ಸಲರು ಎಂದು ಹೆಸರು ಬರಲು ಇವರು ಪೌರಾಣಿಕ ಕಥೆಯೊಂದನ್ನು ಹೇಳುತ್ತಾರೆ. ಅಗಸನ ಅಪವಾದಕ್ಕೊಳಗಾದ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಬರುವಂತೆ ರಾಮ, ತಮ್ಮನಾದ ಲಕ್ಷ್ಮಣನಿಗೆ ಹೇಳುತ್ತಾರೆ. ಲಕ್ಷ್ಮಣ ತುಂಬುಗರ್ಭಿಣಿಯಾದ ಸೀತೆಯನ್ನು ಕಾಡಿನಲ್ಲಿ ಬಿಟ್ಟು ಹೋಗುತ್ತಾನೆ. ಸೀತೆ ವಾಲ್ಮೀಕಿ ಆಶ್ರಮವನ್ನು ಸೇರಿ ಆಶ್ರಯಪಡೆಯುತ್ತಾಳೆ. ಸ್ವಲ್ಪ ದಿನಗಳ ನಂತರ ಲವ ಜನಿಸುತ್ತಾನೆ. ಒಮ್ಮೆ ಮಗುವನ್ನು ತೊಟ್ಟಿಲಲ್ಲಿ ಹಾಕಿ ಬಟ್ಟೆ ಮಡಿಮಾಡಲು ನದಿಗೆ ಹೋಗುತ್ತಾಳೆ. ನದಿಯಲ್ಲಿ ಮಂಗಗಳು ನೀರು ಕುಡಿಯುವುದನ್ನು ನೋಡಿ ಮಗುವಿಗೆ ಏನೋ ಆಗಿದೆ ಎಂದು, ಅನುಮಾನಿ ತಿರುಗಿ ಆಶ್ರಮಕ್ಕೆ ಬಂದು ಲವನನ್ನು ಎತ್ತಿಕೊಂಡು ಪುನಃ ಬಟ್ಟೆ ಮಡಿಮಾಡಲು ಹೋಗುತ್ತಾಳೆ. ಇತ್ತ ವಾಲ್ಮೀಕಿಸ್ವಲ್ಪ ಹೊತ್ತಿನ ನಂತರ ಆಶ್ರಮಕ್ಕೆ ಬಂದು ನೋಡಿದಾಗ ಲವ ಇಲ್ಲದಿರುವುದನ್ನು ನೋಡಿ ಕಂಗಾಲಾಗುತ್ತಾನೆ. ಸೀತೆ ಬಂದ ಮೇಲೆ ಹೇಗೆ ಮುಖ ತೋರಿಸುವುದು ಎಂದು ದರ್ಭೆಯನ್ನು ಮಂತ್ರಿಸಿ ಶಿಸು ಮಾಡಿ ತೊಟ್ಟಿಲಲ್ಲಿ ಮಲಗಿಸುತ್ತಾನೆ. ಸಲ್ವ ಹೊತ್ತಿನಲ್ಲಿ ಸೀತೆ ಮಗುವಿನೊಂದಿಗೆ ನದಿಯಿಂದ ವಾಪಸಾಗುತ್ತಾಳೆ. ತೊಟ್ಟಿಲಲ್ಲಿರುವ ಮಗುವನ್ನು ನೋಡಿ ಆಶ್ಚರ್ಯಪಡುತ್ತಾಳೆ. ಆಗ ವಾಲ್ಮೀಕಿ “ಇದೆಲ್ಲಾ ನಿನ್ನಿಂದಲೇ ಆದದ್ದು ಈ ಮಗುವನ್ನು ನೀನೇ ಸಾಕು” ಎನ್ನುತ್ತಾನೆ. ಈ ಮಗುವಿಗೆ ಕುಶ ಎಂದು ನಾಮಕರಣ ಮಾಡುತ್ತಾನೆ. ರಾಮನೊಂದಿಗೆ ಲವ ಕುಶರಿಗೆ ಯುದ್ಧ ನಡೆದಾಗ ಕಾಡಿನಲ್ಲಿ ತಯಾರಿಸಿದ ತಮ್ಮದೇ ಬಿಲ್ಲು ಬಾಣಗಳಿಂದ ಲವಕುಶರು ಹೋರಾಡುತ್ತಾರೆ. ಹಸಲರು ತಾವು ಕುಶನ ಸಂತತಿಯವರು ಎಂದು ಭಾವಿಸುತ್ತಾರೆ. ಹಸ್ತರಿಂದ ಜನಿಸಿದ್ದರಿಂದ ತಾವು ಹಸ್ತರು ಎಂದುಕೊಳ್ಳುತ್ತಾರೆ. ಬಿಲ್ಲು ಬಾಣದ ಗುರಿಯಲ್ಲಿ ನುರಿತವರಾದ್ದರಿಂದ ನಾವು ಬಿಲ್ಲಕ್ಷತ್ರಿಯರಾದೆವೆಂದೂ ಹೇಳುತ್ತಾರೆ. ರಾಮರಾಜ್ಯದಲ್ಲಿ ಸಮಸ್ತ ಅಧಿಕಾರವೂ ತಮ್ಮ ಕೈಯಲ್ಲಿತ್ತು ಅನಂತರ ಎಲ್ಲ ಕಿತ್ತುಕೊಂಡರು ಎನ್ನುತ್ತಾರೆ.

