ಮ್ಯಾಲರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಪುತ್ತೂರು ಮತ್ತು ಸುಳ್ಯ ತಾಲೂಕಿನ ಕೆಲವು ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ. ಶ್ರೇಣೀಕೃತ ಭಾರತೀಯ ಜಾತಿಸಮಾಜದಲ್ಲಿ ಇವರನ್ನು ಅತ್ಯಂತ ಕೆಳಗಿನವರೆಂದು ಭಾವಿಸಲಾಗಿದೆ. ಈ ಕಾರಣಕ್ಕೆ ಮ್ಯಾಲರನ್ನು ಇತರರು ಪೂರ್ತಿ ‘ಮೈಲಿಗೆ’ ಎಂದು ಪರಿಗಣಿಸಿ ನಡೆಸಿಕೊಳ್ಳುತ್ತಾರೆ. ಸರಕಾರವು ಇವರನ್ನು ಪರಿಶಿಷ್ಟ ಜಾತಿ ಎಂದು ಗುರುತಿಸಿದೆ. ಇವರನ್ನು ಪಂಚಮರೆಂದೂ, ಚಾಂಡಾಲರೆಂದು ಸ್ಥೂಲವಾಗಿ ಕರೆಯುತ್ತಾರೆ. ‘ಹೊಲೆಯ’ ಎಂದು ಸ್ಥಳೀಯ ಇತರ ಸಮುದಾಯದವರು ಹೇಳುತ್ತಾರೆ. ಈ ಸಮುದಾಯದ ಹೆಂಗಸರನ್ನು ‘ಮೈಲ್ತಿ’ಯರೆಂದು ಹೇಳುತ್ತಾರೆ. ‘ಮ್ಯಾಲ’ ಮತ್ತು ‘ಮೈಲ್ತಿ’ – ಈ ಎರಡು ಪದಗಳ ನಿಷ್ಪತ್ತಿ ಏನೆಂದು ತರ್ಕಿಸುವುದು ಕಷ್ಟದ ಕೆಲಸ. ಕೆಲವು ಬಾರಿ ಮ್ಯಾಲರನ್ನೇ ‘ದಿಕ್ಕುನಕುಲು’ ಎಂದು ಹೇಳುತ್ತಾರೆ. ಆದರೆ ‘ದಿಕ್ಕ’ ಎಂಬುದು ಹರಿಜನ ವರ್ಗಕ್ಕೆ ಸಾಮಾನ್ಯವಾಗಿ ಬಳಕೆಯಾಗುವ ತುಳು ಪದ. ಅದರಲ್ಲಿ ಮೇರರು, ಮನ್ಸರು ಮೊದಲಾದವರೆಲ್ಲ ಸೇರ್ಪಡೆಗೊಳ್ಳುತ್ತಾರೆ.

