ಲಂಬಾಣಿಗಳನ್ನು ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಹಾಗೂ ಆಂಧ್ರಪ್ರದೇಶದಲ್ಲಿ ಲಮಾಣೆ, ಲಂಬಾಡಿ, ಲಂಬಾಡಾ, ಲಬಾನಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ನಂಜುಂಡಯ್ಯ ಹಾಗೂ ಅಯ್ಯರ್‌ರವರು ಲಮಾಣಿ ಅಥವಾ ‘ಲಂಬಾಣಿ’ ಎಂಬುದು ಸಂಸ್ಕೃತದ ‘ಲವಣ’ ಶಬ್ದದಿಂದ ಬಂದಿದೆ ಎಂದು ಹೇಳುತ್ತಾರೆ. ಈ ಸಮುದಾಯದ ಜನರು ‘ಲವಣದ’ ವ್ಯಾಪಾರವನ್ನು ಮಾಡುತ್ತಿದ್ದುದರಿಂದ ಲವಣಿಗರೆಂದು, ಮುಂದೆ ಅಪಭ್ರಂಶಗೊಂಡು ಲಮಾಣಿಗ, ಲಂಬಾಣಿಗ್ರ, ಲಂಬಾಡಿಗರು ಎಂಬ ಹೆಸರುಗಳಿಂದ ಕರೆಯಲ್ಪಟ್ಟರು. ಲಂಬಾಣಿ ಅಥವಾ ಲಂಬಾಡಿ ಎಂಬ ಲಮಾನೆ/ಲಭಾನೆ ಎಂಬ ಪದದ ಇನ್ನೊಂದು ರೂಪವೆಂದು ಹೇಳುತ್ತಾರೆ. ಲಭಾನೆ ಎಂಬುದು ಬಣಜಾರ ಸಮುದಾಯದ ಪ್ರಭೇದಗಳಲ್ಲೊಂದು ಎಂದು ಅಭಿಪ್ರಾಯ ಪಡುತ್ತಾರೆ. ಆಂಧ್ರಪ್ರದೇಶ, ತಮಿಳುನಾಡು ಹಾಗೂ ಕೇರಳ ಪ್ರಾಂತ್ಯಗಳಲ್ಲಿ ಲಂಬಾಣಿಗಳಿಗೆ ಸುಗಾಳಿ, ಸುಕಾಳಿ, ಸುಲಾಲಿ ಎಂಬ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಇವರು ಬಂಜಾರಿ (ಲಂಬಾಣಿ) ಭಾಷೆಯನ್ನು ತಮ್ಮ ಒಳಗೆ, ಇತರರ ಜೊತೆ ಕನ್ನಡ ಭಾಷೆ ಮಾತನಾಡಿ, ಕನ್ನಡ ಲಿಪಿ ಬಳಸುತ್ತಾರೆ. ಲಂಬಾಣಿಗಳಲ್ಲಿ ಕಂಡುಬರುವ ಮುಖ್ಯವಾದ ಉಪಪಂಗಡಗಳೆಂದರೆ, ಗೋರಬಂಜಾರ, ಢಾಡಿ ಬಂಜಾರ, ಸನಾರಬಂಜಾರ, ನಾವಿಬಂಜಾರ, ಢಾಲಿಯಾಬಂಜಾರಾ, ಭಾಟಬಂಜಾರ್, ಬಾಮಣಿಯಾ ಬಂಜಾರ, ಧನಕೋಟೆಬಂಜಾರ, ಜೋಗಿಬಂಜಾರ, ಚಾರಣಬಂಜಾರ, ಮಾರುಬಂಜಾರ, ಸಿಗಾಡಿಯಾ ಬಂಜಾರ, ಇತ್ಯಾದಿ.

ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಲಂಬಾಣಿಗಳು ತಮ್ಮದೇ ಆದ ವಿಶಿಷ್ಟ ಸಂಸ್ಕೃತಿಯನ್ನು, ಪರಂಪರೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಊರುಗಳಿಂದ ಅಥವಾ ಗ್ರಾಮಗಳಿಂದ ಪ್ರತ್ಯೇಕವಾಗಿ ಈಗಲೂ ನೆಲೆಸಿರುವ ಲಂಬಾಣಿಗರ ನೆಲೆಗೆ ‘ತಾಂಡ’ ಎಂದು ಕರೆಯುತ್ತಾರೆ. ತಾಂಡಕ್ಕೆ ಸಮೀಪದ ಊರುಗಳ ಹೆಸರೇ ಇವುಗಳಿಗೆ ಇರುತ್ತವೆ. ಇಂದು ಅವುಗಳೆ ತಾಂಡದ ಅಧಿಕೃತ ಹೆಸರುಗಳಾಗಿ ಬಳಕೆಯಲ್ಲಿವೆ. ಲಂಬಾಣಿಗಳ ಮೂಲದ ಬಗೆಗೆ ವಿದ್ವಾಂಸರಲ್ಲಿ ಭಿನ್ನಾಪ್ರಾಯಗಳಿವೆ. ಸಾಮಾನ್ಯವಾಗಿ ಇವರು ರಾಜಸ್ಥಾನದಿಂದ ದಕ್ಷಿಣ ಭಾರತದ ಕಡೆಗೆ ವಲಸೆ ಬಂದವರು ಎಂದು ತಿಳಿದು ಬರುತ್ತದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿಯೂ ಇವರು ಕಂಡುಬರುತ್ತಾರೆ. ಆದರೆ ದಕ್ಷಿಣ ಕನ್ನಡ, ಕೊಡಗು ಹಾಗೂ ಚಾಮರಾಜ ನಗರ ಜಿಲ್ಲೆಗಳಲ್ಲಿ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕಂಡುಬರುತ್ತಾರೆ.

