ರಿಕಾಂತ, ಕರ್ನಾಟಕದ ಒಂದು ಮೀನುಗಾರರ ಸಮುದಾಯ. ಕಾರವಾರ ತಾಲ್ಲೂಕಿನಲ್ಲಿ ಇವರನ್ನು ಕನ್ನಡ ಖರ್ವಿ ಎಂದು ಕರೆಯುತ್ತಾರೆ. ಖರ್ವಿ ಇದು ತುಳುವ ಪ್ರದೇಶದ ಮೋಗವೀರ ಜಾತಿಯ ಉಪಪಂಗಡ. ಇವರು ಕನ್ನಡವನ್ನು ಮಾತನಾಡಿದರೂ ಇವರ ಮಾತೃಭಾಷೆ ತುಳು. ಇವರು ತಮ್ಮ ಜಾತಿಗೆ ಹರಿಕಾಂತ ಎಂಬ ಹೊಸ ಹೆಸರನ್ನು ಇಟ್ಟುಕೊಂಡರು. ಇವರ ಧಾರ್ಮಿಕ ಗುರುಗಳಾದ ಶೃಂಗೇರಿ ಮಠದ ಸ್ವಾಮಿಗಳಾದ ಇವರಿಗೆ ಹರಿಕಾಂತ ಹೆಸರನ್ನು ನೀಡಿದ್ದಾರೆ ಎಂದು ತಿಳಿದುಬರುತ್ತದೆ. ಒಂದೇ ವೃತ್ತಿ ಸಮುದಾಯವನ್ನು ವಿವಿಧ ಹೆಸರುಗಳಿಂದ ಕರೆಯಲ್ಪಡುವುದರಿಂದ ಆಗುವ ಗೊಂದಲವನ್ನು ನಿವಾರಿಸುವ ಉದ್ದೇಶದಿಂದ ಇವರಿಗೆ ‘ಹರಿಕಾಂತ’ ಎಂದು ನಾಮಕರಣ ಮಾಡಲಾಗಿದೆ. ಹರಿಗೋಲಿನ ಒಡೆಯ ಎಂಬ ಅರ್ಥದಲ್ಲಿ ಹರಿಕಾಂತ ಪದ ಪ್ರಯೋಗವಾಗಿದೆ. ತಾಂಡೇಲರು ಸಂದೇಹಿಸುವಂತೆ ಹರಿಕಾಂತ್ರ ಪದ ಅಪಭ್ರಂಶವಾಗಿ ಹರಿಕಾಂತ ಆಗಲೂ ಸಾಧ್ಯವಿಲ್ಲ. ನಾಯಕ ವಿ.ಗ. (೧೯೯೩). ಥರ್ಸ್ಟನ್ ಪ್ರಕಾರ ಮೊಗೇರರು ಮರಕಲರು, ಮುಕ್ಕುವರು ಎಂದೂ ಕರೆಯಿಸಿಕೊಳ್ಳುತ್ತಾರೆ. ಮರಕಲರು ತೆಲುಗು ಭಾಷೆಯವರು. ಅಲ್ಲಿನ ‘ಪಲ್ಲಿ’ ಎಂಬ ಮೀನುಗಾರ ಜಾತಿಗೆ ಸೇರಿದವರಾಗಿದ್ದಾರೆ. ಬಹಳ ವ್ಯಾಪಕ ವ್ಯಾಪ್ತಿಯುಳ್ಳ, ಪ್ರಾಚೀನತೆಯುಳ್ಳ ಮೊಗೇರರ ಒಂದು ಗುಂಪು ಹರಿಕಾಂತರು ಎಂಬುದು ಇಲ್ಲಿ ಸ್ಪಷ್ಟ. ಇವರು ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕಡಲ ತೀರಗಳಲ್ಲಿ ವಾಸಿಸುತ್ತಾರೆ. ಮಹಾರಾಷ್ಟ್ರ ಹಾಗೂ ಗೋವಾದ ಕಡಲ ತೀರಗಳಿಂದ ಉತ್ತರ ಕನ್ನಡ ಜಿಲ್ಲೆಗೆ ಇವರು ವಲಸೆ ಬಂದಿದ್ದಾರೆ ಎಂದು ತಿಳಿದುಬರುತ್ತದೆ. ಇವರು ತಮ್ಮಲ್ಲಿ ಕನ್ನಡ ಮಾತನಾಡಿ ಇತರರೊಂದಿಗೆ ತುಳು ಹಾಗೂ ಕೊಂಕಣಿಯಲ್ಲಿ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ.

