ಸಿದ್ದಿಗಳು, ಉತ್ತರಕನ್ನಡದ ಕಾಡುಗಳಲ್ಲಿ ಬೀಡುಬಿಟ್ಟ ಆಫ್ರಿಕನ್ ಮೂಲದ ಜನಾಂಗ ಎಂದು ಹೇಳಲಾಗುತ್ತದೆ. ಆದರೆ ಆಫ್ರಿಕಾದ ಯಾವ ಬುಡಕಟ್ಟಿಗೆ ಸೇರಿದವರು ಮತ್ತು ಇವರನ್ನು ಸಿದ್ದಿಗಳು ಎಂದು ಕರೆಯಲು ಕಾರಣವೇನು, ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪೋರ್ಚುಗೀಸರು ಸಾಗಿಸಿದ ಬಹುಸಂಖ್ಯೆಯ ಗುಲಾಮರು ಈಗಿನ ತಾಂಜಾನಿಯಾಕ್ಕೆ ಸೇರಿದ ಪುಟ್ಟ ದ್ವೀಪವಾದ ಜಾಂಜಿಬಾರಿ ಪ್ರದೇಶದವರು ಆಗಿದ್ದಾರೆ. ಹೀಗೆ ಸಾಗಿಸಿದ ಹಲವು ಬುಡಕಟ್ಟುಗಳಲ್ಲಿ ಬನ್ಯಾಯ್‌ಅಥವಾ ಬನಾಬಿಯಾ ಎಂಬುದು ಒಂದು. ಜಾಂಬೇಸಿ ನದಿಯ ದಂಡೆಯಲ್ಲಿರುವ ಟೆಟೆ ಎಂಬ ಪ್ರದೇಶದಲ್ಲಿ ಶಿದಿಮಾಗಳು ಎಂದು ಕರೆಯಲ್ಪಡುತ್ತಿದ್ದ ಜನರು ಇದೇ ಬನ್ಯಾಯ್ ಪಂಗಡದವರು ಎಂದು ತಿಳಿದುಬರುತ್ತದೆ. ಈ ಬನ್ಯಾಯ್ ಅಥವಾ ಶಿದಿಮಾಗಳೆ ಸಿದ್ದಿಯರು ಎಂಬುದನ್ನು ಇನ್ನು ಹೆಚ್ಚಿನ ಅಧ್ಯಯನಗಳ ಮೂಲಕ ಖಚಿತಪಡಿಸಿಕೊಳ್ಳಬೇಕಾಗಿದೆ. ಈ ಸಂದರ್ಭದಲ್ಲಿ ಸಿದ್ದಿಯರ ಮೂಲ ಕುರಿತಂತೆ ಅಲ್ಲಲ್ಲಿ ಪ್ರಸ್ತಾಪಿಸಲಾಗಿರುವುದನ್ನು ನೋಡಬಹುದು.

ಸಯೀದ್ ಎಂಬ ಪದ ಕ್ರಮೇಣ ಸಿದ್ದಿಯೆಂದು ಬಳಕೆಯಲ್ಲಿ ಬಂದಿರಬೇಕು ಎಂದು ಕೆಲವರ ಅಭಿಪ್ರಾಯ. ಸಿದ್ದಿ ಜನರು ಆಫ್ರಿಕಾದ ನೀಗ್ರೊ ಬುಡಕಟ್ಟು ಜನಾಂಗದವರು. ಇವರನ್ನು ಸಿದ್ದಿ ಜನರು ಎಂದೇ ಐರೋಪ್ಯ ಲೇಖಕರು ಕರೆದಿದ್ದಾರೆ. ಸಿದ್ದಿ ಅಥವಾ ಕಾಫಿರ್ ಎಂದರೆ ಕೂಲಿಕಾರರು ಎಂದು ಸರ್ ಹರ್ಬಟ್ ರಿಸ್ಲೇ ಎಂಬ ವಿದ್ವಾಂಸರು ಅರ್ಥೈಸಿದ್ದಾರೆ. ಗುಲಾಮರೆಂದುಕೊಂಡು ಅರಬ್ಬರು, ಡಚ್ಚರು, ಪೋರ್ಚುಗೀಸರೂ ಹಿಂದಿನ ಕಾಲದಲ್ಲಿ ಸಿದ್ದಿ ಜನರನ್ನು ಭಾರತ ದೇಶಕ್ಕೆ ತಂದರು ಎಂದು ತಿಳಿದುಬರುತ್ತದೆ. ಇವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡುಬರುತ್ತಾರೆ.