ಮ್ಯಾಲರಲ್ಲಿ ಮೂರು ಉಪಪಂಗಡಗಳಿವೆ – ಮಲೆಯಾಳಿ ಮ್ಯಾಲರು, ತುಳು ಮ್ಯಾಲರು, ಕೆಜೆ ಮ್ಯಾಲರು, ಈ ಉಪಪಂಗಡಗಳು ಭಾಷೆ ಮತ್ತು ಪ್ರಾದೇಶಿಕ ವಾಸಸ್ಥಾನದಿಂದ ಉಂಟಾಗಿದೆ. ಕೇರಳದ ಕಾಸರಗೋಡು ಸಂಬಂಧವನ್ನು ಹೊಂದಿದವರು ಮಲೆಯಾಳಂ ಮಾತನಾಡಿದರೆ, ಪುತ್ತೂರು ಮತ್ತು ಸುಳ್ಯ ತಾಲೂಕಿನಲ್ಲಿರುವವರು ತುಳುವನ್ನೇ ಮಾತೃಭಾಷೆಯಾಗಿ ಬಳಸುತ್ತಾರೆ. ಈ ಮೂರು ಗುಂಪುಗಳು ಮತ್ತೆ ಶ್ರೇಣೀಕರಣಕ್ಕೆ ಒಳಗಾಗಿ, ಮಲೆಯಾಳ ಮ್ಯಾಲರು ಉಚ್ಚರೆಂದೂ, ಕಜೆಮ್ಯಾಲರು ಕನಿಷ್ಠರೆಂದು ಭಾವಿಸಲಾಗಿದೆ. ‘ತುಳುನಾಡಿನ ಇನ್ನೊಂದು ಹರಿಜನ ಪಂಗಡವಾದ ಮೇರರಿಗೂ ತಮಗೂ ಆಚಾರ ವಿಚಾರದಲ್ಲಿ ಸಾಮ್ಯತೆ ಇದೆ’ ಎಂದು ಮ್ಯಾಲರು ಹೇಳಿದರೂ ಮೇರರು ಅದನ್ನು ಒಪ್ಪುವುದಿಲ್ಲ.  ಮೇರರ ಪ್ರಕಾರ ಮ್ಯಾಲರು ಅವರಿಗಿಂತ ಕನಿಷ್ಠರು. ಮ್ಯಾಲರ ಒಂದು ಪಂಗಡಕ್ಕೆ ‘ಕೋಟೆಮ್ಯಾಲರು’ ಎಂಬ ಹೆಸರು ಇದೆ. ಇದನ್ನು ಗಮನಿಸಿದರೆ ಮ್ಯಾಲರಿಗೆ ಕೋಟೆಯೊಡನೆ ಸಂಬಂಧ ಇದೆಯೆಂದು ಊಹಿಸಬಹುದು. ಅದರ ಇದಕ್ಕೆ ಚಾರಿತ್ರಿಕ ದಾಖಲೆಗಳಿಲ್ಲ.

ಮ್ಯಾಲರು ದಟ್ಟವಾದ ಕಾಡಿನ ತಪ್ಪಲು ‌ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಊರಿನ ಜಮೀನ್ದಾರರ ಮನೆಯಲ್ಲಿ ಇವರು ದಿನಗೂಲಿಗಳಾಗಿ ದುಡಿಯುತ್ತಿದ್ದಾರೆ. ಇವರಾರಿಗೂ ಸ್ವಂತ ಕೃಷಿ ಭೂಮಿ ಇಲ್ಲ. ಸರಕಾರ ಒದಗಿಸಿರುವ ಮನೆಗಳಲ್ಲಿ ಕೆಲವರು ಬದುಕುತ್ತಿದ್ದಾರೆ. ಹಲವರು ಪರಂಪರಾಗತವಾಗಿ ಬಂದಿರುವ ಹಳೆ ಮನೆಗಳಲ್ಲಿಯೇ ವಾಸಿಸುತ್ತಾರೆ. ಮ್ಯಾಲರ ಮನೆಗಳನ್ನು ‘ಪಡಂಪೆ’ಗಳೆಂದೂ, ‘ದಟ್ಟಿಗ’ಗಳೆಂದೂ ‘ದಟ್ಟಗ’ಗಳೆಂದೂ ‘ಪಟ್ಟ’ಗಳೆಂದೂ ಕರೆಯುತ್ತಾರೆ.