ಇವರ ಸಮುದಾಯದಲ್ಲಿ ಕಂಡುಬರುವ ಮುಖ್ಯ ಬೆಡಗುಗಳು-ಎಂದರೆ, ಅಲಣ, ಮೋಹನ, ಬಾಲಣ, ಮುಚ್ಚಾಳೊ, ಜಾಟೋತ, ಧರಮಸೋತ, ಇತ್ಯಾದಿ, ರಾಠೋಡರಲ್ಲಿ ಕಂಡುಬರುತ್ತದೆ. ಅಯ್ಯತ, ಸೈಯತ, ಬಾಣೆ, ಗೋರ್ರಾ‍ಮ, ಲೋಕಾವತ, ತರಬಾಣೆ, ವಾಂಕಡೋತ, ಉಣಸಾವತ, ಅಮೆಗೋತ್ರ ಇತ್ಯಾದಿಗಳು ಪವಾರರಲ್ಲಿ ಕಂಡು ಬರುತ್ತವೆ. ಪಾಲತ್ಯಾ, ಸಬಾವಟ, ಕೊರ್ರಾ‍, ಲಾವಡ್ಯಾ, ಕೇಳೂತ ಹಾಗೂ ಮೂಡ ಬೆಡಗುಗಳು ಚವ್ಹಾಣರಲ್ಲಿ ಕಂಡುಬರುತ್ತವೆ. ಇಲ್ಲಿ ನಾವು ಗಮನಿಸಬೇಕಾದ ಮುಖ್ಯ ಅಂಶವೆಂದರೆ ಚವ್ಹಾಣ ಮತ್ತು ಪವಾರರ ಪಂಡಡಗಳಲ್ಲಿ ವಿವಾಹ ಸಾಧ್ಯವಿಲ್ಲ. ಏಕೆಂದರೆ ಈ ಎರಡು ಪಂಗಡಗಳು ಒಳಬಾಂಧವ್ಯದ ಬೆಡಗುಗಳಾಗಿವೆ. ಮದುವೆಯ ತಂದೆಯ ಸಹೋದರಿಯ ಮಗಳು, ತಾಯಿಯ ಸಹೋದರನ ಮಗಳು ಅಥವಾ ಹಿರಿಯಕ್ಕನ ಮಗಳ ಜೊತೆ ಸಾಧ್ಯವಿದೆ. ಹೆಂಗಸರು ವ್ಯವಸಾಯ, ಪಶುಸಂಗೋಪನೆ, ಹಾಗೂ ಸಾಮಾಜಿಕ, ಆರ್ಥಿಕ, ರಾಜಕೀಯ ಚಟುವಟಿಕೆಗಳಲ್ಲಿಯು ಭಾಗವಹಿಸುತ್ತಾರೆ.

ಕೆಲವು ಲಂಬಾಣಿಗರಿಗೆ ಕೃಷಿ ಭೂಮಿಯಿದೆ. ಆದರೆ ಇವರಲ್ಲಿ ಬಹಳಷ್ಟು ಜನ ಕೂಲಿ ಕೆಲಸಗಾರರು. ಇವರ ಸಾಂಪ್ರದಾಯಿಕ ವೃತ್ತಿಗಳೆಂದರೆ ಉಪ್ಪು, ಮದ್ಯ ತಯಾರಿಸುವುದು ಹಾಗೂ ಅಲೆಮಾರಿ ರೀತಿಯಲ್ಲಿ ಮಾರಾಟ ಮಾಡುವುದು. ಇವುಗಳು ಇತ್ತೀಚೆಗೆ ಕಡಿಮೆಯಾಗುತ್ತಿದೆ. ಮನೆಯ ಗ್ರಾಮದ ಹಾಗೂ ಪ್ರಾಂತೀಯ ದೇವರುಗಳನ್ನು ಪೂಜಿಸುತ್ತಾರೆ. ಆಧುನಿಕ ವಿದ್ಯಾಭ್ಯಾಸದ ಬಗ್ಗೆ ಒಲವಿದೆ. ಆದರೂ ಇವರಲ್ಲಿ ಬಹುಪಾಲು ಜನರು ಗ್ರಾಮ ಜೀವನದಲ್ಲಿರುವುದರಿಂದ ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ಇನ್ನೂ ಅವಿದ್ಯಾವಂತರಾಗಿಯೇ ಇದ್ದಾರೆ. ಇವರು ಆಧುನಿಕ ಹಾಗೂ ಸಾಂಪ್ರದಾಯಿಕ ವೈದ್ಯಕೀಯಗಳೆರಡನ್ನು ಬಳಸುತ್ತಾರೆ. ಇವರು ಗ್ರಾಮಾಭಿವೃದ್ಧಿ ಕಾರ್ಯಕ್ರಮದಡಿಯಲ್ಲಿ ಬರುವ ಬಹಳಷ್ಟು ಯೋಜನೆಯ ಸೌಲಭ್ಯಗಳನ್ನು ಪಡೆದುಕೊಂಡ ಕೆಲವರು ಸ್ವಯಂ ಉದ್ಯೋಗ ಕಲ್ಪಿಸಿಕೊಂಡಿದ್ದಾರೆ. ಈ ಸಮುದಾಯವು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದ ಸಮುದಾಯವಾಗಿದೆ.

