ ಕೂಲಿ, ವ್ಯವಸಾಯ, ಸಣ್ಣಪುಟ್ಟ ವ್ಯಾಪಾರ, ಇತ್ಯಾದಿ ಕಸುಬುಗಳನ್ನು ಅವಲಂಬಿಸಿದ್ದಾರೆ. ಸ್ಥಿರವಾಗಿ ನೆಲೆಸಿದ ನಂತರವೂ ಇವರು ಆರ್ಥಿಕವಾಗಿ ಸ್ವಾವಲಂಬನೆಯನ್ನು ಪಡೆದಿಲ್ಲ. ಇವರು ಆಧುನಿಕ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಆದರೆ ಅದಕ್ಕೆ ಬೇಕಾಗುವ ಆರ್ಥಿಕ ಬೆಂಬಲ ಇವರಲ್ಲಿ ಇಲ್ಲ. ಇವರು ಪರಿಶಿಷ್ಟ ಜಾತಿ ಎಂದು ಗುರುತಿಸಿದ್ದರೂ ಪರಿಶಿಷ್ಟರ ಬಹುಸಂಖ್ಯಾತರಾದ ಎಡಗೈ-ಬಲಗೈ ಗುಂಪುಗಳ ಸ್ಪರ್ಧೆಯಲ್ಲಿ ಇವರಿಗೆ ಸಿಗಬೇಕಾದ ಸೌಲಭ್ಯಗಳು ಮತ್ತು ಮಾನ್ಯತೆಗಳು ದೊರಕುತ್ತಿಲ್ಲ. ಇತ್ತೀಚೆಗೆ ಇವರು ಸರಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ. ಇವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿಗಳು ಸುಧಾರಣೆಯಾಗಬೇಕಾಗಿದೆ.

ನೋಡಿ:

ಚಂದ್ರಶೇಖರ ಕಂಬಾರ, ೧೯೮೫ ‘ಕನ್ನಡ : ಕನ್ನಡ ಜಾನಪದ ವಿಶ್ವಕೋಶ, ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು

ಚಂದ್ರಪ್ಪ ಎನ್., ೧೯೯೩. ಮೊಂಡರ ಸಂಸ್ಕೃತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.