ಹಸಲರ ಭಾಷೆ ಕನ್ನಡ. ಶಿವಮೊಗ್ಗ, ಉತ್ತರಕನ್ನಡ, ಜಿಲ್ಲೆಯಲ್ಲಿ ಹಸಲರು ಕನ್ನಡ ಮತ್ತು ಸ್ವಲ್ಪಮಟ್ಟಿಗೆ ಕೊಂಕಣಿ ಮಾತನಾಡಿದರೆ, ದಕ್ಷಿಣಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಸಲರು ಕನ್ನ ಡ ಮತ್ತು ತುಳು ಭಾಷೆಯನ್ನು ಮಾಡನಾಡುತ್ತಾರೆ. ೧೮೯೧ರ ಮೈಸೂರು ಜನಗಣತಿಯಲ್ಲಿ ಇವರು ಪಶ್ಚಿಮ ಮಲೆನಾಡಿನ ದಟ್ಟ ಅರಣ್ಯದಲ್ಲಿ ವಾಸವಾಗಿರುವ ಗುಡ್ಡಗಾಡು ಸಮುದಾಯ ಎಂದು ಗುರುತಿಸಲಾಗಿದೆ. ಹಸಲ ಪದವು-ಒಬ್ಬ ಭೂಮಾಲೀಕ ತನ್ನ ವ್ಯವಸಾಯದ ಆಳುಗಳನ್ನು ಕರೆಯುವ ರೀತಿಯಾಗಿದೆ. ಇವರನ್ನು ಹಸಲರು, ಹಸಲವರು, ಹಾಲಸ್ಪರ, ಹಸಲ ಹಾಗೂ ಎಂದೂ ಕರೆಯುತ್ತಾರೆ. ಇವರಲ್ಲಿ ಕೆಲವು ಉಪಪಂಗಡಗಳಿವೆ. ಅವೆಂದರೆ – ನಾಮಧಾರಿ ಹಸಲ, ಗೊಡ್ಡ ಹಸಲ, ಮುಗೇರ ಹಸಲ, ಉಪ್ಪಾರ ಹಸಲ, ಕರಿಮುರುಗ ಹಸಲ, ಬೆಳ್ಳಿಹಸಲ, ಅಂತರ್ಗಲುಹಸಲ ಹಾಗೂ ಬಗ್ಗಾಲಿನ ಹಸಲ. ೧೯೩೦ರಲ್ಲಿ ನಂಜುಂಡಯ್ಯ ಹಾಗೂ ಅಯ್ಯರ್ ಇವರಲ್ಲಿ ಕೆಲವು ಹೊರಬಾಂಧವ್ಯದ ಬಳ್ಳಿಗಳನ್ನು ಗುರುತಿಸಿದ್ದಾರೆ. ಅವೆಂದರೆ ಆನೆ, ಬೆತ್ತ, ಕನ್ನೆ, ಶೇಂದಿ, ಶೆಟ್ಟಿ, ಬಾಲೆ, ಗಂಗಾರ, ಕೂಳಗ, ದಂಡಿಗ, ಹುದಲಿ, ಕುಂದಲಿ, ಕುಳ್ಳಿಗೆ, ತೋಳನ, ಶಿವ, ಕುಮುದೇ ಇತ್ಯಾದಿ.

