ರ್ನಾಟಕದಲ್ಲಿ ಮೀನು ಹಿಡುಯುವ ಸಮುದಾಯಗಳನ್ನು ಬೆಸ್ತರು, ಮೊಗವೀರ, ಮರಕಾಲಿ, ಮೊಗೇರ, ಗಂಗಮತಸ್ಥ, ಪಟ್ಟದವ, ಅಂಬಿಗ, ಖಾರ್ವಿ ಮುಂತಾದ ಹೆಸರುಗಳಿಂದ ಗುರುತಿಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆ ಬೆಸ್ತರು ಮೊಗವೀರ ಎಂಬ ಪದದಿಂದ ಗುರುತಿಸಲ್ಪಡುತ್ತಾರೆ. ಮರಕಾಲ ಎನ್ನುವುದು ಇನ್ನೊಂದು ಹೆಸರು, ಮೊಗೇರ, ಮರಕಾಲ ಎಂಬ ಹೆಸರುಗಳ ಬಳಕೆ ವಿರಳವಾಗುತ್ತ ಬಂದು ಈಗ ಮೊಗವೀರ ಎಂಬ ಹೆಸರೆ ಸಾರ್ವತ್ರಿಕವಾಗಿ ರೂಢಿಯಲ್ಲಿದೆ. ಮೊಗವೀರರನ್ನು ಮೋಗವೀರಾ ಎಂದೂ ಕರೆಯುತ್ತಾರೆ. ಮೀನು ಹಿಡಿಯುವ ಸಮುದಾಯದವರಾಗಿ ಮೊಗೆಯರು ಮತ್ತು ಮಾರಕಾಲವೆಂದು ಪರಿಚಿತರಾಗಿದ್ದಾರೆ. ಈ ಕೋಮಿನ ಹೆಸರು ‘ದೋಣೆ’ ಎಂದು ಅರ್ಥ ಕೊಡುವ ‘ಮಾರಕಾಲ’ ಎಂಬ ಪದದಿಂದ ಉತ್ಪತ್ತಿಯಾಗಿರಬಹುದು.

ಮೊಗವೀರರು ಕರ್ನಾಟಕದಲ್ಲಿ ದಕ್ಷಿನಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಕೇಂದ್ರೀಕೃತವಾಗಿದ್ದಾರೆ. ಇವರು ಇಲ್ಲಿ ಮೊಗೇಯರು ಮತ್ತು ಮಾರಕಾಲವೆಂದು ಗುರುತಿಸಲ್ಪಡುತ್ತಾರೆ. ದ್ರಾವಿಡ ಭಾಷೆಗಳಲ್ಲೊಂದಾದ ತುಳು ಇವರ ಮಾತೃಭಾಷೆ. ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಈ ಸಮುದಾಯವು ಮಾತೃ ನಡವಳಿಯ ಬಳ್ಳಿಗಳನ್ನು ಹೊಂದಿದೆ. ಇದನ್ನು ತುಳು ಭಾಷೆಯಲ್ಲಿ ಬರಿಗಳೆಂದು ಕರೆಯುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೊಗವೀರರ ಸಮುದಾಯದಲ್ಲಿ ಕಂಡುಬರುವ, ಪ್ರಮುಖ ಬಳ್ಳಿಗಳು – ಆನೆಬಳ್ಳಿ, ಕಂಚಿನಬಳ್ಳಿ, ಚಂದನ್‌ಬಳ್ಳಿ, ಶೆಟ್ಟಿಬಳ್ಳಿ, ಹಾಲಿನಬಳ್ಳಿ, ಹೊನ್ನೆಬಳ್ಳಿ, ಇತ್ಯಾದಿ. ಕೆಲವು ಸಮುದಾಯಗಳಲ್ಲಿ ಇರುವಂತೆ ಮೊಗವೀರರಲ್ಲಿಯೂ ಒಂದೇ ಬಳ್ಳಿಗಳ ವಿವಾಹ ನಿಷಿದ್ಧವಾಗಿದೆ. ಸೋದರ ಸಂಬಂಧಿಗಳೊಡನೆ ವಿವಾಹಕ್ಕೆ ಸಮ್ಮತಿ ಇದೆ. ವಧು ದಕ್ಷಿಣೆ ಹಾಗೂ ವರದಕ್ಷಿಣೆಯನ್ನು ನಗದು ಮತ್ತು ವಸ್ತುಗಳ ರೂಪದಲ್ಲಿ ಕೊಡಲಾಗುತ್ತದೆ. ಇವರಲ್ಲಿ ಪತಿ ಪತ್ನಿಯರಿಬ್ಬರಿಗೂ ವಿಚ್ಛೇದನ ಹಾಗೂ ಪುನರ‍್ವಿವಾಹಕ್ಕೆ ಅವಕಾಶ ಇದೆ. ಇವರು ಅಳಿಯ ಸಂತಾನದ ಉತ್ತರಾಧಿಕಾರದ ನಿಯಮವನ್ನು ಅನುಸರಿಸುತ್ತಾರೆ.