ಮ್ಯಾಲರಲ್ಲಿ ಒಳ ಪಂಗಡಗಳಿವೆ. ಅವರು ಅದನ್ನು ‘ಬರಿ’ ಎಂದು ಕರೆಯುತ್ತಾರೆ. ಇದು ತಾಯಿಂದ ಮಕ್ಕಳಿಗೆ ಬರುತ್ತದೆ. ಈ ಬರಿಯು ಇತರೆ ಸಮುದಾಯದವರಲ್ಲಿ ‘ಬಳ್ಳಿ’ ಎಂದೇ ಬಳಕೆಯಲ್ಲಿದೆ. ಇದನ್ನು ಕುಲಗಳಿಗೆ ಸಂವಾದಿಯಾಗಿ ಪರಿಶೀಲಿಸಬಹುದು. ಮ್ಯಾಲರಲ್ಲಿ ಒಟ್ಟು ಎಷ್ಟು ‘ಬರಿ’ ಗಳಿವೆಯೆಂದು ತಿಳಿಯದು. ಅದರ ಒಟ್ಟು ಸಂಖ್ಯೆಯ ಬಗೆಗೆ ಮ್ಯಾಲರಲ್ಲಿ ಸಹಮತ ಇಲ್ಲ. ಹೆಚ್ಚಿನವರ ಪ್ರಕಾರ ಇವರಲ್ಲಿ ಏಂಟು ‘ಬರಿ’ಗಳಿವೆ. ಆದರೆ ಇವರಲ್ಲಿ ಇರುವ ಬರಿಗಳನ್ನು ಗುರುತಿಸಲು ಬಿಳಿಮಲೆಯವರು ಪ್ರಯತ್ನಿಸಿದ್ದಾರೆ. ಬಂಗರೆ ಬರಿ, ಎಲಿಕಣ್ಣೆ ಬರಿ, ನಾಯೆರ ಬರಿ, ನಂದೆರೆ ಬರಿ, ಕಾಡಾರಣ್ಣೆ ಬರಿ, ಕೂಡಾರಣ್ಣೆ ಬರಿ, ಪೆರ್ಬಣ್ಣೆ ಬರಿ, ಗುಂಡರೆಣ್ಣೆ ಬರಿ. (ಬಿಳಿಮಲೆ ೧೯೯೦).

ಮ್ಯಾಲರ ಮದುವೆಯ ಸಾಂಪ್ರದಾಯಿಕವಾದ ಆಚರಣೆಗಳಿಂದ ನಿಯಂತ್ರಿತವಾಗಿದೆ. ಸೋದರ ಸಂಬಂಧಿ ವಿವಾಹಗಳ ಇವರಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಮದುವೆಯ ಸಂಕೇತವಾಗಿ ತಾಳಿಯನ್ನು ಸೋದರ ಮಾವನೆ ವಧುವಿಗೆ ಕಟ್ಟುತ್ತಾನೆ. ಕೆಲವೆಡೆ ವರನೇ ಕಟ್ಟುತ್ತಾನೆ. ಮದುವೆಯ ಊಟದ ಖರ್ಚನ್ನು ವರನ ಕಡೆಯವರೇ ನೋಡಿಕೊಳ್ಳಬೇಕೆಂದಿದ್ದರೂ ಈಚೆಗೆ ಅದನ್ನು ಎರಡೂ ಕಡೆಯವರು ಸಮವಾಗಿ ಹಂಚಿಕೊಳ್ಳುತ್ತಾರೆ.

ಎಷ್ಟೋ ಬಾರಿ ಇವರಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗುವುದಿಲ್ಲ. ಮ್ಯಾಲ ತರುಣರು ತಮಗೆ ಇಷ್ಟವಾದ ತರುಣಿಯೊಡನೆ ಪರಾರಿಯಾಗುತ್ತಾರೆ. ಕೆವಲು ದಿನಗಳ ನಂತರ ಮತ್ತೆ ತಮ್ಮ ವಾಸಸ್ಥಳಕ್ಕೆ ಹಿಂದಿರುಗುತ್ತಾರೆ. ಆಗ ಮ್ಯಾಲರ ಹಿರಿಯರೆಲ್ಲ ಸೇರಿ ಅವರನ್ನು ವಿಚಾರಿಸಿಕೊಳ್ಳುತ್ತಾರೆ. ಆಗ ತರುಣ-ತರುಣಿಯರು ಜಾತಿ ಬಾಂಧವರಿಗೆ ಒಂದು ಮುಡಿ ಅಕ್ಕಿ ಮತ್ತು ಹಂದಿಯನ್ನು ತಪ್ಪುಗಾಣಿಕೆಯಾಗಿ ಕೊಡಬೇಕಾಗುತ್ತದೆ. ಇದಾದ ನಂತರ ಹಿರಿಯರು ಅವರ ತಪ್ಪನ್ನು ಕ್ಷಮಿಸಿ, ಅವರಿಬ್ಬರಿಗೆ ‘ಕೂಡಾವಳಿ’ ಮಾಡಿಕೊಡುತ್ತಾರೆ. (ಕೂಡಾವಳಿಯಲ್ಲಿ ಧಾರೆ ಇಲ್ಲ) ಹುಡುಗ – ಹುಡುಗಿಯನ್ನು ಕೈಸೇರಿಸಿ ಬಿಟ್ಟು ಬಿಡುತ್ತಾರೆ. ಇಲ್ಲಿ ಹುಡುಗನ ಕಡೆಯವರು, ಹುಡುಗಿಗೆ ಒಂದು ಹೊಸ ಸೀರೆಯನ್ನು ಕೊಡಬೇಕು.

