ಸಾಪಲ್ಯರು ಗಾಣಿಗರಿಗೆ ಪರ್ಯಾಯವಾಗಿ ತಮಿಳುನಾಡು ಪ್ರದೇಶದಲ್ಲಿ ಕಂಡುಬರುವ ಒಂದು ಸಮುದಾಯವಾಗಿದೆ. ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ತುಳು ಇವರ ಮಾತೃಭಾಷೆಯಾದರೂ, ವ್ಯಾವಹಾರಿಕವಾಗಿ ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರು  ಒಂಗೇರಾ, ಸಲ್ಯಾನ, ಕುಂದಾಕ, ಮಂದಾರ, ಉಪ್ಪೆನ, ಸರಿಯನ, ಪುತ್ರನ ಇತ್ಯಾದಿ ಹೊರಬಾಂಧವ್ಯ ವಿವಾಹದ ಬಳ್ಳಿಗಳನ್ನು ಹೊಂದಿದ್ದಾರೆ. ಸಾಮಾನ್ಯವಾಗಿ ಬೇರೆ ಬಳ್ಳಿಯವರು ಉಪ್ಪೆನ ಕುಲದ ಹೆಣ್ಣು ಮಕ್ಕಳನ್ನು ವಿವಾಹವಾಗುವುದಿಲ್ಲ. ಏಕೆಂದರೆ ಉಪ್ಪೆನ ಹೆಣ್ಣುಮಕ್ಕಳನ್ನು ವಿವಾಹವಾಗುವುದರಿಂದ ಐಶ್ವರ್ಯವು ಕರಗಬಹುದೆಂಬ ಮೂಡ ನಂಬಿಕೆ ಇದೆ. ಆದರೆ ಇವರು ಬೇರೆ ಮೊಗವೀರರ ಹೆಣ್ಣು ಮಕ್ಕಳನ್ನು ವಿವಾಹವಾಗುತ್ತಾದರೂ, ತಮ್ಮ ಹೆಣ್ಣು ಮಕ್ಕಳನ್ನು ಅವರಿಗೆ ಕೊಡುವುದಿಲ್ಲ. ಮೊಗವೀರರೊಂದಿಗೆ ಅತಿ ಹೆಚ್ಚಿನ ಅಂತರ್ ಸಮುದಾಯದ ವಿವಾಹಗಳು ವರಿದಯಾಗಿವೆ. ಸೋದರತ್ತೆ, ಸೋದರಮಾವನ ಮಗಳೊಂದಿಗೆ ವಿವಾಹಕ್ಕೆ ಅವಕಾಶವಿದೆ. ಸಾಪಲ್ಯರಲ್ಲಿ ವಿಧವೆ, ವಿದುರರು ಮತ್ತು ವಿಚ್ಛೇದಿತರು ವಿವಾಹವಾಗಬಹುದು. ಮಾತೃವಂಶೀಯ ನಡವಳಿಯ ಪ್ರಕಾರ ಸೋದರಿಯ ಮಗನು ಮನೆಯ ಉತ್ತರಾಧಿಯಾಗಬಹುದು.

ವ್ಯವಸಾಯ, ಪ್ರಾಣಿ ಸಾಕಾಣಿಕೆ ಮತ್ತು ಗೃಹಕತ್ಯಗಳ ಜೊತೆಗೆ ಹೆಂಗಸರು ಬೇರೆ ಬೇರೆ ಆರ್ಥಿಕ ಚಟುವಟಿಕೆಗಳಲ್ಲೂ ಭಾಗವಹಿಸುತ್ತಾರೆ. ವ್ಯವಸಾಯ ಮತ್ತು ಶ್ರಮಗೂಲಿಗಳಾಗಿ ಕೆಲಸಮಾಡುವುದು ಇವರ ಮುಖ್ಯ ವೃತ್ತಿಗಳಾಗಿವೆ. ಕೆಲವರು ವ್ಯಾಪಾರ, ಸರ್ಕಾರಿ ಸಂಸ್ಥೆಗಳಲ್ಲಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿ ಮತ್ತು ಬೀಡಿ ಸುತ್ತುವಂತಹ ಸ್ವಯಂ – ಉದ್ಯೋಗಗಳನ್ನು ಮಾಡುತ್ತಾರೆ. ಇವರ ಪಾರಂಪರಿಕ ಉದ್ಯೋಗ ಎಣ್ಣೆ ತೆಗೆಯುವುದು ಮತ್ತು ದೇಗುಲಗಳಲ್ಲಿ ಸಂಗೀತ ನಡೆಸುವುದು. ಇವರಲ್ಲಿ ಅನುವಂಶೀಯ ನಾಯಕನಾದ ‘ಗುರಿಕಾರ’ನು ಆಂತರಿಕ ಜಗಳ ನಿಬಾಯಿಸುತ್ತಾನೆ. ಇವರು ಪಂಜುರ್ಲಿ, ಕಲ್ಲುರ್ಟಿ ಇತ್ಯಾದಿ ಭೂತಗಳನ್ನು ಪೂಜಿಸುತ್ತಾರೆ. ಗ್ರಾಮ ಹಾಗೂ ಪ್ರಾದೇಶಿಕ ದೈವಗಳಾದ ಸೋಮನಾಥದೇವಿ, ಈಶ್ವರ ಮತ್ತು ಮಂಜುನಾಥನನ್ನೂ ಪೂಜಿಸುತ್ತಾರೆ. ಇವರಲ್ಲಿ ಧಾರ್ಮಿಕ  ವಿಶೇಷಜ್ಞರು ಬ್ರಾಹ್ಮಣ ಸಮುದಾಯದವರಾಗಿರುತ್ತಾರೆ. ಹಬ್ಬಗಳಲ್ಲಿ ಸಂಗೀತವನ್ನು ನಡೆಸುವ ಮೂಲಕ, ಧಾರ್ಮಿಕ ಆಚರಣೆಗಳಲ್ಲಿ ಸಾಪಲ್ಯನು ಗಮನಾರ್ಹವಾದ ಪಾತ್ರವನ್ನು ನಿರ್ವಹಿಸುತ್ತಾರೆ. ಇವರ ರಾಜಕೀಯ ನಾಯಕತ್ವವು ಗ್ರಾಮಗಳಿಗೆ ಸೀಮಿತವಾಗಿದೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಇವರು ಹಿಂದುಳಿದ್ದಿದ್ದಾರೆ.