ಮೀನುಗಾರಿಕೆಯಲ್ಲಿ ಮೊಗವೀರರು

ಮೀನುಗಾರಿಕೆಯಲ್ಲಿ ಮೊಗವೀರರು

ಇವರ ಪಾರಂಪರಿಕ ಮತ್ತು ಇಂದಿನ ಉದ್ಯೋಗ ಮೀನು ಹಿಡಿಯುವುದು. ಆದರೆ ಇತ್ತೀಚೆಗೆ ಇವರಲ್ಲಿ ಕೆಲವರು ತಮ್ಮ ಪಾರಂಪರಿಕ ವೃತ್ತಿ ಮೀನುಗಾರಿಕೆಯನ್ನು ತ್ಯಜಿಸುತ್ತಿದ್ದಾರೆ. ಪರಂಪರಾಗತವಾದ ಸಮುದಾಯ ಸಮಿತಿಗಳನ್ನು ಹೊಂದಿರುವ ಇವರು ಅದನ್ನು ‘ಪಟ್ಟಸಮಸ್ತರು’ ಅಥವಾ ‘ಪಾತ್ರಿಯಸಭಾ’ ಎನ್ನುವರು. ಇವರ ದೈವಗಳು ಮಾಸ್ತಅಮ್ಮ, ಮಾರಿ ಮಹಾಲಕ್ಷ್ಮಿ, ಇತ್ಯಾದಿ. ಇವರು ಬೊಬ್ಬರಯ್ಯ ಇನ್ನಿತರ ಭೂತಗಳನ್ನು ಪೂಜಿಸುತ್ತಾರೆ. ಬ್ರಾಹ್ಮಣರು ಮತ್ತು ಸಮುದಾಯದಲ್ಲಿ ಇರುವ ಧಾರ್ಮಿಕ ವಿಶೇಷಜ್ಞರು ಇವರ ಧಾರ್ಮಿಕ ವಿಧಿಗಳನ್ನು ಪೂರೈಸುತ್ತಾರೆ. ಈ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರಸ್ಥರನ್ನು ಹೊಂದಿದೆ. ಕೆಲವರು ಮೀನು ಹಿಡಿಯುವುದು, ಕಿರಾಣಿ ವ್ಯಾಪಾರ, ಸ್ವಯಂ ಉದ್ಯೋಗಗಳನ್ನಾಶ್ರಯಿಸಿದ್ದಾರೆ. ಇವರು ಆಧುನಿಕ ಶಿಕ್ಷಣ ಹಾಗೂ ಇತರ ಆಧುನಿಕ ಸಾಮಾಜಿಕ ಸಂಸ್ಥೆಗಳ ಬಗ್ಗೆ ಹೆಚ್ಚಿನ ಒಲವನ್ನು ತೋರಿಸುತ್ತಿದ್ದಾರೆ.

ನೋಡಿ : ದಕ್ಷಿಣ ಕನ್ನಡ ಮೊಗವೀರರ ಮಹಾಸಂಘ , (ರಿ) ಕಾರ್ಯ ಸಾಧನೆಯ ಪ್ರಥಮ ವರದಿ, ೧೯೨೭

ಪುರುಷೋತ್ತಮ ಬಿಳಿಮಲೆ, ೧೯೯೦. ಕರಾವಳಿ ಜಾನಪದ, ಮಂಗಳ ಗಂಗೋತ್ರಿ, ಮಂಗಳೂರು.

ವೆಂಕಟರಾಜ, ಪುಣೆಂಚತ್ತಾಯ ೧೯೯೩. ಮೊಗವೀರರ ಸಂಸ್ಕೃತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು