ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಲಿಂಗಾಯತರು ಶಿವನ ಆರಾಧಕರು.  ಜೊತೆಗೆ ‘ಇಷ್ಟಲಿಂಗ’ ಧರಿಸುತ್ತಾರೆ. ಅದು ಶಿವನ ಪ್ರತಿರೂಪ ಎಂದು ಭಾವಿಸುತ್ತಾರೆ. ಇವರಲ್ಲಿ ಹಲವಾರು ಉಪಜಾತಿಗಳು ಇವೆ. ಎಲ್ಲ ಲಿಂಗಾಯತರು ಇಷ್ಟಲಿಂಗ ಧರಿಸುತ್ತಾರೆ. ಈ ಸಮುದಾಯ ಹನ್ನೆರಡನೇ ಶತಮಾನದಲ್ಲಿ ಬಲವೇಶ್ವರದಿಂದ ಸ್ಥಾಪನೆಯಾಯಿತು ಎಂದು ಕೆಲವರು ಅಭಿಪ್ರಾಯ ಪಡುತ್ತಾರೆ. ಈ ಸಮುದಾಯವು ಬೇರೆ ಕಡೆ ಹೆಚ್ಚು ಹರಡಲಿಲ್ಲ. ಎಂಥೋವನ್ (೧೯೨೨) ಪ್ರಕಾರ “ಮೂಲತಃ ಇದು ಒಂದು ಬ್ರಾಹ್ಮಣರ ವಿರುದ್ಧ ಬಂಡಾಯವೆದ್ದ” ಒಂದು ಸಮುದಾಯ. ಮುಂದುವರೆದು ಹೇಳುತ್ತಾ “ಅದು ಬರಿ ಬ್ರಾಹ್ಮಣರ ಶ್ರೇಣಿಕೃತೆಯನ್ನು ಮಾತ್ರ ತಿರಸ್ಕರಿಸಲಿಲ್ಲ. ಆದರೆ ಹಿಂದೂ ಧರ್ಮದ ಎಲ್ಲ ಜಾತಿ ವ್ಯವಸ್ಥೆಯ ವಿರುದ್ಧ ಬಂಡಾಯವೆದ್ದಿತು” ಎಂದು ಹೇಳುತ್ತಾರೆ. ಈ ಧಾರ್ಮಿಕ ಚಳುವಳಿ ಬಸವೇಶ್ವರರ ನಾಯಕತ್ವದಲ್ಲಿ ಪ್ರಾರಂಭವಾಯಿತು.

ನಂಜುಂಡಯ್ಯ ಮತ್ತು ಐಯ್ಯರ್ (೧೯೩೧) ಸಾಂಪ್ರದಾಯಿಕವಾಗಿ ಲಿಂಗಾಯತರು ಐದು ಆಚಾರ್ಯರ ಮೂಲದಿಂದ ಬಂದವರೆಂದು ಹೇಳುತ್ತಾರೆ. ಅವರೆಂದರೆ ರೇವಣಸಿದ್ಧ, ಮರುಳಾರಾಧ್ಯ, ಏಕೋರಾಮಾರಾಧ್ಯ, ಪಂಡಿತಾರಾಧ್ಯ, ಮತ್ತು ವಿಶ್ವಾರಾಧ್ಯ. ಈ ಐವರೂ ಲಿಂಗೋದ್ಭವರೆಂದು ಹೇಳಲಾಗುತ್ತದೆ.

ಇವರು ಐದು ಬೇರೆ ಬೇರೆ ಮಠಗಳು ಇವೆ. ಅವು ಉಜ್ಜಿನಿ, ಕಾಶಿ, ಕೇದಾರ, ಶ್ರೀಶೈಲ, ಬಾಳೇಹಳ್ಳಿಯಲ್ಲಿವೆ. ಎಂಥೋವನ್ ಇವರಲ್ಲಿ ನಲವತ್ತಾರು ಉಪ ಗುಂಪುಗಳನ್ನು ಗುರುತಿಸಿದ್ದಾರೆ. ಆದಿಬಣಜಿಗ ಅಥವಾ ದೀವಟಿಗಿ, ಅಗಸ, ಅಂಬಿಗ, ಬಡಿಗ, ಬಳಿಗಾರ, ಬಣಜಿಗ, ಬಸುವಿ, ಮೇದಾರ, ಛಲವಾದಿ ಅಥವಾ ಹೊಲೆಯ, ದಾಸ ಅಥವಾ ದೆವದಾಸ, ಢೋರ, ಗಾಣಿಗೆರ, ಗೌಳಿ, ಉಪ್ಪಾರ, ಹಂಡೆವಜಿರ, ಹೆಳವ, ಹೂಗಾರ, ಅಥವಾ ಸಾಲಿ (ಬೆಳಿಜಾಡ, ದೇವರ ದಾಸಿಮಯ್ಯ, ದೇವಾಂಗ, ಹಾಲಗಾರ, ಪಂಚಮಶಾಲಿ, ಕುರುಹಿನಶೆಟ್ಟಿ, ನೀಲಕಾಂತ, ಪದ್ಮಸಾಲಿ, ಪಟ್ಟಸಾಲಿ), ಜಂಗಮ, (ಗಣಾಚಾರಿ, ಗುರುಸ್ಥಲ, ಕಂಬೆಯ್ಯ, ಮಠಪತಿ, ನಂದಿಕೋಲ, ಪೂಜಾರಿ, ಸ್ಥಾವರ, ವಸ್ತ್ರದ, ವಿಶುತಿ, ವಿರಕ್ತ) ಕಬ್ಬಲಿಗರ, ಕಚಾರಿ, ಕಲಾವಂತ, ಕಮ್ಮಾರ, ಕುಡುಒಕ್ಕಲು, ಕುಂಬಾರ, ಕುರುಸಾಲಿ, ಲಾಳಗೊಂಡ, ಅಲ್ಲಮ, ಬಣ್ಣಗಾರ, ನೀಲಗಾರ, ನೊಣಬ, ಪಂಚಾಚಾರ, ರೆಡ್ಡಿ, ಸಾದ, ಸಮಗಾರ, ಶಿವಸಿಂಪಿಂಗ, ಸುಣಗಾರ, ತಂಬೋರಿ ಇತ್ಯಾದಿ. ಈ ಮೇಲೆ ಗುರುತಿಸಿದ ಲಿಂಗಾಯತ ಉಪಗುಂಪುಗಳಲ್ಲಿ ಹೆಚ್ಚಿನ ಉಪಗುಂಪುಗಳು ಲಿಂಗಾಯತ ಸಮುದಾಯಲ್ಲಿ ತಮ್ಮನ್ನು ಪೂರ್ವದಲ್ಲಿ ಗುರುತಿಸಿಕೊಂಡಿರುವುದರಿಂದ ಕೆಲವು ಉಪಗುಂಪುಗಳು ಇತ್ತೀಚಿನ ದಿನಗಳಲ್ಲಿ ಕಂಡುಬರುವುದಿಲ್ಲ.

 

ಲಿಂಗಾಯತ : ಅಗಸ

ಗಸ ಲಿಂಗಾಯತರನ್ನು ಮಡಿವಾಳ ಎಂದು ಕರೆಯುತ್ತಾರೆ. ಮಡಿವಾಳ ಎಂದರೆ ಬಟ್ಟೆ ಒಗೆಯುವವರು ಎಂದರ್ಥ. ಇದೊಂದು ಲಿಂಗಾಯತರ ವೃತ್ತಿಯಾಧಾರಿತ ಸಮುದಾಯ. ಇವರು ಬೆಳಗಾವಿ, ಬಿಜಾಪುರ, ಬಾಗಲಕೋಟೆ, ಹಾವೇರಿ, ಗದಗ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಹೆಚ್ಚಾಗಿದ್ದಾರೆ. ಇವರು ಕನ್ನಡ ಹನ್ನೆರಡನೆ ಶತಮಾನದ ಮಾಚಿದೇವನ ಹಿನ್ನೆಲೆಯಲ್ಲಿ ತಮ್ಮನ್ನು ಗುರುತಿಸಿಕೊಳ್ಳುತ್ತಾರೆ. ಇವರು ಮನೆಯಲ್ಲಿ ಹಾಗೂ ಇತರರೊಂದಿಗೆ ಕನ್ನಡದಲ್ಲಿ ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಈ ಸಮುದಾಯದಲ್ಲಿ ಹಲವಾರು ಹೊರಬಾಂಧವ್ಯ ವಿವಾಹದ ಬೆಡಗುಗಳಿವೆ. ಅವುಗಳಲ್ಲಿ ಕೆಲವು ಪುಂಡನಾರ, ಹೊನ್ನ ಕಾರಿಯಣ್ಣವರ  ಹಾಗೂ ಹೊನ್ನ ಓರಿಣ್ಣವರ ಇತ್ಯಾದಿ. ಇವರೆಲ್ಲ ಒಂದೇ ದೈವವನ್ನು ಮನೆದೇವರನ್ನಾಗಿ ಪೂಜಿಸುತ್ತಾರೆ. ರಕ್ತಸಂಬಂಧಿಗಳ ಮದುವೆಗಳು ಇವರಲ್ಲಿ ಆಚರಣೆಯಲ್ಲಿವೆ. ಇವರಲ್ಲಿ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಿದೆ. ತಾಳಿ, ಕುಂಕುಮ ಹಾಗೂ ಕಾಲುಂಗುರ ಮದುವೆಯಾದ ಹೆಂಗಸಿನ ಗುರುತುಗಳು. ವರದಕ್ಷಿಣೆಯನ್ನು ಹಣ ಅಥವಾ ಇನ್ನಾವುದೇ ರೂಪದಲ್ಲಿ ಕೊಡುವ ಪದ್ಧತಿಯು ಕಂಡುಬಂದಿದೆ. ವಿವಾಹ ವಿಚ್ಛೇದನವನ್ನು ಸಮಾಜ ಹಾಗೂ ಕಾನೂನಿನ ಒಪ್ಪಿಗೆಯ ಮೇರೆಗೆ ಪಡೆಯಬಹುದು. ವಿಧವೆ, ವಿಧುರರು ಹಾಗೂ ವಿಚ್ಛೇದಿತರು ವಿವಾಹವಾಗಬಹುದು. ತಂದೆಯ ಆಸ್ತಿಯನ್ನು ಮನೆಯ ಗಂಡು ಮಕ್ಕಳು ಸಮನಾಗಿ ಹಂಚಿಕೊಳ್ಳುತ್ತಾರೆ. ತಂದೆಯ ನಂತರ ಹಿರಿಯ ಮಗ ಮನೆಯ ವಾರಸುದಾರನಾಗುತ್ತಾನೆ. ಹೆಂಗಸರು, ವ್ಯವಸಾಯ ಹಾಗೂ ಮನೆಯ ಕೆಲಸಗಳನ್ನು ಮಾಡುವುದರ ಜೊತೆಗೆ, ಸಾಮಾಜಿಕ-ಧಾರ್ಮಿಕ ಕಾರ್ಯಕ್ರಮಗಳಲ್ಲೂ  ಭಾಗವಹಿಸಿ, ಕುಟುಂಬದ ಆದಾಯಕ್ಕೆ ಸಹಕಾರಿಯಾಗಿದ್ದಾರೆ. ಹೆರಿಗೆಗೆ ಮುನ್ನ ‘ಕುಪ್ಪಸ’ ಎನ್ನುವ ಕಾರ್ಯವನ್ನು ಬಸುರಿಯ ಐದನೇ ಅಥವಾ ಏಳನೇ ತಿಂಗಳಲ್ಲಿ ಮಾಡುತ್ತಾರೆ.  ನಾಮಕಾರಣ ಶಾಸ್ತ್ರವನ್ನು ಮಗು ಜನಿಸಿದ ನಂತರ ಹನ್ನೊಂದನೇ ಅಥವಾ ಹದಿಮೂರನೇ ದಿನದಂದು ಮಾಡುತ್ತಾರೆ. ಜವಳ ಕಾರ್ಯವನ್ನು ಗಂಡು ಮಗನಿಗೆ ಮಾತ್ರ ಎರಡು ವರ್ಷಗಳ ಒಳಗೆ ಮಾಡಿಸುತ್ತಾರೆ. ಮಕ್ಕಳಿಗೆ ಎಂಟರಿಂದ ಹದಿನಾರು ವರ್ಷಗಳ ನಡುವೆ ಲಿಂಗಧಾರಣೆ ದೀಕ್ಷಾ ಕಾರ್ಯ ಮಾಡುತ್ತಾರೆ. ಋತುಮತಿಯಾದಾಗ ‘ಮೈನೆರೆಯುವುದು’ ಎನ್ನುವ ಕಾರ್ಯವನ್ನು ಮಾಡುತ್ತಾರೆ. ಮೊದಲ ಸಲ ಋತುಮತಿಯಾದಾಗ ಹುಡುಗಿಯನ್ನು ಮೂರು ದಿನಗಳ ಕಾಲ ಬೇರೆ ಇಟ್ಟಿರುತ್ತಾರೆ.

ಸಾಂಪ್ರದಾಯಿಕವಾಗಿ ಅಗಸ ಲಿಂಗಾಯತರು ಬಟ್ಟೆ ಒಗೆಯುವವರಾಗಿದ್ದಾರೆ. ಇವರು ಇತ್ತೀಚೆಗೆ ಉಳುಮೆ ಹಾಗೂ ವ್ಯಾಪಾರಗಳನ್ನು ಮಾಡುತ್ತಿದ್ದಾರೆ. ಆದರೂ ಕೆಲವರು ಸಾಂಪ್ರದಾಯಿಕ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಸಾಂಪ್ರದಾಯಿಕ ಜಾತಿ ಸಂಘಟನೆ ಇವರಲ್ಲಿದ್ದು, ಅದು ಈ ಸಮುದಾಯದವರ ಜಗಳಗಳನ್ನು ಬಗೆಹರಿಸುತ್ತದೆ. ಮಾಚಿದೇವ, ಅಮ್ಮಣಿಗೆ, ಮಲ್ಲಯ್ಯ, ಬಸವಣ್ಣ, ಎಡೆಯೂರು ಸಿದ್ಧ ಲಿಂಗೇಶ್ವರ, ಇತ್ಯಾದಿ ದೇವರುಗಳನ್ನು ಪೂಜಿಸುತ್ತಾರೆ. ಜಂಗಮರು ಇವರ ಧಾರ್ಮಿಕವಿಧಿಗಳನ್ನು ನಡೆಸಿಕೊಡುತ್ತಾರೆ. ಗ್ರಾಮದೇವತೆಗಳ ಹಬ್ಬಗಳಲ್ಲಿ ಧಾರ್ಮಿಕ ಕಾರ್ಯಗಳಿಗಾಗಿ ಬಟ್ಟೆಗಳನ್ನು ಒಗೆಯುವ ಹಾಗು ‘ಹಡದಿ’  ಹಾಕುವ ನಿರ್ದಿಷ್ಟ ಕೆಲಸಗಳು ಇವರಿಗೆ ಇರುತ್ತವೆ. ಇವರಲ್ಲಿರುವರು ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿರುವವರೂ ಇದ್ದಾರೆ. ವಿದ್ಯಾಭ್ಯಾಸದ ಬಗ್ಗೆ ಕಡಿಮೆ ಒಲವಿದೆ. ಇವರಲ್ಲಿ ಹಲವರು ವ್ಯವಸಾಯ ಹಾಗೂ ಇಸ್ತ್ರಿ ಅಂಗಡಿಗಳನ್ನು ನಡೆಸುತ್ತಾ ಸ್ವಯಂ-ಉದ್ಯೋಗಸ್ಥರಾಗಿ ಸಾಮಾನ್ಯ ವ್ಯಾಪಾರವನ್ನು ಮಾಡುತ್ತಿದ್ದರೆ. ಆಧುನಿಕ ಸಂಸ್ಥೆಗಳ ಉಪಯೋಗಗಳನ್ನು ಇವರು ಪಡೆದುಕೊಳಬೇಕಾಗಿದೆ.