ಸಾಮಾನ್ಯವಾಗಿ ಮ್ಯಾಲರದ್ದು ಅವಿಭಕ್ತ ಕುಟುಂಬವಾಗಿರುತ್ತದೆ. ಒಂದೇ ಸೂರಿನಡಿಯಲ್ಲಿ ಹಲವಾರು ಕುಟುಂಬಗಳು ವಾಸಿಸುತ್ತವೆ. ಆದರೆ ಆಸ್ತಿಯ ಒಡೆತನ ಇಲ್ಲದಿದ್ದುದರಿಂದ, ಕುಟುಂಬದಿಂದ ಹೊರಗೆ ಹೋಗುವ ಕೆಲಸವೂ ಬೇಗನೇ ನಡೆದುಬಿಡುತ್ತದೆ. ವಿವಾಹನಂತರ  ಹೆಂಡತಿಯೊಡನೆ ಮಗನು ಪ್ರತ್ಯೇಕ  ಮನೆ ಕಟ್ಟಿಕೊಂಡು ವಾಸ ಮಾಡಿದರೆ ಅದಕ್ಕೆ ಹಿರಿಯರು ಯಾವುದೇ ಅಡ್ಡಿ ಉಂಟುಮಾಡುವುದಿಲ್ಲ. ವಿಶೇಷವಾದ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಆಚರಣೆಗಳಲ್ಲಿ ಎಲ್ಲರೂ ಒಟ್ಟಾಗುತ್ತಾರೆ. ತಂದೆ-ತಾಯಿ ಮತ್ತು ವಿವಾಹವಾಗದ ಮಕ್ಕಳು, ಮ್ಯಾಲರ ಕುಟುಂಬ ವ್ಯವಸ್ಥೆಯ ಮೂಲ ಘಟಕಗಳು. ಮನೆಯ ಹಕ್ಕು ತಂದೆಯಿಂದ ಹಿರಿಯ ಮಗನಿಗೆ ಬರುತ್ತದೆ. ಮಕ್ಕಳು ಚಿಕ್ಕವರಾಗಿದ್ದರೆ ಚಿಕ್ಕಪ್ಪನ ಕೈಗೆ ಹೋಗುತ್ತದೆ. ಹೆಣ್ಣು ಮಕ್ಕಳು ಮದುವೆಯಾಗಿ ಹೋದ ಮೇಲೆ ಮನೆಯ ಹಕ್ಕನ್ನು ಕಳೆದುಕೊಳ್ಳುತ್ತಾರೆ.

ಮ್ಯಾಲರು ತಮ್ಮ ಕುಲದೈವಗಳನ್ನೆಲ್ಲ ಇಟ್ಟುಕೊಂಡು ಆರಾಧಿಸುವ ಮನೆಯನ್ನು ‘ಐನ್‌ಮನೆ’ ಎಂದು ಕರೆಯುತ್ತಾರೆ. ಈ ಐನ್‌ಮನೆಯು ಕೇರಳದ ನಾಯರ್ ಸಮುದಾಯದ ತರವಾಡು ಮನೆಯನ್ನೇ ಹೋಲುತ್ತದೆ. ಐನ್ ಮನೆಯ ಅಧಿಕಾರವು ಪ್ರಾಯಕ್ಕೆ ಅನುಸಾರವಾಗಿ ಲಭ್ಯವಾಗುತ್ತದೆ. ಐನ್‌ಮನೆ ಎಂದರೆ ಶತಮಾನಗಳ ಹಳೆಯ ಕುಟುಂಬ. ಇವು ಕೊಡಗಿನ ಕೆಲವು ಸಮುದಾಯಗಳಲ್ಲೂ ಕಂಡುಬರುತ್ತವೆ. ಅತ್ಯಂತ ಹಿರಿಯರೇ ಈ ಮನೆಯ ಮುಖಂಡ ಅವನನ್ನು ‘ಮುರ್ಕಾವೆ’ ಅಥವಾ ‘ಮುಕಾರಿ’ ಎಂದು ಕರೆಯುತ್ತಾರೆ.

