ಮೋಡಿಕಾರರು ಮೋಡಿಕಾರ್ ಮತ್ತು ಗಾರುಡಿಗಳೆಂದು ಪರಿಚಿತರಾಗಿದ್ದಾರೆ. ಇವರು ಜನರಲ್ಲಿ ಆಸಕ್ತಿ ಮತ್ತು ವಿನೋದವನ್ನು ಕೆರಳಿಸುವ ಚಮತ್ಕಾರಗಳಲ್ಲಿ ಸಾಂಪ್ರದಾಯಿಕವಾಗಿ ನಿರತರಾಗಿದ್ದಾರೆ. ಎಂಥೋವನ್ (೧೯೨೨) ಪ್ರಕಾರ ಇವರದು ಮೂಲಭೂತವಾಗಿ ಗುಜರಾತಿನ ಕಾಠೆವಾಡದ ಸಂಚಾರಿ ಗಾರುಡಿಗ ಮತ್ತು ಹಾವಾಡಿಗ ಸಮುದಾಯವಾಗಿದೆ. ‘ಮೋಡಿ’ ಎಂಬ ಪದವು ಜನರನ್ನು ಮಂತ್ರ  ಮುಗ್ಧರನ್ನಾಗಿಸುವುದು ಎಂದರ್ಥ ಕೊಡುತ್ತದೆ. ಇವರು ಕರ್ನಾಟಕದ ಬಳ್ಳಾರಿ, ಬೀದರ, ಬಿಜಾಪುರ, ಬಾಗಲಕೋಟೆ, ಧಾರವಾಡ, ರಾಯಚೂರು, ಶಿವಮೊಗ್ಗ ಹಾಗೂ ಮುಂತಾದ ಜಿಲ್ಲೆಗಳಲ್ಲಿ ಹಂಚಿಹೋಗಿದ್ದಾರೆ.

ಮೌಖಿಕ ಪರಂಪರೆಯ ಪ್ರಕಾರ ಮೋಡಿಕಾರರು ಆಂಧ್ರಪ್ರದೇಶದಿಂದ ವಲಸೆ ಬಂದವರೆಂದು ತಿಳಿದುಬರುತ್ತದೆ. ಇವರ ಮನೆಮಾತು, ತೆಲುಗು. ಇತರರೊಡನೆ ಕನ್ನಡ ಮಾತನಾಡುವ ಇವರು, ಕನ್ನಡ ಲಿಪಿ ಬಳಸುವರು. ಗುಜ್ಜಾಲದವಾರು, ದೆಂಪಾಲವಾರು, ನೆಲಬೊಟ್ಟಿವಾರು, ಮುಮ್ಮಲದವಾರು, ಸಸಲದವಾರು, ಕೊಡ್ಲಿಯವಾರುಗಳೆಂಬ ಬೆಡಗುಗಳು ಇವೆ. ಸಮುದಾಯ ಮಟ್ಟದಲ್ಲಿ ಒಳಬಾಂಧವ್ಯ, ಬೆಡಗುಗಳ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಅನುಸರಿಸುತ್ತಾರೆ. ಸೋದರ ಸಂಬಂಧಿ ವಿವಾಹಗಳಿಗೆ ಇವರಲ್ಲಿ ಅವಕಾಶವಿದೆ. ಇವರಲ್ಲಿ ಬಹುಪತ್ನಿತ್ವವು ಜಾರಿಯಲ್ಲಿತ್ತು ಎಂದು ತಿಳಿಯುತ್ತದೆ. ಆದರೆ ಈಗ ಏಕಪತ್ನಿತ್ವವು ಇವರ ವಿವಾಹದ ರೀತಿಯಾಗಿದೆ.