 

ಲಿಂಗಾಯತ : ಕಮ್ಮಾರ

ಲಿಂಗಾಯತ ಕಮ್ಮಾರರು, ವ್ಯವಸಾಯ ಸಮುದಾಯಗಳಿಗೆ ಬೇಕಾದ ಅವಸ್ಯಕ ಸಾಮಾಗ್ರಿಗಳನ್ನು ಒದಗಿಸುತ್ತಿದ್ದ ಒಂದು ಸಮುದಾಯ (ಥರ್ಸ್ಟನ್, ೧೯೦೯). ಇವರು ಮುಖ್ಯವಾಗಿ ಧಾರವಾಡ, ಬೆಳಗಾವಿ, ಬಳ್ಳಾರಿ, ಬೀದರ, ಗದಗ, ಕೊಪ್ಪಳ, ಹಾವೇರಿ, ದಾವಣಗೆರೆ, ಗುಲ್ಬರ್ಗಾ ಹಾಗೂ ಬಿಜಾಪುರ ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರು ಕನ್ನಡ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಹಲವಾರು ಪಿತೃಮೂಲದ ಹೊರಬಾಂಧವ್ಯ ಬಳ್ಳಿಗಳಿವೆ. ಇವರು ತಮ್ಮದೇ ಸಮುದಾಯದಲ್ಲಿ ತಂದೆಯ ಸಹೋದರಿಯ ಮಗಳು, ತಾಯಿಯ ಸಹೋದರನ ಮಗಳು ಅಥವಾ ಹಿರಿಯಕ್ಕನ ಮಗಳ ಜೊತೆಯ ಮದುವೆಗೆ ಹೆಚ್ಚಿನ ಆದ್ಯತೆ ಕೊಟ್ಟು ಮದುವೆಯಾಗುತ್ತಾರೆ. ವಿವಾಹ ವಿಚ್ಛೇದನಕ್ಕೆ ಅವಕಾಶವಿದೆ. ವಿಧವೆ ವಿಧುರರು ಮರುವಿವಾಹವಾಗಬಹುದು. ಮಗುವಿನ ಜನನದ ನಂತರ ವೀರಶೈವ ಧರ್ಮದ ಲಿಂಗ ದೀಕ್ಷೆ ಕಾರ್ಯವನ್ನು ಮಾಡುತ್ತಾರೆ.

ಕಮ್ಮಾರರು ಸಾಂಪ್ರದಾಯಿಕವಾದ ಕಬ್ಬಿಣದ ಕೆಲಸಗಳನ್ನು ಮಾಡುತ್ತಾ ಬಂದಿರುವವರು. ಈಗಲೂ ಬಹಳಷ್ಟು ಜನ, ಹಳ್ಳಿಗಳಲ್ಲಿ ಈ ವೃತ್ತಿಯನ್ನೇ ಮುಂದುವರೆಸಿಕೊಂಡು ಬರುತ್ತಿದ್ದಾರೆ. ವ್ಯಾಪಾರ, ಸರ್ಕಾರಿ  ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೌಕರಿಗೆ ಇವರು ಇತ್ತೀಚೆಗೆ ಬರುತ್ತಿದ್ದಾರೆ. ಇವರಲ್ಲಿ ಕೆಲವರಿಗೆ ಕೃಷಿ ಭೂಮಿಯಿದ್ದು ವ್ಯವಸಾಯ ಮಾಡುತ್ತಿದ್ದಾರೆ. ಲಿಂಗಾಯತ ಕಂಬಾರರು ವೀರಶೈವ ಮಹಾಸಭಾಕ್ಕೆ ತಮ್ಮನ್ನು ನೋಂದಾಯಿಸಿಕೊಂಡಿದ್ದಾರೆ. ಜಂಗಮರು ಇವರ ಧಾರ್ಮಿಕ  ವಿಧಿ ವಿಧಾನ ನಡೆಸುವ ಪುರೋಹಿತರು. ಇವರು ಆಧುನಿಕ ಸಂಸ್ಥೆಗಳ ಪ್ರಯೋಜನ ಪಡೆದುಕೊಳ್ಳಲು ಪ್ರಯತ್ನವನ್ನು ಮಾಡುತ್ತಿದ್ದಾರೆ. ಇವರು ಇತರೆ ಲಿಂಗಾಯತ ಉಪಗುಂಪುಗಳಿಗೆ ಹೋಲಿಸಿದ್ದರೆ ಶೈಕ್ಷಣಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದಾರೆ.

 

ಲಿಂಗಾಯತ : ಕುಂಬಾರ

ಲಿಂಗಾಯತ ಕುಂಬಾರ ಮಣ್ಣಿನ ಪಾತ್ರೆ ತಯಾರಿಸುವ ಕೆಲಸದಲ್ಲಿ ತೊಡಗಿದ ಒಂದು ಪಂಗಡ. ಇವರು ಧಾರವಾಡ, ಹಾವೇರಿ, ಗದಗ, ಚಿತ್ರದುರ್ಗ, ಶಿವಮೊಗ್ಗ ಹಾಗೂ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಗುಂಡಯ್ಯ ಈ ಸಮುದಾಯದ ಮೂಲ ಪುರುಷ ಎಂಬ ನಂಬಿಕೆ ಇದೆ. ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಯಾವುದೇ ಸಾಮಾಜಿಕ ಉಪಗುಂಪುಗಳು ಇಲ್ಲದಿದ್ದರೂ ಭಿನ್ನತೆಗಳು ವೃತ್ತಿಯ ಹಂತಗಳಲ್ಲಿ ಇವೆ. ಅವೆಂದರೆ ಸಕ್ಕರೆ ಕಂಬಾರ, ಕತ್ತೆ ಕಂಬಾರ, ಮಣ್ಣು ಕಂಬಾರ. ಇವರು ಕೆಲವೊಮ್ಮೆ ಗ್ರಾಮದ ಹೆಸರುಗಳನ್ನೇ ಮನೆತನದ ಹೆಸರುಗಳನ್ನಾಗಿ ಬಳಸುತ್ತಾರೆ. ಇವರಲ್ಲಿ ಒಳಬಾಂಧವ್ಯ ವಿವಾಹದ ಪದ್ಧತಿಯಿದೆ. ಮದುವೆಯು ತಂದೆಯ ಸಹೋದರಿಯ ಮಗಳು, ತಾಯಿಯ ಸಹೋದರನ ಮಗಳು, ತಾಯಿಯ ಸಹೋದರನ ಮಗಳ ಹಾಗೂ ಹಿರಿಯಕ್ಕನ ಮಗಳ ಜೊತೆ ಸಾಧ್ಯವಿದೆ. ವಧುದಕ್ಷಿಣೆಯು ಈಗ ವರದಕ್ಷಿಣೆಯಾಗಿ ಬದಲಾವಣೆಗೊಂಡಿದೆ. ಇವರಲ್ಲಿ ವಿಧುರ, ವಿಧವೆಯರ ವಿವಾಹಕ್ಕೆ ಅವಕಾಶವಿದೆ. ಗಂಡು ಮಗುವನ್ನು ವಂಶೋದ್ಧಾರಕವೆಂದು ಭಾವಿಸುತ್ತಾರೆ ಹಿರಿಯ ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಇತ್ತೀಚೆಗೆ ಹೆಣ್ಣುಮಕ್ಕಳು ಸಹ ಆಸ್ತಿಯಲ್ಲಿ ಪಾಲುದಾರರಾಗಿದ್ದಾರೆ. ಹೆಂಗಸರು ಮನೆಯ ಆರ್ಥಿಕ ಚಟುವಟಿಕೆಗಳ ಜೊತೆಗೆ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲೂ ಭಾಗವಹಿಸುತ್ತಾರೆ. ಹೆರಿಗೆಗೆ ಮುನ್ನ ಸೀಮಂತ ಕಾರ್ಯವನ್ನು ಐದನೆಯ ಅಥವಾ ಏಳನೆಯ ತಿಂಗಳಲ್ಲಿ ಮಾಡುತ್ತಾರೆ. ನಾಮಕರಣ ಹಾಗೂ ಲಿಂಗಧಾರಣ ಕಾರ್ಯಗಳನ್ನು ಮಗುವಿನ ಜನನದ ನಂತರ ಹದಿಮೂರನೇ ದಿನದಂದು ಮಾಡುತ್ತಾರೆ. ಹೆಣ್ಣುಮಕ್ಕಳು ಪುಷ್ಟವತಿಯರಾದಾಗ ‘ಮೈನೆರೆಯುವ’ ಕಾರ್ಯವನ್ನು ಮಾಡುತ್ತಾರೆ. ಶವವನ್ನು ಹೂಳಿ ಸೂತಕವು ಐದು ಅಥವಾ ಹದಿಮೂರು ದಿನಗಳವರೆಗೆ ಇರುತ್ತದೆ. ಪ್ರತಿವರ್ಷವು ಹಿರಿಯರ ಪೂಜೆಗಳನ್ನು ಮಾಡುತ್ತಾರೆ. ಜಂಗಮರು ಧಾರ್ಮಿಕ ಕ್ರಿಯಾ ವಿಧಿ ಪೂರೈಸುತ್ತಾರೆ.

ಸಾಂಪ್ರದಾಯಕವಾಗಿ ಇವರು ಮಡಕೆ ಮಾಡುವವರು. ಇವರ ಈಗಿನ ವೃತ್ತಿಗಳು ದಿನಗೂಲಿ ನೌಕರಿ, ವ್ಯಾಪಾರ, ಗೃಹ ಕೈಗಾರಿಕೆ, ಸರ್ಕಾರಿ ಸೇವೆ ಹಾಗೂ ಸ್ವಯಂ-ಉದ್ಯೋಗಗಳು ಇತ್ಯಾದಿ. ಮಂಜುನಾಥ, ಎಲ್ಲಮ್ಮ ಹಾಗೂ ಬಸವಣ್ಣ ದೇವರುಗಳನ್ನು ಪೂಜಿಸುತ್ತಾರೆ. ನಾಗರಪಂಚಮಿ, ಗಣೇಶ ಚೌತಿ, ದಸರಾ ಮತ್ತು ದೀಪಾವಳಿ ಹಬ್ಬಗಳನ್ನು ಮುಖ್ಯವಾಗಿ ಆಚರಿಸುತ್ತಾರೆ. ವಿದ್ಯಾಭ್ಯಾಸದ ವಿಷಯದಲ್ಲಿ ಹುಡುಗರನ್ನು ಪ್ರೋತ್ಸಾಹಿಸಿದರೂ ಹುಡುಗಿಯರಿಗೆ ಅಷ್ಟು ಪ್ರೋತ್ಸಾಹವಿಲ್ಲ. ಆಧುನಿಕ ಸಾಮಾಜಿಕ ಸಂಸ್ಥೆಗಳ ಸೌಲಭ್ಯಗಳಾದ ಬ್ಯಾಂಕಿಂಗ್, ಸಂಪರ್ಕ ಸಾಧನೆಗಳು ಮತ್ತು ಮಾಧ್ಯಮಗಳು, ಇತರೆ ಆರ್ಥಿಕ, ಸಾಮಾಜಿಕ ಅಭಿವೃದ್ಧಿ ಯೋಜನೆಗಳ ಸೌಲಭ್ಯಗಳನ್ನು ಇವರು ಪಡೆದುಕೊಡಲು ಸಾಧ್ಯವಾಗಿಲ್ಲ.

 

ಲಿಂಗಾಯತ : ಕುಡ ಒಕ್ಕಲಿಗ

ಲಿಂಗಾಯತ ಕುಡಒಕ್ಕಲಿಗರು, ಧಾರವಾಡ, ಹಾವೇರಿ, ಗದರ, ಕೊಪ್ಪಳ, ಬಿಜಾಪುರ, ಬಳ್ಳಾರಿ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಕಾಣಬಹುದು. ಇವರು ಶೃಮಗ ಋಷಿಯ ಮೂಲದವರೆಂದು ಹೇಳಿಕೊಳ್ಳುತ್ತಾರೆ. ಇವರು ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರು ಶಿವಲಿಂಗವನ್ನು ಬೆಳ್ಳಿಯ ಕರಡಿಗೆಯಲ್ಲಿಟ್ಟು ದೇಹದ ಮೇಲೆ ಧರಿಸಿ ಹಣೆಯ ಮೇಲೆ ವಿಭೂತಿಯನ್ನು ಧರಿಸುತ್ತಾರೆ. ಇವರಲ್ಲಿ ಐದು ಉಪಗುಂಪುಗಳಿವೆ. ಅವು ಹಿಂದೆ ಒಳಬಾಂಧವ್ಯ ಬಳ್ಳಿಗಳಾಗಿದ್ದವು. ಅವುಗಳೆಂದರೆ ದಂಡವತಿ, ಮೀನಕಡಗ, ತಡ್ಡೊಡಿ, ಹಗ್ಗೆಣ್ಣವರ ಹಾಗೂ ನವಲಿ. ಇವರಿಗೆ ಪಿತೃಮೂಲದ ಬಳ್ಳಿಗಳಿದ್ದು ಅವುಗಳ ನಡುವೆ ಮದುವೆಯ ಸಂಬಂಧಗಳು ನಡೆಯುತ್ತವೆ. ಒಬ್ಬನ ಮದುವೆಯು ತಂದೆಯ ಸಹೋದರಿಯ ಮಗಳು, ತಾಯಿಯ ಸಹೋದರನ ಮಗಳ ಹಾಗೂ ಹಿರಿಯಕ್ಕನ ಮಗಳ ಜೊತೆ ಸಾಧ್ಯವಿದೆ. ವಿವಾಹ ವಿಚ್ಛೇದನಕ್ಕೆ ಅವಕಾಶವಿಲ್ಲ. ವಿಧುರ, ವಿಧವೆ ಮರು ಮದುವೆಯಾಗಬಹುದು. ಹೆರಿಗೆಗೆ ಮುನ್ನಿನ ಕಾರ್ಯವನ್ನು ಮೊದಲ ಬಾರಿ ಗರ್ಭಿಣಿಯಾದಾಗ ಮಾತ್ರ ಮಾಡುತ್ತಾರೆ. ಲಿಂಗಧಾರಣೆ ಹಾಗೂ ನಾಮಕರಣವನ್ನು ಮಗು ಜನಿಸಿದ ಹದಿಮೂರನೇ ದಿನ ಮಾಡುತ್ತಾರೆ. ಇವರಲ್ಲಿ ಬಹುಪಾಲು ಜನರಿಗೆ ಭೂಮಿಯಿದೆ. ಸಾಂಪ್ರದಾಯಿಕವಾಗಿ ಇವರು ವ್ಯವಸಾಯಗಾರರು. ಸ್ವಯಂ-ಉದ್ಯೋಗವಾಗಿ ಪಶುಸಂಗೋಪನೆ ಹಾಗೂ ಕೆಲವರು ಕೋಳಿ ಸಾಕಾಣಿಕೆಯನ್ನು ಮಾಡಿಕೊಂಡಿದ್ದಾರೆ.  ಇವರಿಗೆ ಜಾತಿಯ ಸಂಘಟನೆಯಿದೆ. ಅದು ಇವರ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಜಂಗಮರು ಇವರ ಪುರೋಹಿತರು. ಯುಗಾದಿ, ದೀಪಾವಳಿ ಹಾಗೂ ವಿಶೇಷವಾಗಿ ಬಸವಜಯಂತಿಯನ್ನು ಆಚರಿಸುತ್ತಾರೆ. ಕೆಲವರು ಆಧುನಿಕ ವೃತ್ತಿಯಲ್ಲಿ ತೊಡಗಿದ್ದಾರೆ. ಪ್ರಾಂತೀಯ ಮಟ್ಟದಲ್ಲಿ ರಾಜಕೀಯ ನಾಯಕರೂ ಇವರಲ್ಲಿದ್ದಾರೆ. ಆಧುನಿಕ ವಿದ್ಯಾಭ್ಯಾಸ, ವೈದ್ಯಕೀಯ ಪದ್ಧತಿ ಹಾಗೂ ಸಾಮಾಜಿಕ ಸಂಸ್ಥೆಗಳ ಯೋಜನೆಗಳು ಇವರಿಗೆ ದೊರಕುತ್ತಿದ್ದು ಅವುಗಳ ಪ್ರಯೋಜನ ಪಡೆಯುತ್ತಿದ್ದಾರೆ.

