ರಾಮಕ್ಷತ್ರಿಯ, ಕೋಟೆಕ್ಷತ್ರಿಯ ಅಥವಾ ಕೋಟೆಯವರು, ಕೋಟೆಯರ ಕೋಟೆಗಾರ, ಕೋಟೆಶೇರುಗಾರ, ಸರ್ವೆಗಾರ, ಶೇರುಗಾರ, ಶಿರೋಗಾರ ಮತ್ತು ಶೆರೆಗಾರ ಎಂಬ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಇವರು ರಾಮಕ್ಷತ್ರಿಯ ಎಂಬುದು ಅಳವಡಿಸಿಕೊಂಡ ಹೆಸರಾಗಿದೆ. ಥರ್ಸ್ಟನ್ (೧೯೦೯) ಇವರನ್ನು ಸರ್ವೆಗಾರರೆಂದು ಕರೆದರೆ, ಎಂಥೋವನ್ (೧೯೨೨)ಇವರನ್ನು ಶೋರೆಗಾರರು ಅಂದರೆ ಓಲೆಕಾರರು, ಕೊಂಕಣ ವಾಲೆಕಾರರೆಂದು, ಕರ್ನಾಟಕದ ವಾಲೆಕಾರರು ಎಂದು ಕರೆಯುತ್ತಿದ್ದರು. (ಓಲೆ ಸಂದೇಶವನ್ನು ಬರೆಯುವ ತಾಳೆ ಎಲೆ) ಎಂದು ವಿವರಿಸುತ್ತಾರೆ. ಗೋವಾದಿಂದ ಬಂದ ಇವರು ಕೊಂಕಣಿ ಮರಾಠರ ಗುಂಪನ್ನು ಪ್ರತಿನಿಧಿಸುತ್ತಾರೆಂದು ಹೇಳಲಾಗಿದೆ. ಕನ್ನಡದಲ್ಲಿ ‘ಕೋಟೆ’ ಪದ ಇವರ ಕೋಟೆಯರ್, ಕೋಟೆಗಾರ ಹೆಸರುಗಳಿಗೆ ಹತ್ತಿರ ಬರುವಂತಹ ಅರ್ಥಕೊಡುತ್ತದೆ. ರಾಮಕ್ಷತ್ರಿಯರು ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ, ಕೇರಳದ ಕಾಸರಗೋಡು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರು ಮುಖ್ಯವಾಗಿ ಚಂದ್ರವಂಶ ವಿಭಾಗಕ್ಕೆ ಸೇರಿದರೂ, ವಿಶ್ವಾಮಿತ್ರ, ಭಾರಧ್ವಾಜ, ಜಮದಗ್ನಿ, ಗೌತಮ, ಕೌಂಡಿನ್ಯ, ವೈಶಂಪಾಯ, ಅತ್ರಿ, ಇತ್ಯಾದಿ ಹನ್ನೆರಡು ಗೋತ್ರಗಳಿಗೆ ಸೇರಿದವರೆಂದು ಹೇಳಿಕೊಳ್ಳುತ್ತಾರೆ. ಗೋತ್ರಗಳಿಗೆ ಸಂಬಂಧಿಸಿದಂತೆ ಮನೆತನದ ಹೆಸರು, ಗ್ರಾಮ ಮತ್ತು ಕುಟುಂಬ ದೇವತೆ (ಕುಲದೇವತೆ) ಆಧಾರದ  ಮೇಲೆ ಪಂಗಡಗಳನ್ನು ಹೊಂದಿದ್ದಾರೆ. ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ ಪದ್ಧತಿ, ಗೋತ್ರ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿಯನ್ನು ಅನುಸರಿಸುತ್ತಾರೆ. ಸೋದರ ಸಂಬಂಧಿ ವಿವಾಹಕ್ಕೆ ಅವಕಾಶವಿದೆ. ತಂದೆಯ ನಂತರ ಹಿರಿಯ ಮಗ ಕುಟುಂಬದ ಉತ್ತರಾಧಿಕಾರವನ್ನು ಪಡೆಯುತ್ತಾನೆ. ಕೆಲವರು ಸರ್ಕಾರಿ ಖಾಸಗಿ ಸಂಸ್ಥೆಗಳಲ್ಲಿ ನೌಕರರಾಗಿದ್ದು, ಬೀಡಿಗಳನ್ನೂ ಸುತ್ತುತ್ತಾರೆ. ಹಿಂದೂಗಳಾದ ಇವರ ಕುಟುಂಬ ದೈವಗಳು – ರಾಮನಾಥ, ಮಲ್ಲಿಕಾರ್ಜುನ, ಮಹಾದೇವ ಇತ್ಯಾದಿ. ಆಧುನಿಕ ಸಾಮಾಜಿಕ ಸಂಸ್ಥೆಗಳ ಬಗ್ಗೆ ಹೆಚ್ಚಿನ ಒಲವನ್ನು ತೋರಿಸುತ್ತಿದ್ದಾರೆ.

ಬೀಡಿಗಳನ್ನೂ ಸುತ್ತುತ್ತಾರೆ. ಹಿಂದೂಗಳಾದ ಇವರ ಕುಟುಂಬ ದೈವಗಳು ರಾಮನಾಥ, ಮಲ್ಲಿಕಾರ್ಜುನ, ಮಹಾದೇವ ಇತ್ಯಾದಿ. ಆಧುನಿಕ ಸಾಮಾಜಿಕ ಸಂಸ್ಥೆಗಳ ಬಗ್ಗೆ ಹೆಚ್ಚಿನ ಒಲವನ್ನು ತೋರಿಸುತ್ತಿದ್ದಾರೆ.

ನೋಡಿ:

ನಾಯಕ್., ಎಸ್.ಕೆ. ೧೯೮೮. ರಾಮ ಕ್ಷತ್ರಿಯ ಇತಿಹಾಸ ಮತ್ತು ವೈದಿಕ ಪರಂಪರೆ,  ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ರಾಮರಾಜ್ಯ ಕ್ಷತ್ರಿಯ ಸೇವಾ ಸಂಘ.

ಶೀಲಾಹಾರ್., ಸಂ ೧೯೮೪. ರಾಮಕ್ಷತ್ರಿಯ ಮೂಲಶೋಧ ಸಾಂಸ್ಕೃತಿಕ ಸಂಪ್ರದಾಯ,  ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ರಾಮಕ್ಷತ್ರಿಯ ಸೇವಾ ಸಂಘ.