ನೋಡಿ:

ಖಂಡೋಬಾ ಪಿ.ಕೆ., ೧೯೯೧. ಕರ್ನಾಟಕದ ಲಂಬಾಣಿಗಳ, ಒಂದು ಸಾಂಸ್ಕೃತಿಕ ಅಧ್ಯಯನ, ದಿ ತೇಜಾಸಿಂಗ್ ರಾಥೋಡ ಮೆಮೋರಿಯಲ್ ಟ್ರಸ್ಟ್‌, ಗುಲ್ಬರ್ಗಾ

ನಾಯಕ.ಡಿ.ಬಿ., ೧೯೯೩. ಲಂಬಾಣಿ ಸಂಸ್ಕೃತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು

Allaiah, K., 1995. ‘The Lambadis: Their Identiy’  Man in India  75(1)97-100

Desai H., 1995. ‘The Lambadas  of Hyderabad’  Man in India.  Vol 7: 26-28

Halbar, B.G., 1982. ‘Socio-Cultural Identity of the Lamani in the North-West Karnataka In :  Nomads in India’, P.K. Misra and K.C.Malhotra (ed.) : Anthropological Survey of India, Calcutta

Halbar B.G., 1986. Lamani Economy and Society in Change Mittal Publications, Delhi

Krishna Reddy, B.and M.Ramachandra Reddy., 1987. ‘An Ethnographic Account of the Banjaras’, Vijayanthi

Latouche T.W., 1957. ‘The Banjaras’, March of India, 9:35-36

Mukunda Amaravati., 1977. The Lambadis : Some Aspects of Their Life,  Ph.D. thesis,; Lacknow University, Lucknow

Naidu T.S., 1979. Lambadis and Their Customary Laws, Anthropological Survey of India, Mysore

Naik, V.S., 1979. Tribal Education and the Lambadis, A Case Study of the Lambadis in Nalgonda District,  Andhra Pradesh : Anthropological Survey of India, Mysore

Padmanabhahastry, C.A. , 1992. ‘Personal Names of Lambadi’ s’ Studies in Inidan Place Names Vol : 13, p. 80-84

Pratap, D.R., 1972. Festivals of Banjaras Tribal Cultural Research and Training institute, Department of Tribal Welfare, Andhara Pradesh, Hyderabad

Rajagopalan, T.1968. ‘Among the Lambadas of Andhra Pradesh’, The Hindu,  (11 Feb) 111

Ramachandraiah T. 1967. A Genetic Study of Lambadis of Andhra Pradesh Ph.D.Thesis; University of Delhi Delhi

Rao P.Kamala Manohar., 1950. ‘The mythological origin and Clan Systems of Banjaras of Hyderabad’, Man in India  30: 17-22

Reddy, B. Krishna, 1992 A Note on the Worship of Hindu Deities in a Tribal Community of Andhra Pradesh; The Case of Banjaras, Man and Life 18:1/2 pp 45-53

Reddy B.Krishna., 1991. ‘Forests and the Sugalis in Andhra Pradesh : Historical and Anthropological Perspective’, Man in India, 71(4) 611-619

Reddy, Ramachandra, M.V. Narayana Reddy and P.Chengal Reddy., 1988. ‘Ethnographic study of the Sugalis of Andhra Pradesh’, Man in Asia, 1(1) : 78-82

Samanta R.K.,L.Shyam Sundar., 1985. ‘The Lambadis : Their Socio-psychological and Agro – Economic Characteristics’, Man in India, 65pp 269-77

Shahida Khanum., 1983. A Study of Dermatoglyphics among the Lamanis of Machapur Tanda  M.Sc Disseratation Karnataka University. Dharwad

Somasundaram A.M., 1947. ‘Lambadis and Crime’, The Eastern Anthropologist I (2) : 18-25

Srivastava, R.P., 1985. ‘Anthropological Demography of Lamani Village Settlement of Dharwar District’, Journal of Family Welfare 311 (3) 20-26

Tribal Cultural Research and Training Institulte, A Banjara Conference  – Nekkonda (Warangal District) : Tribal Welfare Department, Govt. of Andhra Pradesh, Hyderabad

Tribal Cultural Research and Training Institu Comparative Study on Mathura and Lambada : Tribal Welfare Department, Govt. of Andhra Pradesh, Hyderabad