ಇವರಲ್ಲಿ ಹತ್ತು ಸ್ತ್ರೀ ಮೂಲದ ಹೊರಬಾಂಧವ್ಯ ಬಳ್ಳಿಗಳಿವೆ – ದುಡಿಗಾಣ, ಗಂಗಾರ, ಹದಳಿಗೆ, ಕಂಡಲಿ, ಕೌಡಚಿ, ಕುಳ್ಳಿಗೆ, ಮಲ್ಲಿಗೆ ಸೆಟ್ಟಿಬಳೆ, ಬಳೆ ಹಾಗೂ ಕೊಳ್ಳಿ. ಇವರಲ್ಲಿ ಒಟ್ಟು ಇಪ್ಪತ್ತಾರು ಬಳ್ಳಿಗಳು ಇವೆಯೆಂದು  ಕೆಲವು ವಿದ್ವಾಂಸರು ಗುರುತಿಸಿದ್ದಾರೆ. ಕನ್ನಡ ಮಾಡನಾಡುವ ಹಸಲರಲ್ಲಿ ಮಾತೃ ಪ್ರಧಾನ ವಾರಸುದಾರಿಕೆಯನ್ನು ಸ್ತ್ರೀ ಮೂಲದಿಂದ ಗುರುತಿಸುತ್ತಾರೆ ಅಂದರೆ ಅಳಿಯ ಸಂತಾನ ರೀತಿ ಪಾಲಿಸುತ್ತಾರೆ. ಆದರೆ ಈಗ ಅದು ಪುರುಷ ಪ್ರಾಧಾನ್ಯತೆಯ ಕಡೆಗೆ ಬದಲಾಗುತ್ತಿದೆ. ತುಳು ಮಾತನಾಡುವ ಹಸಲರಲ್ಲಿ ‘ಮಕ್ಕಳಕಟ್ಟು’ ಎನ್ನುವ ವಾರಸುದಾರಿಕೆಯ ಕಾನೂನು ಪದ್ಧತಿಯಿದೆ. ಇವರ ಪ್ರಕಾರ ಪೂರ್ವಜರ ಆಸ್ತಿಗೆ ಕುಟುಂಬದ ಗಂಡು ಮಕ್ಕಳು ಮಾತ್ರ ವಾರಸುದಾರರಾಗಬಹುದು. ಕುಟುಂಬದ ಯಜಮಾನಿಕೆಯ ತಂದೆಯ ನಂತರ ಹಿರಿಯ ಮಗನಿಗೆ ಮಾತ್ರ ಸಲ್ಲುತ್ತದೆ.

