ಡಾರರನ್ನು ಲಾಡ್, ಲಡೇರ್ ಹಾಗೂ ಯೆಲ್ಲೆಗಾರ್ ಎಂದು ಕರೆಯಲಾಗುತ್ತದೆ. ಇವರಲ್ಲಿ ನಾಲ್ಕು ಉಪಗುಂಪುಗಳಿವೆ. ನಂಜುಂಡಯ್ಯ ಮತ್ತು ಐ‌ಯ್ಯರ್ (೧೯೩೧) ರವರ ಪ್ರಕಾರ, “ಲಡಾರರು ಸಾಮಾನ್ಯವಾಗಿ ವರ್ತಕರು ಹಾಗು ಪಟ್ಟಣ ಪ್ರದೇಶದಲ್ಲಿ ಹೆಚ್ಚಾಗಿ ವಾಸಿಸುತ್ತಾರೆ. ೧೪ನೇ ಶತಮಾನದಲ್ಲಿ ಗುಜರಾತ್‌ನಿಂದ ಮಹಾರಾಷ್ಟ್ರ ಹಾಗೂ ಮೈಸೂರು ರಾಜ್ಯಗಳಿಗೆ ವಲಸೆ ಬಂದಿದ್ದಾರೆ. ಈಗಳೂ ಗುಜರಾತಿಗಳು ಇರುವ ಎಲ್ಲ ಪಟ್ಟಣಗಳಲ್ಲಿ ಲಡಾರರು ಕಾಣಸಿಗುತ್ತಾರೆ. ‘ಲಡೇರ್ ಲಾತ್’ ಎಂದು ಇವರನ್ನು ದಕ್ಷಿಣ ಗುಜರಾತ್‌ನಲ್ಲಿ ಕರೆಯುತ್ತಿದ್ದ ಹೆಸರು. ಥರ್ಸ್ಟನ್ (೧೯೦೯) ಇವರನ್ನು ವರ್ತಕರು ಎಂದು ಹೇಳುತ್ತ ಇವರಲ್ಲಿ ಒಳಬಾಂಧವ್ಯದ ವಿವಾಹದ ಹಲವಾರು ಬಳ್ಳಿಗಳನ್ನು ಹೆಸರಿಸುತ್ತಾರೆ. ಥೆಲಿಲಡಾರ್, ಅಂಬ್ಲಿ ಲಡಾರ್, ಕಲೊ ಲಡಾರ್, ಕಸಾಯಿ ಲಡಾರ್, ಜಿನ ಲಡಾರ್,  ಜಿನ ಲಡಾರ್, ಸಕು/ಹ್ಲೇ ಮಕ್ಕಳು, ಇತ್ಯಾದಿ. ಕನ್ನಡ ಮತ್ತು ಮಿಶ್ರ ಹಿಂದಿ ಭಾಷೆ ಹಾಗೂ ಲಿಪಿಗಳನ್ನು ಬಳಸುತ್ತಾರೆ.

ಮದುವೆಯು ತಾಯಿಯ ಸಹೋದರನ ಮಗಳು, ತಂದೆಯ ಸಹೋದರಿಯ ಮಗಳು ಅಥವಾ ಹಿರಿಯಕ್ಕನ ಮಗಳ ಜೊತೆ ಸಾಧ್ಯವಿದೆ. ವಧುದಕ್ಷಿಣೆಯಾಗಿ ಐವತ್ತು ರೂಪಾಯಿಗಳನ್ನು ಕೊಡಬೇಕಾಗುತ್ತದೆ. ಹಿರಿಯ ಮಗನು ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಜನನ ಸೂತಕವು ಹನ್ನೆರಡು ದಿನಗಳವರೆಗೆ ಇರುತ್ತದೆ. ಗಂಡು ಮಕ್ಕಳಿಗೆ ಮುಂಜಿಯನ್ನು ಮಾಡಿಸುತ್ತಾರೆ. ಋತುಮತಿಯಾದಾಗ ಹೆಣ್ಣು ಮಕ್ಕಳಿಗೆ ‘ಮೈನರೆಯುವುದು’ ಎನ್ನುವ ಕಾರ್ಯವನ್ನು ಮಾಡುತ್ತಾರೆ. ಮದುವೆಯ ಕಾರ್ಯಗಳೆಲ್ಲ ವರನ ಮನೆಯಲ್ಲಿ ನಡೆಯುತ್ತವೆ. ಶವವನ್ನು ಸುಡುತ್ತಾರೆ, ಸಾವಿನ ಸೂತಕವನ್ನು ಹತ್ತು ದಿನಗಳವರೆಗೆ ಆಚರಿಸಿ, ಹದಿಮೂರನೇ ದಿನ ತಿಥಿಯನ್ನು ಮಾಡುತ್ತಾರೆ.

ಸಾಂಪ್ರದಾಯಿಕವಾಗಿ ಇವರು ವ್ಯಾಪಾರಿಗಳು ಮತ್ತು ವ್ಯವಸಾಯದ ಕೂಲಿಗಳು. ಇವರಲ್ಲಿ ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಯಲ್ಲಿ ಇದ್ದಾರೆ. “ಕ್ಷತ್ರಿಯ ಲಡಾರ್ ಸಂಘ”ವೆನ್ನುವ ಸಮುದಾಯ ಸಂಘಟನೆ ಇವರ ಒಳಿತಿಗಾಗಿ ದುಡಿಯುತ್ತಿದೆ. ಇವರು ಜಗದಂಬ, ತುಳಜಾ ಭವಾನಿ, ವಿಠ್ಠೋಬ, ಇತ್ಯಾದಿ ದೇವರುಗಳನ್ನು ಪೂಜಿಸುತ್ತಾರೆ. ಬ್ರಾಹ್ಮಣ ಪುರೋಹಿತರು ಇವರ ಪವಿತ್ರ ಧಾರ್ಮಿಕ ಕಾರ್ಯಗಳನ್ನು ನಡೆಸಿಕೊಡುತ್ತಾರೆ. ಯುಗಾದಿ, ನಾಗರಪಂಚಮಿ, ಗೌರಿ, ಗಣೇಶಚತುರ್ಥಿ, ದಸರಾ, ದೀಪಾವಳಿ ಶಿವರಾತ್ರಿ ಹಬ್ಬಗಳನ್ನು ಆಚರಿಸುತ್ತಾರೆ. ಆಧುನಿಕ ಶಿಕ್ಷಣ, ಅಭಿವೃದ್ಧಿ ಯೋಜನೆಗಳು, ಇವರಿಗೆ ಸ್ವಲ್ಪಮಟ್ಟಿಗೆ ದೊರಕುತ್ತಿವೆ. ಇವರ ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ.