ಸುಡುಗಾಡು ಸಿದ್ಧರನ್ನು ತೆಲುಗು, ಜಂಗಮ, ಬೇಡ ಜಂಗಮ, ಗೊಂಬೆಯಾಟದವರು, ಕಾಡುಪಾಪ, ಆದಿಕ ಸಿದ್ಧ ಮತ್ತು ಸಿದ್ಧರು ಎಂದು ಹಲವು ಹೆಸರುಗಳಿಂದ ಕರೆಯುತ್ತಾರೆ. ‘ಸುಡುಗಾಡು’ ಎಂದರೆ ಸ್ಮಶಾನ. ‘ಸಿದ್ಧ’ ಎಂದರೆ ರಹಸ್ಯ ಮಾಂತ್ರಿಕ ಶಕ್ತಿ ಪಡೆದುಕೊಂಡವರು ಎಂದೂ ಅರ್ಥ ಇದೆ. ಜೋಗಿಗಳಂತೆ ಇವರು ಸಂಚಾರಿ ಭಿಕ್ಷುಕರು. ಒಂದು ಕಾಲದಲ್ಲಿ ಸ್ಮಶಾನಗಳ ಮಾಲೀಕರಾದ ಇವರಿಗೆ, ಸತ್ತವರ ಬಟ್ಟೆಗಳನ್ನು ತೆಗೆದುಕೊಂಡು, ಹೂಳುವ ಪ್ರತಯೊಂದು ಶವಕ್ಕೂ ಶುಲ್ಕವನ್ನು ಪಡೆಯುತ್ತಿದ್ದ ಕುಳವಾಡಿಗಳು. ಥರ್ಸ್ಟನ್ (೧೯೦೯) ಅವರು ಅಲೆಮಾರಿ ಸಮುದಾಯಕ್ಕೆ ಸೇರಿದ ಇವರ ಜೋಳಿಗೆ ಕೇವಲ ಭಿಕ್ಷೆಗಾಗಿ ಅಲ್ಲ. ಅದು ಜಾದು ವಿದ್ಯೆಯ ಅಕ್ಷಯ ಭಂಡಾರ. ಅದರಲ್ಲಿ ಕವಡೆ, ಬೆನಕ, ಲಿಂಗ, ಕಲ್ಲು, ಮುಳ್ಳು, ಬಟ್ಟೆತುಂಡು, ಗಜುಗದಂತಹ ವಸ್ತುಗಳನ್ನು ಇರುವುದರೊಂದಿಗೆ ಕೈಯಲ್ಲಿ ಬೆತ್ತವಿರುತ್ತದೆ. ಹೆಸರೇ ಸೂಚಿಸುವಂತೆ ಇವರು ಸ್ಮಶಾನದಲ್ಲಿ ವಾಸಿಸುತ್ತಾ ಅಲ್ಲಿ ಅರವತ್ತನಾಲ್ಕು ವಿದ್ಯೆಗಳಲ್ಲಿ ಒಂದಾದ ಜಾದೂ ವಿದ್ಯೆಯನ್ನು ಕರಗತ ಮಾಡಿಕೊಂಡು ಅದನ್ನು ಮನರಂಜನೆಗಾಗಿ ಪ್ರತಿ ಮನೆ ಮುಂದೆ ಪ್ರದರ್ಶಿಸುತ್ತಾ ಹೊಟ್ಟೆ ಹೊರೆಯುತ್ತಾರೆ. ಎಂದು ಗುರಿತಿಸುತ್ತಾರೆ.