ಮ್ಯಾಲರಲ್ಲಿ ಹೆಣವನ್ನು ಸುಡುತ್ತಾರೆ. ಹೆಣ ಸುಟ್ಟ ಮೂರನೇ ದಿನಕ್ಕೆ ಕೆಲವರೆಲ್ಲ ಹೆಣ ಸುಟ್ಟ ಜಾಗಕ್ಕೆ ಬರುವರು. ಈಗ ಆ ಜಾಗಕ್ಕೆ ‘ಸುಡ್ಕುಳಿ’ ಎಂದು ಹೆಸರು. ಸುಡ್ಕುಳಿಯಲ್ಲಿ ಉರಿಯದೇ ಉಳಿದ ದೇಹದ ಭಾಗಗಳನ್ನು ಒಟ್ಟು ಸೇರಿಸಿ, ಇನ್ನೊಮ್ಮೆ ಸುಡುವರು. ಸತ್ತ ಐದನೇ ದಿನಕ್ಕೆ ಸುಟ್ಟ ಜಾಗದಲ್ಲಿರುವ ಬೂದಿಯನ್ನು ಒಟ್ಟು ಸೇರಿಸಿ ಗುಪ್ಪೆ ಮಾಡಿಡುವರು. ಇದಕ್ಕೆ ‘ಬೂದಿ ಮುಚ್ಚುವುದು’ ಎಂದು ಹೆಸರು. ಸತ್ತ ಹದಿನೈದನೇ ದಿವಸದಂದು ‘ಬೊಜ್ಜ’ ಆಚರಿಸುವರು.

ಇವರಲ್ಲಿ ಪ್ರತ್ಯೇಕ ಧಾರ್ಮಿಕ ವ್ಯವಸ್ಥೆ ಇದೆ. ಈ ಧಾರ್ಮಿಕ ವ್ಯವಸ್ಥೆಯು ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ. ಇದನ್ನು ‘ಕುಲದೈವ’ ಎಂದು ಕರೆಯುತ್ತಾರೆ. ಮ್ಯಾಲರ ಕುಲದೈವಕ್ಕೆ ‘ಮಂಜ’ ಎಂದು ಹೆಸರು. ಮ್ಯಾಲರು ಆರ್ಥಿಕವಾಗಿ ಹಿಂದುಳಿದಿದ್ದಾರೆ. ಇವರಲ್ಲಿ ಸರಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ದುಡಿಯುವವರಿಲ್ಲ. ತಮ್ಮ ಊರಿನ ಶ್ರೀಮಂತರ ಮನೆಯಲ್ಲಿ ಇವರು ದಿನಗೂಲಿ ಮಾಡುತ್ತಾರೆ. ಮ್ಯಾಲರಲ್ಲಿ ಯಾವುದೇ ಸಂಘಟನೆಗಳಿಲ್ಲ. ಅವರಿಗೆ ನಿರ್ದಿಷ್ಟ ರಾಜಕೀಯ ದೃಷ್ಟಿಕೋನವಿಲ್ಲ. ಇವರ ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಿತಿ ಅತ್ಯಂತ ಶೋಚನೀಯ ಪರಿಸ್ಥಿತಿಯಲ್ಲಿ ಇದ್ದು, ಸುಧಾರಣೆ ಅಗತ್ಯವಾಗಿ ಆಗಬೇಕಾಗಿದೆ.

ನೋಡಿ:

ಪುರುಷೋತ್ತಮ ಬಿಳಿಮಲೆ, ೧೯೯೦. ಕರಾವಳಿ ಜಾನಪದ, ಶಾರದ ಪ್ರೆಸ್, ಮಂಗಳೂರು.