ರಾಯರಾವುತರು ಕೃಷ್ಣದೇವರಾಯನ ಕಾಲದ ವಿಜಯನಗರ ಸಾಮ್ರಾಜ್ಯದ ಅಶ್ವಸೈನ್ಯದ ಅಶ್ವಾರೋಹಿಗಳ ತಲೆಮಾರಿನವರೆಂದು ನಂಬಲಾಗಿದೆ. ಸೈನ್ಯದಲ್ಲಿ ರಥ(ರಥವನ್ನು ನಡೆಸುವವರು), ಮಾವುತ (ಆನೆಗಳನ್ನು ನಡೆಸುವವರು) ಪದಾತಿ (ಸೈನಿಕರು) ಹಾಗೂ ತುರುಗ (ಅಶ್ವಸೈನ್ಯ), ವಿಂಗಡನೆಗಳಿವೆ. ತುರುಗ ಘಟಕದ ಅಶ್ವ ಸವಾರರು ತಮ್ಮನ್ನು ರಾಹುತರೆಂದು (ಮಾವುತ ಶೈಲಿಯಲ್ಲಿ) ಗುರುತಿಸಿಕೊಂಡಿರಬಹುದು. ನಂತರದ ದಿನಗಳಲ್ಲಿ ಅದು ರಾವುತ ಎಂದಾಗಬಹುದು. ಮುಂದೆ ರಾವುತ ಸಮುದಾಯದಿಂದ ಭಿನ್ನವಾಗಿ ಗುರುತಿಸಿಕೊಳ್ಳಲು ಇವರು ತಮ್ಮನ್ನು ರಾಯರಾವತರನ್ನಾಗಿ  ಮಾಡಿಕೊಂಡಿರಬಹುದು.

ಇವರಲ್ಲಿ ರಾಯರಾವತ ಮತ್ತು ವಿಜಯನಗರ ಕ್ಷತ್ರಿಯರೆಂಬ ಉಪಪಂಡಗಳಿವೆ. ರಾವತ ಎಂಬುದು ಅವರ ಬಿರುದಾಗಿದೆ. ಇವರು ಹೆಚ್ಚಾಗಿ ಮೈಸೂರು, ತುಮಕೂರು, ಹಾಸನ, ಬೆ ಗಳೂರು ಮುಂತಾದ ಜಿಲ್ಲೆಗಳಲ್ಲಿ ಹಂಚಿಹೋಗಿದ್ದಾರೆ. ಇವರು ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಸಂಬಂಧಗಳನ್ನು ಕ್ರಮಗೊಳಿಸಲು ರಾಯರಾವತರು ಅನೇಕ ಕುಲಗಳಲ್ಲಿ ಗುರುತಿಸಿಕೊಂಡಿದ್ದಾರೆ. ಸೋದರ ಸಂಬಂಧಿ ವಿವಾಹಕ್ಕೆ ಅವಕಾಶವಿದೆ. ವಿಧವೆ, ವಿಧುರರ ವಿವಾಹಗಳಿಗೆ ಅನುಮತಿ ಇದೆ. ಇವರಲ್ಲಿ ಗಂಡುಮಕ್ಕಳಿಗೆ ಆಸ್ತಿಯಲ್ಲಿ ಸಮ ಭಾಗ ದೊರೆಯುತ್ತದೆ. ಹಿರಿಯ ಮಗನು ತಂದೆಯ ನಂತರ ಕುಟುಂಬದ ಉತ್ತರಾಧಿಕಾರಿಯಾಗುತ್ತಾನೆ. ರಾಯರಾವತರು ಪ್ರಸ್ತುತ ಸಮಯದಲ್ಲಿ ಸುಣಗಾರರು, ಬೇಸಾಯಗಾರರು, ಖಾಸಗಿ ಹಾಗೂ ಸರ್ಕಾರಿ ನೌಕರಿಯ ಜೊತೆಗೆ ವ್ಯಾಪಾರ, ಸ್ವಯಂ ಉದ್ಯೋಗಗಳಲ್ಲಿ ತೊಡಗಿದ್ದಾರೆ. ಇವರಲ್ಲಿ ಹೆಚ್ಚಿನ ಜನ ವ್ಯವಸಾಯದ ಶ್ರಮಿಕರು. “ಕರ್ನಾಟಕದ ರಾಯರಾವತ ಸಂಘ” ವೆಂಬ ಸಂಘಟನೆ ಇವರ ಅಭಿವೃದ್ಧಿಗಾಗಿ ಶ್ರಮಿಸುತ್ತದೆ. ಇವರು ಎಲ್ಲಮ್ಮ, ಮೈಲಾರಲಿಂಗ, ರಂಗನಾಥ, ವೆಂಕಟೇಶ, ಇತ್ಯಾದಿ ದೇವರುಗಳನ್ನು ಪೂಜಿಸುತ್ತಾರೆ. ಬ್ರಾಹ್ಮಣ ಅರ್ಚಕರು ಇವರ ಧಾರ್ಮಿಕ ಶಾಸ್ತ್ರವಿಧಿಗಳನ್ನು ನೆರವೇರಿಸುತ್ತಾರೆ. ಇವರಿಗೆ ನವರಾತ್ರಿ ಹಬ್ಬವು ಬಹಳ ಪ್ರಮುಖವಾಗಿದೆ. ಇದನ್ನು ತುಂಬಾ ವೈಭಯುತವಾಗಿ ಆಚರಿಸುತ್ತಾರೆ. ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಹಾಗೂ ಸರ್ಕಾರದಿಂದ ದೊರಕುವ ಯೋಜನೆಗಳನ್ನು ಉಪಯೋಗಿಸಿಕೊಂಡು ಅಭಿವೃದ್ಧಿ ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.