ಆದರೆ ಒಂದು ಐತಿಹ್ಯದ ಪ್ರಕಾರ “ಶಿವನು ತಪಸ್ಸು ಮಾಡುತ್ತಿರುವಾಗ ಆತನ ಸೇವೆಗಾಗಿ ಪಾರ್ವತಿಯು ನವಕೋಟಿ ಸಿದ್ಧರನ್ನು ಸೃಷ್ಟಿಸಿದಳಂತೆ. ಇನ್ನೊಂದು ಕಥೆ ಪ್ರಕಾರ “ಪ್ರಾಚೀನ ಕಾಲದಲ್ಲಿ ‘ಘೋರಕ್ಷ’ ನೆಂಬ ರಾಕ್ಷಸನು ಮಾಯಾವಿಯಾಗಿದ್ದನು. ಅನೇಕ ಸಿದ್ಧರನ್ನು ತನ್ನ ಮನೆಯ ಕಾವಲಿಗೆ ಇರಿಸಿಕೊಂಡಿದ್ದನಂತೆ. ಇವರ ಉಪಟಳದಿಂದ ಬೇಸತ್ತ ದೇವತೆಗಳು ಶಿವನಲ್ಲಿ ದೂರಿದಾಗ ಇವರ ಸಂಹಾರಕ್ಕಾಗಿ ರೇವಣಸಿದ್ಧಯ್ಯ ಶಿವ ಕಳುಹಿಸುತ್ತಾನೆ. ರೇವಣಸಿದ್ಧರು ಅವರನ್ನು ತಮ್ಮ ನೇತ್ರದಿಂದ ಸುಟ್ಟು ಭಸ್ಮ ಮಾಡಿ ಹಿಂದುರುಗಿ, ಹೋಗುವಾಗ, ಸ್ಮಶಾನದಲ್ಲಿ ಬೂದಿಯಾಗಿ ಬಿದ್ದ ಇವರನ್ನು ನೋಡಿ ಕರುಣೆ ಬಂದು, ಮರು ಜೀವದಾನ ಮಾಡಿ ‘ಸತ್ಯ ನೀತಿಯಿಂದ ನಡೆದು, ಧರ್ಮ, ಬೋಧಿಸಿ’ ಎಂದು ಹೇಳಿ ಹೋದರಂತೆ”. ಈ ಕಾರಣದಿಂದ ಸುಡುಗಾಡಿನಲ್ಲಿ ಜನಿಸಿದ್ದರಿಂದ ಸುಡುಗಾಡು ಸಿದ್ಧರೆಂದೂ ತಾವು ಶಿವಸಂಜಾತರೆಂದು ಕರೆದುಕೊಳ್ಳುತ್ತಾರೆ. ಇವರು ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ವಲಸೆ ಬಂದವರೆಂದು ಹೇಳಿಕೊಳ್ಳುತ್ತಾರೆ.