 

ಲಿಂಗಾಯತ : ಗಾಣಿಗ

ಲಿಂಗಾಯತ ಗಾಣಿಗರು ಲಿಂಗಾಯತರ ಒಂದು ಉಪಗುಂಪು. ಇವರು ಸಾಂಪ್ರದಾಯಿಕವಾಗಿ ಎಣ್ಣೆ ತೆಗೆಯುವ ಕಾಯಕದವರು. ಇವರು ಬೆಳಗಾವಿ, ಬೀದರ, ಬಿಜಾಪುರ, ಬಳ್ಳಾರಿ, ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಚಿತ್ರದುರ್ಗ, ಗುಲ್ಬರ್ಗಾ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಗಾಣಿಗ ಎಂಬ ಪದ ‘ಗಾಣ’ ಎನ್ನುವುದರಿಂದ ಬಂದಿದೆ. ಹಾಗೆಂದರೆ ಎಣ್ಣೆ ತಯಾರಿಸಲು ಬಳಸುವ ಸಾಧನ. ಇವರಲ್ಲಿ ಕೆಲವೊಂದು ಉಪಗುಂಪುಗಳಿವೆ. ಅವುಗಳೆಂದರೆ ಕರೆಗಾಣಿಗ, ಸಜ್ಜನಗಾಣಿಗ ಮತ್ತು ಪಂಚಮಸಾಲಿ ಗಾಣಿಗ. ಸಜ್ಜನಗಾಣಿಗರು ಪಂಚಮಸಾಲಿ ಗಾಣಿಗರೊಂದಿಗೆ ವಿವಾಹ ಸಂಬಂಧ ಬೆಳೆಸುವುದಿಲ್ಲ. ಕನ್ನಡ ಭಾಷೆಯನ್ನು ತಮ್ಮಲ್ಲೇ ಮಾತನಾಡಲು ಬಳಸಿದರೆ, ಇತರರೊಂದಿಗೆ ಕನ್ನಡ ಹಾಗೂ ಮರಾಠಿಯಲ್ಲಿ ವ್ಯವಹರಿಸಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಕೆಲವು ಹೊರಬಾಂಧವ್ಯ ವಿವಾಹದ ಬೆಡಗುಗಳಿವೆ. ಅವುಗಳೆಂದರೆ ಹೊನ್ನ ಅಂಬಣ್ಣವರ, ಹೊನ್ನ ಮೆಟ್ಟಡ, ಹೊನ್ನ ತೇಜನೂರು ಹಾಗೂ ಮೇಲ ಸಕ್ಕರಿಯವರು, ಇತ್ಯಾದಿ. ಗಾಣಿಗ ಲಿಂಗಾಯತರು ಸಮುದಾಯ ಮಟ್ಟದಲ್ಲಿ ಒಳಬಾಂಧವ್ಯ ವಿವಾಹವನ್ನು ಅನುಸರಿಸುತ್ತಾರೆ. ಇವರು ರಕ್ತ ಸಂಬಂಧಿಗಳನ್ನು ಮತ್ತು ಹಿರಿಯಕ್ಕನ ಮಗಳನ್ನು ಮದುವೆಯಾಗಲು ಬಯಸುತ್ತಾರೆ. ವಿವಾಹ ವಿಚ್ಛೇದನೆ ಅವಕಾಶ ಇದೆ. ವಿಧುರ, ವಿಚ್ಛೇದಿತರ ಮದುವೆಗೆ ಅವಕಾಶವಿದೆ. ಸೋದರಿ ಸಂಬಂಧ ಕೂಡ ರೂಢಿಯಲ್ಲಿದೆ. ವಧುದಕ್ಷಿಣೆಯು ಈಗ ವರದಕ್ಷಿಣೆಯಾಗಿ ಬದಲಾವಣೆ ಗೊಂಡಿದೆ. ವಿಭಕ್ತ ಹಾಗೂ ಅವಿಭಕ್ತ ಕುಟುಂಬಗಳು ಇವರಲ್ಲಿ ಸಿಗುತ್ತವೆ. ಗಂಡು ಮಗುವನ್ನು ವಂಶೋದ್ಧಾರಕನೆಂದು ಭಾವಿಸುತ್ತಾರೆ. ಹೆಂಗಸರು ವ್ಯವಸಾಯದ ಕೆಲಸಗಳಲ್ಲಿ ಪಶುಸಂಗೋಪನೆಯಲ್ಲಿ, ಇತರೆ ಮನೆಗೆಲಸಗಳಲ್ಲಿ ಪಾಲ್ಗೊಂಡು ಮನೆಯ ಆದಾಯಕ್ಕೂ ಸಹಾಯಕರಾಗಿದ್ದರು. ಹೆರಿಗೆಗೆ ಮುನ್ನಿನ ಕ್ರಿಯಾನಿಧಿ ‘ಕುಬುಸ’ ಕಾರ್ಯವನ್ನು ಮಾಡುತ್ತಾರೆ. ನಾಮಕರಣವನ್ನು ಮಗುವಿನ ಜನನದ ನಂತರದ ಹನ್ನೆರಡು ಅಥವಾ ಹದಿಮೂರನೇ ದಿನದಂದು ಮಾಡುತ್ತಾರೆ. ‘ಜವಳ’ ಕಾರ್ಯವನ್ನು ಗಂಡು ಮಕ್ಕಳಿಗೆ ಎರಡು ವರ್ಷಗಳ ನಂತರ ಮಾಡಿಸುತ್ತಾರೆ. ಗಂಡು ಮಕ್ಕಳಿಗೆ ಎಂಟರಿಂದ ಹದಿನಾರು ವರ್ಷಗಳ ಒಳಗೆ ‘ಲಿಂಗದೀಕ್ಷಾ’ ಕಾರ್ಯವನ್ನು ಮಾಡುತ್ತಾರೆ. ಸತ್ತವರನ್ನು ಕುಳಿತಿರುವ ಭಂಗಿಯಲ್ಲಿ ಮುಖ ಉತ್ತರ ಅಥವಾ ಪೂರ್ವ ದಿಕ್ಕಿನ ಕಡೆಗೆ ಇರುವಂತೆ ಹೂಳುತ್ತಾರೆ.

ಇವರ ಸಾಂಪ್ರದಾಯಿಕ ವೃತ್ತಿಯು ಗಾಣಿಗ ವೃತ್ತಿಯಾದರೂ ಇವರು ವ್ಯವಸಾಯ, ಪಶುಸಂಗೋಪನೆ, ವ್ಯಾಪಾರ-ವ್ಯವಹಾರ, ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿ, ಸ್ವಯಂ ಉದ್ಯೋಗ ಹಾಗೂ ದಿನಗೂಲಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಸಾಂಪ್ರದಾಯಿಕ ಜಾತಿ ಸಂಘಟನೆಯೂ ಇವರಲ್ಲಿದೆ. ಕಡಪಟ್ಟಿ ಬಸವಣ್ಣ, ಉಳವಿ ಚನ್ನಬಸವಣ್ಣ ಮುಂತಾದ ದೇವರುಗಳನ್ನು ಪೂಜಿಸುತ್ತಾರೆ. ಜಂಗಮರು ಧಾರ್ಮಿಕ ಕ್ರಿಯಾವಿಧಿ ನಡೆಸುವ ಇವರ ಪೂಜಿಸುತ್ತಾರೆ. ಜಂಗಮರು ಧಾರ್ಮಿಕ ಕ್ರಿಯಾವಿಧಿ ನಡೆಸುವ ಇವರ ಪುರೋಹಿತರು. ಆಧುನಿಕ ವಿದ್ಯಾಭ್ಯಾಸವನ್ನು ಹುಡುಗ, ಹುಡುಗಿಯರಿಬ್ಬರಿಗೂ ಪ್ರೋತ್ಸಾಹಿಸುತ್ತಾರೆ. ಆಧುನಿಕ ಹಾಗೂ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಗಳೆರಡರ ಬಗ್ಗೆಯೂ ಒಲವಿಟ್ಟುಕೊಂಡಿದ್ದಾರೆ. ಆಧುನಿಕ ಸಾಮಾಜಿಕ ವ್ಯವಸ್ಥೆಗಳನ್ನು ಉಪಯೋಗಿಸಿಕೊಂಡು ಅಭಿವೃದ್ಧಿಯನ್ನು ಸಾಧಿಸುತ್ತಿದ್ದಾರೆ.

 

ಲಿಂಗಾಯತ : ಜಂಗಮ

ಲಿಂಗಾಯತರಲ್ಲಿನ ಪುರೋಹಿತ ಸಮುದಾಯಕ್ಕೆ ಜಂಗಮ, ಅಯ್ಯನವರು ಎಂದು ಕರೆಯುತ್ತಾರೆ. ಇವರು ಬಳ್ಳಾರಿ, ಬೆಳಗಾವಿ, ಗದಗ, ಹಾವೇರಿ, ಕೊಪ್ಪಳ, ಬೀದರ, ಬಿಜಾಪುರ, ಬಾಗಲಕೋಟೆ, ಚಿತ್ರದುರ್ಗ, ಧಾರವಾಡ, ಗುಲ್ಬರ್ಗಾ, ದಾವಣಗೆರೆ, ರಾಯಚೂರು, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸವಾಗಿದ್ದಾರೆ. ಇವರು ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಗಂಡಸರು ಮತ್ತು ಹೆಂಗಸರು ಹಣೆಯ ಮೇಲೆ ವಿಭೂತಿಯನ್ನು ಧರಿಸುತ್ತಾರೆ. ಜಂಗಮರು ‘ಹಿರೇಮಠ’, ‘ಸಾಲಿಮಠ’, ‘ಗದ್ದಗಿಮಠ’, ಚಿಕ್ಕಮಠ’ ಇತ್ಯಾದಿ ಮನೆತನದ ಹೆಸರುಗಳನ್ನು ಬಳಸುತ್ತಾರೆ. ಜಂಗಮರು ಅಡ್ಡ ಹೆಸರಿಗೆ ‘ಮಠ’ ಎಂಬ ಶಬ್ದ ಜೋಡಿಸಿಕೊಳ್ಳುತ್ತಾರೆ. ಇವರಲ್ಲಿ ಶ್ರೇಣಿಕೃತ ಒಳಪಂಗಡಗಳಿವೆ. ಹಿರೇಮಠ, ಮಠಪತಿ, ಆರಾಧ್ಯರ ಜೊತೆ ವೈವಾಹಿಕ ಸಂಬಂಧಗಳು ನಡೆಯುವುದಿಲ್ಲ. ಜಂಗಮ ಕುಟುಂಬಗಳು ಯಾವುದೇ ಒಂದು ಪಂಚ ಪೀಠಕ್ಕೆ ಅಧೀನವಾಗಿ ಒಳಬಾಂಧವ್ಯ ನಿಯಮವನ್ನು ಪಾಲಿಸುತ್ತದೆ. ಇವರಲ್ಲಿ ಪಡಿವಿಡಿ, ಮಳೆ ಇತ್ಯಾದಿ ಬೆಡಗುಗಳಿವೆ. ಸೋದರ ಸಂಬಂಧಿ ಮದುವೆಯು ಹೆಚ್ಚಾಗಿರುತದ್ದೆ. ವರದಕ್ಷಿಣೆಯನ್ನು ಇವರು ಹಣ ಮತ್ತು ಇತರ ರೂಪಗಳಲ್ಲಿ ಕೊಡುತ್ತಾರೆ. ವಿವಾಹ ವಿಚ್ಛೇದನಕ್ಕೆ ಅವಕಾಶವಿಲ್ಲ. ವಿಧುರರ ಮರುಮದುವೆಗೆ ಅವಕಾಶವಿದೆ. ನಾಮಕರಣ ಶಾಸ್ತ್ರವನ್ನು ಮಗು ಜನಿಸಿದ ಹನ್ನೊಂದು ಅಥವಾ ಹದಿಮೂರನೇ ದಿನದಂದು ಮಾಡುತ್ತಾರೆ. ಗಂಡು ಮಗುವಿಗೆ ‘ಜವಳ’ ಕಾರ್ಯ ಮಾಡಿಸುತ್ತಾರೆ. ವೀರಶೈವ ಧರ್ಮದ ಅಯ್ಯಾಚಾರ ಕಾರ್ಯವನ್ನು ಗಂಡುಮಕ್ಕಳಿಗೆ ಮಾತ್ರ ಮಾಡಿಸುತ್ತಾರೆ. ಹೆಣ್ಣು ಮಗುವಿಗೆ ‘ಮೈನೆರೆಯುವುದು’ ಕಾರ್ಯವನ್ನು ಮಾಡುತ್ತಾರೆ. ಮದುವೆ ಹಾಗೂ ಶೋಭನ ಕಾರ್ಯಗಳನ್ನು ವರನ ಮನೆಯಲ್ಲಿ ಮಾಡುತ್ತಾರೆ. ಸತ್ತವರನ್ನು ಕೂತಿರುವ ಹಾಗೆ ಹೂಳುತ್ತಾರೆ. ಇವರು ಸಾವಿನ ಸೂತಕವನ್ನು ಐದು, ಏಳು, ಒಂಬತ್ತು ದಿನಗಳಲ್ಲಿ ಆಚರಿಸುತ್ತಾರೆ.

