ಶೆಟ್ಟಿ ಅಥವಾ ಕೋಮಟಿಗಳೆಂದು ಪರಿಚಿತವಾಗಿರುವ ವೈಶ್ಯರು, ತುಪ್ಪದಕೋಮಟಿ ಮತ್ತು ಎಣ್ಣೆ  ಕೋಮಟಿಗಳೆಂಬ ಎರಡು ಉಪಪಂಗಡಗಳನ್ನು ಹೊಂದಿದ್ದಾರೆ. ಐಯ್ಯರ್ (೧೯೩೦) ಬರೆಯುವಂತೆ ಕೋಮಟಿಗಳು ತಾವು ಪ್ರಾಚೀನ ವೈಶ್ಯ ಪಂಗಡದ ಪ್ರತಿನಿಧಿಗಳೆಂದು ಹೇಳುತ್ತಾರೆ. ಇವರು ಸಾಮಾನ್ಯವಾಗಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಇವರಲ್ಲಿ ಋಷಿಗಳ ಹೆಸರಿನಲ್ಲಿ ನೂರ ಎರಡಕ್ಕೂ ಹೆಚ್ಚಿನ ಗೋತ್ರಗಳು ಕಂಡುಬರುತ್ತವೆ. ಅವುಗಳಲ್ಲಿ ಕೆಲವನ್ನು ಇಲ್ಲಿ ಗುರುತಿಸಲಾಗಿದೆ. ಪ್ರಭಾತ ಮಹರ್ಷಿ, ಪ್ರಭಾತಸ, ಮಾಂಡವ್ಯ ಮಹರ್ಷಿ ಅಂಗೀರಸ ಮಹರ್ಷಿ, ಗೋಪಕ ಮಹರ್ಷಿ, ಪೂತಿಮಾಷ ಮಹರ್ಷಿ, ಶ್ರೀ ವತ್ಸಮಹಾಮನಿ, ಕಣ್ಣಾಯ ಮಹರ್ಷಿ, ಕಂದರ್ಪ ಮಹರ್ಷಿ, ದಾಲುಭ್ಯ ಮಹರ್ಷಿ, ದೇವಲ್ಕ್ಯ ಮಹರ್ಷಿ, ಮೈತ್ರೇಯ ಮಹರ್ಷಿ, ಸನಕ ಮಹಾಮುನಿ, ವಾಮದೇವ ಮಹರ್ಷಿ, ಕಶ್ಯಪ ಮಹರ್ಷಿ, ಸರತ್ಕಾರು ಮುನಿ, ಮೌದ್ಗಲ್ಯಮುನಿ, ಮೌದ್ಗಲ್ಯಸ, ಕರ್ಣಮುನಿ, ಧೌಮಮಹರ್ಷಿ ಹೀಗೆ ಅನೇಕ ಗೊತ್ರ ಇವರಲ್ಲಿ ಗುರುತಿಸಬಹುದು. ಇತ್ತೀಚೆಗೆ ಇವರು ಆರ್ಯವೈಶ್ಯರೆಂದು  ಕರೆದುಕೊಳ್ಳುತ್ತಾರೆ. ಈ ಸಮುದಾಯವು ಪಿತೃನಡವಳಿಯ ಹೊರ ಬಾಂಧವ್ಯದ ಗೋತ್ರಗಳನ್ನು ಹೊಂದಿದೆ. ಸೋದರಮಾವನ ಮಗಳು ಮತ್ತು ಅಕ್ಕನ ಮಗಳೊಂದಿಗೆ ವಿವಾಹಕ್ಕೆ ಸಮ್ಮತಿ ಇದೆ. ಅವಿಭಕ್ತ ಕುಟುಂಬ ಮಾದರಿಗಳು ಇವರಲ್ಲಿ ಹೆಚ್ಚಿನ ಪ್ರಮಾಣದಲ್ಲಿವೆ. ಇವರಲ್ಲಿ ಕೆಲವರು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ನೌಕರಿ, ಬ್ಯಾಂಕ್, ವ್ಯಾಪಾರ, ಸ್ವಯಂ-ಉದ್ಯೋಗ, ಸಣ್ಣ ಹಾಗೂ ದೊಡ್ಡ ಪ್ರಮಾಣದ ಉದ್ದಿಮೆಗಳನ್ನು ನಡೆಸುವುದರಲ್ಲಿ ನಿರತರಾಗಿದ್ದಾರೆ. ತಮ್ಮ ಸಮುದಾಯದ ಅಭಿವೃದ್ಧಿಗಾಗಿ ‘ಅಖಿಲ ಭಾರತ ವೈಶ್ಯ ಸಂಘಟನೆ’ಯನ್ನು ರಾಜ್ಯ, ಜಿಲ್ಲೆ ಹಾಗೂ ತಾಲೂಕು ಮಟ್ಟದ ಸಂಘಟನೆಯನ್ನು ಸಹ ಹೊಂದಿದ್ದಾರೆ. ಇವರು ನಾಗ, ವಿಷ್ಣು, ನಾರಾಯಣ, ಕನ್ನಿಕಾಪರಮೇಶ್ವರಿ ದೈವಗಳನ್ನು ಪೂಜಿಸುತ್ತಾರೆ. ಆಧುನಿಕ ಶಿಕ್ಷಣದ ಬಗ್ಗೆ ಆಸಕ್ತಿ ಇರುವ ಈ ಸಮುದಾಯದ ಜನರ ಎಲ್ಲಾ ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಹಾಗೂ ಅಭಿವೃದ್ಧಿ ಕಾರ್ಯಕ್ರಮಗಳ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿದ್ದಾರೆ.

ನೋಡಿ:

Gupta, K.C.(ed), 1988. Vaishyas in India,  All India Vaisya Samaja, Hyderabad.

Ouden,. J.H.B.Den., 1970. ‘The Komutti Chettiyar : Position and Change of Position of a Merchant Caste in a South Indian Village’,  Tropical Man,  2:45-49

Owners, R.L.and A.Nandy., 1977. The New Vaisyas, Allied, Bombay.

Pamani, P.S., 1983. Arya Vaisya Marabum Kula Cadandukalum, Manimekalai Patippagam, Paramkudi

Vasan M.S., 1987. Varalarril Vaishyar,  Vaiggi Achagam, Madurai