‘ರಾಚವರಎಂಬ ಹೆಸರು ‘ರಾಚ’ ಅಥವಾ ‘ರಾಜ’ ಎಂಬ ಪದದಿಂದ ಉತ್ಪತ್ತಿಯಾಗಿರಬಹುದು. ರಾಜಾವರ ಮತ್ತು ರಾಜಗಳೆಂದೂ ಕರೆಯಲ್ಪಡುತ್ತಾರೆ. ಇವರು ವಿಜಯನಗರ ಚಕ್ರಾಧಿಪತ್ಯದ ವೈಸ್‌ರಾಯ್‌ರನ್ನು ಹಿಂಬಾಲಿಸಿ ಬಂದ, ತೆಲುಗು ದೇಶದ ವಲಸೆಗಾರರ ತಲೆಮಾರಿನವರೆಂದು ನಂಜುಂಡಯ್ಯ ಮತ್ತು ಐಯ್ಯರ್ (೧೯೩೦) ಗುರುತಿಸಿದ್ದಾರೆ. ಇವರು ಬೆಂಗಳೂರು, ಮೈಸೂರು, ಹಾಸನ, ಕೋಲಾರ, ಮಂಡ್ಯ, ಚಿಕ್ಕಮಗಳೂರು ಹಾಗೂ ಮುಂತಾದ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ತೆಲುಗು ಇವರ ಮುಖ್ಯಭಾಷೆಯಾದರೂ, ಕನ್ನಡವನ್ನು ಮಾತಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಏಳು ಪ್ರಾಂತೀಯ ಉಪಪಂಡಗಳಿವೆ. ಅವುಗಳೆಂದರೆ ರಾಟಾಲ್ ಕೋಟೆ, ಕಾರ್ವೆತಿ ನಗರಂ, ಅನಂತಗಿರಿ, ಪಾಟ್ನಂ, ಶಾಲಿನಗರಂ, ಹೆಚ್.ಡಿ.ಕೋಟೆ ಅಥವಾ ಮುರುಕಿನಾಡ, ವೇಲಿನಾಡು, ತಂಜಾವೂರು, ಅನಂತಗಿರಿ, ಕಾರ್ವಗತಿನಗರ ಮತ್ತು ಹಾಸನಕೋಟೆ. ಸೂರ್ಯವಂಶಮ, ಚಂದ್ರವಂಶಮ ಮತ್ತು ಮಚ್ಯ ಅಥವಾ ಮತ್ಸ್ಯವಂಶಮ ಎಂಬ ಮೂರು ಬೆಡಗುಗಳನ್ನು ಈ ಸಮುದಾಯ ಹೊಂದಿದೆ. ಇವರ ಬೆಡಗುಗಳಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿಯಿದೆ. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ವಿಧವಾ ವಿವಾಹಕ್ಕೆ ಹಾಗೂ ವಿಚ್ಛೇದನಕ್ಕೆ ಅವಕಾಶವಿಲ್ಲ. ಗಂಡು ಮಕ್ಕಳೆಲ್ಲರಿಗೂ ಆಸ್ತಿ ಸಮವಾಗಿ ಹಂಚಲ್ಪಡುತ್ತದೆ. ಹಿರಿಯಮಗನಿಗೆ ತಂದೆಯ ನಂತರ ಕುಟುಂಬದ ಉತ್ತರಾಧಿಕಾರವು ದೊರೆಯುತ್ತದೆ.

ಇವರ ಪಾರಂಪರಿಕ ವೃತ್ತಿ ಬಣ್ಣ ಹಚ್ಚುವುದು, ಅಲಂಕಾರದ ಬೊಂಬೆ ಮಾಡುವುದು, ಚಿನ್ನ ಮತ್ತು ಬೆಳ್ಳಿಯ ವಸ್ತ್ರ ಪಟ್ಟಿಗಳನ್ನು ಮಾಡುವುದು, ಇತ್ಯಾದಿ. ಕೆಲವರು ಮೈಸೂರು ರಾಜ್ಯಕ್ಕೆ ವಲಸೆ ಬಂದನಂತರ ಮಹಾರಾಜನ ಸೈನ್ಯದಲ್ಲಿ ನೌಕರಿ ಪಡೆದುಕೊಂಡು, ಕೆಲವರು ಆಸ್ಥಾನಿಕರಾಗಿ ದುಡಿದರು. ಪ್ರಸ್ತುತ ಸಮಯದಲ್ಲಿ ವ್ಯವಸಾಯ, ಚಿಕ್ಕಪುಟ್ಟ ವ್ಯಾಪಾರ ಕೆಲವರು ಮಿಠಾಯಿ ಅಂಗಡಿಗಳನ್ನು ಇಟ್ಟುಕೊಂಡಿದ್ದಾರೆ. ಶ್ರಮಗೂಲಿ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಗಳು ಇತ್ತೀಚಿನ ಮುಖ್ಯ ವೃತ್ತಿಗಳಾಗಿವೆ. ಇವರ ಮನೆದೇವತೆಗಳು ವೆಂಕಟೇಶ್ವರ, ಮುನೇಶ್ವರ, ಎಲ್ಲಮ್ಮ, ರಾಮ, ಚಾಮುಂಡೇಶ್ವರಿ, ನಂಜುಂಡೇಶ್ವರ. ತಿರುಪತಿ ಇವರ ಪ್ರಮುಖ ಧಾರ್ಮಿಕ ಕೇಂದ್ರವಾಗಿದೆ. ಆಧುನಿಕ ಸಾಮಾಜಿಕ ಸಂಸ್ಥೆಗಳ ಅಭಿವೃದ್ಧಿ ಕಾರ್ಯಕ್ರಮಗಳ ಸೌಲಭ್ಯಗಳನ್ನು ಸಾಮಾಜಿಕ ಪರಿವರ್ತನೆಯನ್ನು ಇವರು ಹೊಂದುತ್ತಿದ್ದಾರೆ.