ಸಾಂಪ್ರದಾಯಿಕವಾಗಿ ಇವರು ಲಿಂಗಾಯತ ಹಾಗೂ ಇತರೆ ಶೈವ ಧರ್ಮದವರಿಗೆ ಪುರೋಹಿತರು. ವ್ಯವಸಾಯವನ್ನೂ ಮಾಡುತ್ತಾರೆ. ಇವರಲ್ಲಿ ಕೆಲವರು ವ್ಯವಸಾಯದ ಕೂಲಿಗಳಾಗಿ ದುಡಿಯುತ್ತಾರೆ. ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಯಲ್ಲಿದ್ದಾರೆ. ನಂದಿ, ಶಿವ, ವೀರಭದ್ರ, ಪಾರ್ವತಿ ಹಾಗೂ ಇತ್ಯಾದಿ ದೇವತೆಗಳನ್ನು ಇವರು ಪೂಜಿಸುತ್ತಾರೆ. ಯುಗಾದಿ, ಬಸವ ಜಯಂತಿ, ದಸರಾ, ದೀಪಾವಳಿ, ಶಿವರಾತ್ರಿ ಹಾಗೂ ಶೀಗೆ ಹುಣ್ಣಿಮೆ ಇವರು ಆಚರಿಸುವ ಹಬ್ಬಗಳಲ್ಲಿ ಕೆಲವು. ಸಾಂಪ್ರದಾಯಿಕವಾಗಿ ವ್ಯವಸಾಯ ಪ್ರಧಾನ ಸಮುದಾಯಗಳು ಇವರಿಗೆ ಒಂದಿಷ್ಟು ದವಸ ಧಾನ್ಯಗಳನ್ನು ಧಾರ್ಮಿಕ ಸೇವೆಗಾಗಿ ಹಿಂದೆ ಕೊಡುತ್ತಿದ್ದವು. ಆದರೆ ಇಂದು ಈ ಪದ್ಧತಿ ಬದಲಾವಣೆ ಹೊಂದಿದೆ. ಇವರು ಆಧುನಿಕ ಶಿಕ್ಷಣ, ಆಧುನಿಕ ವೈದ್ಯಕೀಯ ಪದ್ಧತಿ, ಕುಟುಂಬ ಕಲ್ಯಾಣ ಯೋಜನೆಗಳು, ಬ್ಯಾಕಿಂಗ್ ಹಾಗೂ ಆಧುನಿಕ ಸಾಮಾಜಿಕ ಸಂಸ್ಥೆಗಳ ಅಭಿವೃದ್ಧಿ ಯೋಜನೆಗಳನ್ನು ಉಪಯೋಗಿಸಿಕೊಂಡು ಅಭಿವೃದ್ಧಿ ಸಾಧಿಸುತ್ತಿದ್ದಾರೆ.

 

ಲಿಂಗಾಯತ : ನೊಣಬ

ಲಿಂಗಾಯತ ನೊಣಬರು ತಾವು ಪಲ್ಲವರ ವಂಶಸ್ಥರೆಂದು ಹೇಳಿಕೊಳ್ಳುತ್ತಾರೆ. ಇವರನ್ನು ‘ನೊಳಂಬ’ ಎಂದು ಸಹ ಕರೆಯುತ್ತಾರೆ. ಪಲ್ಲವರು ಹಿಂದೆ ಇಲ್ಲಿಯ ಸ್ಥಳಗಳನ್ನು ವಶಪಡಿಸಿಕೊಂಡು ನೊಳಂಬವಾಡಿ ಪ್ರಾಂತ್ಯವನ್ನು ಸ್ಥಾಪಿಸಿದ್ದರು. ಈ ರಾಜ್ಯವು ಸುಮಾರು ಮೂವತ್ತೆರಡು ಸಾವಿರ ಪ್ರಾಂತಗಳನ್ನು ಹೊಂದಿತು. ಇವರ ವಂಶಸ್ಥರನ್ನೇ ಈಗ ನೊಣಬರೆಂದು ಕರೆಯಲಾಗುತ್ತದೆ. ಇವರನ್ನು ಮಕ್ಷುಕ ವೀರಶೈವ ಅಥವಾ ಮೋಕ್ಷಮಠದವರು (ನಂಜುಂಡಯ್ಯ ಹಾಗೂ ಐಯ್ಯರ್, ೧೯೩೫)ಎಂದು ಕರೆಯಲಾಗುತ್ತಿದೆ. ಇವರಲ್ಲಿ ಎರಡು ಒಳಬಾಂಧವ್ಯ ಪಂಗಡಗಳಿವೆ ಎಂದು ಗುರುತಿಸಲಾಗಿದೆ. ಅವುಗಳೆಂದರೆ ಮೂರು ಅಡಿ ಹಾಗೂ ನಾಲ್ಕು ಅಡಿ ವಾಸದವರು.

ನೊಣಬ ಲಿಂಗಾಯತರು ಹೆಚ್ಚಾಗಿ ತುಮಕೂರು ಜಿಲ್ಲೆಯಲ್ಲಿ ಕಾಣಸಿಗುತ್ತಾರೆ. ಇವರು ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಈ ಮೇಲೆ ಹೇಳಿರುವ ಎರಡು ಉಪಗುಂಪುಗಳ ನಡುವೆ ಮದುವೆಯು ನಡೆಯುವುದಿಲ್ಲ.  ಸೋದರ ಸಂಬಂಧಿ ವಿವಾಹಕ್ಕೆ ಅವಕಾಶವಿದೆ. ವಿಧವೆ, ವಿಧುರರಿಗೆ ಮರುಮದುವೆಯಾಗಲು ಅವಕಾಶವಿದೆ. ಹಿರಿಯ ಮಗನು ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ನಾಮಕರಣ ಹಾಗೂ ಲಿಂಗಧಾರನ ಕಾರ್ಯಗಳನ್ನು ಮಗುವಿನ ಜನನದ ನಂತರದ ಹದಿನೈದು ದಿನಗಳ ಒಳಗೆ ಮಾಡುತ್ತಾರೆ.

ವ್ಯವಸಾಯ ಇವರ ಸಾಂ‌ಪ್ರದಾಯಿಕ ವೃತ್ತಿ. ಕೆಲವರು ವ್ಯವಸಾಯದ ಕೂಲಿಗಳಾಗಿಯೂ ದುಡಿಯುತ್ತಿದ್ದಾರೆ. ಹಿಂದೆ ಇವರಲ್ಲಿ ಸಾಂಪ್ರದಾಯಿಕ ಜಾತಿ ಸಂಘಟನೆಯೊಂದು ಅಸ್ತಿತ್ವದಲ್ಲಿತ್ತು. ಲಿಂಗಾಯತ ಜಂಗಮರು ಇವರ ಪೌರೋಹಿತ್ಯ ನಡೆಸುತ್ತಾರೆ. ಆಧುನಿಕ ಶಿಕ್ಷಣ, ಆಧುನಿಕ ವೈದ್ಯಕೀಯ, ಕುಟುಂಬ ಕಲ್ಯಾಣ ಯೋಜನೆ, ಸಂಪರ್ಕ ಸಾಧನಗಳು ಮತ್ತು ಸ್ವಯಂ-ಉದ್ಯೋಗಗಳನ್ನು ಕಲ್ಪಿಸುವ ಯೋಜನೆಗಳು, ಇತರೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಇವರು ಪಡೆದುಕೊಂಡು ಅಭಿವೃದ್ಧಿಯನ್ನು ಸಾಧಿಸುತ್ತಿದ್ದಾರೆ.

 

ಲಿಂಗಾಯತ : ಪಂಚಮಶಾಲಿ

ಲಿಂಗಾಯತ ಉಪಗುಂಪುಗಳಲ್ಲಿ ಲಿಂಗಾಯತ ಪಂಚಮಶಾಲಿ ಒಂದು ಮುಖ್ಯ ಸಮುದಾಯ. ಇವರನ್ನು ಮುಖ್ಯವಾಗಿ ಧಾರವಾಡ, ಹಾವೇರಿ, ಗದಗ, ಬಾಗಲಕೋಟೆ, ರಾಯಚೂರು, ಬಿಜಾಪುರ, ಗುಲಬರ್ಗಾ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಕಾಣಬಹುದು. ಇವರಲ್ಲಿ ಹಲವಾರು ಪಿತೃಮೂಲದ ಹೊರಬಾಂಧವ್ಯ ಬೆಡಗುಗಳಿವೆ – ಅವರೆ, ಬೆಂಡೆ, ಕಡಲೆ, ಉಳ್ಳಾಗಡ್ಡಿ, ಸಣ್ಣಕ್ಕಿ ಇತ್ಯಾದಿ. ಇವುಗಳನ್ನು ತರಕಾರಿ ಹಾಗೂ ಬೇಳೆಗಳನ್ನು ಆಧರಿಸಿ ಇಡಲಾಗಿದೆ. ಇದಕ್ಕೆ ಮುಖ್ಯ ಕಾರಣ ಇವರು ಸಾಂಪ್ರದಾಯಿಕವಾಗಿ ಕೃಷಿ ಸಮುದಾಯಕ್ಕಾಗಿ ಸೇರಿದ್ದಿರಬಹುದು. ಸೋದರ ಸಂಬಂಧಿ ವಿವಾಹಕ್ಕೆ ಅವಕಾಶವಿದೆ. ಮದುವೆಗಳು ಹಿರಿಯರಿಂದ ಮಾತುಕತೆಯ ಮೂಲಕ ನಿರ್ಧಾರವಾಗುತ್ತವೆ. ವಿವಾಹ ವಿಚ್ಛೇದಿತರು ಮತ್ತು ವಿದುರರು ವಿಧವೆಯರ ಮರುವಿವಾಹಕ್ಕೆ ಅವಕಾಶವಿದೆ.

ಹಿರಿಯ ಮಗನು ತಂದೆ ನಂತರ ಮನೆಯ ವಾರಸುದಾರನಾಗುತ್ತಾನೆ. ಇವರಲ್ಲಿ ಕೆಲವರು ತಮ್ಮದೆ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದಾರೆ. ಇವರಲ್ಲಿ ಸರ್ಕಾರಿ ಹಾಗೂ ಖಾಸಗಿ ಸೇವೆಗಳಲ್ಲಿರುವವರು, ಸ್ವಯಂ-ಉದ್ಯೋಗಸ್ಥರು, ದಿನಗೂಲಿಗಳು ಇದ್ದಾರೆ. ಸಾಂಪ್ರದಾಯಿಕ ಸಮುದಾಯ ಸಂಘಟನೆಯೊಂದು ಇವರ ಒಳ ಜಗಳಗಳನ್ನು ಬಗೆಹರಿಸುತ್ತದೆ. “ವೀರಶೈವ ಪಂಚಮಶಾಲಿ ಸಂಘ” ವೆನ್ನುವ ಸಮುದಾಯದ ಸಂಘಟನೆಯು ಇವರ ಒಳಿತಿಗಾಗಿ ಶ್ರಮಿಸುತ್ತದೆ. ಜಂಗಮರು ಇವರ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಡುವ ಪುರೋಹಿತರು. ಬಸವ ಜಯಂತಿ, ಸುಗ್ಗಿ ಹಬ್ಬ ಹಾಗೂ ದೀಪಾವಳಿ ಇತರೆ ಸಾಂಪ್ರದಾಯಿಕ ಹಬ್ಬಗಳಲ್ಲೂ ಇವರು ಭಾಗವಹಿಸುತ್ತಾರೆ. ಆಧುನಿಕ ವಿದ್ಯಾಭ್ಯಾಸದ ವಿಷಯದಲ್ಲಿ ಹೆಚ್ಚು ಪ್ರೋತ್ಸಾಹ ನೀಡಿದರೂ ಬಾಲಕಿಯರಿಗೆ ಪ್ರೋತ್ಸಾಹ ಇಲ್ಲ. ಆಧುನಿಕ ವೈದ್ಯಕೀಯ ಪದ್ಧತಿ ಹಾಗೂ ಕುಟುಂಬ ಕಲ್ಯಾಣ ಯೋಜನೆಗಳ ಬಗ್ಗೆ ಇವರಿಗೆ ಒಲವಿದೆ. ಆಧುನಿಕ ಸಾಮಾಜಿಕ ಸಂಸ್ಥೆಗಳು ಹಾಗೂ ಸಂಪರ್ಕ ಮಾಧ್ಯಮಗಳನ್ನು ಬಳಸಿಕೊಂಡು ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಸಮುದಾಯದ ಜನರು ಲಿಂಗಾಯತರ ಉಪಗುಂಪಿನಲ್ಲಿ ಪ್ರಬಲ ರಾಜಕೀಯ ಗುಂಪಾಗಲು ಪ್ರಯತ್ನಿಸುತ್ತಿದ್ದಾರೆ.

 

ಲಿಂಗಾಯತ : ಬಡಿಗ

ಲಿಂಗಾಯತ ಬಡಿಗರು ಒಂದು ವೃತ್ತಿ ಆಧಾರಿತ ಜನ ಸಮುದಾಯ. ಕನ್ನಡದಲ್ಲಿ ‘ಬಡಿಗ’ ಎಂದರೆ ಮರಗೆಲಸ ಮಾಡುವವನು ಎಂದರ್ಥ. ‘ಬಡಿಗೇರ’ ಎನ್ನುವ ಹೆಸರು ಹೆಸರು ಇವರ ಸಾಂಪ್ರದಾಯಿಕ ವೃತ್ತಿಯಾದ ಮರಗೆಲಸದಿಂದಲೇ ಬಂದಿದೆ. ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಧಾರವಾಡ, ಹಾವೇರಿ, ಗದಗ, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ಕಾಣಸಿಗುತ್ತಾರೆ. ಇವರ ಮಾತೃ ಭಾಷೆ ಕನ್ನಡ. ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿನ ಕೆಲವು ಹೊರಭಾಂಧವ್ಯ ಬೆಡಗುಗಳೆಂದರೆ ನಗರದಾರ, ನರಗರೋಜ, ಹೊನ್ನನೇದು ಕೊಟ್ಟರ ಇತ್ಯಾದಿ. ಮದುವೆಯ ಮಾತುಕತೆಗಳಲ್ಲಿ ಮನೆದೇವರುಗಳನ್ನು ನೋಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಲಿಂಗಾಯತ ಕಮ್ಮಾರ ಮತ್ತು ಇವರ ನಡುವೆ ಮದುವೆಯ ಸಂಬಂಧಗಳು ಸಾಮಾನ್ಯವಾಗಿವೆ. ಸೋದರ ಸಂಬಂಧಿ ವಿವಾಹಕ್ಕೆ ಅವಕಾಶವಿದೆ. ಮೊದಲು ಇವರಲ್ಲಿದ್ದ ವಧುದಕ್ಷಿಣೆ ಈಗ ವರದಕ್ಷಿಣೆಯಾಗಿ ಬದಲಾಗಿದೆ. ವಿವಾಹ ವಿಚ್ಛೇದನವನ್ನು ಸಮಾಜ ಹಾಗೂ ಕಾನೂನಿನ ಪ್ರಕಾರ ಗಂಡು ಅಥವಾ ಹೆಣ್ಣು ಯಾರೂ ಬೇಕಾದರೂ ಪಡೆಯಬಹುದಾಗಿದೆ. ವಿವಾಹ ವಿಚ್ಛೇದಿತರು ಹಾಗೂ ವಿಧವೆ ವಿಧುರರ ವಿವಾಹಕ್ಕೆ ಒಪ್ಪಿಗೆಯಿದೆ. ಹಿರಿಯ  ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಹೆಂಗಸರು ಮನೆಯ ಆರ್ಥಿಕ ವಿಚಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕುಟುಂಬದ ಆದಾಯಕ್ಕೆ ಸಹಾಯ ಮಾಡುತ್ತಾರೆ. ಹೆರಿಗೆಗೆ ಮುನ್ನ ಗರ್ಭಿಣಿ ಹೆಂಗಸಿನ ಐದನೇ ಅಥವಾ ಏಳನೇ ತಿಂಗಳಲ್ಲಿ ‘ಕುಬುಸದ ಕಾರ್ಯ’ ಎಂಬ ಕ್ರಿಯಾವಿಧಿ ಜರುಗಿಸುತ್ತಾರೆ. ನಾಮಕರಣವನ್ನು ಮಗು ಹುಟ್ಟಿದ ಹನ್ನೆರಡನೇ ಅಥವಾ ಹದಿಮೂರನೇ ದಿನ ಮಾಡುತ್ತಾರೆ. ಜವುಳ ಕಾರ್ಯವನ್ನು ಗಂಡು ಮಗುವಿಗೆ ಎರಡು ವರ್ಷಗಳ ಒಳಗೆ ಮಾಡುತ್ತಾರೆ. ಎಂಟರಿಂದ ಹದಿನಾರು ವರ್ಷಗಳ ನಡುವೆ ಗಂಡು ಮಕ್ಕಳಿಗೆ ಲಿಂಗ ದೀಕ್ಷಾ ಕಾರ್ಯವನ್ನು ಮಾಡುತ್ತಾರೆ.

ಬಡಿಗ ಲಿಂಗಾಯತರು ಉಳುಮೆ, ವ್ಯಾಪಾರ,  ಔದ್ಯೋಗಿಕ ಕೆಲಸಗಳು, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿ, ಸ್ವಯಂ-ಉದ್ಯೋಗ ಹಾಗೂ ದಿನಗೂಲಿ ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಜಾತಿ ಹಾಗೂ ದಿನಗೂಲಿ ಕೆಲಸಗಳನ್ನು ಮಾಡಿಕೊಂಡಿದ್ದಾರೆ. ಸಾಂಪ್ರದಾಯಿಕ ಜಾತಿ ಹಾಗೂ ಗ್ರಾಮ ಸಂಘಟನೆಗಳು ಇವರ ಒಳ ಜಗಳಗಳನ್ನು ಬಗೆಹರಿಸುತ್ತವೆ. ಆದರೆ ಅವುಗಳ ಪ್ರಾಮುಖ್ಯತೆ ಈಗ ಇಲ್ಲವಾಗುತ್ತಿದೆ. ಅಮ್ಮಣಿಗಿ ಮಲ್ಲಯ್ಯ, ರೇವಣಸಿದ್ಧೇಶ್ವರ, ಹನುಮಂತ, ವೀರಭದ್ರ, ದ್ಯಾವವ್ವ ಇತ್ಯಾದಿ ದೇವರುಗಳನ್ನು ತಮ್ಮ ಮನೆ ದೇವರುಗಳನ್ನಾಗಿ ಪೂಜಿಸುತ್ತಾರೆ. ಇವರು ಮಹಾಕಾಳಿಯನ್ನು ತಮ್ಮ ರಕ್ಷಕ ದೇವತೆಯಾಗಿ ಪೂಜಿಸುತ್ತಾರೆ. ಜಂಗಮರು ಇವರ ಎಲ್ಲ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವವರಾಗಿದ್ದಾರೆ. ಇವರು ಮರದ ಕೆತ್ತನೆಗಳನ್ನು ಮಾಡುವಲ್ಲಿ ನಿಪುಣರು. ಇವರು ಸಾಂಪ್ರದಾಯಿಕ ಹಬ್ಬವಾದ ‘ಕಾಳಮ್ಮನ ಜಾತ್ರೆ’ಯಲ್ಲಿ ಪಾಲ್ಗೊಳ್ಳುತ್ತಾರೆ. ಇವರಲ್ಲಿ ವ್ಯಾಪಾರಿಗಳಲ್ಲಿ, ಸೃಜನಶೀಲ ಕಲೆಗಾರರು, ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸಗಳಲ್ಲಿರುವವರು ಇದ್ದಾರೆ. ಆಧುನಿಕ ವಿದ್ಯಾಭ್ಯಾಸದ ವಿಷಯವಾಗಿ ಪ್ರೋತ್ಸಾಹ ಇದೆ. ಇತ್ತೀಚೆಗೆ ಅಭಿವೃದ್ಧಿ ಹೊಂದಲು ಪ್ರಯತ್ನಿಸುತ್ತಿದ್ದಾರೆ.

 

ಲಿಂಗಾಯತ : ಬಣಜಿಗ

ಲಿಂಗಾಯತ ಬಣಜಿಗರು ಲಿಂಗಾಯತರ ಉಪಗುಂಪುಗಳಲ್ಲಿ ಒಂದು. ಬಣಜಿಗ ಲಿಂಗಾಯತರು ಬೆಳಗಾವಿ, ಬಳ್ಳಾರಿ, ಬೀದರ್, ಬಿಜಾಪುರ, ಬಾಗಲಕೋಟ, ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ಗದಗ, ಹಾವೇರಿ, ಧಾರವಾಡ, ಗುಲ್ಬರ್ಗಾ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಬಣಜಿಗರು ಮಹಾರಾಷ್ಟ್ರದಲ್ಲಿಯೂ ಕಾಣಸಿಗುತ್ತಾರೆ. ಕನ್ನಡ ಭಾಷೆಯನ್ನು ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಅದಿಬಣಜಿಗ, ಶೀಲವಂತ, ಧೋಳಪಾವಡ ಮುಂತಾದ ಒಳಪಂಗಡಗಳಿವೆ. ಸೋದರ ಸಂಬಂಧಿ ವಿವಾಹಕ್ಕೆ ಅವಕಾಶವಿದೆ. ಹೆರಿಗೆಯ ಮುನ್ನಿನ ಕ್ರಿಯಾವಿಧಿ ‘ಕುಬುಸ’ ಕಾರ್ಯವನ್ನು ಮೂರನೇ ತಿಂಗಳು ಅಥವಾ ಐದನೇ ತಿಂಗಳಿನಲ್ಲಿ ಮಾಡುತ್ತಾರೆ.  ನಾಮಕರಣ ಕಾರ್ಯವನ್ನು ಗಂಡು ಮಗುವಿಗೆ ಹದಿಮೂರನೇ ದಿನದಂದು ಮಾಡುತ್ತಾರೆ. ಗಂಡು ಮಗುವಿಗೆ ಜವಳ ಕಾರ್ಯವನ್ನು ಮಾಡುತ್ತಾರೆ. ಗಂಡು ಮಗುವಿಗೆ ಎಂಟು ವರ್ಷದಿಂದ ಹದಿನಾರು ವರ್ಷದ ಒಳಗೆ ಲಿಂಗದೀಕ್ಷಾ ಕಾರ್ಯ ಮಾಡುತ್ತಾರೆ. ಋತುಮತಿಯಾದಾಗ ಹೆಣ್ಣು ಮಗುವಿಗೆ ‘ಮೈನೆರೆಯುವುದು’ ಎನ್ನುವ ಕಾರ್ಯವನ್ನು ಮಾಡುತ್ತಾರೆ. ಮದುವೆಯ ಆಚರಣೆಗಳು ವರನ ಮನೆಯಲ್ಲಿ ನಡೆಯುತ್ತವೆ. ಶವವನ್ನು ಕೂತ ಭಂಗಿಯಲ್ಲಿ ಹೂಳಲಾಗುತ್ತದೆ.

ಇವರು ಸಾಂಪ್ರದಾಯಿಕ ಹಾಗೂ ಈಗಿನ ವೃತ್ತಿಗಳೆಂದರೆ ವ್ಯಾಪಾರ ಮತ್ತು ವ್ಯವಸಾಯ. ಇತ್ತೀಚೆಗೆ ಇವರಲ್ಲಿ ಕೆಲವರು ಸರ್ಕಾರಿ ನೌಕರಿಗಳಲ್ಲಿ ಇದ್ದಾರೆ. ಬಣಜಿಗರು ‘ಅಖಿಲ ಭಾರತ ವೀರಶೈವ ಮಹಾಸಭಾ’ದ ಸದಸ್ಯರು. ಕಾಶಿ, ಕೇದಾರ, ಶ್ರೀಶೈಲ, ಬಾಳೆಹಳ್ಳಿ ಮತ್ತು ಉಜ್ಜಿನಿಗಳನ್ನು. ಎಲ್ಲಾ ಲಿಂಗಾಯತರು ಧಾರ್ಮಿಕ ಶಕ್ತಿಗಳೆಂದು ಭಾವಿಸುತ್ತಾರೆ. ವೀರಭದ್ರ, ರೇವಣಸಿದ್ಧೇಶ್ವರ, ಎಲ್ಲಮ್ಮ, ಮೈಲಾರ, ಮಲ್ಲಿಕಾರ್ಜುನ, ಸಂಗಮೇಶ್ವರ ಇವು ಇವರು ಪೂಜಿಸುವ ಕೆಲವು ಮುಖ್ಯ ದೇವರುಗಳು. ಜಂಗಮರು ಇವರ ಪುರೋಹಿತರು. ಯುಗಾದಿ, ಬಸವಜಯಂತಿ, ಮಹಾನವಮಿ, ದೀಪಾವಳಿ ಮತ್ತು ಸೀಗೆ ಹುಣ್ಣಿಮೆ ಹಬ್ಬಗಳನ್ನು ಆಚರಿಸುತ್ತಾರೆ. ಈ ಸಮುದಾಯದಲ್ಲಿ, ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕೆಲಸಗಳಲ್ಲಿರುವವರು, ಆಡಳಿತಗಾರರು ಹಾಗೂ ರಾಜಕೀಯ ಧುರೀಣರು ಇದ್ದಾರೆ. ಆಧುನಿಕ ವೈದ್ಯಕೀಯ ಪದ್ಧತಿ, ಶಿಕ್ಷಣ, ಕುಟುಂಬ ಕಲ್ಯಾಣ, ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಇತರೆ ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆ.

 

ಲಿಂಗಾಯತ : ಬಣ್ಣಗಾರ

ಣ್ಣಗಾರ ಎಂದರೆ ನೂಲಿಗೆ ಬಣ್ಣ ಹಾಕುವವನು’ – ಎಂದರ್ಥ. ಸಾಂಪ್ರದಾಯಿಕವಾಗಿ ಇವರು, ನೂಲಿಗೆ ಬಣ್ಣ ಹಾಕುತ್ತಾರೆ. ಇವರನ್ನು ನಾಗಲೀಕರೆಂದೂ ಕರೆಯುತ್ತಾರೆ. ಇವರು ಬೆಳಗಾವಿ, ಬಾಗಲಕೋಟೆ, ಬಳ್ಳಾರಿ, ಬಿಜಾಪುರ, ಚಿತ್ರದುರ್ಗ, ಧಾರವಾಡ, ಗದಗ, ಹಾವೇರಿ, ಗುಲ್ಬರ್ಗಾ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರು ತಮ್ಮೊಂದಿಗೆ ಕನ್ನಡವನ್ನು ಮಾತನಾಡುತ್ತಾರೆ. ಕನ್ನಡ ಲಿಪಿಯನ್ನು ಬಳಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಮುಖ್ಯವಾಗಿ ಮನೆ ದೇವರುಗಳನ್ನೇ ಮದುವೆಯ ಸಂಬಂಧಗಳಲ್ಲಿ ನೋಡುತ್ತಾರೆ. ಒಂದೇ ದೇವರನ್ನು ಪೂಜಿಸುವ ಮನೆಗಳವರಾಗಿದ್ದರೆ ಅವರನ್ನು ಸಹೋದರ ಕುಟುಂಬದವರೆಂದು ಭಾವಿಸುತ್ತಾರೆ. ತಂದೆಯ ಸಹೋದರಿಯ ಮಗಳು, ತಾಯಿಯ ಸಹೋದರನ ಮಗಳ ಜೊತೆ ಮದುವೆಯಾಗಬಹುದು. ಮೊದಲಿದ್ದ ವಧುದಕ್ಷಿಣೆ ಪದ್ಧತಿ ಬದಲಾಗಿ ವರದಕ್ಷಿಣೆಯು ಆಚರಣೆಗೆ ಬರುತ್ತಿದೆ. ವಿವಾಹ ವಿಚ್ಛೇದನೆಗೆ ಅವಕಾಶವಿದೆ. ವಿಧುರ ವಿಧವೆ, ಹಾಗೂ ವಿವಾಹ ವಿಚ್ಛೇದಿತರಿಗೆ ಮದುವೆಯಾಗಲು ಅವಕಾಶವಿದೆ. ಗಂಡು ಮಗುವನ್ನು ವಂಶೋದ್ಧಾರಕನೆಂದು ಭಾವಿಸುತ್ತಾರೆ. ಹೆಂಗಸರು ವ್ಯವಸಾಯ, ಪಶುಸಂಗೋಪನೆ, ಉರುವಲು ಸಂಗ್ರಹಣೆ ಹಾಗೂ ಇತರೆ ಆರ್ಥಿಕ ಕಾರ್ಯಗಳಲ್ಲಿ  ಭಾಗವಹಿಸುತ್ತಾರೆ. ಜವಳ ಕಾರ್ಯವನ್ನು ಗಂಡುಮಕ್ಕಳಿಗೆ ಮಾತ್ರ ಮಾಡುತ್ತಾರೆ. ಮಗು ಎಂಟರಿಂದ ಹದಿನಾರು ವರ್ಷದ ನಡುವೆ ಇರುವಾಗ ಜಂಗಮ ಪೂಜಾರಿಗಳಿಂದ ಲಿಂಗ ದೀಕ್ಷಾ ಕಾರ್ಯವನ್ನು ಮಾಡುತ್ತಾರೆ. ಋತುಮತಿಯಾದ ಹೆಣ್ಣು ಮಕ್ಕಳಿಗೆ ‘ಮೈ ನೆರೆಯುವುದು’  ಎನ್ನುವ ಕಾರ್ಯವನ್ನು ಮಾಡುತ್ತಾರೆ. ಋತುಮತಿಯಾದ ಹುಡುಗಿಯನ್ನು ಮೂರರಿಂದ ಐದು ದಿನಗಳವರೆಗೆ ಬೇರ್ಪಡಿಸಿಟ್ಟರುತ್ತಾರೆ. ಶವವನ್ನು ಕೂರಿಸಿ, ಮುಖ ಉತ್ತರ ಅಥವಾ ಪೂರ್ವ ದಿಕ್ಕಿಗಿರುವಂತೆ ಮಾಡಿ ಹೂಳುತ್ತಾರೆ.