ಸಿದ್ದಿ ಮಹಿಳೆ

ಸಿದ್ದಿ ಮಹಿಳೆ

ಸಿದ್ದಿಯರ ಸಾಮಾಜಿಕ ಜೀವನದ ಒಂದು ವೈಶಿಷ್ಟ್ಯ ಎಂದರೆ ಈ ಬುಡಕಟ್ಟಿನ ಜನರು ಮೂರು ಧರ್ಮಗಳಲ್ಲಿ ಹಂಚಿಹೋಗಿರುವುದು. ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮಗಳನ್ನು ಅನುಸರಿಸುತ್ತಿರುವ ಇವರು ಒಂದು ವಿಧದಲ್ಲಿ ವೈಶಿಷ್ಟ್ಯಪೂರ್ಣವಾದ ಸಾಮರಸ್ಯದ ಬದುಕು ಸಾಗಿಸುತ್ತಿದ್ದಾರೆ. ಆಶ್ಚರ್ಯದ ಸಂಗತಿ ಎಂದರೆ ಮೂರೂ ಧರ್ಮಗಳು ಒಂದೇ ಕುಟುಂಬದಲ್ಲಿ ಕಾಣಬಹುದು. ಇವರಲ್ಲಿ ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ ಪದ್ಧತಿ ಇದ್ದರೂ, ಮುಸ್ಲಿಂ ಸಿದ್ದಿಯರು ಹಿಂದೂ ಸಿದ್ಧಿಯರನ್ನು ಕ್ರಿಶ್ಚಿಯನ್ ಸಿದ್ಧಿಯರು ಹಿಂದೂ ಮುಸ್ಲಿಂಮರನ್ನು ಪರಸ್ಪರ ವಿವಾಹ ಮಾಡಿಕೊಳ್ಳುತ್ತಾರೆ. ಸೋದರಮಾವ, ಸೋದರತ್ತೆ ಅಕ್ಕನ ಮಗಳ ವಿವಾಹಗಳು ಹಿಂದೂ ಗುಂಪಿನಲ್ಲಿ ನಡೆಯುತ್ತದೆ. ವಧು ಮೌಲ್ಯವನ್ನು ಹಿಂದು ಮತ್ತು ಕ್ರಿಶ್ಚಿಯನರಲ್ಲಿ ನಗದು  ಹಾಗೂ ವಸ್ತುಗಳ ರೂಪದಲ್ಲಿ ನೀಡಿದರೆ, ಮುಸ್ಲಿಮರಲ್ಲಿ ಮೆಹರ್ ನೀಡುತ್ತಾರೆ. ವಿಧವೆ, ವಿಧುರ ಹಾಗೂ ವಿಚ್ಛೇದಿತರ ಪುನರ್ವಿವಾಹಗಳಿಗೆ ಅವಕಾಶವಿದೆ. ಆಸ್ತಿಯ ಹಕ್ಕನ್ನು ಎಲ್ಲಾ ಗಂಡು ಮಕ್ಕಳು ಸಮನಾಗಿ ಪಡೆಯುತ್ತಾರೆ.

ಈ ಸಮುದಾಯವು ಭೂಮಿರಹಿತವಾಗಿದೆ. ಕೆಲವರಿಗೆ ಮಾತ್ರ ಕೃಷಿ ಜಮೀನಿದೆ. ಬೇಟೆ, ಆಹಾರ ಸಂಗ್ರಹಣೆ, ಮೀನುಗಾರಿಕೆ, ಪಕ್ಷಿಗಳನ್ನು ಹಿಡಿಯುವುದು, ಪ್ರಾಣಿಸಾಗಾಣಿಕೆ, ಜೇನುಸಾಕಣೆ ಮತ್ತು ಶ್ರಮಗೂಲಿ ಇವರ ಇತರ ವೃತ್ತಿಗಳಾಗಿವೆ. ತಮ್ಮ ಜೀವನದ ಧಾರ್ಮಿಕ ವಿಧಿಗಳನ್ನು ನಡೆಸಲು ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತರು  ಕ್ರಮವಾಗಿ ಹವ್ಯಕ ಬ್ರಾಹ್ಮಣ, ಖಾಜಿ ಹಾಗೂ ಪಾದ್ರಿಯನ್ನು ಆಹ್ವಾನಿಸುತ್ತಾರೆ. ಹಿಂದೂ ಸಿದ್ದಿಗಳು ವೈಷ್ಣವ ತತ್ವದಿಂದ ಪ್ರಭಾವಿತರಾಗಿ ಅದನ್ನೇ ಅನುಸರಿಸಿದರೆ, ಮುಸ್ಲಿಂ ಸಿದ್ಧಿಗಳು ಸುನ್ನಿಯಿಂದ ಮತ್ತು ಕ್ರಿಶ್ಚಿಯನರು ಕ್ಯಾಥೋಲಿಕ್ ತತ್ವಗಳಿಂದ ಪ್ರಭಾವಿತರಾಗಿದ್ದಾರೆ. ತಮ್ಮ ತಮ್ಮ ಧರ್ಮದ ಹಬ್ಬಗಳನ್ನು ಆಚರಿಸುವುದರೊಂದಿಗೆ, ಇವರೆಲ್ಲ ತೆಂಗಿನ ಮರ ಮತ್ತು ಸಿದ್ಧಿ ಅಥವಾ ಕಾಫ್ರಿ ಎಂಬ ಭೂತಗಳನ್ನು ಪೂಜಿಸುತ್ತಾರೆ. ಆಧುನಿಕ ಶಿಕ್ಷಣದ ಬಗ್ಗೆ ಆಸಕ್ತಿ ತೋರಿಸುತ್ತಿದ್ದಾರೆ. ಬಾಲಕರು ಪ್ರಾಥಮಿಕ ಮಟ್ಟದವರೆಗೆ ಓದಿದರೂ ಆರ್ಥಿಕ ಕಾರಣದಿಂದ ಮಧ್ಯದಲ್ಲೇ ನಿಲ್ಲಿಸಿ ಬಿಡುತ್ತಾರೆ. ಬಾಲಕಿಯರು ಶಾಲೆಗಳಿಗೆ ಹೋಗುವುದೇ ಇಲ್ಲ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳು ಸ್ವಲ್ಪಮಟ್ಟಿಗೆ ಇವರನ್ನು ತಲುಪುತ್ತಿವೆ. ಇವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿ ಅತ್ಯಂತ ಶೋಚನೀಯವಾಗಿದೆ.

ನೋಡಿ:

ಪೂರ್ಣಚಂದ್ರ ತೇಜಸ್ವಿ ಕೆ.ಪಿ., ೧೯೯೦. ಅಲೆಮಾರಿ ಅಂಡಮಾನ್ ಮತ್ತು ಮಹಾನದಿ ನೈಲ್,  ಪರಿಸರ ಸಾಹಿತ್ಯ ಪ್ರಕಾಶನ, ಶಿವಮೊಗ್ಗ

ಬೋರಲಿಂಗಯ್ಯ. ಹಿ.ಚಿ. ೧೯೯೩. ಸಿದ್ದಿಯರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು

ನಾಯರ. ಜಿ.ಮ., ೧೯೮೮. ಉತ್ತರ ಕನ್ನಡ ಜನಪದ ಕಲೆ‘, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

ಚಂದ್ರಮತಿ ಸೋಂದಾ, ೧೯೮೬. ‘ಸಿದ್ದಿಗಳು’, ವೈಜಯಂತಿ , ಮೈಸೂರು, ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ.

ಭಟ್ಟ್. ವಿ.ಎನ್., ೧೯೯೮. ‘ಸಿದ್ದಿಗಳು’, ಕರ್ನಾಟಕ ಬುಡಕಟ್ಟುಗಳು  (ಸಂ). ಲಕ್ಕಪ್ಪಗೌಡ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ, ಬೆಂಗಳೂರು

Chakrabarty, Jyotirmoy., 1994. ‘Marriage Customs of the Siddis’, The Journal of the Anthropological Survey of India,  43(172), 17-23

Chakrabarty Jyotirmy and S.B.Nandi.,  1984. ‘The Siddis of Junagadh: Some Aspects of their Religious life’, Bulletin of the Department of Anthropology, vol.33

Heged, L.R., 1982. ‘Uttara Kannada Siddi Janaru’  (In Kannada), Bangalore : IBH Publications.

Palakashappa, T.C., 1976. Siddis of North Canara, Sterling, New Delhi

Roy Choudhury D., 1957. ‘Anthropometry of the Siddis – The Negroid Population of North Canara, India’, Bulletin of the Department of Anthropology,  6(1); 53-66

Trivedi R.K., 1961. Siddi : a Negroid Tribe of Gujarat’,  Ethnographic Survey of Gujarat.