ಕ್ಷತ್ರಿ ಅಥವಾ ಛತ್ರಿಗಳೆಂದು ಇವರನ್ನು ಕರೆಯುತ್ತಾರೆ. ‘ಕ್ಷತ್ರಿಯ’ ಎಂಬ ಪದವು ಸಂಸ್ಕೃತ ‘ರಕ್ಷತಾತ್’ ತ್ರಯತೆ ಕ್ಷತ್ರಿಯಾ; ಅಂದರೆ ಕೊಲ್ಲಲ್ಪಡುವವರನ್ನು ರಕ್ಷಿಸುವವರು ಎಂದರ್ಥ. ಉತ್ತರ ಭಾರತದಿಂದ ರಘುವಂಶಿಗಳು ಬಹಳ ಹಿಂದೆ ವಲಸೆ ಬಂದರೆಂದು ಹೇಳಲಾಗುತ್ತದೆ. ಇವರಲ್ಲಿ ಕುಲೀನರು ಹಾಗೂ ಸಾಮಾನ್ಯರು ಎಂಬ ಎರಡು ಉಪಗುಂಪುಗಳಿವೆ. ಮಾತಲವರ, ಆನೆನ್ನೆವಾರು, ಚಂದನದವರುಳೆಂಬ ಬೆಡಗು ಇವರಲ್ಲಿ ಇವೆ. ಸೋದರ ಸಂಬಂಧಿ ವಿವಾಹಗಳಿಗೆ ಇವರಲ್ಲಿ ಅವಕಾಶವಿದೆ. ಗತಿಸಿದ ಪತ್ನಿಯ ತಂಗಿಯೊಂದಿಗೆ ಕೂಡ ವಿವಾಹಕ್ಕೆ ಅವಕಾಶಗಳಿವೆ. ವಿವಾಹ ವಿಚ್ಛೇದನಗಳಿಗೆ ಸಮ್ಮತಿ ಇದೆ. ಆಸ್ತಿಯನ್ನು ಎಲ್ಲಾ ಗಂಡುಮಕ್ಕಳು ಸಮನಾಗಿ ಪಡೆಯುತ್ತಾರೆ. ಹಿರಿಯ ಮಗನು ತಂದೆಯ ನಂತರ ಮನೆಯ ಉತ್ತರಾಧಿಕಾರಿಯಾಗುತ್ತಾನೆ. ಇವರು ಹನುಮಂತ, ರೇಣುಕಾ, ನಂದಿ, ಮಾರಮ್ಮ, ರಾಮ, ಕೃಷ್ಣ, ವೆಂಕಟರಮಣ, ಇತ್ಯಾದಿ ದೈವಗಳನ್ನು ಪೂಜಿಸುತ್ತಾರೆ. ವ್ಯವಸಾಯ ಇವರ ಪ್ರಮುಖ ಜೀವನಾಧಾರವಾಗಿದೆ. ಜೊತೆಗೆ ಇತ್ತೀಚಗೆ ಕೆಲವರು ಸರ್ಕಾರಿ ಹಾಗೂ  ಖಾಸಗಿ ಸಂಸ್ಥೆಗಳಲ್ಲಿ ನೌಕರಿ, ಸ್ವಯಂ-ಉದ್ಯೋಗ  ಮತ್ತು ವ್ಯಾಪಾರ ಇತ್ಯಾದಿ ವೃತ್ತಿಗಳಲ್ಲಿ ತೋಡಗಿದ್ದಾರೆ. ಈ ಸಮುದಾಯದ ಉನ್ನತ ವರ್ಗದ ಕುಟುಂಬಗಳಲ್ಲಿ ಉನ್ನತ ಮಟ್ಟದ ಶಿಕ್ಷಣವನ್ನು ಕಾಣಬಹುದು. ಆದರೆ ಹೆಚ್ಚಿನ ಜನರ ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿಯು ಸುಧಾರಣೆಯಾಗಬೇಕಾಗಿದೆ.