ಈಗ ಇವರಲ್ಲಿ ಬಹಳಷ್ಟು ಜನರು ವ್ಯಾಪಾರ ಮಾಡುತ್ತಿದ್ದಾರೆ. ಕೆಲವರು ಮಾತ್ರ ತಮ್ಮ ಸಾಂಪ್ರದಾಯಿಕ ವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇವರು ವ್ಯವಸಾಯ, ವ್ಯಾಪಾರ, ಸ್ವಯಂ-ಉದ್ಯೋಗವನ್ನು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ಸೇವೆ ಹಾಗೂ ದಿನಗೂಲಿಗಳಾಗಿಯೂ ಇದ್ದಾರೆ. ಸಾಂಪ್ರದಾಯಿಕ ಜಾತಿಯ ಸಂಘಟನೆಗಳು ಇವೆ. ‘ಅಖಿಲ ಕರ್ನಾಟಕ ವೀರಶೈವ ಬಣ್ಣಗಾರನ (ನಾಗಲೀಕ) ಸಮಾಜ’ ಹಾಗೂ ‘ಅಖಿಲ ಭಾರತ ವೀರಶೈವ ಮಹಾಸಭಾ’ಗಳು ಇವರು ಅಭಿವೃದ್ಧಿಗಾಗಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ದುಡಿಯುತ್ತಿವೆ. ವಿರೂಪಾಕ್ಷ, ವೀರಭದ್ರ, ಸಿದ್ಧೇಶ್ವರ, ಮಹದೇಶ್ವರ ಹಾಗೂ ನವಿಲೆ ಜಡೇಶಂಕರಲಿಂಗ ದೇವರುಗಳನ್ನು ಪೂಜಿಸುತ್ತಾರೆ. ಜಂಗಮರು ಇವರ ಧಾರ್ಮಿಕ ಪೂಜಾವಿಧಿಗಳನ್ನು ನಡೆಸಿಕೊಡುತ್ತಾರೆ. ಇವರಿಗೆ ಶ್ರೀಮಂತ ಜಾನಪದ ಪರಂಪರೆಯಿದೆ. ಸಾಂಪ್ರದಾಯಿಕ ಹಬ್ಬಗಳಾದ ನವಿಲೆ ಜಡೆಶಂಕರಲಿಂಗ ಹಬ್ಬದಲ್ಲಿ ಭಾಗವಹಿಸುತ್ತಾರೆ. ಇವರಲ್ಲಿ ವ್ಯಾಪಾರಿಗಳು, ವಿದ್ವಾಂಸರು, ಶಿಕ್ಷಕರು  ಹಾಗೂ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಗಳನ್ನು ಮಾಡುವವರಿದ್ದಾರೆ. ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರಿಗೂ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಾರೆ. ಕುಟುಂಬ ಕಲ್ಯಾಣ ಯೋಜನೆಯ ಬಗ್ಗೆ ಇವರಿಗೆ ಒಲವಿದೆ. ಇವರಿಗೆ ಗ್ರಾಮಾಭಿವೃದ್ಧಿ ಯೋಜನೆಗಳ ಬಗ್ಗೆ, ಬ್ಯಾಕಿಂಗ್ ವ್ಯವಸ್ಥೆ ಬಗ್ಗೆ ಹಾಗೂ ಆಧುನಿಕ ಸಾಮಾಜಿಕ ಸಂಸ್ಥೆಗಳ ಪ್ರಯೋಜನವನ್ನು ಪಡೆದುಕೊಂಡು ಸಾಮಾಜಿಕ, ಆರ್ಥಿಕ, ರಾಜಕೀಯ ಬದಲಾವಣೆಯನ್ನು ಹೊಂದುತ್ತಿದ್ದಾರೆ.

 

ಲಿಂಗಾಯತ : ಮಚಗಾರ

ಚಗಾರ ಎನ್ನುವ ಪದ ‘ಮೋಚಿ’ ಎನ್ನುವ ಪದದಿಂದ ಬಂದಿದೆ. ‘ಮೋಚಿ’ ಎಂದರೆ ಚಪ್ಪಲಿಗಳನ್ನು ತಯಾರಿಸುವ ಹಾಗೂ ಅದಕ್ಕೆ ಸಂಬಂಧಪಟ್ಟ ವೃತ್ತಿಗಳನ್ನು ಮಾಡುವವರು ಎಂದರ್ಥ. ವೀರಶೈವರ ಒಂದು ಪಂಗಡ ಈ ಕೆಲಸ ಮಾಡುತ್ತಿದ್ದು, ಇವರನ್ನು ಲಿಂಗಾಯತ ಸಮಗಾರರೆಂದು ಕರೆಯಲಾಗುತ್ತದೆ. ಇವರನ್ನು ಕರ್ನಾಟಕದ ಉತ್ತರಭಾಗದ ಪ್ರಾಂತಗಳಲ್ಲಿ ಹೆಚ್ಚಾಗಿ ಕಾಣಬಹುದು. ಇವರು ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಈ ಕೋಮಿನಲ್ಲಿ ಪುರುಷಕೇಂದ್ರಿತ ಹೊರಬಾಂಧವ್ಯದ ಬೆಡಗು ಇವೆ – ಗಲಿ, ಶೆಲೂದಿ, ದೋಣಿ, ಬೆಟೆಗೆರ್ಟಿ, ಗೌಡರ್ ಮತ್ತು ಯಲ್ವತಿ. ಇವರು ತಮ್ಮ ಬೆಡಗು ಹೆಸರುಗಳನ್ನೇ ತಮ್ಮ ಮನೆತನದ ಹೆಸರುಗಳಾಗಿ ಬಳಸುತ್ತಿದ್ದಾರೆ. ಜಾತಿಯ ಒಳಗೆ, ಬಳ್ಳಿಗಳ ಹೊರಗೆ ಮದುವೆಗಳು ನಡೆಯುತ್ತವೆ. ರಕ್ತ ಸಂಬಂಧಿಕರ ಮದುವೆಗಳಿಗೆ ಅವಕಾಶವಿದೆ. ಸೋದರ ಸಂಬಂಧಿ ವಿವಾಹಕ್ಕೆ ಅವಕಾಶವಿದೆ. ಮುಂದುವರಿದ ಕುಟುಂಬಗಳಲ್ಲಿ ವರದಕ್ಷಿಣೆಯನ್ನು ಹಣದ ರೂಪದಲ್ಲಿ ಹಾಗೂ ಇತರೆ ರೂಪಗಳಲ್ಲಿ ಕೊಡಬಹುದಾಗಿದೆ. ವಿಧುರರ ಹಾಗೂ ವಿಧವೆಯರ ಮರುಮದುವೆಗೆ ಅವಕಾಶವಿದೆ. ಉಡಿಕೆ ಹಾಗೂ ಕೂಡಿಕೆಗೆ ಅವಕಾಶವಿದೆ. ಹಿರಿಯ ಗಂಡುಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಹೆಂಗಸರು ವ್ಯವಸಾಯ, ಪಶುಸಂಗೋಪನೆ, ಹಾಗೂ ಸಮಾಜದ ಧಾರ್ಮಿಕ ಆಚರಣೆಗಳಲ್ಲಿ ಭಾಗವಹಿಸುತ್ತಾರೆ. ಹೆರಿಗೆಗೆ ಮುನ್ನ ‘ಕುಬಸ’ ಎಂಬ ಕಾರ್ಯವನ್ನು ಗರ್ಭಿಣಿಯಾದ ಏಳನೇ ತಿಂಗಳಿಗೆ ಮಾಡುತ್ತಾರೆ. ಜನನದ ಸೂತಕವು ಐದು ದಿನಗಳವರೆಗೆ ಇರುತ್ತದೆ. ನಾಮಕರಣವನ್ನು ಹದಿಮೂರನೆ ದಿನ ಮಾಡುತ್ತಾರೆ. ಜವಳ ಕೊಡುವ ಕಾರ್ಯವನ್ನು ಒಂದು ವರ್ಷದೊಳಗಾಗಿ ಗಂಡು ಹಾಗೂ ಹೆಣ್ಣು ಮಕ್ಕಳಿಬ್ಬರಿಗೂ ಮಾಡಿಸುತ್ತಾರೆ. ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ಋತುಮತಿ ಕಾರ್ಯ ಮಾಡುತ್ತಾರೆ. ಮದುವೆಯ ಸಮಾರಂಭದಲ್ಲಿ ಸಕ್ಕರೆಕಾರಣ, ಅರಿಶಿಣಕಾರ್ಯ, ಅಕ್ಷತೆ, ಧಾರೆಮುಹೂರ್ತ ಮುಖ್ಯವಾದವು. ಶವವನ್ನು ಹೂಳುತ್ತಾರೆ, ಸಾವಿನ ಸೂತಕವು ಮೂರು ದಿನಗಳವರೆಗೆ ಇರುತ್ತದೆ. ಹಿರಿಯರ ಪೂಜೆಯನ್ನು ಪ್ರತಿವರ್ಷವೂ ಮಾಡಿಕೊಂಡು ಬರುತ್ತಾರೆ.

ಸಾಂಪ್ರದಾಯಿಕವಾಗಿ ಮಚಗಾರರು ಚರ್ಮದ ಕೆಲಸಗಾರರಾದರೂ, ಈಗಿನ ಇವರ ವೃತ್ತಿಗಳೆಂದರೆ ವ್ಯವಸಾಯ ಹಾಗೂ ವ್ಯವಸಾಯೇತರ ಕೂಲಿಗಳಾಗಿ ದುಡಿಯುವುದು. ಅದಲ್ಲದೆ ಇವರಲ್ಲಿ ಕೆಲವರು ಚಿಕ್ಕ ಚಿಲ್ಲರೆ ವ್ಯಾಪಾರ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಗಳಿದ್ದಾರೆ. ಇವರು ಮನೆಯ ಹಾಗೂ ಪ್ರಾಂತ್ಯದ ದೇವತೆಗಳಾದ ಬಸವಣ್ಣ, ಎಲ್ಲಮ್ಮ, ಮೈಲಾರಲಿಂಗ, ಇತ್ಯಾದಿ ದೇವರುಗಳನ್ನು ಪೂಜಿಸುತ್ತಾರೆ. ದೀಪಾವಳಿ, ನಾಗರಪಂಚಮಿ ಹಬ್ಬಗಳನ್ನು ಆಚರಿಸುತ್ತಾರೆ. ಜೊತೆಗೆ ಗಣೇಶಚೌತಿ, ಕಾರ್ತೀಕ, ಹೋಳಿ, ಸೀಗೆಹುಣ್ಣಿಮೆ, ದಸರ ಹಬ್ಬಗಳನ್ನು ಆಚರಿಸುತ್ತಾರೆ. ಹಳ್ಳಿಯ ಸಾಂಪ್ರದಾಯಿಕ ಹಬ್ಬ ಆಚರಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಲಿಂಗಾಯತ ಮಚಗಾರರು ಇತರೆ ಲಿಂಗಾಯತ ಗುಂಪಿಗೆ ಹೋಲಿಸಿದರೆ ಆರ್ಥಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಗುಂಪಾಗಿದೆ.

 

ಲಿಂಗಾಯತ : ರೆಡ್ಡಿ

ಡ್ಡೇರು ಎಂದು ಕರೆಯಲ್ಪಡುವ ರೆಡ್ಡಿಗಳು ರಾಷ್ಟ್ರಕೂಟ ಅಥವಾ ರಟ್ಟ ಸಾಮ್ರಾಜ್ಯಕ್ಕೆ ಸಂಬಂಧಿಸಿದವರು. ಕೆಲವು ಆಧಾರಗಳು ರಟ್ಟರು ರೆಡ್ಡಿಗಳು ಅಥವಾ ಕನ್ನಡದ ರಡ್ಡೇರು ಎಂದು ಅಭಿಪ್ರಾಯಪಡುತ್ತವೆ. ಇನ್ನೊಂದು ಪಾಠಾಂತರದಲ್ಲಿ ಇವರು ತಿರುಪತಿ ವೆಂಕಟರಮಣನ ಭಕ್ತೆಯಾದ ಹೇಮರೆಡ್ಡಿ ಮಲ್ಲಮ್ಮನ ವಂಶಸ್ಥರೆಂದು ತಿಳಿದುಬರುತ್ತದೆ. ಹೇಮರೆಡ್ಡಿ ಮಲ್ಲಮ್ಮ ತಮ್ಮ ಸಮುದಾಯವನ್ನು ಶಾಶ್ವತವಾಗಿ ಅಭಿವೃದ್ಧಿಯಾಗಲೆಂದು ಹರಸಿರುವನೆಂದು ಹೇಳಿಕೊಳ್ಳುತ್ತಾರೆ. ಬಿಜಾಪುರ, ಬಾಗಲಕೋಟೆ, ಗದಗ,ಕೊಪ್ಪಳ, ಧಾರವಾಡ, ಬೆಳಗಾವಿ, ಗುಲ್ಬರ್ಗಾ, ಬಳ್ಳಾರಿ, ಚಿತ್ರದುರ್ಗ, ಕೋಲಾರ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮತ್ತು ಪಕ್ಕದ ಆಂಧ್ರಪ್ರದೇಶದ ಜಿಲ್ಲೆಗಳಲ್ಲಿ ವಾಸಿಸುತ್ತಾರೆ. ಇವರು ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಪಾಕನಾಕ, ನಾಮ, ನರವಲ, ಚಿಟಮುಟ ಉಪಪಂಗಡಗಳು ರೆಡ್ಡಿಗಳಲ್ಲಿವೆ. ನಾಮದ ರೆಡ್ಡಿಗಳಲ್ಲಿ ಗಂಡಸರು ಹಣೆಯ ಮೇಲೆ ಸಿಂಧೂರದ ಒಂದು ಚುಕ್ಕೆಯನ್ನಿಡುವುದರಿಂದ ಇವರನ್ನು ಕುಂಕುಮದ ರೆಡ್ಡಿಗಳೆಂದು ಕರೆಯುತ್ತಾರೆ. ಎಂಥೋವನ್ ಇವರಲ್ಲಿ ಏಳು ಒಳಬಾಂಧವ್ಯ ವಿವಾಹಗಳನ್ನು ಗುರುತಿಸಿದ್ದಾರೆ. ರಡ್ಡೇರು ಗುಂಪಿನಲ್ಲಿ ಪಿತೃನಡವಳಿಯ ಕುಲಗಳು ಅಸ್ತಿತ್ವದಲ್ಲಿದ್ದರೂ ಇತ್ತೀಚಿನ ದಿನಗಳಲ್ಲಿ ವಿವಾಹ ಸಂಬಂಧಗಳನ್ನು ಮಾಡುವಾಗ ಪರಸ್ಪರ ಕುಲಗಳನ್ನು ಹುಡುಕುವುದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿಲ್ಲ. ಇವರಲ್ಲಿರುವ ಉಪನಾಮಗಳು – ಪಾಟೀಲ್, ದೇಸಾಯಿ, ಓದುಗೌಡರ್, ಗದ್ದಿಗೌಡರ, ತಿಮ್ಮಗೌಡರ ಇತ್ಯಾದಿ. ಸೋದರತ್ತೆ, ಸೋದರಮಾವ ಹಾಗೂ ಅಕ್ಕನ ಮಗಳೊಂದಿಗೆ ವಿವಾಹಕ್ಕೆ ಅನುಮತಿ ಇದೆ. ಹಿಂದೆ ಬಿಂಕದ ಕಟ್ಟಿಸಾಲು ಮತ್ತು ಹುಲಕೋಟಿಸಾಲುಗಳೆಂಬ ಎರಡು ಕುಲಗಳು ಗದಗ-ಹುಲಕೋಟಿ ಪ್ರದೇಶಗಳಲ್ಲಿವೆ. ಎರಡನೆಯ ಕುಲದವರು ವೈವಾಹಿಕ ಸಂಬಂಧವನ್ನು ಮೊದಲನೆಯ ಕುಲವಾದ (ಬಿಂಕದ ಕಟ್ಟಿಸಾಲು) ಹೆಣ್ಣನ್ನು ತೆಗೆದುಕೊಳ್ಳುತ್ತಾರೆ, ಆದರೆ ಬದಲಾಗಿ ಕೊಡುವುದಿಲ್ಲ. ಹಾಗೆಯೇ ಲಿಂಗರೆಡ್ಡಿಗಳು ನಾಮದ ರೆಡ್ಡಿಗಳಿಂದ ಹೆಣ್ಣು ತೆಗೆದುಕೊಳ್ಳುತ್ತಾರೆ. ವರದಕ್ಷಿಣೆಯು ಇವರ ವಿವಾಹ ವ್ಯವಸ್ಥೆಯ ಅತ್ಯವಶ್ಯಕವಾದ ಅಂಶವಾಗಿದೆ. ವಿಚ್ಛೇದನಕ್ಕೆ ಸಮ್ಮತಿಯಿಲ್ಲ ಆದರೆ, ವಿಧವೆ ಹಾಗೂ ವಿಧುರರ ವಿವಾಹಕ್ಕೆ ಸಮ್ಮತಿ ಇದೆ. ಪಿತ್ರಾರ್ಜಿತ ಆಸ್ತಿಯನ್ನು ಗಂಡು ಮಕ್ಕಳಿಗೆ ಸಮನಾಗಿ ಹಂಚುತ್ತಾರೆ. ಹಿರಿಯ ಮಗನು ತಂದೆಯ ನಂತರ ಕುಟುಂಬದ ಉತ್ತರಾಧಿಕಾರಿಯಾಗುತ್ತಾನೆ. ದೈನಂದಿನ ಮನೆಕಾರ್ಯಗಳ ಜೊತೆಗೆ ಸ್ತ್ರೀಯರು ಪುರುಷರಿಗೆ ಹೊಲದ ಕೆಲಸ, ಆರ್ಥಿಕ, ಸಾಮಾಜಿಕ, ಸಾಂಪ್ರದಾಯಿಕ ಹಾಗೂ ಧಾರ್ಮಿಕ ವಿಧಿವಿಧಾನಗಳಲ್ಲಿ ಸಮಾನವಾಗಿ ಭಾಗವಹಿಸುತ್ತಾರೆ. ಲಿಂಗರೆಡ್ಡಿಗಳು, ಸಾಮಾನ್ಯವಾಗಿ ವೀರಶೈವ ಪದ್ಧತಿಯಂತೆ ಕುಳಿತಿರುವ ರೀತಿಯಲ್ಲಿ ಶವವನ್ನು ಹೂಳುತ್ತಾರೆ. ನಾಮರೆಡ್ಡಿಗಳು ವೈಷ್ಣವವಾದಿಗಳು ಶವವನ್ನು ಸುಡುತ್ತಾರೆ.