ಹಸಲರು ಸಾಂಪ್ರದಾಯಿಕವಾಗಿ ಮನೆಯಾಳುಗಳಾಗಿದ್ದವರು. ಇವರು ಬೇಟೆಯಾಡುವುದರಲ್ಲಿ ಹಾಗೂ ಆಹಾರ ಸಂಗ್ರಹಣೆಯಲ್ಲಿ ನಿಪುಣರು. ಈಗ ಇವರಲ್ಲಿ ಬಹಳಷ್ಟು ಜನ, ವ್ಯವಸಾಯ ಹಾಗೂ ಕೂಲಿ ಆಳುಗಳಾಗಿರುವವರು. ಇವರ ಹೆಂಗಸರು ಕೂಲಿ ಕೆಲಸದ ಮೂಲಕ ಮನೆಯ ಆದಾಯಕ್ಕೆ ಸಹಾಯಮಾಡುತ್ತಾರೆ. ಇವರ ಸಮುದಾಯದ ನಾಯಕನಿಗೆ ‘ಗುರಿಕಾರ’ ನೆನ್ನುವರು. ಅವನನ್ನು ‘ಬುದ್ಧಿವಂತ’ನೆಂದೂ ಕರೆಯುತ್ತಾರೆ. ಇವರು ಹೆಚ್ಚಾಗಿ ಹವ್ಯಕ  ಬ್ರಾಹ್ಮಣರ ಸಂಪರ್ಕದಲ್ಲಿ ಇರುವುದರಿಂದ ಈ ಸಮುದಾಯದ ಪ್ರಭಾವ ಇವರ ಮೇಲೆ ಆಗಿದೆ. ಮುಖ್ಯವಾಗಿ ಇವರು ಪೂಜಿಸುವ ದೈವಗಳು ಪ್ರಭಾವ ಇವರ ಮೇಲೆ ಆಗಿದೆ. ಮುಖ್ಯವಾಗಿ ಇವರು ಪೂಜಿಸುವ ದೈವಗಳು ಚೌಡಿ, ಭೂತ, ಯಕ್ಷಿ, ಮಾಸ್ತಿಕಲ್ಲು, ಕಾರ್ಗಡಿ, ಗಣಪತಿ, ಇತ್ಯಾದಿ. ಹೀಗೆ ಪೂಜಿಸುತ್ತಾರೆ. ಹಸಲರು ಬುಡಕಟ್ಟು ಲಕ್ಷಣಗಳನ್ನು ಕಳೆದುಕೊಂಡಿದ್ದು, ಮೂಲ ಆಚಾರ, ಸಂಪ್ರದಾಯ, ನಂಬಿಕೆಗಳನ್ನು ಮರೆತಿದ್ದಾರೆ. ಪ್ರಾದೇಶಿಕ ಸಮುದಾಯಗಳ ಪ್ರಭಾವಕ್ಕೆ ಒಳಗಾಗಿ ತಮ್ಮ ಪರಿಸರದಲ್ಲಿರುವ ಜನರ ಸಂಪ್ರದಾಯ, ಆಚಾರ, ನಂಬಿಕೆಗಳನ್ನು ತಮ್ಮದಾಗಿ  ಮಾಡಿಕೊಂಡಿದ್ದಾರೆ. “ಹಸಲ” ಎಂಬ ಶಬ್ದ ಅವಮಾನಕರವಾದುದು. ಅದರಿಂದ ಈ ಹೆಸರನ್ನು ತೆಗೆದುಹಾಕಬೇಕೆಂದು ಓದಿದವರ ಸೇರಿ ‘ಬಿಲ್ಲು ಕ್ಷತ್ರಿಯ ಸಂಘ’ ವನ್ನು ಮಾಡಿಕೊಂಡು ‘ಹಸಲ’ ಹೆಸರಿನ ಬದಲಾಗಿ ‘ಬಿಲ್ಲುಕ್ಷತ್ರಿಯ’ ಎಂಬ ಹೆಸರನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇವರ ಆರ್ಥಿಕ, ಶೈಕ್ಷಣಿಕ ಮಟ್ಟ ಸುಧಾರಣೆಯಾಗಬೇಕಾಗಿದೆ.

ನೋಡಿ:

ಕಂಬಾರ ಚಂದ್ರಶೇಖರ., ೧೯೮೫. ಕನ್ನಡ ಜಾನಪದ ವಿಶ್ವಕೋಶ,  ಕನ್ನಡ ಸಾಹಿತ್ಯ ಪರಿಷತ್ತು, ಸಂಪುಟ ೨, ಬೆಂಗಳೂರು

ಬೋರಲಿಂಗಯ್ಯ ಹಿ.ಚಿ., ೧೯೯೯. ಗಿರಿಜನನಾಡಿಗೆ ಪಯಣ,  ರಾಗಿರೊಟ್ಟಿ ಪ್ರಕಾಶನ, ಬೆಂಗಳೂರು.

ಹುಚ್ಚಪ್ಪ ಮಾಸ್ತರ., ೧೯೯೮. ‘ಹಸಲರು’, ಕರ್ನಾಟಕ ಬುಡಕಟ್ಟುಗಳು  (ಸಂ), ಎಚ್.ಜಿ.ಲಕ್ಕಪ್ಪಗೌಡ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ.

ಭಟ್ಟ ಜಿ.ಎಸ್., ೧೯೯೮. ಹಸಲರ ಸಂಸ್ಕೃತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ; ಬೆಂಗಳೂರು.