ಸಾಂಪ್ರದಾಯಿಕ ವೇಷದಲ್ಲಿ ಸುಡುಗಾಡು ಸಿದ್ಧ

ಸಾಂಪ್ರದಾಯಿಕ ವೇಷದಲ್ಲಿ ಸುಡುಗಾಡು ಸಿದ್ಧ

ಮಾಂತ್ರಿಕ ವಿದ್ಯೆಯಲ್ಲಿ ತೊಡಗಿರುವ ಸುಡುಗಾಡು ಸಿದ್ಧರು

ಮಾಂತ್ರಿಕ ವಿದ್ಯೆಯಲ್ಲಿ ತೊಡಗಿರುವ ಸುಡುಗಾಡು ಸಿದ್ಧರು

ಅಲೆ ಅಲೆಮಾರಿಗಳಾದ ಸಿದ್ಧರ ಮೂಲ (ಸ್ಥಳ) ಗ್ರಾಮಗಳು ಹಾಸನ, ಚಿಕ್ಕಮಗಳೂರು, ಧಾರವಾಡ, ಮೈಸೂರು, ರಾಯಚೂರು, ಗುಲ್ಬರ್ಗ ಜಿಲ್ಲೆಗಳಲ್ಲಿವೆ. ತೆಲುಗನ್ನು ಮನೆಯಲ್ಲಿ ಮತ್ತು ಸಂಬಂಧಿಗಳೊಡನೆ ಮಾತನಾಡಿದರೆ, ಕನ್ನಡವನ್ನು ಇತರರೊಡನೆ ಬಳಸುತ್ತಾರೆ. ಸುಡುಗಾಡು ಸಿದ್ಧರು ‘ಮಾರೆಪ್ಪನವರ’, ‘ಅಡಿಕೆ’, ‘ಪತ್ರದಾರಿ’, ‘ಪರದೇಶಿ’, ‘ಸಾಲಿ’, ‘ವಿಭೂತಿ’, ‘ಪೂಜಾರ’ , ಇತ್ಯಾದಿ ಸ್ಥಳ ಅಥವಾ ಉದ್ಯೋಗಸೂಚಕ ಉಪನಾಮಗಳನ್ನು ಬಳಸುತ್ತಾರೆ. ಸೋದರತ್ತೆ, ಸೋದರಮಾವ ಮತ್ತು ಅಕ್ಕನ ಮಗಳೊಡನೆ ವಿವಾಹಕ್ಕೆ ಸಮ್ಮತಿಯಿದೆ. ಇವರಲ್ಲಿ ಸ್ತ್ರೀಯರು ಆರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸಿ ಕುಟುಂಬದ ಆದಾಯಕ್ಕೆ ಸಹಾಯ ಮಾಡುತ್ತಾರೆ. ಸುಡುಗಾಡು ಸಿದ್ಧರು ಹಳ್ಳಿಗಳಲ್ಲಿ ಸುತ್ತಾಡಿ ತಮ್ಮ ದೇವರಾದ ಸಿದ್ಧಪ್ಪಾಜಿ ಹೆಸರಿನಲ್ಲಿ ಭಿಕ್ಷೆ  ಬೇಡುತ್ತಾರೆ. ವಿಶೇಷವಾಗಿ ಸುಗ್ಗಿಯ ಕಾಲದಲ್ಲಿ ಇವರು ಭಿಕ್ಷೆಗಾಗಿ ಹೆಚ್ಚು ಅಲೆದಾಡುತ್ತಾರೆ. ಕೆಲವೊಮ್ಮೆ ಭಿಕ್ಷೆಗಾಗಿ ಇವರು ಮುಳ್ಳು ಆವಿಗೆ ಮೇಲೆ ಜಾತ್ರೆ ಅಥವಾ ಮಾರುಕಟ್ಟೆ ಸ್ಥಳಗಳಲ್ಲಿ ನಿಂತು ಮುಂಬರುವ ಘಟನೆಗಳ ಬಗ್ಗೆ ಭವಿಷ್ಯ ನುಡಿಯುತ್ತಾರೆ. ಇವರಲ್ಲಿ ಕೆಲವು ಜನ ತಮ್ಮ ಹಿಂದಿನ ವೃತ್ತಿಯನ್ನು ಬಿಟ್ಟು ಕೃಷಿಯಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾರೆ. ಇವರ ಕುಲ ದೈವಗಳು ಸಿದ್ಧಪ್ಪ, ವೀರಭದ್ರ, ರಾಚಪ್ಪ, ದಾಸಪ್ಪ,ಮೈಲಾರ ದುರ್ಗವ್ವ, ಮಾರಿಯಮ್ಮ, ಗಂಗವ್ವ ಇತ್ಯಾದಿ. ಆಧುನಿಕ ಸಾಮಾಜಿಕ ವ್ಯವಸ್ಥೆಗಳ ಉಪಯೋಗವನ್ನು ಪಡೆದುಕೊಳ್ಳುವಲ್ಲಿ ಈ ಸಮುದಾಯದ ಜನರು ಹಿಂದೆ ಇದ್ದಾರೆ. ಇವರು ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ್ದಿದ್ದಾರೆ.

ನೋಡಿ:

ನೆಲ್ಲಿಸರ ಬಸವರಾಜು., ೧೯೮೪. ಸುಡುಗಾಡು ಸಿದ್ಧರು,  ಐ.ಬಿ.ಎಚ್. ಪ್ರಕಾಶನ, ಬೆಂಗಳೂರು

ಖಂಡೋಬ ಪಿ.ಕೆ., ೧೯೮೩. ಸುಡುಗಾಡು ಸಿದ್ಧರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

Havanur L.G., 1975. Karnataka Backward Class Commission Report, Govt. Press Bangalore.

Nirmal Kumar Bose., 1971. Tribal life in India,  National Book Trust; New Delhi