ರಾಜಪುರಿಗಳು ಮಹಾರಾಷ್ಟ್ರದಿಂದ ವಲಸೆ ಬಂದ ಸಮುದಾಯದವರಾಗಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೇರಳ ರಾಜ್ಯದ ಕಣ್ಣಾನೂರು, ಕಾಸರಗೋಡು ತಾಲ್ಲೂಕುಗಳಲ್ಲಿ ವಾಸಿಸುತ್ತಾರೆ. ಕರ್ನಾಟಕದಲ್ಲಿ ರಾಜಪುರಿ, ರಾಜಪುರ್ ಹಾಗೂ ಬಾಲ್-ವಾಲಿಕಾರ್‌ಗಳೆಂದೂ ಕರೆಯಲಾಗುತ್ತದೆ. ಇವರು ಬಾಲ್ವಲಿಕಾರರೆಂದೂ ಪರಿಚಿತರಾಗಿದ್ದಾರೆ. ಮದ್ರಾಸಿನ ಜನಗಣತಿ ವರದಿಯಂತೆ ರಾಜಪುರಿ ಕೊಂಕಣಸ್ಥ ಎಂಬ ಹೆಸರನ್ನು ರಾಜಪುರಿಗಳಿಗೆ ಕೊಡಲಾಗಿದೆ. ಇವರು ಅರವತ್ತಾರು ಕೊಂಕಣ ಗ್ರಾಮಗಳಲ್ಲಿ ವಾಸಿಸುವ ಕೊಂಕಣಸ್ಥ ಜನಗಳಿಗೆ ಅರವತ್ತಾರು ಗುಂಪುಗಳೆಂದು ಹೇಳಲಾಗಿದೆ (ಥರ್ಸ್ಟನ್, ೧೯೦೯). ಮರಾಠಿ, ತುಳು ಹಾಗೂ ಕನ್ನಡ ಭಾಷೆಗಳನ್ನು ಮಾತನಾಡುತ್ತಾರೆ. ಏಳು ಮುನಿಗಳ (ಋಷಿ) ಹೆಸರಿನ ಆಧಾರದ  ಮೇಲೆ ಹೆಸರಿಸುವ ಕಶ್ಯಪ, ವಿಶ್ವಾಮಿತ್ರ, ಶ್ರೀವತ್ಸ, ಭಾರಧ್ವಾಜ, ಅತ್ರಿ, ಜಮದಗ್ನಿ ಮತ್ತು ಕೌಂಡಿನ್ಯಗಳೆಂಬ ಗೋತ್ರಗಳನ್ನು ಹೊಂದಿದ್ದಾರೆ. ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ ಮತ್ತು ಗೋತ್ರಮಟ್ಟದಲ್ಲಿ ಹೊರಬಾಂಧವ್ಯ ಪದ್ಧತಿಯನ್ನು ಅನುಸರಿಸುತ್ತಾರೆ. ಸೋದರ ಮಾವನ ಮಗಳೊಂದಿಗೆ ವಿವಾಹಕ್ಕೆ ಸಮ್ಮತಿ ಇದೆ. ತಂದೆಯ ನಂತರ ಹಿರಿಯ ಮಗನು ಕುಟುಂಬದ ಉತ್ತರಾಧಿಕಾರಿಯಾಗುತ್ತಾನೆ.

ವ್ಯವಸಾಯ ಇವರ ಪಾರಂಪಾರಿಕ ವೃತ್ತಿ. ಕೆಲವರು ಸ್ವಂತ ಜಮೀನನ್ನು ಹೊಂದಿ ವ್ಯವಸಾಯದಲ್ಲಿ ನಿರತರಾಗಿದ್ದಾರೆ. ಇಂದು ವ್ಯಾಪಾರ, ವ್ಯವಹಾರ, ಶ್ರಮಗೂಲಿ, ಕೆಲವರು ಸರ್ಕಾರಿ-ಖಾಸಗಿ ಸಂಸ್ಥೆಗಳಲ್ಲಿ ನೌಕರಿಗಳನ್ನು ಮಾಡುತ್ತಾರೆ. ಇವರು ಶಿವ, ವಿಷ್ಣು, ಗಣೇಶ, ಇತ್ಯಾದಿ ದೈವಗಳನ್ನು ಪೂಜಿಸುತ್ತಾರೆ. ಇತ್ತೀಚೆಗೆ ಅಭಿವೃದ್ಧಿ ಯೋಜನೆಗಳನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ. ಆಧುನಿಕ ಶಿಕ್ಷಣದ ಬಗ್ಗೆ ಆಸಕ್ತಿಯನ್ನು ಹೊಂದುತ್ತಿದ್ದಾರೆ. ಕೆಲವು ಮಟ್ಟಿನ ಆಧುನಿಕ ಸಾಮಾಜಿಕ ಸಂಸ್ಥೆಗಳ ಬಗ್ಗೆ ಒಲವು ಹೊಂದಿದ್ದಾರೆ.