ಸಿಕ್ಕಲಿಗರನ್ನು ಸಿಕ್ಕಲಿಗಾರ ಅಥವಾ ಚಿಕ್ಕಲಿಗರು ಎಂದು ವಿವಿಧ ರೀತಿಯಲ್ಲಿ ಕರೆಯುತ್ತಾರೆ. ಇವರು ಗುಜರಾತಿನಿಂದ ಈಗ ಇರುವ ಸ್ಥಳಕ್ಕೆ ವಲಸೆ ಬಂದವರೆಂಬುದು ಅವರ ಮೌಖಿಕ ಪರಂಪರೆಯಿಂದ ತಿಳಿಯಬಹುದು. ಎಂಥೋವನ್(೧೯೨೨)ಪ್ರಕಾರ ಸಿಕ್ಕಲಿಗರು, ದಖ್ಖನ್ ಮತ್ತು ಕರ್ನಾಟಕದ ಎಲ್ಲೆಡೆಗಳಲ್ಲೂ ಅಲ್ಪ ಸಂಖ್ಯೆಯಲ್ಲಿ ಕಂಡುಬರುತ್ತಾರೆ. ಇವರು ಮತ್ತು ಲೋಹಾರರು ಔರಂಗಜೇಬನ ಕಾಲದಲ್ಲಿ ಮತಾಂತರಗೊಂಡವರ ಪ್ರತಿನಿಧಿಗಳೆಂದು ಹೇಳಲಾಗಿದೆ. ಇವರು ಧಾರವಾಡ, ಬೆಳಗಾವಿ, ಬಿಜಾಪುರ, ಬಾಗಲಕೊಟ, ಬಳ್ಳಾರಿ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆ‌‌ಚ್ಚಾಗಿ ಕಂಡುಬರುತ್ತಾರೆ. ಇವರು ಗುಜರಾತಿನ ಒಂದು ಪ್ರಾಂತ್ಯ ಭಾಷೆಯನ್ನು ಮನೆಯಲ್ಲಿ ಬಳಸುತ್ತಾರೆ ಹಾಗೂ ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಈ ಸಮುದಾಯವು ಸಂಗಳರು, ವಜ್ಜಳರು, ಬಿಳಾಲರು, ಪಂಚಾಳರು ಮತ್ತು ಕನಾನರೆಂಬ ಐದು ಪಿತೃ ನಡವಳಿಯ ಹೊರಬಾಂಧವ್ಯದ ವಿವಾಹ ಬೆಡಗುಗಳನ್ನು ಹೊಂದಿದೆ. ಸೋದರತ್ತೆ, ಸೋದರಮಾವ ಮತ್ತು ಅಕ್ಕನ ಮಗಳೊಂದಿಗೆ ವಿವಾಹಕ್ಕೆ ಅನುಮತಿ ಇದೆ. ಸಾಂಪ್ರದಾಯಿಕ ವಧುದಕ್ಷಣೆ ವಿವಾಹದಲ್ಲಿ ಕೊಡಲಾಗುತ್ತದೆ. ತಂದೆಯ ನಂತರ ಹಿರಿಯ ಮಗನು ಕುಟುಂಬದ ಉತ್ತರಾಧಿಕಾರಿಯಾಗುತ್ತಾನೆ. ಸ್ತ್ರೀಯರು ಸಾಂಪ್ರದಾಯಿಕ, ಧಾರ್ಮಿಕ ಹಾಗೂ ಆರ್ಥಿಕ ಚಟುವಟಿಕೆಗಳಲ್ಲಿಯೂ ಭಾಗವಹಿಸುತ್ತಾರೆ.

ಇವರು ಪಾರಂಪರಿಕವಾಗಿ ಖಡ್ಗಗಳನ್ನು ತಯಾರಿಸಿ ಹರಿತಗೊಳಿಸುತ್ತಿದ್ದರು. ಆದರೆ ಖಡ್ಗಗಳು ಅದೃಶ್ಯವಾದ ನಂತರ ಇವರು ಭಿಕ್ಷೆ ಬೇಡುವುದು ಮತ್ತು ಇಚಲು ಗರಿಗಳ ಚಾಪೆಗಳನ್ನು ಮಾಡಲು ಪ್ರಾರಂಭಿಸಿದರು. ಇವರಲ್ಲಿ ಹೆಚ್ಚಿನವರು ಶ್ರಮಗೂಲಿಗಳು. ಈ ಸಮುದಾಯವು ತನ್ನ ಅಭಿವೃದ್ಧಿಗಾಗಿ ಶ್ರಮಿಸಲು ‘ಸಿಕ್ಕಲಿಗರ ಸಂಘವನ್ನು’ ಹೊಂದಿವೆ. ಇವರು ಕಾರೆವ್ವ, ದುರ್ಗಮ್ಮ, ಎಲ್ಲಮ್ಮ, ಮೈಲಾರ ಇತ್ಯಾದಿ ದೇವರುಗಳನ್ನು ಪೂಜಿಸುತ್ತಾರೆ. ಹಿರಿಯರು ಜ್ಞಾನವೃದ್ಧರು ಎಂದು ಭಾವಿಸಿ ಅವರು ಜೀವನದ ಧಾರ್ಮಿಕ ವಿಧಿವಿಧಾನಗಳನ್ನು ಆಚರಿಸುತ್ತಾರೆ. ಈ ಸಮುದಾಯದಲ್ಲಿ ಕೆಲವರು ಉನ್ನತ ಹುದ್ದೆಗಳಲ್ಲಿರುವ ಸದಸ್ಯರು ಇದ್ದಾರೆ. ಇವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಹಿಂದುಳಿದ್ದಿದ್ದಾರೆ.