ರಡ್ಡಿಗಳ ಪಾರಂಪರಿಕ ಉದ್ಯೋಗ ವ್ಯವಸಾಯ. ಇವರಲ್ಲಿ ಹೆಚ್ಚಿನ ಜನ ಜಮೀನನ್ನು ಹೊಂದಿ ಪ್ರಗತಿಶೀಲ ಆಧುನಿಕ ವ್ಯವಸಾಯಗಾರರಾಗಿದ್ದಾರೆ. ಕೆಲವರು ಸಣ್ಣ ಪ್ರಮಾಣದ ಕಾರ್ಖಾನೆಗಳನ್ನು ಸ್ಥಾಪಿಸಿದ್ದಾರೆ. ಇನ್ನು ಕೆಲವರು ಸರ್ಕಾರಿ ಹಾಗೂ  ಖಾಸಗಿ ಸಂಸ್ಥೆಗಳಲ್ಲಿ ನೌಕರಿಗಳಲ್ಲಿದ್ದಾರೆ. ತಿರುಪತಿ ವೆಂಕಟರಮಣ, ಪಂಡರಾಪುರ ವಿಠ್ಠಲ, ಹನುಮಂತ, ಎಲ್ಲಮ್ಮ ಮತ್ತು ಮಲ್ಲಯ್ಯ, ಬಸವಣ್ಣ, ಮೇಮ, ಮಲ್ಲಮ್ಮ ಇವರ ಪ್ರಮುಖ ದೈವಗಳಾಗಿವೆ. ಬಡಿಗ, ಅಗಸ, ಕಮ್ಮಾರ, ಕುಂಬಾರ ಮುಂತಾದವರೊಂದಿಗೆ ಇವರು ಪೋಷಿತ-ಆಶ್ರಿತ ಸಂಬಂಧ ಹೊಂದಿದ್ದಾರೆ. ಆದರೆ ಈ ಸಂಬಂಧವು ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದೆ. ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕೆ ಅತೀ ಹೆಚ್ಚಿನ ಪ್ರಾಮುಖ್ಯತೆ ಕೊಡುವ ರೆಡ್ಡಿಗಳು ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ತಮ್ಮದೆ ಬ್ಯಾಂಕ್ ಹಾಗೂ ಆರ್ಥಿಕ ಸಂಸ್ಥೆಗಳನ್ನು ಹೊಂದಿರುವ ಇವರು ಎಲ್ಲಾ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬಳಸಿಕೊಂಡಿದ್ದಾರೆ. ‘ವೇಮ ಹೇಮ’ ಎಂಬ ಸಂಘಟನೆಯ ಮೂಲಕ ಇತ್ತೀಚೆಗೆ ರಾಜ್ಯದ ರಾಜಕೀಯದಲ್ಲಿ ಒಂದು ಶಕ್ತಿಶಾಲಿ ಒತ್ತಡದ ಗುಂಪಾಗಿದ್ದಾರೆ. ಆಧುನಿಕ ವ್ಯವಸ್ಥೆಗಳ ಪ್ರಯೋಜನವನ್ನು ವ್ಯವಸ್ಥಿತವಾಗಿ ಪಡೆದುಕೊಳ್ಳುತ್ತಿದ್ದಾರೆ.

 

ಲಿಂಗಾಯತ : ಸಾದರ

ಸಾದರು, ಸಾದರುಗೌಡ, ಸಾದು ಮಠಸ್ಥರು  ಎಂದೂ ಕರೆಯುತ್ತಾರೆ. ಇವರು ಕೋಲಾರ ಹಾಗೂ ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ನಂಜುಂಡಯ್ಯ ಹಾಗೂ ಐಯ್ಯರ್ (೧೯೩೦), ಸಾದರು ಮೂಲತಃ ಜೈನ ಧರ್ಮದವರೆಂದೇ ಒತ್ತಿ ಹೇಳುತ್ತಾರೆ. ರಾಜ ವಿಷ್ಣುವರ್ಧನನು ರಾಮಾನುಜಾಚಾರ್ಯರಿಂದ ವೈಷ್ಣವನಾಗಿ ಮತಾಂತರ ಹೊಂದಿದಾಗ, ಕೆಲವರು ವೈಷ್ಣವಧರ್ಮವನ್ನು ಒಪ್ಪಿಕೊಂಡರು. ಕೆಲವರು ಬಸವಣ್ಣನವರ ತತ್ವಗಳನ್ನು ಒಪ್ಪಿಕೊಂಡು. ಲಿಂಗಾಯತ ಧರ್ಮವನ್ನು ಸ್ವೀಕರಿಸಿದರು ಇವರಲ್ಲಿ ಮೂರು ವಿಭಾಗಗಳಿವೆ. ಅವೆಂದರೆ ಸಾದಲಿಂಗಾಯತರು, ಲಿಂಗಾಯತರಲ್ಲದ ಸಾದರು, ಜೈನ ಸಾದರು.  ಇವರು ಹೆಚ್ಚಾಗಿ ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಧಾರವಾಡ, ತುಮಕೂರು, ಹಾಸನ ಮತ್ತು ಮೈಸೂರು ಜಿಲ್ಲೆಗಳಲ್ಲಿದ್ದಾರೆ. ಇವರು ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿ ಬಳಸುತ್ತಾರೆ. ಇವರು ಹಣೆಯ ಮೇಲೆ ವಿಭೂತಿಯನ್ನು ದೇಹದ ಮೇಲೆ ಇಷ್ಟಲಿಂಗವನ್ನೂ ಧರಿಸುತ್ತಾರೆ.

ವಿಧವೆ, ವಿಧುರರು ಹಾಗೂ ವಿಚ್ಛೇದಿತರು ವಿವಾಹವಾಗಲು ಸಾಧ್ಯವಿದೆ. ಇವರಲ್ಲಿ ಹೆಂಗಸರು ವ್ಯವಸಾಯ, ಪಶುಸಂಗೋಪನೆ ಮತ್ತು ಇತರ ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಾಗೂ ರಾಜಕೀಯ ಕೆಲಸ ಕಾರ್ಯಗಳಲ್ಲಿ ಭಾಗವಹಿಸುತ್ತಾರೆ. ಹೆರಿಗೆಗೆ ಮುನ್ನಿನ ಆಚರಣೆಗಳನ್ನು ಗರ್ಭಿಣಿಯ ಐದನೇ ಅಥವಾ ಏಳನೇ ತಿಂಗಳಲ್ಲಿ ಮಾಡುತ್ತಾರೆ. ನಾಮಕರಣ ಹಾಗೂ ಲಿಂಗ ದೀಕ್ಷಾ ಕಾರ್ಯಗಳನ್ನು ಮಕ್ಕಳಿಗೆ ಮಾಡುತ್ತಾರೆ. ಋತುಮತಿಯಾದ ಹುಡುಗಿಯರಿಗೆ ‘ಹೊಸಿಗೆ’ ಎನ್ನುವ ಕಾರ್ಯವನ್ನು ಋತುಮತಿಯಾದ ಒಂಭತ್ತು ದಿನಗಳ ಒಳಗೆ ಮಾಡುತ್ತಾರೆ. ಶವವನ್ನು ಕೂತ ಭಂಗಿಯನ್ನು ಹೂಳುತ್ತಾರೆ. ಸಾವಿನ ಸೂತಕವನ್ನು ಆಚರಿಸಿ ಹಿರಿಯರ ಪೂಜೆ ಮಾಡುತ್ತಾರೆ. ಸಾಂಪ್ರದಾಯಿಕವಾಗಿ ಸಾದರ ಲಿಂಗಾಯತರು ವ್ಯವಸಾಯಗಾರರು. ಪಶು ಸಂಗೋಪನೆ, ವ್ಯಾಪಾರ, ಸರ್ಕಾರಿ ಹಾಗೂ ಖಾಸಗಿ ನೌಕರಿಗಳನ್ನೂ ಮಾಡುತ್ತಿದ್ದಾರೆ. ಜಾತಿಯ ಸಂಘಟನೆಯು ಇವರಲ್ಲಿನ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುತ್ತದೆ. ಸಿರಿಗೆರೆ ಮಠ, ಧಾರ್ಮಿಕ ವಿಷಯಗಳಲ್ಲಿ ಇವರ ಮೇಲೆ ಅಧಿಕಾರ ಹೊಂದಿದೆ. ಜಂಗಮರು ಧಾರ್ಮಿಕ ವಿಧಿಗಳನ್ನು ಪೂರೈಸುವ ಪುರೋಹಿತರಾಗಿದ್ದಾರೆ. ಬಸವ ಜಯಂತಿ ಮತ್ತು ಇತರೆ ಹಬ್ಬಗಳನ್ನು ಇವರು ಆಚರಿಸುತ್ತಾರೆ. ಲಿಂಗಾಯತರಲ್ಲಿ ಇವರು ತಮ್ಮನ್ನು ತಾವು ಜಂಗಮರ ನಂತರದ ಸ್ಥಾನದವರು, ಕುಡು ಒಕ್ಕಲಿಗ ಹಾಗೂ ನೊಣಬರಿಗೆ ಸಮಾನರು ಎಂದು ಹೇಳಿಕೊಳ್ಳುತ್ತಾರೆ. ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳ ಆಧುನಿಕ ವೃತ್ತಿಗಳಲ್ಲಿ ಕೆಲವರು ಇದ್ದಾರೆ. ವಿದ್ಯಾಭ್ಯಾಸದ ವಿಷಯವಾಗಿ ಗಂಡು ಮತ್ತು ಹೆಣ್ಣು ಮಕ್ಕಳಿಬ್ಬರನ್ನೂ ಪ್ರೋತ್ಸಾಹಿಸುತ್ತಾರೆ. ಕೋಳಿಸಾಗಾಣಿಕೆ, ಪಶುಸಂಗೋಪನೆಗಳಲ್ಲಿ ತೊಡಗಿದ್ದಾರೆ. ಇವರು ಆಧುನಿಕ ಸಾಮಾಜಿಕ ಸಂಸ್ಥೆಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಿಕೊಂಡು ಅಭಿವೃದ್ಧಿಯನ್ನು ಸಾಧಿಸುತ್ತಿದ್ದಾರೆ.

 

ಲಿಂಗಾಯತ : ಹಡಪದ

ಡಪದ ಎಂದರೆ ಮರಾಠಿಯಲ್ಲಿ ಹಸುಬಿ ಕ್ಷೌರದ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬಳಸುವ ಚೀಲ ಎಂದರ್ಥ. ಇವರನ್ನು ನಾವಲಿಗ ಎಂದೂ ಕರೆಯುತ್ತಾರೆ. ಈ ವೃತ್ತಿಯಾಧಾರಿತ ಸಮುದಾಯವನ್ನು ಕನ್ನಡದಲ್ಲಿ ನಾಯಿಂದ ಎಂದು ಗುರುತಿಸುತ್ತಾರೆ. ತೆಲುಗಿನಲ್ಲಿ ಮಂಗಲ ಎಂದು, ತಮಿಳಿನಲ್ಲಿ ಅಂಬಟನ್ ಎಂದು, ಹಿಂದೂಸ್ಥಾನಿಯಲ್ಲಿ ಹಜಾಮ್ ಎಂದು ಕರೆಯುತ್ತಾರೆ. ‘ನಾಯಿಂದ’ ಎನ್ನುವ ಪದ ಸಂಸ್ಕೃತ ಪದ ‘ನಾಪಿತ’ ಎನ್ನುವುದರಿಂದ ಬಂದಿದೆ. ಅದರಲ್ಲಿ ‘ನಯಿ’ ಎನ್ನುವುದನ್ನು ಉತ್ತರ ಭಾರತದ ಒಂದು ಜಾತಿಯವರಿಗೆ ಬಳಕೆಯಾಗುತ್ತಿರಬೇಕು. ಲಿಂಗಾಯತ ಹಡಪದ ಜಾತಿಯ ಹುಟ್ಟಿನ ಬಗೆಗೆ ಒಂದು ಪುರಾಣ ಇದೆ. ಲಿಂಗಾಯತ ಹಡಪದ ಜಾತಿಯ ಹುಟ್ಟಿನ ಬಗೆಗೆ ಒಂದು ಪುರಾಣ ಇದೆ. ಶಿವದೇವರು ಬಹುಕಾಲದವರೆಗೆ ತಪಸ್ಸು ಮಾಡುತ್ತಾ ಕುಳಿತಿರಬೇಕಾದರೆ ಕೂದಲು ಅವನ ದೇಹದ ಮೇಲೆ ಸಾಕಷ್ಟು ಬೆಳೆಯಿತು. ಧ್ಯಾನ ಮುಗಿದ ಮೇಲೆ ಅವನು ಪಾರ್ವತಿಯನ್ನು ಮದುವೆಯಾಗಬೇಕಿದ್ದಿತು. ಅವನ ಮೈಮೇಲೆ ಕೂದಲಿರುವುದನ್ನು ಗಮನಿಸಿ, ಅವನು ತನ್ನ ಕಣ್ಣಿನಿಂದ ವ್ಯಕ್ತಿಯೊಬ್ಬನನ್ನು ಸೃಷ್ಟಿಸಿದ ಅವನನ್ನು ನಯನಿಗ ಎಂದು ಕರೆಯಲಾಯಿತು. ಅವನು ಶಿವನನ್ನು ಸುರೂಪಿಯನ್ನಾಗಿಸಿದ. ಶಿವನ ಅವನ ಸೇವೆಯಿಂದ ಸಂತೃಪ್ತನಾಗಿ ಅವನಿಗೆ ‘ನಿನ್ನ ಕುಟುಂಬಕ್ಕೆ ಶುಭವಾಗಲಿ, ಧಾರ್ಮಿಕ, ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ ನಿನಗೆ ಗೌರವ ಸಿಗಲಿ’ ಎಂದು ಹರಸಿದ.