ಸಾಂಪ್ರದಾಯಿಕವಾಗಿ ಇವರು ಗಾರುಡಿ ಹಾಗೂ ಚಮತ್ಕಾರಗಳ ಮೂಲಕ ತಮ್ಮ ಜೀವನ ಸಾಗಿಸುತ್ತಾರೆ. ಸ್ಥಳೀಯರಲ್ಲಿ ಇದು ‘ಮೋಡಿಕಾರ ಆಟ’ ಎಂದೇ ಪ್ರಖ್ಯಾತವಾಗಿದೆ. ಇಂತಹ ಆಟಗಳು ಸ್ಥಳೀಯ ಮಾತಿನಲ್ಲಿ ‘ವಾದಿ’- ‘ಎದುರುವಾದಿ’ಗಳೆಂಬ ಇಬ್ಬರುಸ ಎದುರಾಳಿಗಳನ್ನೊಳಗೊಂಡಿರುತ್ತದೆ. ಇವರ ಗಾರುಡಿಯ ಕೆನ್ನೆಯೊಳಗೆ ಉದ್ದವಾದ ಲೋಹದ ತಂತಿಯನ್ನು ಚುಚ್ಚುವುದು, ರಕ್ತಕಾರಿಕೊಳ್ಳುವುದು, ಇತ್ಯಾದಿ ಚಮತ್ಕಾರಗಳನ್ನು ಒಳಗೊಂಡಿದೆ. ಇತ್ತೀಚಿನ ದಿನಗಳಲ್ಲಿ ಮೋಡಿಕಾರ ಆಟಗಳು ಕಡಿಮೆಯಾಗುತ್ತಿವೆ. ಕೆಲವರು ಕೃಷಿಯಲ್ಲಿ ಶ್ರಮಿಕರಾಗಿ ದುಡಿಯುತ್ತಾರೆ. ಇವರು ತಮ್ಮ ನಾಯಕನಾಗಿ ‘ಪೆದ್ದಮನುಷ್ಯ’ ನನ್ನು ಆರಿಸುತ್ತಾರೆ. ಆತ ಸಮುದಾಯದ ಒಳಗೆ ಉಂಟಾಗುವ ಜಗಳ, ಇತ್ಯಾದಿ ವಿವಾದಗಳನ್ನು ತೀರ್ಮಾನಿಸುತ್ತಾನೆ. ಇವರ ಮುಖ್ಯ ದೈವಗಳು ಎಂದರೆ ಕಾಳಮ್ಮ, ಮಾರಮ್ಮ, ದುರ್ಗಮ್ಮ, ಹುಲಿಯಮ್ಮ, ತೋಪೆಮ್ಮ, ಎಲ್ಲಮ್ಮ ಇತ್ಯಾದಿ. ಇವರಲ್ಲಿ ಹಿರಿಯ ಹಾಗೂ ತಿಳುವಳಿಕೆ ಇರುವ ವ್ಯಕ್ತಿಯೋರ್ವ ಧಾರ್ಮಿಕ ಕಾರ್ಯಗಳ ವಿಶೇಷಜ್ಞನಾಗಿ ಕೆಲಸ ಮಾಡುತ್ತಾನೆ.

ಯಕ್ಷಿಣಿ ಪ್ರದರ್ಶನ ಹಾಗೂ ಗಾರುಡಿಗೆ ಸಂಬಂಧಿಸಿದಂತೆ ಈ ಸಮುದಾಯವು ಶ್ರೀಮಂತ ಮೌಖಿಕ ಪರಂಪರೆಯನ್ನು ಹೊಂದಿದೆ. ಮೋಡಿಕಾರರು ತಮ್ಮನ್ನು ಶಿಲ್ಪಕಾರ ಸಮುದಾಯದ ಪಂಚಾಳ ಗುಂಪಿನ ಮಕ್ಕಳೆಂದು ಕರೆದುಕೊಳ್ಳುತ್ತಾರೆ. ಹಳ್ಳಿಗಳಿಗೆ ಭೇಟಿಯಿತ್ತಾಗ ಇವರು, ಪಾಂಚಾಳ ಕೋಮಿನವರಿಂದ ಹಣ ಮತ್ತು ಇತರೆ ವಸ್ತುಗಳನ್ನು ಕೇಳಿ ಪಡೆಯುತ್ತಾರೆ. ಇವರು ಶಾಶ್ವತ ನೆಲೆ, ಕಂಡುಕೊಂಡ ನಂತರ ಆಧುನಿಕ ಶಿಕ್ಷಣವು ನಿಧಾನವಾಗಿ ಹೆಚ್ಚುತ್ತಿದೆ. ಆಧುನಿಕ ಸಾಮಾಜಿಕ ಸಂಸ್ಥೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಯೋಜನಗಳನ್ನು ಪಡೆದುಕೊಳ್ಳಬೇಕಾಗಿದೆ. ಇವರ ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಕೆಳಮಟ್ಟದಲ್ಲಿದೆ.