ಮೊಯನರು ಮಲೆಯಾಳಿ ಬೋವಿಗಳೆಂದು, ಮೊಗೆಯನರೆಂದು ಪರಿಚಿತರಾಗಿದ್ದಾರೆ. ಇವರ ಮೌಕಿಕ ಪರಂಪರೆಯಂತೆ ಇವರು ಕೇರಳದಿಂದ ವಲಸೆ ಬಂದು ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರು ಕನ್ನಡ ಮಾತನಾಡಿ ಕನ್ನಡ ಮತ್ತು ಮಲೆಯಾಳಂ ಲಿಪಿಯನ್ನು ಬಳಸುವರು. ಈ ಸಮುದಾಯದಲ್ಲಿ ‘ಇಲ್ಲಮ್’ ಎಂಬ ಮಾತೃ ನಡವಳಿಯ ಹೊರಬಾಂಧವ್ಯ ವಿವಾಹದ ಕುಲಗಳಿವೆ. ಇವರಲ್ಲಿ ಇಲ್ಲಮ್‌ಗಳು ಮುಖ್ಯವೆಂದು ಪರಿಗಣಿಸಲಾಗುತ್ತದೆ – ಕನ್ನಿರಿಯಮ್, ಕರಿಪಟ್ಟಿ, ಕಿರಿಯನ್, ಬಾಯಕ್ಕಾರ ಮೋಯನ್, ಕಡಕ್ಕಟ್, ಮೋಯನ್, ಭೀಮತ್‌ಮೋಯನ್, ಇತ್ಯಾದಿ. ಇಲ್ಲಮ್ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹವು ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹವು ಇವರಲ್ಲಿ ರೂಢಿಯಲ್ಲಿದೆ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಹಿರಿಯ ಮಗ ತಂದೆಯ ನಂತರ ಮನೆಯ ಉತ್ತರಾಧಿಕಾರಿಯಾಗುತ್ತಾನೆ. ಸ್ತ್ರೀಯರು ಮನೆಗೆಲಸಗಳೊಡನೆ ಮೀನು ಹಿಡಿಯುವುದರಲ್ಲೂ ನಿರತರಾಗಿರುತ್ತಾರೆ.

ಇವರ ಪರಂಪರಾಗತ ಉದ್ಯೋಗ ಮೀನು ಹಿಡಿಯುವುದು. ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ನೌಕರಿ, ವ್ಯಾಪಾರ ಇತ್ಯಾದಿ ಇತ್ತೀಚಿನ ವೃತ್ತಿಗಳು. ಹಲವರು ಮುಂಬಯಿ ಮತ್ತಿತರ ನಗರಗಳಿಗೆ ವೃತ್ತಿಗಾಗಿ ಕೆಲಸ ಹೋಗಿದ್ದಾರೆ. ಇವರು ಭಗವತಿ, ಸೋಮನಾಥ ಮತ್ತು ವೆಂಕಟರಮಣ ದೈವಗಳನ್ನು ಪೂಜಿಸುತ್ತಾರೆ. ಬ್ರಾಹ್ಮಣ ಇವರ ಧಾರ್ಮಿಕ ವಿಶೇಷಜ್ಞನಾಗಿ ಧಾರ್ಮಿಕ ವಿಧಿಗಳನ್ನು ನಡೆಸಿಕೊಡುತ್ತಾನೆ. ಸ್ತ್ರೀ-ಪುರುಷರಿಬ್ಬರು ಸಾಂಪ್ರದಾಯಿಕವಾದ ಜಾನಪದ ಹಾಡುಗಳನ್ನು ಹಾಡುತ್ತಾರೆ. ಇವರು ಗಂಡು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದರೂ ಇತ್ತೀಚೆಗೆ ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಈ ಸಮುದಾಯದ ಜನರು ಹೊಂದಿದ್ದಾರೆ.