ಇವರ ಇತಿಹಾಸ ಹಡಪದ ಅಪ್ಪಣ್ಣನಿಂದ ಪ್ರಾರಂಭವಾಗುತ್ತದೆ. ಹಡಪದ ಅಪ್ಪಣ್ಣ, ಬಸವಣ್ಣನವರ ಅನುಯಾಯಿಗಳಲ್ಲಿ ಒಬ್ಬ. ಇವರನ್ನು ಕ್ಷೌರದ,  ಕಾಯಕದ ಕ್ಷೌರಿಕ, ನಾವಿ, ನಾವಲಿಗ, ನಾವಲಿಗಾರ ನಾದರು, ಕೆಲಸಿಗ, ಕಲನೆರ್, ಕರೆಯುತ್ತಾರೆ. ಇವರು ಬೆಳಗಾವಿ, ಬಳ್ಳಾರಿ, ಬೀದರ, ಬಿಜಾಪುರ, ಬಾಗಲಕೋಟೆ, ಚಿತ್ರದುರ್ಗ, ಧಾರವಾಡ, ಗದಗ, ಹಾವೇರಿ, ಗುಲ್ಬರ್ಗಾ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ವಾಸವಾಗಿದ್ದಾರೆ. ಇವರು ಕನ್ನಡವನ್ನು ಮಾತನಾಡುತ್ತಾರೆ ಹಾಗೂ ಕನ್ನಡ ಲಿಪಿಯನ್ನು ಬಳಸುತ್ತಾರೆ. ಹಣೆಯ ಮೇಲೆ ವಿಭೂತಿಯನ್ನು ಮತ್ತು ದೇಹದ ಮೇಲೆ ಇಷ್ಟಲಿಂಗವನ್ನೂ ಧರಿಸುತ್ತಾರೆ. ಇವರಿಗೆ ಪಿತೃಮೂಲದ ಹೊರಬಾಂಧವ್ಯ ಬಳ್ಳಿಗಳು ಇವೆ. ಹಿಂದೆ ಇವರು ಬಳಸುತ್ತಿದ್ದ ಮನೆತನದ ಹೆಸರುಗಳೆಂದರೆ ಹಡಪದ. ಆದರೆ ಇವುಗಳ ಕೀಳು ಎನಿಸಿದ್ದರಿಂದ ಈಗ ಸ್ಥಳನಾಮಗಳನ್ನೇ ಮನೆತನದ ಹೆಸರುಗಳನ್ನಾಗಿ ಬಳಸುತ್ತಿದ್ದಾರೆ.

ಮದುವೆಯು ತಾಯಿಯ ಸಹೋದರನ ಮಗಳು, ತಂದೆಯ ಸಹೋದರಿಯ ಮಗಳು ಅಥವಾ ಹಿರಿಯಕ್ಕನ ಮಗಳ ಜೊತೆ ಸಾಧ್ಯವಿದೆ. ಕುಂಕುಮ, ಕಾಲುಂಗುರ, ತಾಳಿ ಇವು ಮದುವೆಯಾದ ಹೆಂಗಸಿನ ಗುರುತುಗಳು. ಹೆಂಗಸರ ಮರುವಿವಾಹವನ್ನು ‘ಉಡಿಕೆ’ ಎಂದು ಕರೆಯುತ್ತಾರೆ. ಹಿರಿಯ ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಹೆಂಗಸರು ಮನೆಯ ಆದಾಯಕ್ಕೆ ಕೂಲಿ ಮಾಡುವುದರ ಮೂಲಕ ಸಹಾಯ ಮಾಡುತ್ತಾರೆ. ಹೆರಿಗೆಗೆ ಮುನ್ನಿನ ‘ಕುಬುಸ’ ಕಾರ್ಯವನ್ನು ಗರ್ಭಿಣಿಯಾದ ಏಳನೆ ತಿಂಗಳಲ್ಲಿ ಮಾಡುತ್ತಾರೆ. ನಾಮಕರಣವನ್ನು ಮಗು ಜನಿಸಿದ ಐದನೇ ದಿನಕ್ಕೆ ಮಾಡುತ್ತಾರೆ. ಗಂಡು ಮಕ್ಕಳಿಗೆ ಜವಳ ಕಾರ್ಯವನ್ನು, ಹೆಣ್ಣು ಮಕ್ಕಳಿಗೆ ‘ಮೈ ನೆರೆಯುವ’ ಕಾರ್ಯವನ್ನು (ಋತುಮತಿಯಾದಾಗ) ಮಾಡುತ್ತಾರೆ. ಗಂಡು/ಹೆಣ್ಣು ಮಕ್ಕಳಿಗೆ ಲಿಂಗದೀಕ್ಷಾ ಕಾರ್ಯವನ್ನು ಮಾಡಿಸುತ್ತಾರೆ. ಸತ್ತವರನ್ನು ಕೂತ ಭಂಗಿಯಲ್ಲಿ ಹೂಳುತ್ತಾರೆ. ಪ್ರತಿವರ್ಷವೂ ಹಿರಿಯರ ಪೂಜೆ ಮಾಡುತ್ತಾರೆ. ಕೆಲವರಿಗೆ ಭೂಮಿಯಿದ್ದು ಅವರು ವ್ಯವಸಾಯ ಮಾಡುವುದರಲ್ಲಿ ನಿರತರಾಗಿದ್ದಾರೆ. ಪಟ್ಟಣಗಳಲ್ಲಿ ‘ಕಟಿಂಗ್ ಸಲೂನ್‌’ ಗಳನ್ನು ನಡಸುತ್ತಿದ್ದಾರೆ. ಇವರ ಜಾತಿಯ ಸಂಘಟನೆ ‘ಶ್ರೀ ವೀರಶೈವ ಹಡಪದ ಅಪ್ಪಣ್ಣ ಸೇವಾ ಸಮಾಜ ಸಂಘ’ ಇದು ಈ ಸಮುದಾಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಜಂಗಮರು ಇವರು ಪುರೋಹಿತರು. ಗಂಡು ಹಾಗೂ ಹೆಣ್ಣು ಮಕ್ಕಳೆಲ್ಲ ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಾರೆ. ಆಧುನಿಕ ಶಿಕ್ಷಣದ ಪದ್ಧತಿ, ಹಾಗೂ ಇತರೆ ಆಧುನಿಕ ಸಾಮಾಜಿಕ ವ್ಯವಸ್ಥೆಗಳನ್ನು ಉಪಯೋಗಿಸಿಕೊಂಡು ಅಭಿವೃದ್ಧಿಯನ್ನು ಸಾಧಿಸಲು ಪ್ರಯತ್ನಿಸುತ್ತಿದ್ದಾರೆ.

 

ಲಿಂಗಾಯತ : ಹೂಗಾರ

ಹೂಗಾರರು ಹೂ ಮಾರುವವರು ಕಟ್ಟುವವರು ಹಾಗೂ ಹೂವಿನ ಜೊತೆ ಸಾಂಪ್ರದಾಯಿಕ ಸಂಬಂಧ ಇರಿಸಿಕೊಂಡ ಒಂದು ಸಮುದಾಯವಾಗಿದೆ. ಇವರು ಲಿಂಗಾಯತರಲ್ಲಿ ಒಂದು ಉಪಗುಂಪಿನವರೆಂದು ಹೇಳಲಾಗಿದೆ. ಇವರನ್ನು ಜೀರ ಹಾಗೂ ಪೂಜಾರ ಎಂದೂ ಕರೆಯಲಾಗುತ್ತದೆ. ಒಂದು ದಂತಕಥೆ ಪ್ರಕಾರ, ಮೇರು ಪರ್ವತವನ್ನು ಕಡೆಯುವಾಗ ಸಮುದ್ರದಲ್ಲಿ ಭಯಂಕರವಾದ ಬಿರುಗಾಳಿ ಏಳುತ್ತದೆ. ಅದನ್ನು ಶಿವ ತನ್ನ ಅಂಗೈಯಲ್ಲಿ ಹಿಡಿದುಕೊಳ್ಳುತ್ತಾನೆ. ಅದರಲ್ಲಿ ಶಿವನಿಗೆ ಒಂದು ಮನುಷ್ಯಾಕೃತಿ ಕಾಣಿಸುತ್ತದೆ. ಅವನು ಬಿರುಗಾಳಿಯಲ್ಲೂ ಹೂಗಳನ್ನು ಕೊಡಲೆಂದು ಕಳಿಸಿ ಕೊಡುತ್ತಾನೆ. ಈಗಿರುವ ಹೂಗಾರರು ಪುಷ್ಪದತ್ತ ವಂಶದವರೆಂದು ಪುರಾಣವು ಹೇಳುತ್ತದೆ.

ಇವರು ಮುಖ್ಯವಾಗಿ ಬೆಳಗಾವಿ, ಬಳ್ಳಾರಿ, ಬೀದರ್, ಬಿಜಾಪುರ, ಬಾಗಲಕೋಟೆ, ಧಾರವಾಡ, ದಾವಣಗೆರೆ, ಹಾವೇರಿ, ಗದಗ, ಕೊಪ್ಪಳ ಮತ್ತು ಗುಲ್ಬರ್ಗಾ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರು ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಹಿಂದೆ ಇವರಲ್ಲಿ ಪಿತೃಮೂಲದ ಬಳ್ಳಿಗಳು ಅಸ್ತಿತ್ವದಲ್ಲಿದ್ದವು. ಮದುವೆಯ ಕಾರ್ಯಗಳಲ್ಲಿ ಪಿತೃಮೂಲದ ನಾಲ್ಕು ತಲೆಮಾರುಗಳವರೆಗೆ ಅದೇ ಕುಲದೊಂದಿಗೆ ವಿವಾಹ ಸಂಬಂಧಗಳು ಸಾಧ್ಯವಿಲ್ಲ. ಮನೆತನದ ಹೆಸರುಗಳನ್ನು ಹೂಗಾರ ಎಂದೆ ಬಳಸುತ್ತಾರೆ. ಸೋದರ ಸಂಬಂಧಿ ವಿವಾಹಕ್ಕೆ ಅವಕಾಶವಿದೆ. ವಿಧವೆ, ವಿಧುರ, ವಿಚ್ಛೇದಿತರ ಮದುವೆಗೆ ಅವಕಾಶವಿದೆ.

ಇವರ ಸಾಂಪ್ರದಾಯಿಕ ವೃತ್ತಿಯೆಂದರೆ ಬಾಸಿಂಗ ತಯಾರಿಸುವುದು, ಹಾರ ತಯಾರಿಸುವುದು ಹಾಗೂ ಬಿಲ್ವ ಹೂಗಳನ್ನು ದೇವಸ್ಥಾನಕ್ಕೆ ಮತ್ತು ಇತರೆ ಸಮುದಾಯಗಳಿಗೆ ಕೊಡುವುದು. ಇವರಲ್ಲಿ ಕೆಲವರು ಭೂಮಿಯನ್ನು ಹೊಂದಿದ್ದು, ವ್ಯವಸಾಯದಲ್ಲಿ ತೊಡಗಿದ್ದಾರೆ.  ಇವರು ವ್ಯವಸಾಯದ ಕೂಲಿಗಳಾಗಿಯೂ ದುಡಿಯುತ್ತಿದ್ದಾರೆ. ಕೆಲವರು ಸರ್ಕಾರಿ ಹಾಗೂ  ಖಾಸಗಿ ಸಂಸ್ಥೆಗಳಲ್ಲಿ ನೌಕರಿಯಲ್ಲಿ ಇದ್ದಾರೆ. ಆಧುನಿಕ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಪ್ರೋತ್ಸಾಹವಿಲ್ಲ. ಇವರು ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದಿದ್ದಾರೆ.

ನೋಡಿ:

Bhat, H.K., 1975. ‘A Formal Analysis of Lingayat Kinship Terminology’,  Bulletin of the Anthropological Survey of India, Vol. 24, Nos. 1-2, pp. 24-29.

Bradford, N.J., 1976. Affine and Devotee – Study of the Lingayat sect of North Karnataka. Ph.D.Thesis University of Sucssex.

Bradford, N.J., 1985. ‘Marriage Customs and Socio-economic Polarisation Amongst Lingayats’, Contributions to In-dian Sociology, Vol. 19, No. (2), NS.269-302

Bradford, N.J.(n.d.) ‘The Indian Renouncer, Structure and Trasformation in The Lingayat Community In Indian Religion‘, R.Burghart and A.Cantlie (eds), Curzon Press, London

Chekki, D.A., 1968. ‘Mate Selection, Age at Marriage and Propinquity among the Lingayats of India’, Journal of Marriage and Family,  30(4), 707-711

Chekki, D.A., 1968. ‘Some Aspects pf Marriage among the Lingayats’, Main in India, Vol. 48

Ishwaran, K., 1983. ‘Religion and Society among the Lingayats of South India’, Leiden Brill : Vikas, New Delhi

Mc Cormaci, 1963. ‘Lingayat as a Sect’, The Journal of Royal Anthropological Institute,  93(1)

Pillai, S.A., 1973. ‘Renaisance of Veerasaivas in Kerala’,  A paper presented in the 19th Session of All India Veerasaiva Mahasabha, Bangalore.

Tipperudraswamy, H.1900. ‘Virasaivism’, In : South Indian Studies’,  Nayak, H.M. and B.R.Gopal (ed), : Geetha Book House, Mysore

Venugopal C.N. 1980. ‘Some Aspects of Lingayat Ideology and Monastic Organisation’, The Eastern Anthropologist,  33(4)