ಮೊದಲಿಯಾರರು ಆಗಮುದಿ ವೆಳ್ಳಾಲರೆಂದು ಪರಿಚಿತರಾಗಿದ್ದಾರೆ. ಇವರಲ್ಲಿ ತಮ್ಮಲ್ಲಿ ಐದು ಪ್ರಾದೇಶಿಕ ಪಂಗಡಗಳನ್ನು ಗುರುತಿಸುತ್ತಾರೆ. ಪಟ್ಟಣಮ್, ಆರ್ಕಾಟ್, ವೆಳ್ಳೋರ್, ಪುದುಮಲೈ ಮತ್ತು ಆರ್ಸಿಕಂ. ಪ್ರಮುಖವಾಗಿ ಬೆಂಗಳೂರು, ಬಳ್ಳಾರಿ, ಕೋಲಾರ, ಮೈಸೂರು, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ಕಂಡುಬರುತ್ತಾರೆ. ಎಂಥೋವನ್ (೧೯೨೨) ಹೇಳುವಂತೆ ಮೊದಲಿಯಾರರು ಮೂದಲಿಗಳೆಂದೂ ಉಲ್ಲೇಖಿತರಾಗಿದ್ದಾರೆ. ಮನೆಮಾತು ಮತ್ತು ಸಂಬಂಧಿಗಳೊಡನೆ ತಮಿಳು ಮಾತನಾಡಿ, ಇತರರ ಜೊತೆಗೆ ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ತಿರಿಯನ್, ರನಯನ್, ವಡ್‌ಯನ್ ಇತ್ಯಾದಿ ಬೆಡಗುಗಳಿವೆ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವರು ಬೆಡಗುಗಳ ಮಟ್ಟದಲ್ಲಿ ಹೊರಬಾಂಧವ್ಯ ಹಾಗೂ ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ ಪದ್ಧತಿಯನ್ನು ಅನುಸರಿಸುತ್ತಾರೆ. ಇವರಲ್ಲಿ ವಿಚ್ಛೇದನೆಗೆ ಹಾಗೂ ಪುನರ್‌ವಿವಾಹಕ್ಕೆ ಅವಕಾಶವಿದೆ.

ಪರಂಪರಾಗತವಾಗಿ ಬೇಸಾಯಗಾರರಾಗಿದ್ದರೂ ವ್ಯಾಪಾರಿಗಳು, ಕಂಟ್ರಾಕ್ಟರ್‌ಗಳೂ, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಉದ್ಯೋಗಿಗಳು ಇವರಲ್ಲಿ ಕಂಡುಬರುತ್ತಾರೆ. ‘ಮೊದಲಿಯಾರ್ ಸಂಘವು’ ಸಮುದಾಯದ ಅಭಿವೃದ್ಧಿಗಳೊಂದಿಗೆ, ಸಮುದಾಯದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ಸಮುದಾಯದ ಅಭಿವೃದ್ಧಿ ಕಾರ್ಯಗಳನ್ನು ನಡೆಸುತ್ತದೆ. ಇವರು ವೆಂಕಟೇಶ್ವರ, ಮುರುಗ ಮತ್ತು ಬಲರಾಮನನ್ನು ಪೂಜಿಸುತ್ತಾರೆ. ಇವರ ಜೀವನ ಧಾರ್ಮಿಕ ವಿಧಿಗಳನ್ನು ಬ್ರಾಹ್ಮಣರು ನಿರ್ವಹಿಸುತ್ತಾರೆ. ಆಧುನಿಕ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಇವರು ಹೊಂದಿರುವುದರ ಜೊತೆಗೆ ಆಧುನಿಕ ಸಾಮಾಜಿಕ ಸಂಸ್ಥೆಗಳ ಬಗ್ಗೆ ಹೆಚ್ಚಿನ ಒಲವನ್ನು ಹೊಂದಿದ್ದಾರೆ. ಆಧುನಿಕ ಅಭಿವೃದ್ಧಿ ಕಾರ್ಯಕ್ರಮಗಳು ಹಾಗೂ ಸರ್ಕಾರಿ ಸಂಸ್ಥೆಗಳಿಂದ ದೊರೆಯುವ ಸವಲತ್ತುಗಳನ್ನು ಈ ಸಮುದಾಯದ ಜನರು ಪಡೆದುಕೊಂಡು ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.