ಇವರು ತಂದೆಯ ಸಹೋದರಿಯ ಮಗಳನ್ನು ಅಥವಾ ತಾಯಿಯ ಸಹೋದರನ ಮಗಳನ್ನು ಮದುವೆಯಾಗುವುದನ್ನು ಇಚ್ಚಿಸುತ್ತಾರೆ. ಮದುವೆಗಳು ಸಾಮಾನ್ಯವಾಗಿ ಮಾತುಕತೆಯ ಮೂಲಕವೇ ನಡೆಯುತ್ತದೆ. ವರದಕ್ಷಿಣೆ ಮತ್ತು ವಧುದಕ್ಷಿಣೆ ಎರಡೂ ಇವರಲ್ಲಿದೆ. ವರದಕ್ಷಿಣೆಯು ಇತ್ತೀಚಿನ ಪದ್ಧತಿಯಾಗಿದೆ. ವಿವಾಹ ವಿಚ್ಛೇದನಕೆ ಪತಿಪತ್ನಿ ಇಬ್ಬರು ಪ್ರಯತ್ನಿಸಬಹುದು. ವಿಧುರ, ವಿಧವೆ ಹಾಗೂ ವಿಚ್ಛೇದಿತರಿಗೆ ವಿವಾಹಕ್ಕೆ ಅವಕಾಶವಿದೆ. ಚಿಕ್ಕ ಕುಟುಂಬಗಳು ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಮನೆಯ ವಾರಸುದಾರಿಕೆಗೆ ತಂದೆಯ ನಂತರ ಮನೆಯ ಹಿರಿಯ ಮಗನಿಗೆ ಬರುತ್ತದೆ. ಹೆಂಗಸರು ಮೀನು ಮಾರಾಟ  ಮಾಡುವುದರಲ್ಲಿ, ವ್ಯವಸಾಯ ಹಾಗೂ ಇತರೆ ಆರ್ಥಿಕ ವಿಷಯಗಳಲ್ಲಿ ಭಾಗಿಯಾಗುತ್ತಾರೆ. ಹೆರಿಗೆಯ ಮುಂಚಿನ ಕೆಲವು ಕಟ್ಟುಪಾಡುಗಳು, ಹೆರಿಗೆಯ ಸೂತಕಗಳನ್ನು ಆಚರಿಸುತ್ತಾರೆ. ನಾಮಕರಣವನ್ನು ಮಗು ಹುಟ್ಟಿದ ಹನ್ನೆರಡನೇ ಅಥವಾ ಹದಿನೈದನೇ ದಿನ ಮಾಡುತ್ತಾರೆ. ಮದುವೆಯ ಕಾರ್ಯಗಳು ವದುವಿನ ಮನೆಯಲ್ಲಿಯೇ ನಡೆಯುತ್ತವೆ. ಶವವನ್ನು ಸುಟ್ಟು, ಸೂತಕವನ್ನು ಹನ್ನೊಂದು ದಿನಗಳವರೆಗೆ ಆಚರಿಸುತ್ತಾರೆ.

