ಸಾತನಿಯರನ್ನು ಚಟ್ಟದ ಶ್ರೀವೈಷ್ಣವ, ಹಾಗೂ ಸಾತ್ವಿಕ ವೈಷ್ಣವರೆಂದು ಇವರನ್ನು ಕರೆಯುತ್ತಾರೆ. ಇವರು ಬೆಂಗಳೂರು, ತುಮಕೂರು, ಮೈಸೂರು, ಹಾಸನ, ಮಂಡ್ಯ ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಇವರು ಬಳಸುತ್ತಾರೆ. ಇವರಲ್ಲಿ ಪಿತೃಪ್ರಧಾನ ಮಾತನಾಡಿ ಕನ್ನಡ ಲಿಪಿಯನ್ನು ಇವರು ಬಳಸುತ್ತಾರೆ. ಇವರಲ್ಲಿ ಪಿತೃಪ್ರಧಾನ ಕುಟುಂಬವನ್ನಾಧರಿಸಿದ ಬಳ್ಳಿಗಳಿವೆ. ಇವುಗಳ ನಡುವೆ ವಿವಾಹ ಸಂಬಂಧಗಳು ಏರ್ಪಡುತ್ತವೆ. ತಂದೆಯ ನಂತರ ಹಿರಿಯ ಮಗನು  ಮನೆಯ ವಾರಸುದಾರನಾಗುತ್ತಾನೆ. ಮದುವೆಯ ಆಚರಣೆಗಳಲ್ಲಿ ನಿಶ್ಚಿತಾರ್ಥ, ವರನ ಕಡೆಯರನ್ನು ಸ್ವಾಗತಿಸುವುದು, ಹಾರ ಬದಲಾಯಿಸುವುದು, ತಾಳಿ ಕಟ್ಟುವುದು, ಇತ್ಯಾದಿ ಮುಖ್ಯ. ಸಾತನಿಯಲ್ಲಿ ಜನನ ಸೂತಕವು ಒಂಭತ್ತು ದಿನಗಳವರೆಗಿರುತ್ತದೆ. ನಾಮಕರಣವನ್ನು ಹತ್ತನೇ ದಿನದಂದು ಮಾಡುತ್ತಾರೆ. ಋತುಮತಿಯಾದ ಹುಡುಗಿಯರಿಗೆ ಒಂಬತ್ತು ದಿನಗಳ ನಂತರ ಶುದ್ಧೀಕರಣ ಕಾರ್ಯಮಾಡುತ್ತಾರೆ. ಇವರು ಶವವನ್ನು ಸುಡುತ್ತಾರೆ, ಸಾವಿನ ಸೂತಕವು ಹನ್ನೊಂದು ದಿನಗಳವರೆಗೆ ಇರುತ್ತದೆ. ಪ್ರತಿವರ್ಷ ಹಿರಿಯರ ಪೂಜೆಯನ್ನು ಮಾಡುತ್ತಾರೆ. ಇವರ ಸಾಂಪ್ರದಾಯಿಕ ವೃತ್ತಿಯೆಂದರೆ ದೇವಸ್ಥಾನದಲ್ಲಿ ಇತರ ಸೇವೆಗಳನ್ನು ಮಾಡುವುದು. ಈಗಲೂ ಸಹ ಇವರು ತಮ್ಮ ಸಾಂಪ್ರದಾಯಿಕ ವೃತ್ತಿಯನ್ನೇ ಕೆಲವರು ಮುಂದುವರೆಸುತ್ತಿದ್ದಾರೆ. ಇವರ‍ಲ್ಲಿ ಕೆಲವರು ಆರ್ಯುವೇಧ ಔಷಧ ಪ್ರವೀಣರಾಗಿದ್ದಾರೆ. ಇವರು ಪೂಜಿಸುವ ಮುಖ್ಯ ದೇವತೆಗಳೆಂದರೆ ಕೃಷ್ಣ, ಶಿವ ಹಾಗು ವೆಂಕಟೇಶ್ವರ. ಜೀವನದ ಎಲ್ಲ ಧಾರ್ಮಿಕ ಕಾರ್ಯಗಳನ್ನು ನೆರವೇರಿಸಲು ಇವರದೇ ಜಾತಿಯ ವಿಶೇಷ ಪೂಜಾರಿಗಳಿರುತ್ತಾರೆ. ಇವರಲ್ಲಿ ಕೆಲವರು ವಿಗ್ರಹಗಳನ್ನು ಕೆತ್ತುವ ಕುಸುರಿಕಲೆಯಲ್ಲಿ ಪ್ರವೀಣರಿದ್ದಾರೆ. ಇವರು ಆಧುನಿಕ ಸಾಮಾಜಿಕ ವ್ಯವಸ್ಥೆಯ ಅಭಿವೃದ್ಧಿಗಳ ಸೌಲಭ್ಯ ಹಾಗೂ ಯೋಜನೆಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ.