ಹಂದಿಜೋಗಿ, ಹಂದಿ ಸಾಕುವ ಒಂದು ಸಮುದಾಯ. ಇವರನ್ನು ಹಂದಿಗೊಲ್ಲ ಹಾಗೂ ಹಂದಿಚಿಕ್ಕ ಎಂದೂ ಕರೆಯುತ್ತಾರೆ. ಹಂದಿಜೋಗಿ ಅಥವಾ ಹಂದಿಚಿಕ್ಕರು ಮೊದಲು ಆಕಳು ಸಾಕುತ್ತಿದ್ದವರು ನಂತರ ಹಂದಿ ಸಾಕಾಣಿಕೆಯನ್ನು ಮಾಡುತ್ತಿದ್ದಾರೆ. ಹಂದಿ ಸಾಕಾಣಿಕೆ ಇವರ ಪಾರಂಪರಿಕ ವೃತ್ತಿ. ಹಂದಿಗಳನ್ನು ಮೇಯಿಸುತ್ತಾ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಜೋಗಿಗಳ ರೀತಿ ಹೋಗುತ್ತಿದ್ದರಿಂದ ಇವರಿಗೆ ಹಂದಿಜೋಗಿಗಳು ಎಂದು ಹೆಸರು ಬಂದಿರಬಹುದು. ಇವರು ಆಂಧ್ರಪ್ರದೇಶದಿಂದ  ಹಂದಿಗಳನ್ನು ಮೇಯಿಸಿಕೊಂಡು ವಲಸೆ ಬಂದು ಹಾಸನ, ಮಂಡ್ಯ, ಬೆಂಗಳೂರು, ತುಮಕೂರು, ಚಿಕ್ಕಮಗಳೂರು, ಜಿಲ್ಲೆಗಳಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಇದಕ್ಕೆ ಪೂರಕವಾಗುವಂತೆ ಇವರ ಮಾತೃಭಾಷೆ ತೆಲುಗು. ಇವರು ತಮ್ಮಲ್ಲಿ ತೆಲುಗು ಭಾಷೆ ಮಾತನಾಡಿಕೊಳ್ಳುತ್ತಾರೆ. ಆದರೆ ಬೇರೆಯವರೊಂದಿಗೆ ವ್ಯವಹರಿಸುವಾಗ ಕನ್ನಡವನ್ನು ಮಾತನಾಡುತ್ತಾರೆ.

ಇವರಲ್ಲಿ ಕೆಲವು ಹೊರಬಾಂಧವ್ಯ ಕುಲಗಳನ್ನು ಗುರುತಿಸಬಹುದು. ಬತಿಯಲು, ಸಿಂತಗುಂತಲು, ವಾರ್ಗುಂಡಲು, ವರಬಲ್ಲಲು, ವೇಲಮಗಲು ಇತ್ಯಾದಿ ಇವುಗಳು ಇವರ ಕುಲಗಳನ್ನು ಹಾಗೂ ವೃತ್ತಿಯನ್ನು ಸೂಚಿಸುತ್ತದೆ. ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ಹಾಗೂ ಕುಲದ ಮಟ್ಟದಲ್ಲಿ ಹೊರಬಾಂಧವ್ಯ ಇವರ ವಿವಾಹ ಪದ್ಧತಿಯಲ್ಲಿ ವಧುದಕ್ಷಿಣೆ ಕೊಡಬೇಕಾದದ್ದು ನಿಯಮ. ಮದುವೆಯ ಆಚರಣೆಗಳ ವಧುವಿನ ಮನೆಯಲ್ಲೆ ನಡೆಯುತ್ತದೆ. ಇವರು ಸತ್ತವರನ್ನು ಹೂಳಿ, ಹನ್ನೊಂದು ದಿನದ ಸೂತಕ ಕಳೆದ ಮೇಲೆ ‘ಪೆದ್ದದಿವಸಮು’ ಎಂಬ ಕಾರ್ಯವನ್ನು ಮಾಡುತ್ತಾರೆ. ಹಂದಿ ಸಾಕಾಣಿಕೆ ಹಾಗೂ ಭಿಕ್ಷೆ ಎತ್ತುವುದು ಇವರ ಸಾಂಪ್ರದಾಯಿಕ ಕಸುಬು. ಇವರಲ್ಲಿ ಕೆಲವರು ವ್ಯವಸಾಯದ ಕೂಲಿಗಳಾಗಿ ದುಡಿಯುತ್ತಿದ್ದಾರೆ. ‘ಕುಲ ಪಂಚಾಯಿತಿ’ಯು ಸಾಂಪ್ರದಾಯಿಕ ಯಜಮಾನನಿಂದ ನಡೆಯುತ್ತದೆ. ಇದು ಇವರನ್ನು ಸಾಮಾಜಿಕವಾಗಿ, ನಿಯಂತ್ರಿಸುತ್ತದೆ. ಯಲ್ಲಮ್ಮ, ಮರಿಯಮ್ಮ ಹಾಗೂ ನಂದೀಶ್ವರ ದೇವರುಗಳನ್ನು ಪೂಜಿಸುತ್ತಾರೆ. ಆಧುನಿಕ ಸಾಮಾಜಿಕ ಸಂಸ್ಥೆಗಳ ಸಂಪರ್ಕ ಇವರಲ್ಲಿ ಕಡಿಮೆ. ಇವರ ಆರ್ಥಿಕ, ಶೈಕ್ಷಣಿಕ, ಪರಿಸ್ಥಿತಿಯು ಶೋಚನೀಯವಾಗಿದ್ದು ಸುಧಾರಣೆಯಾಗಬೇಕಾದ ಅಗತ್ಯವಿದೆ.