ಮೀನುಗಾರಿಕೆ ಇವರ ಸಾಂಪ್ರದಾಯಿಕ ಕಸುಬು. ಇವರಲ್ಲಿ ಕೆಲವರು ವ್ಯವಸಾಯದಲ್ಲಿ ತೊಡಗಿ ಇನ್ನು ಕೆಲವರು ವ್ಯಾಪಾರ, ಸರ್ಕಾರಿ ಸೇವೆ, ಖಾಸಗಿ ಉದ್ಯೋಗದಲ್ಲಿ ದಿನಕೂಲಿಗಳಾಗಿ ಹಾಗೂ ಸ್ವಯಂ-ಉದ್ಯೋಗಸ್ಥರಾಗಿದ್ದಾರೆ. ಈಗ ಇವರಲ್ಲಿ ಕಾರ್ಖಾನೆಗಳಲ್ಲಿ ಹಾಗೂ ಮೀನುಗಾರಿಕೆಯಲ್ಲಿ ಕೂಲಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಸಾಂಪ್ರದಾಯಿಕ ಜಾತಿ ಪಂಚಾಯಿತಿಗಳು ಜಗಳಗಳನ್ನು ಬಗೆಹರಿಸುತ್ತವೆ. ಜಾತಿ ಪಂಚಾಯಿತಿಯ ಮುಖ್ಯಸ್ಥನನ್ನು ಬುದ್ಧಿವಂತ ಎಂದು ಕರೆಯುತ್ತಾರೆ ಅವನ ನಿರ್ಧಾರಗಳೇ ಅಂತಿಮ. “ಹರಿಕಾಂತ ಆಂತರಿಕ ಕರ್ವಿ ಮೀನುಗಾರರ ಸಂಘ” ಎನ್ನುವ ಜಾತಿಯ ಸಂಘವಿದೆ. ಅದು ಈ ಜಾತಿಯವರ ಅಭಿವೃದ್ಧಿಗಾಗಿ ಶ್ರಮಿಸುತ್ತದೆ. ಮನೆದೇವರಾಗಿ ಆರ್ಯದುರ್ಗ, ಜಗದಂಬಾ, ಶಾಂತದುರ್ಗ ಹಾಗೂ ವೆಂಕಟರಮಣರನ್ನು ಪೂಜಿಸುತ್ತಾರೆ. ಹವ್ಯಕ ಬ್ರಾಹ್ಮಣರು ಇವರ ಧಾರ್ಮಿಕ ಆಚರಣೆಗಳನ್ನು ನಡೆಸಿಕೊಡುತ್ತಾರೆ. ಗಂಡಸರು ಹಾಗೂ ಹೆಂಗಸರಿಬ್ಬರೂ ಜನಪದ ಗೀತೆಗಳನ್ನು ಹಾಡುತ್ತಾರೆ. ಗಂಡಸರು ಮಾತ್ರ ಜನಪದ ಕುಣಿತಗಳಲ್ಲಿ ಭಾಗವಹಿಸುತ್ತಾರೆ. ಬಂಡಿಹಬ್ಬ ಹಾಗೂ ಇತರೆ ಹಬ್ಬಗಳಲ್ಲಿ ತಮ್ಮ ನೆರೆಹೊರೆಯವರ ಜೊತೆ ಭಾಗವಹಿಸುತ್ತಾರೆ. ಅದರಲ್ಲಿ ಇವರಿಗೆ ಕೆಲವೊಂದು ನಿರ್ದಿಷ್ಟವಾದ ಪಾತ್ರಗಳಿರುತ್ತವೆ ತೋರಣ ಕಟ್ಟುವುದು, ಸಿಂಗಾರ ಮಾಡುವುದು. ಇವರು ತಮ್ಮ ಮೀನುಗಾರಿಕೆಯ ಜೊತೆಗೆ ಇತರೆ ಚಿಲ್ಲರೆ ವ್ಯಾಪಾರಗಳಲ್ಲಿ ಇತ್ತೀಚೆಗೆ ತೊಡಗಿಸಿಕೊಂಡಿದ್ದಾರೆ. ಇವರ ಆರ್ಥಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿಗಳು ಸುಧಾರಣೆಯಾಗಬೇಕಾಗಿದೆ.

ನೋಡಿ:

ತಾಂಡೆಲ ಟಿ.ಟಿ., ೧೯೮೬. ‘ಹರಿಕಾಂತ’, ವೈಜಯಂತಿ, ಉತ್ತರ ಕನ್ನಡ ಜಿಲ್ಲಾ ಸಾಂಸ್ಕೃತಿಕ ಸಂಘ, ಮೈಸೂರು, ಪು. ೧೨೨-೧೨೫

ನಾಯಕ ವಿ.ಗ. ೧೯೯೩. ಹರಿಕಾಂತರ ಸಂಸ್ಕೃತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ. ಬೆಂಗಳೂರು.